ಟಿ20 ವಿಶ್ವಕಪ್ ಗೆದ್ದುಕೊಟ್ಟೆ, ಒಂದೇ ಒಂದು ಟಿ20ಐ ಸರಣಿ ಸೋತಿಲ್ಲವಾದರೂ ನನಗೆ ಕೊಕ್ ಕೊಟ್ಟರು: ಸೂರ್ಯಕುಮಾರ್ ಬೇಸರ!
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಮಾಡಿದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಹಾಗೂ ತಂಡದಿಂದ ಕೈ ಬಿಡಲಾಗಿತ್ತು. ಈ ಬಗ್ಗೆ ಸೂರ್ಯಕುಮಾರ್ ಅವರೇ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಇಲ್ಲಿ ವಿವರಿಸಲಾಗಿದೆ.
ಭಾರತ ತಂಡದಿಂದ ಕೈಬಿಟ್ಟ ಬಗ್ಗೆ ಸೂರ್ಯ ಪ್ರತಿಕ್ರಿಯೆ. -
ನವದೆಹಲಿ: ಕಳೆದ 2026ರ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ (Indian Cricket Team) ಮೊದಲ ಸರಣಿಯಲ್ಲೇ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ಟಿ20ಐ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಈ ಬಗ್ಗೆ ಎರಡು ತಿಂಗಳ ಬಳಿಕ 35ರ ವಯಸ್ಸಿನ ಬ್ಯಾಟ್ಸ್‌ಮನ್ ಪ್ರತಿಕ್ರಿಯೆ ನೀಡಿದ್ದಾರೆ. ನಾಯಕತ್ವ ಹಾಗೂ ತಂಡದಿಂದ ಕೈಬಿಟ್ಟಿದ್ದ ನಿರ್ಧಾರ ತಮ್ಮನ್ನು ಆಘಾತಕ್ಕೊಳಪಡಿಸಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ. ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿರುವ ಸೂರ್ಯಕುಮಾರ್, ನಾಯಕತ್ವ ಕಳೆದುಕೊಂಡಿದ್ದಷ್ಟೇ ಅಲ್ಲದೆ, ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಭಾರತ ತಂಡದಿಂದಲೂ ಕೈಬಿಡಲಾಗಿತ್ತು.
ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಸೂರ್ಯಕುಮಾರ್, 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಇನ್ನೂ ಎರಡು ವರ್ಷಗಳ ಕಾಲ ತಂಡವನ್ನು ಮುನ್ನಡೆಸುತ್ತೇನೆ ಎಂದು ತಾವು ಭಾವಿಸಿದ್ದಾಗಿ ಹೇಳಿಕೊಂಡಿದ್ದಾರೆ.
2028ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಆತಿಥ್ಯ ವಹಿಸಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಗೂ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆ ಹೊಂದಿದ್ದೆ ಎಂದು ಅವರು ತಿಳಿಸಿದ್ದಾರೆ. ತಮ್ಮ ನಾಯಕತ್ವದಲ್ಲಿ ಭಾರತ ತಂಡ ಒಂದೇ ಒಂದು ಸರಣಿಯನ್ನೂ ಸೋತಿರಲಿಲ್ಲ ಎಂಬುದನ್ನು ಸೂರ್ಯಕುಮಾರ್ ಉಲ್ಲೇಖಿಸಿದ್ದಾರೆ. ತಂಡ ಉತ್ತಮವಾಗಿ ಸಾಗುತ್ತಿರುವಾಗ ನಾಯಕತ್ವದಲ್ಲಿ ಬದಲಾವಣೆ ಮಾಡುವ ಅಗತ್ಯವೇನು ಎಂಬ ಪ್ರಶ್ನೆಯೂ ತಮ್ಮಲ್ಲಿ ಮೂಡಿತ್ತು ಎಂದು ಅವರು ತಿಳಿಸಿದ್ದಾರೆ.
“ನನ್ನ ಹೆಸರು ತಂಡದಲ್ಲಿ ಇಲ್ಲದಿರುವುದನ್ನು ನೋಡಿದಾಗ ನಾನು ಹೀಗೆ ನಗುತ್ತಾ ಸುಮ್ಮನಾದೆ. ಏಕೆಂದರೆ, ನಾನು ತಂಡದೊಂದಿಗೆ ಎರಡು ವರ್ಷಗಳ ಕಾಲ ಕ್ರಿಕೆಟ್ ಆಡಿದಾಗಲೆಲ್ಲಾ, ಒತ್ತಡದ ಸಂದರ್ಭಗಳು ಎದುರಾದಾಗ ಅಥವಾ ವಿಷಯಗಳು ನನ್ನ ಪರವಾಗಿ ನಡೆಯದಿದ್ದಾಗ, ನಾನು ಯಾವಾಗಲೂ ನಗುತ್ತಾ, ಮನಸ್ಸನ್ನು ಶಾಂತವಾಗಿಟ್ಟುಕೊಂಡು, ಹಿಂದೆ ನನಗೆ ಉತ್ತಮ ಪ್ರದರ್ಶನ ನೀಡಲು ಅವಕಾಶ ಸಿಕ್ಕಿದ್ದ ಸಂದರ್ಭಗಳನ್ನು ನೆನಪಿಸಿಕೊಳ್ಳುತ್ತಿದ್ದೆ." ಎಂದರು.
"2026ಕ್ಕೆ ಕಾಲಿಡುವಾಗ, ಮುಂದಿನ ಎರಡು ವರ್ಷಗಳ ಕಾಲ ಈ ತಂಡವನ್ನು ಮುನ್ನಡೆಸುವ ನಿಟ್ಟಿನಲ್ಲಿ ನಾನು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವಿಸಿದ್ದೆ. ನಂತರ ಒಲಿಂಪಿಕ್ಸ್ ಬರುತ್ತಿತ್ತು, ಆ ಬಳಿಕ ಮತ್ತೊಂದು ಟಿ20 ವಿಶ್ವಕಪ್ ಹಾಗೂ ಮತ್ತೊಂದು ಸವಾಲು ಎದುರಾಗುತ್ತಿತ್ತು. ಆದರೆ ಅದೇ ಸಮಯದಲ್ಲಿ, ನಾವು ಏನು ಯೋಚಿಸುತ್ತೇವೆ ಮತ್ತು ಇನ್ನೊಂದು ಕಡೆ ಇರುವವರು ಏನು ಯೋಚಿಸುತ್ತಾರೆ ಎಂಬುದು ಎರಡು ವಿಭಿನ್ನ ವಿಚಾರಗಳು."
ವಿರಾಟ್ ಕೊಹ್ಲಿ ಆಡಿದ್ದರೆ, ಕೊಲಂಬೊ ಟೆಸ್ಟ್ ಫಲಿತಾಂಶ ವಿಭಿನ್ನವಾಗಿರುತ್ತಿತ್ತೆಂದ ಮೊಹಮ್ಮದ್ ಕೈಫ್!
"ಅವರ ಆಲೋಚನಾ ಪ್ರಕ್ರಿಯೆಯನ್ನು ಗೌರವಿಸುವುದು ಮುಖ್ಯ. ಅದೇ ರೀತಿ, ನಮ್ಮದೇ ಆಲೋಚನೆಗಳನ್ನೂ ಗೌರವಿಸುವುದು ಅಷ್ಟೇ ಮುಖ್ಯ. ಮುಂದಿನ ದಿನಗಳಲ್ಲಿ ಇದು ಉತ್ತಮ ನಿರ್ಧಾರ ಎಂದು ಅವರು ಭಾವಿಸಿ ಆ ನಿರ್ಧಾರ ತೆಗೆದುಕೊಂಡಿದ್ದರೆ, ಅದನ್ನು ನಾನು ಗೌರವಿಸುತ್ತೇನೆ. ಆ ಕ್ಷಣದಲ್ಲಿ ಅವರು ತೆಗೆದುಕೊಂಡ ನಿರ್ಧಾರಕ್ಕೆ ನಾನು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಲಿಲ್ಲ. ‘ಬೇರೊಬ್ಬರ ನಾಯಕತ್ವದಲ್ಲಿ ಈ ತಂಡ ಇನ್ನಷ್ಟು ಉತ್ತಮವಾಗಿ ಆಡಬಹುದಾದರೆ, ಯಾವುದೇ ಸಮಸ್ಯೆಯಿಲ್ಲ’ ಎಂದು ನಾನು ಭಾವಿಸಿದೆ." ಎಂದರು.
"ಅವರು ಆಯ್ಕೆ ಮಾಡಿದ ವ್ಯಕ್ತಿ ಶ್ರೇಯಸ್ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನಾನು ಶ್ರೇಯಸ್ ಜೊತೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಅವರು ಒಳ್ಳೆಯ ಆಟಗಾರ, ಒಳ್ಳೆಯ ಮನುಷ್ಯ ಮತ್ತು ಉತ್ತಮ ನಾಯಕ ಕೂಡ. ಹಾಗಾಗಿ, ‘ಅವರನ್ನೇ ನಾಯಕನನ್ನಾಗಿ ಏಕೆ ಮಾಡಿದರು?’ ಎಂಬ ಮನಸ್ಥಿತಿಗೆ ನಾನು ಹೋಗಲಿಲ್ಲ,” ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
“ನಂತರ ಸ್ನೇಹಿತರು ಬಂದರು, ಕುಟುಂಬದವರು ಬಂದರು. ಎಲ್ಲರೂ ‘ಇದು ಜೀವನದ ಒಂದು ಭಾಗ’ ಎಂದು ಸಮಾಧಾನ ಹೇಳುತ್ತಿದ್ದರು. ಆದರೆ ಅವರು ಮನೆಗೆ ಬಂದು ಹೋದ ಬಳಿಕ, ಪತ್ನಿ ಮತ್ತು ಮಗಳೊಂದಿಗೆ ನೀವು ಮನೆಯಲ್ಲಿ ಒಬ್ಬಂಟಿಯಾಗಿರುತ್ತೀರಿ. ಆಗ ನಾವು ಕುಳಿತು ಮಾತನಾಡುತ್ತಿದ್ದೆವು: ‘ಇದು ಹೇಗೆ ಸಾಧ್ಯ? ಅಂದರೆ, ಹೀಗೆಲ್ಲಾ ಹೇಗೆ ಆಗಬಹುದು?’ ಎಂದು,” ಎಂದು ಸೂರ್ಯಕುಮಾರ್ ತಿಳಿಸಿದ್ದಾರೆ.