ʻಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳಿಗಾಗಿ ಪ್ರತ್ಯೇಕ ನೀತಿ ರೂಪಿಸಿʼ: ಬಿಸಿಸಿಐ ವಿರುದ್ಧ ಅನಯಾ ಬಾಂಗರ್ ಆಕ್ರೋಶ!
ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳಿಗಾಗಿ ಪ್ರತ್ಯೇಕ ನೀತಿಯನ್ನು ರೂಪಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿರುದ್ಧ ಅನಯಾ ಬಾಂಗರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಹಿಳಾ ಸಮುದಾಯದ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ, ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಅವಕಾಶ ಪಡೆದಿದ್ದಾರೆ.
ಬಿಸಿಸಿಐ ವಿರುದ್ಧ ಕಿಡಿಕಾರಿದ ಅನಯಾ ಬಾಂಗರ್. -
ನವದೆಹಲಿ: ಅನಯಾ ಬಾಂಗರ್ (Anaya Bangar) ಅವರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಕನಸಿಗೆ ಮಹತ್ವದ ಉತ್ತೇಜನ ದೊರೆತಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮಹಿಳಾ ಸಮುದಾಯ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಅವರಿಗೆ ಅನುಮತಿ ನೀಡಿದ್ದು, ತಾವು ಪ್ರೀತಿಸುವ ಕ್ರೀಡೆಗೆ ಮರಳಲು ದಾರಿ ತೆರೆದಿದೆ. ಆದರೆ ಆಸ್ಟ್ರೇಲಿಯಾ ಅವಕಾಶ ನೀಡಿರುವ ಸಂದರ್ಭದಲ್ಲಿ, ಭಾರತದಲ್ಲಿ ತಮ್ಮ ಕ್ರಿಕೆಟ್ ಪಯಣವನ್ನು ಮುಂದುವರಿಸುವ ಕುರಿತು ಬಿಸಿಸಿಐಗೆ (BCCI) ಮನವಿ ಸಲ್ಲಿಸಿದರೂ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಸಿಗದಿರುವುದಕ್ಕೆ ಅನಯಾ ಬಂಗಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
25ರ ವಯಸ್ಸಿನ ಅನಯಾ 2022ರಲ್ಲಿ ಲಿಂಗ ಪರಿವರ್ತನೆ ಪ್ರಕ್ರಿಯೆಯನ್ನು ಆರಂಭಿಸಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಭಾರತದಲ್ಲಿ ತಮ್ಮ ಕ್ರಿಕೆಟ್ ಮುಂದುವರಿಸುವ ಅರ್ಹತೆ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ತಮ್ಮ ಮನವಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಕ್ರಿಕೆಟ್ ಆಸ್ಟ್ರೇಲಿಯಾ ಅವರಿಗೆ ಸಮುದಾಯ ಮಟ್ಟದ ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿದೆ. ಅಲ್ಲಿನ ಅರ್ಹತಾ ನಿಯಮಗಳನ್ನು ಪೂರೈಸಿದರೆ, ಇದರ ಮೂಲಕ ಭವಿಷ್ಯದಲ್ಲಿ ಉನ್ನತ ಮಟ್ಟದ ಕ್ರಿಕೆಟ್‌ಗೆ ಮುನ್ನಡೆಯುವ ಅವಕಾಶವೂ ಸಿಗಬಹುದು.
ಆಸ್ಟ್ರೇಲಿಯಾದಲ್ಲಿ ಮಹಿಳಾ ಬಿಗ್‌ಬ್ಯಾಷ್ ಲೀಗ್ ಆಡಲು ಅರ್ಹಳಾಗಿದ್ದೇನೆಂದ ಅನಯಾ ಬಾಂಗರ್!
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅನಯಾ ಬಾಂಗರ್, "ನನಗೆ ಯಾವುದೇ ಪ್ರತಿಕ್ರಿಯೆ ನೀಡದೆ ಬಿಸಿಸಿಐ ಮೌನವಾಗಿರುವುದು ತುಂಬಾ ನಿರಾಶಾದಾಯಕ ಮತ್ತು ಹೃದಯವಿದ್ರಾವಕವಾಗಿದೆ. ಲಿಂಗ ಪರಿವರ್ತನೆ ಮಾಡಿಕೊಳ್ಳುವುದರಿಂದ ನಾನು ಕ್ರಿಕೆಟ್‌ನಿಂದ ದೂರವಾಗಬೇಕಾಗುತ್ತದೆ ಎಂಬುದು ನನಗೆ ತಿಳಿದಿತ್ತು. ಆದರೆ ಭಾರತದಲ್ಲಿ ಈ ರೀತಿಯ ಮೊದಲ ಪ್ರಕರಣ ನಾನಾಗಿರುವುದರಿಂದ, ಬಿಸಿಸಿಐ ಈ ವಿಚಾರಕ್ಕೆ ಮುಕ್ತ ಮನಸ್ಸಿನಿಂದ ಸ್ಪಂದಿಸಿ, ಇದಕ್ಕೆ ಸಂಬಂಧಿಸಿದಂತೆ ಸೂಕ್ತ ನೀತಿಗಳನ್ನು ರೂಪಿಸಲು ಪ್ರಯತ್ನಿಸುತ್ತದೆ ಎಂದು ನಾನು ಆಶಿಸುತ್ತೇನೆ."
#WATCH | Mumbai, Maharashtra: On making a comeback in cricket, Anaya Bangar, a cricketer and the daughter of former Indian international cricketer and national batting coach, Sanjay Bangar, said, "...I am preparing to return to women's cricket in Australia with the aim of… pic.twitter.com/NVgrICOjgT
— ANI (@ANI) August 27, 2026
"ನನ್ನ ಸಂಪೂರ್ಣ ಪಯಣದ ಅನುಭವಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ, ತಂಡದ ಭಾಗವಾಗಲು ನನಗೆ ಸಂತೋಷವಾಗುತ್ತದೆ. ನಮ್ಮ ದೇಶ ಮತ್ತು ಭವಿಷ್ಯದ ಮಹಿಳಾ ಕ್ರೀಡೆಗೆ ಯಾವುದು ಉತ್ತಮವಾಗಿ ಕೆಲಸ ಮಾಡುತ್ತದೆ ಎಂಬುದರ ಕುರಿತು ನನ್ನ ಅನುಭವ ಮತ್ತು ಸಲಹೆಗಳನ್ನು ನೀಡಲು ನಾನು ಸಿದ್ಧ,” ಎಂದು ಅನಯಾ ಬಾಂಗರ್ ತಿಳಿಸಿದ್ದಾರೆ.
ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ಬಳಿಕ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಅನಯಾ ಬಾಂಗರ್!
ಕ್ರಿಕೆಟ್ ಆಸ್ಟ್ರೇಲಿಯಾದ ಟ್ರಾನ್ಸ್‌ಜೆಂಡರ್ ಮತ್ತು ಲಿಂಗ ವೈವಿಧ್ಯತೆಯ ಮಾರ್ಗಸೂಚಿಗಳು ಸಮುದಾಯ ಮಟ್ಟದ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅಗತ್ಯವಾದ ವೇದಿಕೆಯನ್ನು ಒದಗಿಸುತ್ತವೆ. ಬಾಂಗಾರ್ ಅವರಿಗೆ ಸಮುದಾಯ ಮಟ್ಟದಲ್ಲಿ ಸ್ಪರ್ಧಿಸಲು ಅನುಮತಿ ನೀಡಲಾಗಿದೆ. ಆದರೆ ಉನ್ನತ ಮಟ್ಟದ ಕ್ರಿಕೆಟ್‌ಗೆ ಪ್ರವೇಶಿಸುವ ಯಾವುದೇ ಅವಕಾಶವು ಕ್ರಿಕೆಟ್ ಆಸ್ಟ್ರೇಲಿಯಾದ ಅರ್ಹತಾ ನಿಯಮಗಳಿಗೆ ಒಳಪಟ್ಟಿರುತ್ತದೆ.
ಈ ಅವಕಾಶದಿಂದ ಬಾಂಗಾರ್ ಅವರಿಗೆ ವೃತ್ತಿಪರ ತಂಡದಲ್ಲಿ ಅಥವಾ ಮಹಿಳೆಯರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸ್ಥಾನ ಖಚಿತವಾಗಿದೆ ಎಂದರ್ಥವಲ್ಲ. ಆದರೆ ಲಿಂಗ ಪರಿವರ್ತನೆಯ ಬಳಿಕ ತಮ್ಮ ಕ್ರಿಕೆಟ್ ವೃತ್ತಿಜೀವನವೇ ಅಂತ್ಯಗೊಂಡಿದೆ ಎಂದು ಭಾವಿಸಿದ್ದ ಅವರಿಗೆ, ಈ ಅವಕಾಶ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ದಾರಿಯನ್ನು ಮತ್ತೆ ತೆರೆದಿದೆ.