ಸಿನಿಮಾಕ್ಕೂ ಮುನ್ನ 22 ನಿಮಿಷ ಜಾಹೀರಾತು ಪ್ರದರ್ಶನ: ಚಿತ್ರಮಂದಿರಕ್ಕೆ 75,000 ರೂ. ದಂಡ ವಿಧಿಸಿದ ಕೋರ್ಟ್!
ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ತೆರಳುವ ಪ್ರೇಕ್ಷಕರಿಗೆ ಕಡ್ಡಾಯವಾಗಿ ವಾಣಿಜ್ಯ ಜಾಹೀರಾತುಗಳನ್ನು ತೋರಿಸಿ ಕಾಲಹರಣ ಮಾಡುತ್ತಿದ್ದ ಚಿತ್ರಮಂದಿರದ ಆಡಳಿತ ಮಂಡಳಿಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗವು ಬಿಗ್ ಶಾಕ್ ನೀಡಿದೆ. ಚಿತ್ರದ ನಿಗದಿತ ಸಮಯಕ್ಕಿಂತ ಬರೋಬ್ಬರಿ 22 ನಿಮಿಷಗಳ ಕಾಲ ಜಾಹೀರಾತು ಹಾಗೂ ಟ್ರೇಲರ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಚಿತ್ರಮಂದಿರ ಸಂಸ್ಥೆಗೆ 75,000 ರೂಪಾಯಿ ದಂಡ ವಿಧಿಸಿದೆ.
ಸಂಗ್ರಹ ಚಿತ್ರ -
ಹೈದರಾಬಾದ್: ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ತೆರಳುವ ಪ್ರೇಕ್ಷಕರಿಗೆ ಕಡ್ಡಾಯವಾಗಿ ವಾಣಿಜ್ಯ ಜಾಹೀರಾತುಗಳನ್ನು ತೋರಿಸಿ ಕಾಲಹರಣ ಮಾಡುತ್ತಿದ್ದ ಚಿತ್ರಮಂದಿರದ ಆಡಳಿತ ಮಂಡಳಿಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗವು ಬಿಗ್ ಶಾಕ್ ನೀಡಿದೆ. ಚಿತ್ರದ ನಿಗದಿತ ಸಮಯಕ್ಕಿಂತ ಬರೋಬ್ಬರಿ 22 ನಿಮಿಷಗಳ ಕಾಲ ಜಾಹೀರಾತು (Viral News) ಹಾಗೂ ಟ್ರೇಲರ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಚಿತ್ರಮಂದಿರ ಸಂಸ್ಥೆಗೆ 75,000 ರೂಪಾಯಿ ದಂಡ ವಿಧಿಸಿ ಗ್ರಾಹಕ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.
ಹೈದರಾಬಾದ್‌ನ ವಕೀಲರೊಬ್ಬರು 'ಕುಬೇರ' ಸಿನಿಮಾ ವೀಕ್ಷಣೆಗೆ ತೆರಳಿದ್ದಾಗ ಎದುರಾದ ಈ ಕಿರಿಕಿರಿಯ ವಿರುದ್ಧ ಧ್ವನಿ ಎತ್ತಿ ಕಾನೂನು ಹೋರಾಟ ನಡೆಸಿ ಗೆಲುವು ಸಾಧಿಸಿದ್ದಾರೆ. ಹೈದರಾಬಾದ್ ನಿವಾಸಿ ಸಾಯಿ ಕುಮಾರ್ ತಮ್ಮ ಕುಟುಂಬದೊಂದಿಗೆ ಸಿನಿಮಾ ವೀಕ್ಷಿಸಲು ಪಿವಿಆರ್ ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಟಿಕೆಟ್‌ನಲ್ಲಿ ಸಿನಿಮಾ ಪ್ರಾರಂಭವಾಗುವ ಸಮಯವನ್ನು 10: 30 ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಸಿನಿಮಾ ಪ್ರಸಾರ ಮಾಡುವ ಬದಲು ಮಲ್ಟಿಪ್ಲೆಕ್ಸ್ ಆಡಳಿತ ಮಂಡಳಿಯು ಬರೋಬ್ಬರಿ 22 ನಿಮಿಷಗಳ ಕಾಲ ವಾಣಿಜ್ಯ ಜಾಹೀರಾತುಗಳು ಮತ್ತು ಮುಂಬರುವ ಸಿನಿಮಾಗಳ ಟ್ರೇಲರ್‌ಗಳನ್ನು ಪ್ರಸಾರ ಮಾಡಿ, ನಂತರ ಸುಮಾರು 10: 50 ಕ್ಕೆ ಸಿನಿಮಾ ಪ್ರಾರಂಭ ಮಾಡಿದರು. ಇದರಿಂದ ಸಾಯಿ ಕುಮಾರ್ ಅವರು ರಾತ್ರಿ 3 ಗಂಟೆಗೆ ಮನೆಗೆ ತಲುಪಬೇಕಾಯಿತು.
ನ್ಯಾಯಾಲಯವು ಚಿತ್ರಮಂದಿರಕ್ಕೆ 75,000 ರೂಪಾಯಿ ಭಾರಿ ದಂಡ ವಿಧಿಸಿದೆ. ಇದರಲ್ಲಿ 50,000 ರೂಪಾಯಿಗಳನ್ನು 'ಗ್ರಾಹಕರ ಕಲ್ಯಾಣ ನಿಧಿ'ಗೆ ಜಮಾ ಮಾಡಬೇಕು. ದೂರುದಾರ ಸಾಯಿ ಕುಮಾರ್ ಅವರಿಗೆ 20,000 ರೂಪಾಯಿ ಪರಿಹಾರ ಹಾಗೂ ನ್ಯಾಯಾಲಯದ ವೆಚ್ಚವಾಗಿ 5,000 ರೂಪಾಯಿಗಳನ್ನು ಚಿತ್ರಮಂದಿರ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ.
ಸಿನಿಮಾ ತಡವಾಗಿ ಪ್ರಾರಂಭವಾದ್ದರಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ತೀವ್ರ ಮಾನಸಿಕ ಕಿರಿಕಿರಿ ಉಂಟಾಯಿತು ಹಾಗೂ ಸಮಯ ವ್ಯರ್ಥವಾಯಿತು ಎಂದು ಸಾಯಿ ಕುಮಾರ್ ಆರೋಪಿಸಿದರು. ʼʼನಾವು ಹಣ ನೀಡಿರುವುದು ಸಿನಿಮಾ ವೀಕ್ಷಿಸಲು, ಅನಗತ್ಯ ಜಾಹೀರಾತುಗಳನ್ನು ನೋಡಲು ಅಲ್ಲ. ಟಿಕೆಟ್‌ನಲ್ಲಿ ನಮೂದಿಸಿದ ಸಮಯಕ್ಕೆ ಸಿನಿಮಾ ಶೋ ಆರಂಭಿಸದಿರುವುದು ಸೇವೆಯಲ್ಲಿನ ದೊಡ್ಡ ನ್ಯೂನತೆ" ಎಂದು ಪ್ರಶ್ನಿಸಿ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ವೇಳೆ ಚಿತ್ರಮಂದಿರದ ಪರ ವಕೀಲರು, ʼʼ ಸಿನಿಮಾ ಆರಂಭಕ್ಕೂ ಮುನ್ನ ಸರ್ಕಾರದ ಜಾಗೃತಿ ಜಾಹೀರಾತುಗಳು ಮತ್ತು ಮುಂಬರುವ ಸಿನಿಮಾಗಳ ಟ್ರೇಲರ್ ಪ್ರಸಾರ ಮಾಡುವುದು ಸಾಮಾನ್ಯ ಪ್ರಕ್ರಿಯೆ. ಪ್ರೇಕ್ಷಕರು ತಮ್ಮ ಆಸನಗಳನ್ನು ಕಂಡುಕೊಳ್ಳಲು ಕಾಲಾವಕಾಶ ನೀಡಲು ಹೀಗೆ ಮಾಡಲಾಗುತ್ತದೆ" ಎಂದು ವಾದ ಮಂಡಿಸಿದರು. ಚಿತ್ರಮಂದಿರದ ವಾದವನ್ನು ತಳ್ಳಿಹಾಕಿದ ಗ್ರಾಹಕ ಆಯೋಗವು, ಇದು "ಸೇವೆಯಲ್ಲಿನ ನ್ಯೂನತೆ ಮತ್ತು ಅನುಚಿತ ವ್ಯಾಪಾರ ವಹಿವಾಟು" ಎಂದು ಖಂಡಿಸಿತು. ಪ್ರೇಕ್ಷಕರು ಹಣ ನೀಡಿ ಟಿಕೆಟ್ ಖರೀದಿಸಿದ ಮೇಲೆ ಅವರ ಅನುಮತಿಯಿಲ್ಲದೆ ಸುದೀರ್ಘ ಸಮಯ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸಿ ಅವರ ಸಮಯವನ್ನು ವ್ಯರ್ಥ ಮಾಡುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿತು. ಸಿನಿಮಾ ಮಂದಿರಗಳಲ್ಲಿ ಪ್ರೇಕ್ಷಕರ ಸಮಯವನ್ನು ಅನಗತ್ಯವಾಗಿ ಜಾಹೀರಾತುಗಳ ಮೂಲಕ ವ್ಯರ್ಥ ಮಾಡುವ ಮಲ್ಟಿಪ್ಲೆಕ್ಸ್‌ಗಳಿಗೆ ಈ ತೀರ್ಪು ಬಿಸಿ ಮುಟ್ಟಿಸಿದೆ.