ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

15 ಎಸೆತಗಳಲ್ಲಿ 42 ರನ್‌ ಸಿಡಿಸಿದ ನಮನ್‌ ಧೀರ್‌ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಶ್ರೇಯಸ್‌ ಅಯ್ಯರ್‌!

ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟಿ20ಐ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ 42 ರನ್‌ ಸಿಡಿಸಿದ ನಮನ್‌ ಧೀರ್‌ ಅವರನ್ನು ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಶ್ಲಾಘಿಸಿದ್ದಾರೆ. ನಮನ್‌ ತಂಡಕ್ಕೆ ಹೆಚ್ಚಿನ ಆಯ್ಕೆಗಳು ನೀಡುತ್ತವೆ ಎಂದು ಅವರು ತಿಳಿಸಿದ್ದಾರೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲಿಯೂ ನಮನ್‌ ಭಾರತ ತಂಡಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.

ಭಾರತ ತಂಡವನ್ನು ಗೆಲ್ಲಿಸಿದ ನಮನ್‌ ಧೀರ್‌ ಬಗ್ಗೆ ಅಯ್ಯರ್‌ ಹೇಳಿದ್ದಿದು!

ನಮನ್‌ ಧೀರ್‌ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶ್ರೇಯಸ್‌ ಅಯ್ಯರ್‌. -

Profile
Ramesh Kote Oct 22, 2026 8:49 PM

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ (IND vs NZ) ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸಿದ್ದು, ಈ ಯಶಸ್ಸಿನಲ್ಲಿ ಆಲ್‌ರೌಂಡರ್ ನಮನ್ ಧೀರ್ (Naman Dhir) ಅವರ ಸ್ಫೋಟಕ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿದೆ. ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳ ಜಯ ಸಾಧಿಸಿ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಗಡಿ ತಲುಪಿತು.

ಈ ಪಂದ್ಯದಲ್ಲಿ ನಮನ್ ಧೀರ್ ಕೇವಲ 15 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ನಮನ್ ಅವರ ಶಾಂತ ಸ್ವಭಾವ ಮತ್ತು ಒತ್ತಡದ ಸಂದರ್ಭದಲ್ಲೂ ತೋರಿದ ಆತ್ಮವಿಶ್ವಾಸವನ್ನು ಗುಣಗಾನ ಮಾಡಿದ್ದಾರೆ.

IND vs NZ: ಸಂಜು-ನಮನ್‌ ಸ್ಪೋಟಕ ಬ್ಯಾಟಿಂಗ್‌, ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ರೋಚಕ ಜಯ!

ನಮನ್ ಧೀರ್ ಆಟಕ್ಕೆ ಶ್ರೇಯಸ್ ಅಯ್ಯರ್ ಫಿದಾ

ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ನಮನ್ ಧೀರ್ ತಂಡಕ್ಕೆ ಹಲವು ಆಯ್ಕೆಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು. ವಿಶೇಷವಾಗಿ ಎಡಗೈ ಬ್ಯಾಟರ್‌ಗಳ ವಿರುದ್ಧ ಬೌಲ್‌ ಮಾಡುವುದರ ಜೊತೆಗೆ, ಬಲಗೈ ಬ್ಯಾಟರ್‌ಗಳ ಎದುರಿನಲ್ಲೂ ಅವರು ಪರಿಣಾಮಕಾರಿಯಾಗಬಲ್ಲರು ಎಂದು ಅಭಿಪ್ರಾಯಪಟ್ಟರು.

“ನಮನ್ ನಮಗೆ ಸಾಕಷ್ಟು ಆಯ್ಕೆಗಳನ್ನು ಒದಗಿಸುತ್ತಾರೆ. ಈ ರೀತಿಯ ಪಿಚ್‌ನಲ್ಲಿ ಅವರು ಬಂದು ಎರಡು ಅಥವಾ ಮೂರು ನಿರ್ಣಾಯಕ ಓವರ್‌ಗಳನ್ನು ಬೌಲ್ ಮಾಡುವುದರಿಂದ ಪಂದ್ಯದ ಗತಿಯನ್ನೇ ಬದಲಿಸಬಹುದು. ಇಂದು ಬ್ಯಾಟಿಂಗ್ ಮಾಡುವಾಗ ಅವರು ತೋರಿಸಿದ ಶಾಂತ ಮತ್ತು ಸಂಯಮದ ಸ್ವಭಾವ ಅದ್ಭುತವಾಗಿತ್ತು. ಅವರನ್ನು ಬ್ಯಾಟಿಂಗ್ ಮಾಡುವುದನ್ನು ನೋಡುವುದೇ ಸಂತೋಷದ ಸಂಗತಿ,” ಎಂದು ಶ್ರೇಯಸ್‌ ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



ನಮನ್ ಧೀರ್ ಅವರ ವಿಶೇಷತೆ ಕೇವಲ ದೊಡ್ಡ ಹೊಡೆತಗಳನ್ನು ಬಾರಿಸುವುದಲ್ಲ. ಪಂದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಒತ್ತಡದ ಸಂದರ್ಭದಲ್ಲಿ ಆತುರಪಡದೆ ತಂಡಕ್ಕೆ ಅಗತ್ಯವಿರುವ ರನ್‌ಗಳನ್ನು ಗಳಿಸುವ ಸಾಮರ್ಥ್ಯವೂ ಅವರಲ್ಲಿದೆ ಎಂಬುದನ್ನು ಈ ಪಂದ್ಯ ಮತ್ತೊಮ್ಮೆ ಸಾಬೀತುಪಡಿಸಿದೆ.

15 ಎಸೆತಗಳಲ್ಲಿ 42 ರನ್ ಸಿಡಿಸಿದ ಧೀರ್‌

226 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ಭಾರತ ಒಂದು ಹಂತದಲ್ಲಿ 122 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ತಂಡದ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. ಅಕ್ಷರ್ ಪಟೇಲ್ 14 ಎಸೆತಗಳಲ್ಲಿ 24 ರನ್ ಗಳಿಸಿ ನಿರ್ಣಾಯಕ ಜೊತೆಯಾಟಕ್ಕೆ ನೆರವಾದರು.

ನಂತರದ ಹಂತದಲ್ಲಿ ಅಯ್ಯರ್ ಮತ್ತು ನಮನ್ ಧೀರ್ ಆರನೇ ವಿಕೆಟ್‌ಗೆ ಮಹತ್ವದ ಜೊತೆಯಾಟವಾಡಿದರು. ಅಯ್ಯರ್ 28 ಎಸೆತಗಳಲ್ಲಿ 42 ರನ್ ಗಳಿಸಿದರೆ, ನಮನ್ ಕೇವಲ 15 ಎಸೆತಗಳಲ್ಲಿ ಅಜೇಯ 42 ರನ್ ಸಿಡಿಸಿದರು. ಕೊನೆಯ ಓವರ್‌ಗಳಲ್ಲಿ ನಮನ್ ಅವರ ಆಕ್ರಮಣಕಾರಿ ಆಟ ಭಾರತಕ್ಕೆ ಗೆಲುವು ತಂದುಕೊಟ್ಟಿತು.

ದಾಖಲೆಯ ಮೊತ್ತವನ್ನು ಚೇಸ್‌ ಮಾಡಿ ಹ್ಯಾಗ್ಲಿ ಓವಲ್‌ನಲ್ಲಿ ಇತಿಹಾಸ ಬರೆದ ಭಾರತ ತಂಡ!

ಡೆತ್ ಓವರ್‌ಗಳಲ್ಲಿ ನಮನ್ ಧೀರ್ ಅಬ್ಬರ

ಟಿ20 ಕ್ರಿಕೆಟ್‌ನಲ್ಲಿ ಕೊನೆಯ ಐದು ಓವರ್‌ಗಳು ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಹಂತದಲ್ಲಿ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ನಮನ್ ಧೀರ್ ಅವರ ಪ್ರಮುಖ ಬಲವಾಗಿದೆ. ಟಿ20 ಕ್ರಿಕೆಟ್‌ನ 16ರಿಂದ 20ನೇ ಓವರ್‌ಗಳ ಅವಧಿಯಲ್ಲಿ ಅವರು 167 ಎಸೆತಗಳನ್ನು ಎದುರಿಸಿ 341 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 204.19 ಆಗಿದ್ದು, ಈ ಅವಧಿಯಲ್ಲಿ 34 ಬೌಂಡರಿ ಮತ್ತು 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಐದು ಟಿ20 ಅಂತಾರಾಷ್ಟ್ರೀಯ ಇನಿಂಗ್ಸ್‌ಗಳಲ್ಲಿ ನಮನ್ 80 ರನ್ ಗಳಿಸಿದ್ದು, ಅವರ ಸರಾಸರಿ 40.00 ಮತ್ತು ಸ್ಟ್ರೈಕ್ ರೇಟ್ 285.71 ಆಗಿದೆ. ಅವರ ಗರಿಷ್ಠ ಸ್ಕೋರ್ ಅಜೇಯ 42 ರನ್. ಈ ಅಂಕಿಅಂಶಗಳು ಕೊನೆಯ ಹಂತದಲ್ಲಿ ವೇಗವಾಗಿ ರನ್ ಗಳಿಸುವ ಅವರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ.