CSK vs PBKS: ಪಂಜಾಬ್ ಎದುರು ಚೆನ್ನೈ ಸೋಲಿಗೆ ಅಸಲಿ ಕಾರಣ ತಿಳಿಸಿದ ಋತುರಾಜ್ ಗಾಯಕ್ವಾಡ್!
ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಕಳಪೆ ಫೀಲ್ಡಿಂಗ್ ಸೋಲಿಗೆ ಕಾರಣ ಎಂದು ಹೇಳಿಕೊಂಡಿದ್ದಾರೆ. ಕ್ಯಾಚ್‌ಗಳನ್ನು ಕೈಬಿಟ್ಟ ಕಾರಣ, ತಂಡವು 10-15 ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಡಬೇಕಾಯಿತು. ಇದರಿಂದ ನಾವು ಸೋಲು ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಸಿಎಸ್‌ಕೆ ಸೋಲಿಗೆ ಕಾರಣ ತಿಳಿಸಿದ ಋತುರಾಜ್ ಗಾಯಕ್ವಾಡ್.

ಮುಲ್ಲಾನ್‌ಪುರ: ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 18 ರನ್‌ಗಳ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕ ಋತುರಾಜ್ ಗಾಯಕ್ವಾಡ್ (Ruturaj Gaikwad), ಕಳಪೆ ಫೀಲ್ಡಿಂಗ್ ತಮ್ಮ ತಂಡಕ್ಕೆ ಭಾರಿ ನಷ್ಟವನ್ನುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಕಳೆದ ಕೆಲವು ಪಂದ್ಯಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಫೀಲ್ಡಿಂಗ್ ಪ್ರದರ್ಶನ ತೋರುತ್ತಿದೆ. ಅಂದ ಹಾಗೆ ಮಂಗಳವಾರ ನಡೆದಿದ್ದ ಪಂದ್ಯದಲ್ಲಿನ ಸೋಲಿನ ಮೂಲಕ ಸಿಎಸ್‌ಕೆ ಪ್ರಸಕ್ತ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲು ಅನುಭವಿಸಿದಂತಾಯಿತು. ಬೃಹತ್ ಮೊತ್ತ ಗುರಿ ಹಿಂಬಾಲಿಸಿದ ಚೆನ್ನೈ ಪರ ಡೆವೋನ್ ಕಾನ್ವೆ ಅರ್ಧಶತಕವನ್ನು ಬಾರಿಸಿದ್ದರು.
ಪಂದ್ಯದ ನಂತರ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್, "ಕಳೆದ ನಾಲ್ಕು ಪಂದ್ಯಗಳಲ್ಲಿ ಕ್ಯಾಚ್‌ಗಳನ್ನು ಬಿಡುವುದು ಒಂದೇ ವ್ಯತ್ಯಾಸ. ಇದು ಬಹಳ ಮುಖ್ಯವಾಗಿತ್ತು. ನಾವು ಪ್ರತಿ ಬಾರಿ ಕ್ಯಾಚ್ ಬಿಟ್ಟಾಗಲೂ ಅದೇ ಬ್ಯಾಟ್ಸ್‌ಮನ್ 20, 25 ಅಥವಾ 30 ಹೆಚ್ಚುವರಿ ರನ್ ಗಳಿಸುತ್ತಾರೆ. ನೀವು ಆರ್‌ಸಿಬಿ ಪಂದ್ಯವನ್ನು ಬಿಟ್ಟರೆ, ಕಳೆದ ಮೂರು ಪಂದ್ಯಗಳ ಚೇಸಿಂಗ್ ವೇಳೆ ಒಂದು ಅಥವಾ ಎರಡು ಅಥವಾ ಮೂರು ದೊಡ್ಡ ಹೊಡೆತಗಳು ನಮಗೆ ಕಡಿಮೆಯಾಗುತ್ತಿತ್ತು," ಎಂದು ಹೇಳಿದ್ದಾರೆ.
IPL 2025: 39 ಎಸೆತಗಳಲ್ಲಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಪ್ರಿಯಾಂಶ್ ಆರ್ಯ!
"ನಾವು ಉತ್ತಮ ಪ್ರದರ್ಶನ ತೋರಿದ್ದರೆ 10-15 ರನ್‌ಗಳನ್ನು ಕಡಿಮೆ ನೀಡಬಹುದಿತ್ತು ಮತ್ತು ಇದು ಕ್ಯಾಚ್‌ಗಳನ್ನು ಕೈಬಿಡುವುದರಿಂದ ಮಾತ್ರ ಸಂಭವಿಸುತ್ತದೆ. ಇಂದು ಬ್ಯಾಟಿಂಗ್ ದೃಷ್ಟಿಯಿಂದ ಉತ್ತಮ ಪ್ರದರ್ಶನ ಮೂಡಿ ಬಂದಿದೆ. ಇದನ್ನೇ ನಾವು ಬಯಸಿದ್ದೆವು. ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ ಮತ್ತು ಪವರ್‌ಪ್ಲೇ ಅತ್ಯುತ್ತಮವಾಗಿತ್ತು. ಇದು ಉತ್ತಮ ಪ್ರದರ್ಶನವಾಗಿತ್ತು ಮತ್ತು ಬಹಳಷ್ಟು ಸಕಾರಾತ್ಮಕ ಅಂಶಗಳೂ ಇದ್ದವು,"ಎಂದು ಶ್ಲಾಘಿಸಿದ್ದಾರೆ.
ಪ್ರಿಯಾಂಶ್ ಆರ್ಯ ಬ್ಯಾಟಿಂಗ್‌ಗೆ ಮೆಚ್ಚುಗೆ
ಪಂಜಾಬ್ ಕಿಂಗ್ಸ್ ಪರ ಶತಕ ಗಳಿಸಿದ ಪ್ರಿಯಾಂಶ್ ಆರ್ಯ ಅವರನ್ನು ಋತುರಾಜ್ ಗಾಯಕ್ವಾಡ್ ಶ್ಲಾಘಿಸಿದರು. "ಕೆಲವೊಮ್ಮೆ ಪ್ರಿಯಾಂಶ್ ಆರ್ಯ ಆಡುವ ರೀತಿಯನ್ನು ನೀವು ಮೆಚ್ಚಬೇಕಾಗುತ್ತದೆ. ಅವರು ತನ್ನ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರು. ಇದು ಹೆಚ್ಚಿನ ಅಪಾಯದ ಬ್ಯಾಟಿಂಗ್ ಆಗಿತ್ತು ಮತ್ತು ಅದು ಅವರಿಗೆ ಚೆನ್ನಾಗಿ ಕೆಲಸ ಮಾಡಿದೆ. ನಾವು ವಿಕೆಟ್‌ಗಳನ್ನು ಪಡೆದಿದ್ದರೂ ಸಹ ಅವರು ರನ್ ದರವನ್ನು ಹೆಚ್ಚಾಗಿ ಕಾಯ್ದುಕೊಂಡರು,"ಎಂದು ಹೇಳಿದ್ದಾರೆ.
PBKS vs CSK: ಸಿಎಸ್‌ಕೆಗೆ ಸತತ ನಾಲ್ಕನೇ ಸೋಲು, ಪಂಜಾಬ್ ಕಿಂಗ್ಸ್‌ಗೆ 18 ರನ್ ಜಯ!
39 ಎಸೆತಗಳಲ್ಲಿ ಶತಕ ಬಾರಿಸಿದ ಪ್ರಿಯಾಂಶ್
220 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಆರಂಭಿಕ ಆಟಗಾರ ಡೆವೋನ್ ಕಾನ್ವೇ (69 ರನ್, 49 ಎಸೆತ, ಆರು ಬೌಂಡರಿ, ಎರಡು ಸಿಕ್ಸರ್) ಅವರ ಅರ್ಧಶತಕ ಮತ್ತು ಶಿವಂ ದುಬೆ (42) ಅವರೊಂದಿಗೆ 89 ರನ್‌ಗಳ ಮೂರನೇ ವಿಕೆಟ್ ಪಾಲುದಾರಿಕೆಯ ಹೊರತಾಗಿಯೂ ಐದು ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೂ ಮೊದಲು ಕಳಪೆ ಆರಂಭದಿಂದ ಚೇತರಿಸಿಕೊಂಡ ಪಂಜಾಬ್ ಕಿಂಗ್ಸ್ ಆರು ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಐಪಿಎಲ್ ಇತಿಹಾಸದಲ್ಲಿ ಐದನೇ ವೇಗದ ಶತಕ ಗಳಿಸಿದ ಪ್ರಿಯಾಂಶ್ ಆರ್ಯ, 42 ಎಸೆತಗಳಲ್ಲಿ ಒಂಬತ್ತು ಸಿಕ್ಸರ್ ಮತ್ತು ಏಳು ಬೌಂಡರಿಗಳೊಂದಿಗೆ 103 ರನ್ ಸಿಡಿಸಿದ್ದರು.