ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2027: ರೋಹಿತ್‌ ಶರ್ಮಾಗೆ ನಾಯಕತ್ವ ನೀಡಿದ ಬೆನ್ನಲ್ಲೆ ಎಂಐ ಫ್ಯಾನ್ಸ್‌ಗೆ ಸೂರ್ಯ ಒಂದು ಸಾಲಿನ ಸಂದೇಶ!

ಐಪಿಎಲ್ 2027ಕ್ಕೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಐದು ಬಾರಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿರುವ ರೋಹಿತ್ ಮರಳಿರುವುದಕ್ಕೆ ಸೂರ್ಯಕುಮಾರ್ ಯಾದವ್ ಸಂತಸ ವ್ಯಕ್ತಪಡಿಸಿದ್ದು, ಅವರನ್ನು ನಾಯಕ, ಸಹೋದರ ಮತ್ತು ಮಾರ್ಗದರ್ಶಕ ಎಂದು ಕರೆದಿದ್ದಾರೆ.

ರೋಹಿತ್‌ಗೆ ನಾಯಕತ್ವ ನೀಡಿದ ಬೆನ್ನಲ್ಲೆ ಎಂಐ ಫ್ಯಾನ್ಸ್‌ಗೆ ಸೂರ್ಯ ಸಂದೇಶ!

ರೋಹಿತ್‌ಗೆ ಎಂಐ ನಾಯಕತ್ವ ನೀಡಿದ ಬೆನ್ನಲ್ಲೆ ಸೂರ್ಯಕುಮಾರ್‌ ಫ್ಯಾನ್ಸ್‌ಗೆ ಸಂದೇಶ. -

Profile
Ramesh Kote Nov 28, 2026 4:15 PM

ನವದೆಹಲಿ: ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಗೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಶುಕ್ರವಾರ ಅಧಿಕೃತವಾಗಿ ಘೋಷಿಸಲಾಗಿದೆ. ಆ ಮೂಲಕ ಕಳೆದ ಹಲವು ತಿಂಗಳುಗಳಿಂದ ತಂಡದ ಮುಂದಿನ ನಾಯಕ ಯಾರು ಎಂಬ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಬಿದ್ದಿದೆ. ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಬಂದು ಪಂಜಾಬ್ ಕಿಂಗ್ಸ್ ತಂಡ ಸೇರಿಕೊಂಡ ಬಳಿಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರಿಗೆ ಮತ್ತೆ ನಾಯಕತ್ವದ ಜವಾಬ್ದಾರಿ ನೀಡಿದೆ. ತಂಡದ ಮುಖ್ಯ ಕೋಚ್ ಆಗಿ ಕೈರೊನ್ ಪೊಲಾರ್ಡ್ ನೇಮಕಗೊಂಡಿರುವ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸೂರ್ಯಕುಮಾರ್ ಯಾದವ್, ಜಸ್‌ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರಂತಹ ಆಟಗಾರರ ಹೆಸರು ನಾಯಕತ್ವದ ರೇಸ್‌ನಲ್ಲಿ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಐದು ಬಾರಿ ಮುಂಬೈ ತಂಡಕ್ಕೆ ಐಪಿಎಲ್ ಪ್ರಶಸ್ತಿ ತಂದುಕೊಟ್ಟಿರುವ ರೋಹಿತ್ ಅವರನ್ನೇ ಫ್ರಾಂಚೈಸಿ ಆಯ್ಕೆ ಮಾಡಿದೆ.

IPL 2027: ಮುಂಬೈ ಇಂಡಿಯನ್ಸ್‌ ನಾಯಕತ್ವಕ್ಕೆ ಮರಳಿದ ರೋಹಿತ್‌ ಶರ್ಮಾ, ಖಚಿತಪಡಿಸಿದ ಫ್ರಾಂಚೈಸಿ!

ರೋಹಿತ್ ಆಯ್ಕೆಗೆ ಸೂರ್ಯಕುಮಾರ್ ಪ್ರತಿಕ್ರಿಯೆ ಏನು?

ಟಿ20 ವಿಶ್ವಕಪ್ ವಿಜೇತ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ತಂಡದ ನಾಯಕತ್ವದ ಪ್ರಮುಖ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ನಾಯಕತ್ವ ಒಲಿಯಲಿಲ್ಲ. ಆದರೂ ರೋಹಿತ್ ಅವರ ನೇಮಕವನ್ನು ಸೂರ್ಯಕುಮಾರ್ ಸಂತೋಷದಿಂದ ಸ್ವಾಗತಿಸಿದ್ದಾರೆ. ರೋಹಿತ್ ನಾಯಕನಾಗಿ ಘೋಷಣೆಯಾದ ಬೆನ್ನಲ್ಲೇ ಸೂರ್ಯಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾಲು ಸಾಲು ನೀಲಿ ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ನಂತರ ಮತ್ತೊಂದು ಪೋಸ್ಟ್‌ನಲ್ಲಿ ರೋಹಿತ್ ಅವರನ್ನು ಹೊಗಳಿ, "ನಾಯಕ. ಸಹೋದರ. ಮಾರ್ಗದರ್ಶಕ. ಪಲ್ಟನ್, ನಿಮ್ಮ ಸೀಟ್ ಬೆಲ್ಟ್‌ಗಳನ್ನು ಬಿಗಿಯಾಗಿ ಕಟ್ಟಿಕೊಳ್ಳಿ," ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ನಾಯಕತ್ವ ಸಿಗದಿದ್ದರೂ ರೋಹಿತ್ ಅವರೊಂದಿಗೆ ತಾವು ತಂಡದ ಪರವಾಗಿ ನಿಲ್ಲುವುದಾಗಿ ಸೂರ್ಯಕುಮಾರ್ ಸಂದೇಶ ನೀಡಿದ್ದಾರೆ.



ಮತ್ತೆ ನಾಯಕತ್ವ ವಹಿಸಿಕೊಂಡ ರೋಹಿತ್ ಹೇಳಿದ್ದೇನು?

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಮರಳಿ ಸಿಕ್ಕಿರುವ ಬಗ್ಗೆ ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. "ಐಪಿಎಲ್‌ನ 20ನೇ ಆವೃತ್ತಿಗೆ ನಾನು ಸಿದ್ಧನಿದ್ದೇನೆ. ಮುಂದಿರುವ ಸವಾಲುಗಳನ್ನು ಎದುರಿಸಲು ಹಾಗೂ ನಮ್ಮ ಪಲ್ಟನ್ ಅಭಿಮಾನಿಗಳಿಗೆ ಸಂಭ್ರಮಿಸುವಂತಹ ಹಲವು ಕ್ಷಣಗಳನ್ನು ನೀಡಲು ಉತ್ಸುಕನಾಗಿದ್ದೇನೆ. ನಮ್ಮದೇ ಶೈಲಿಯ ಕ್ರಿಕೆಟ್ ಆಡುವುದು, ಒಟ್ಟಾಗಿ ಹೋರಾಡುವುದು ಮತ್ತು ಆಟವನ್ನು ಆನಂದಿಸುವುದು ನಮ್ಮ ಗುರಿಯಾಗಿರಲಿದೆ," ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

"ಮುಂಬೈ ಇಂಡಿಯನ್ಸ್ ನನ್ನ ಜೀವನದ ಪ್ರಮುಖ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ನನಗೆ ಯಾವಾಗಲೂ ಹೆಮ್ಮೆಯ ವಿಚಾರ. ಮುಂಬರುವ ಋತುವಿನ ಕುರಿತು ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರೊಂದಿಗೆ ನಡೆಸಿದ ಚರ್ಚೆಗಳು ಉತ್ಸಾಹ ಮೂಡಿಸಿವೆ. ಈ ತಂಡ ಸಾಧಿಸಬಲ್ಲ ಯಶಸ್ಸಿನ ಬಗ್ಗೆ ನನಗೆ ಅಪಾರ ನಂಬಿಕೆಯಿದೆ," ಎಂದು ತಿಳಿಸಿದ್ದಾರೆ.

ʻ20ನೇ ಆವೃತ್ತಿಗೆ ನಾನು ರೆಡಿʼ: ಮುಂಬೈ ಇಂಡಿಯನ್ಸ್‌ ನಾಯಕತ್ವಕ್ಕೆ ಮರಳಿದ ಬಳಿಕ ರೋಹಿತ್‌ ಶರ್ಮಾ ಹೇಳಿದ್ದಿದು!

ರೋಹಿತ್ ನಾಯಕತ್ವದಲ್ಲಿ ಮುಂಬೈಗೆ ಐದು ಐಪಿಎಲ್ ಟ್ರೋಫಿ

2013ರಲ್ಲಿ ಮೊದಲ ಬಾರಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ, ತಂಡಕ್ಕೆ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ 2013, 2015, 2017, 2019 ಹಾಗೂ 2020ರಲ್ಲಿ ಐದು ಬಾರಿ ಟ್ರೋಫಿಗಳನ್ನು ಗೆದ್ದಿದೆ. ಇದರ ಜೊತೆಗೆ 2013ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಯನ್ನೂ ಮುಂಬೈ ತಂಡ ಗೆದ್ದುಕೊಂಡಿತ್ತು.

ಆದರೆ 2020ರ ಬಳಿಕ ತಂಡದ ಪ್ರದರ್ಶನದಲ್ಲಿ ಕುಸಿತ ಕಂಡುಬಂದಿತ್ತು. 2021ರಲ್ಲಿ ಐದನೇ ಸ್ಥಾನ, 2022ರಲ್ಲಿ 10ನೇ ಸ್ಥಾನ ಹಾಗೂ 2023ರಲ್ಲಿ ಕ್ವಾಲಿಫೈಯರ್-2 ಹಂತದಲ್ಲಿ ಮುಂಬೈ ಅಭಿಯಾನ ಅಂತ್ಯಗೊಂಡಿತ್ತು. ಇದರ ಬೆನ್ನಲ್ಲೇ 2023ರ ನಂತರ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಹಾರ್ದಿಕ್ ನಾಯಕತ್ವದಲ್ಲಿಯೂ ಮುಂಬೈ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ. 2024ರಲ್ಲಿ 10ನೇ ಸ್ಥಾನ ಹಾಗೂ 2026ರಲ್ಲಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.