IND vs ZIM: ʻಸಂಜು ಸ್ಯಾಮ್ಸನ್‌ಗೆ ಅನ್ಯಾಯʼ-ಬಿಸಿಸಿಐ ವಿರುದ್ದ ಮಾಜಿ ಕ್ರಿಕೆಟಿಗರು ಕಿಡಿ!
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯದ ಪ್ಲೇಯಿಂಗ್‌ನಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ಜಿಂಬಾಬ್ವೆ ವಿರುದ್ದದ ಮೂರು ಪಂದ್ಯಗಳ ಟಿ20ಐ ಸರಣಿಯಿಂದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ. ಇದರ ಪರಿಣಾಮ ಬಿಸಿಸಿಐ ವಿರುದ್ಧ ಹಲವು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.
ಸಂಜು ಸ್ಯಾಮ್ಸನ್‌ಗೆ ಕೊಕ್ ನೀಡಿದ ಬಿಸಿಸಿಐ ವಿರುದ್ದ ಆಕ್ರೋಶ. -
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್ XIನಿಂದ ಸ್ಥಾನವನ್ನು ಕಳೆದುಕೊಂಡಿದ್ದ ವಿಕೆಟ್ ಕೀಪರ್-ಸಂಜು ಸ್ಯಾಮ್ಸನ್‌ಗೆ (Sanju Samson) ಬಿಸಿಸಿಐ ಆಯ್ಕೆ ಸಮಿತಿಯು ದೊಡ್ಡ ಆಘಾತವನ್ನು ನೀಡಿದೆ. ಜಿಂಬಾಬ್ವೆ ವಿರುದ್ದದ ಮೂರು ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಡಲಾಗಿದೆ. ಇದರಿಂದಾಗಿ ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯ 15 ಸದಸ್ಯರ ಭಾರತ ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಸ್ಥಾನಕ್ಕೆ ಪ್ರಭ್‌ಸಿಮ್ರಾನ್ ಸಿಂಗ್ ಅವರನ್ನು ಆರಿಸಲಾಗಿದೆ. ಇನ್ನು ಮೂವರು ಹೊಸ ಪ್ರತಿಭೆಗಳಿಗೆ ಇದೇ ಮೊದಲ ಬಾರಿ ಭಾರತ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
IND vs ZIM: ಜಿಂಬಾಬ್ವೆ ಟಿ20ಐ ಸರಣಿಗೆ ಭಾರತ ತಂಡ ಪ್ರಕಟ, ಸಂಜು ಸ್ಯಾಮ್ಸನ್ ಔಟ್!
ಸಂಜು ಸ್ಯಾಮ್ಸನ್ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿ ಹಾಗೂ ಇಂಗ್ಲೆಂಡ್ ವಿರುದ್ದದ ಮೊದಲನೇ ಪಂದ್ಯದಲ್ಲಿ ವಿಫಲರಾಗಿದ್ದರು. ಇದರ ಪರಿಣಾಮ ಅವರನ್ನು ಎರಡನೇ ಪಂದ್ಯದಿಂದ ಕೈ ಬಿಡಲಾಗಿದೆ. ಅಂದ ಹಾಗೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯೋಗ್ಯ ಪ್ರದರ್ಶನವನ್ನು ತೋರಿದ್ದ ಸಂಜು ಸ್ಯಾಮ್ಸನ್ (321 ರನ್), 2026ರ ಐಸಿಸಿ ಟಿ20 ವಿಶ್ವಕಪ್ ನಾಕೌಟ್ ಪಂದ್ಯಗಳಲ್ಲಿ ಮಿಂಚಿದ್ದರು ಹಾಗೂ ಭಾರತ ತಂಡ ಪ್ರಶಸ್ತಿ ಗೆಲುವಿಗೆ ನೆರವು ನೀಡಿದ್ದರು. ಆ ಮೂಲಕ ಅವರು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
🚨 News 🚨#TeamIndia squad announced for the 3️⃣-match T20I series against Zimbabwe.
— BCCI (@BCCI) July 6, 2026
More Details ▶️ https://t.co/sC19D5eW8y#ZIMvIND pic.twitter.com/ctbM5gFMtY
ಭಾರತ ಟಿ20 ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈ ಬಿಟ್ಟಿರುವುದರಿಂದ ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
ಸಂಜು ಬಗ್ಗೆ ಸ್ಪಷ್ಟನೆ ಕೇಳಿದ ಹರ್ಷ ಬೋಗ್ಲೆ
"ಜಿಂಬಾಬ್ವೆ ವಿರುದ್ಧದ ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬುದರ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡುವುದು ಅತ್ಯಗತ್ಯ ಎಂದು ನಾನು ಭಾವಿಸುತ್ತೇನೆ. ಈ ವಿಷಯದಲ್ಲಿ ಪಾರದರ್ಶಕ ಸಂವಹನ ಬಹಳ ಮುಖ್ಯ. ಇಲ್ಲವಾದರೆ ಜನರು ತಮ್ಮದೇ ಆದ ತೀರ್ಮಾನಗಳಿಗೆ ಬರುತ್ತಾರೆ. ಏಕೆಂದರೆ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸಂಜು ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ನಂಬುವುದು ಕಷ್ಟ. ಖಂಡಿತವಾಗಿಯೂ ಹಾಗಾಗಿರಬಾರದು," ಎಂದು ಕ್ರಿಕೆಟ್ ನಿರೂಪಕ ಹಾಗೂ ವಿಶ್ಲೇಷಕ ಹರ್ಷ ಬೋಗ್ಲೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
I think it is imperative that the BCCI gives fans the reason why Sanju Samson isn't in the team to Zimbabwe. Communication is crucial because otherwise people will arrive at their own conclusion. Because surely he cannot be dropped. Surely not.
— Harsha Bhogle (@bhogleharsha) July 6, 2026
ಅರ್ಥವಾಗದ ನಿರ್ಧಾರ ಎಂದ ದೊಡ್ಡ ಗಣೇಶ್
"ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೇವಲ ಮೂರು ಪಂದ್ಯಗಳ ಬಳಿಕವೇ ತಂಡದಿಂದ ಕೈಬಿಟ್ಟಿರುವುದು ಅರ್ಥವಾಗದ ನಿರ್ಧಾರ. ಅವರಿಗೆ ಇದಕ್ಕಿಂತ ಉತ್ತಮ ಗೌರವ ಮತ್ತು ಅವಕಾಶ ಸಿಗಬೇಕಿತ್ತು," ಎಂದು ಭಾರತದ ಮಾಜಿ ಆಟಗಾರ ಹಾಗೂ ಕನ್ನಡಿಗ ದೊಡ್ಡ ಗಣೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
Sanju Samson has every reason to feel hard done by. The batter who helped India win its third T20 WC being booted out after just 3 games is simply ridiculous. He deserved better treatment #INDVZIM
— Dodda Ganesh | ದೊಡ್ಡ ಗಣೇಶ್ (@doddaganesha) July 6, 2026
"ಅಧಿಕೃತವಾಗಿ ಸಂಜು ಸ್ಯಾಮ್ಸನ್ ಅವರಿಗೆ 'ವಿಶ್ರಾಂತಿ' ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಅವರು ಭಾರತ ಪರ ಕೇವಲ ಟಿ20 ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಇತ್ತೀಚೆಗೆ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿತ್ತು. ಈಗ ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತ ತಂಡದ ಟಿ20 ಬ್ಯಾಟಿಂಗ್ ವಿಭಾಗದಲ್ಲಿ ವಿಶ್ರಾಂತಿ ಪಡೆದ ಏಕೈಕ ಆಟಗಾರ ಕೂಡ ಅವರೇ ಆಗಿದ್ದಾರೆ," ಎಂದು ಕ್ರೀಡಾ ಪರ್ತಕರ್ತ ವಿಕ್ರಾಂತ್ ಗುಪ್ತಾ ಟೀಕಿಸಿದ್ದಾರೆ.
The official line is Sanju Samson has been “rested”. He plays only T20s, has just been dropped from the XI and will be the only one amongst India’s T20 batting line up who’s been rested for Zimbabwe
— Vikrant Gupta (@vikrantgupta73) July 6, 2026
"ಜಿಂಬಾಬ್ವೆ ಪ್ರವಾಸಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವುದು ಕಠಿಣ ನಿರ್ಧಾರವಾಗಿದೆ. ಅವರ ಲಯವನ್ನು ಮರಳಿ ಕಂಡುಕೊಳ್ಳಲು ಈ ಸರಣಿ ಉತ್ತಮ ಅವಕಾಶವಾಗಬಹುದಿತ್ತು. ಈಗಲೇ ಅವರ ಬಗ್ಗೆ ಮುಂದಿನ ಆಯ್ಕೆಗಳನ್ನು ಯೋಚಿಸುವುದು ಸರಿಯಲ್ಲ. ಸಂಜು ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂಬ ವಿಶ್ವಾಸ ನನಗಿದೆ," ಎಂದು ಬೊರಿಯಾ ಮಜುಂದಾರ್ ತಿಳಿಸಿದ್ದಾರೆ.
Sanju Samson dropped from the Zimbabwe tour is harsh. Could have been an opportunity to come back into form. You can’t be looking beyond him already. I am fairly sure he has plenty left. @RevSportzGlobal
— Boria Majumdar (@BoriaMajumdar) July 6, 2026
ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್ ಹಾಗೂ ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್‌ಕೀಪರ್)