ಶುಭಮನ್ ಗಿಲ್ ಆರೋಪಕ್ಕೆ ಟಾಮ್ ಲಾಥಮ್ ಬೆಂಬಲ: ಕೊಕುಬುರಾ ಚೆಂಡಿನ ಗುಣಮಟ್ಟದ ಬಗ್ಗೆ ಅಸಮಾಧಾನ!
ಕೊಕಬುರಾ ಚೆಂಡು ಬೇಗನೆ ಮೃದುವಾಗುತ್ತಿರುವ ಬಗ್ಗೆ ಶುಭಮನ್ ಗಿಲ್ ವ್ಯಕ್ತಪಡಿಸಿದ್ದ ಅಸಮಾಧಾನಕ್ಕೆ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಬೆಂಬಲ ನೀಡಿದ್ದಾರೆ. ಆದರೆ ಕೋವಿಡ್ ನಂತರವೂ ಮುಂದುವರಿದಿರುವ ಎಂಜಲು ಬಳಕೆಯ ನಿಷೇಧ ತೆರವುಗೊಳಿಸುವ ವಿಚಾರದಲ್ಲಿ ಗಿಲ್ ಅಭಿಪ್ರಾಯಕ್ಕೆ ಅವರು ಸಹಮತ ವ್ಯಕ್ತಪಡಿಸಿಲ್ಲ.
ಕೂಕಬುರಾ ಚೆಂಡಿನ ಬಗ್ಗೆ ಟಾಮ್ ಲೇಥಮ್ ಅಸಮಾಧಾನ. -
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಭಾರತ ನಾಯಕ ಶುಭಮನ್ ಗಿಲ್ (Shubman Gill) ಕೊಕಬುರಾ (Kookaburra) ಚೆಂಡಿನ ಗುಣಮಟ್ಟದ ಬಗ್ಗೆ ವ್ಯಕ್ತಪಡಿಸಿದ್ದ ಅಸಮಾಧಾನಕ್ಕೆ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ (Tom Latham) ಬೆಂಬಲ ಸೂಚಿಸಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಚೆಂಡು ಬಹುಬೇಗ ತನ್ನ ಗಡಸುತನ ಕಳೆದುಕೊಳ್ಳುತ್ತಿರುವುದು ಬೌಲರ್ಗಳಿಗೆ ದೊಡ್ಡ ಸಮಸ್ಯೆಯಾಗಿದೆ ಎಂಬ ಗಿಲ್ ಅಭಿಪ್ರಾಯವನ್ನು ಲೇಥಮ್ ಒಪ್ಪಿಕೊಂಡಿದ್ದಾರೆ.
ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಮಾತನಾಡಿದ್ದ ಗಿಲ್, ಕೊಕಬುರಾ ಚೆಂಡು ಬೇಗನೆ ಮೃದುವಾಗುವುದರಿಂದ ಬೌಲರ್ಗಳಿಗೆ ವಿಕೆಟ್ ಪಡೆಯುವುದು ಕಷ್ಟವಾಗುತ್ತಿದೆ ಎಂದು ಹೇಳಿದ್ದರು. ಬ್ಯಾಟ್ಗೆ ತಾಗಿ ಹೊರಹೋಗುವ ಎಡ್ಜ್ಗಳು ಕೂಡ ವಿಕೆಟ್ ಕೀಪರ್ ಅಥವಾ ಸ್ಲಿಪ್ ಫೀಲ್ಡರ್ಗಳ ಕೈಗೆ ಸುಲಭವಾಗಿ ತಲುಪುತ್ತಿಲ್ಲ ಎಂಬುದು ಅವರ ಆತಂಕವಾಗಿತ್ತು.
ಇದೀಗ ಗಿಲ್ ಅವರ ಅಭಿಪ್ರಾಯಕ್ಕೆ ಧ್ವನಿಗೂಡಿಸಿರುವ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್, ಹೊಸ ಚೆಂಡಿನ ಆರಂಭಿಕ 10 ಓವರ್ಗಳ ಬಳಿಕ ಅದರ ಪರಿಣಾಮಕಾರಿತ್ವ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
IND vs NZ: ʻ ಚೆಂಡಿಗೆ ಎಂಜಲು ಬಳಸಲು ಅನುಮತಿ ನೀಡಿʼ-ಐಸಿಸಿಗೆ ಮನವಿ ಮಾಡಿದ ಶುಭಮನ್ ಗಿಲ್!
"ಚೆಂಡಿನ ವಿಚಾರದಲ್ಲಿ ಗಿಲ್ ಹೇಳಿರುವುದು ಸರಿಯಾಗಿದೆ. ಮೊದಲ ದಿನ ಹೊರತುಪಡಿಸಿ, ಉಳಿದ ದಿನಗಳಲ್ಲಿ ಪಿಚ್ನಲ್ಲಿ ಸ್ವಲ್ಪ ನೆರವು ಇದ್ದರೂ ಪಂದ್ಯ ಸಾಗಿದಂತೆ ಚೆಂಡು ಮೃದುವಾಗುತ್ತಿತ್ತು. ಹೊಸ ಚೆಂಡಿನ ಮೊದಲ ಕೆಲವು ಓವರ್ಗಳು, ಅದರಲ್ಲೂ ಮೊದಲ 10 ಓವರ್ಗಳ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತದೆ," ಎಂದು ಲೇಥಮ್ ಆರೋಪ ಮಾಡಿದ್ದಾರೆ.
"ನ್ಯೂಜಿಲೆಂಡ್ನ ಸಾಮಾನ್ಯ ಪಿಚ್ಗಳಲ್ಲಿ ಚೆಂಡು ಹೆಚ್ಚು ಸಮಯ ಗಡಸಾಗಿರುತ್ತದೆ. ಇದರಿಂದ ಬ್ಯಾಟ್ಗೆ ತಾಗಿದ ಚೆಂಡು ವಿಕೆಟ್ ಕೀಪರ್ ಅಥವಾ ಸ್ಲಿಪ್ ಫೀಲ್ಡರ್ಗಳವರೆಗೆ ಉತ್ತಮವಾಗಿ ಸಾಗುತ್ತದೆ. ಅಲ್ಲದೆ, ಹೆಚ್ಚು ಸಮಯ ಸ್ವಿಂಗ್ ಕೂಡ ಪಡೆಯುತ್ತದೆ. ಆದರೆ ಈ ಪಂದ್ಯದಲ್ಲಿ ಅಂತಹ ಪರಿಸ್ಥಿತಿ ಇರಲಿಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
720, 352 ರನ್ ಲೀಡ್; ವೆಲ್ಲಿಂಗ್ಟನ್ನಲ್ಲಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!
ಸಲೀವಾ ಬಳಕೆಯ ನಿಷೇಧದ ಬಗ್ಗೆ ಗಿಲ್ ಮಾತಿಗೆ ಒಪ್ಪದ ಲೇಥಮ್
ಇದೇ ವೇಳೆ ಚೆಂಡಿಗೆ ಹೊಳಪು ನೀಡಲು ಸಲೀವಾ ಬಳಸುವುದರ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕೆಂಬ ಗಿಲ್ ಅವರ ಮತ್ತೊಂದು ಅಭಿಪ್ರಾಯಕ್ಕೆ ಟಾಮ್ ಲೇಥಮ್ ಸಂಪೂರ್ಣ ಬೆಂಬಲ ನೀಡಿಲ್ಲ. ಕೋವಿಡ್-19 ಸಾಂಕ್ರಾಮಿಕ ಮುಗಿದು ಹಲವು ವರ್ಷಗಳಾಗಿದ್ದರೂ ಚೆಂಡಿಗೆ ಹೊಳಪು ನೀಡಲು ಸಲೀವಾ ಬಳಸುವುದಕ್ಕೆ ಇನ್ನೂ ಏಕೆ ಅವಕಾಶ ನೀಡುತ್ತಿಲ್ಲ ಎಂದು ಗಿಲ್ ಈ ಹಿಂದೆ ಪ್ರಶ್ನಿಸಿದ್ದರು. ಆದರೆ ಈ ನಿಯಮದಲ್ಲಿ ಬದಲಾವಣೆ ಆಗುವ ಬಗ್ಗೆ ಲೇಥಮ್ ಅನುಮಾನ ವ್ಯಕ್ತಪಡಿಸಿದ್ದಾರೆ.
"ನಿಯಮಗಳು ಮತ್ತು ಷರತ್ತುಗಳ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ನನ್ನ ಕೈಯಲ್ಲಿಲ್ಲ. ಸಲೀವಾ ಬಳಕೆಯ ವಿಷಯಕ್ಕೆ ಬಂದರೆ, ಜಗತ್ತು ಎದುರಿಸಿರುವ ಪರಿಸ್ಥಿತಿಯನ್ನು ಗಮನಿಸಿದಾಗ ಈ ನಿಯಮದಲ್ಲಿ ಬದಲಾವಣೆಯಾಗುತ್ತದೆಯೇ ಎಂಬುದು ನನಗೆ ಖಚಿತವಿಲ್ಲ," ಎಂದು ಲೇಥಮ್ ಹೇಳಿದ್ದಾರೆ.
IND vs NZ: ಕುಲ್ದೀಪ್, ಮಾನವ್ ಎಲ್ಲಿ? ಭಾರತದ ಪ್ಲೇಯಿಂಗ್ XI ಅನ್ನು ಪ್ರಶ್ನಿಸಿದ ಸೌರವ್ ಗಂಗೂಲಿ!
ಚೆಂಡಿನ ಹೊಳಪು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ
ಪ್ರಸ್ತುತ ನಿಯಮಗಳಿಗೆ ತಂಡಗಳು ಹೊಂದಿಕೊಳ್ಳಬೇಕಿದ್ದು, ಚೆಂಡಿನ ಸ್ಥಿತಿಯನ್ನು ಸಾಧ್ಯವಾದಷ್ಟು ಉತ್ತಮವಾಗಿ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ನ್ಯೂಜಿಲೆಂಡ್ ನಾಯಕ ಹೇಳಿದ್ದಾರೆ.
"ಚೆಂಡು ಸ್ವಿಂಗ್ ಪಡೆಯಲು ಅನುಕೂಲವಾಗುವಂತೆ ಅದರ ಸ್ಥಿತಿಯನ್ನು ಸಾಧ್ಯವಾದಷ್ಟು ಉತ್ತಮವಾಗಿ ಕಾಪಾಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಆದರೆ ಈ ಪಂದ್ಯದಲ್ಲಿ ಪರಿಸ್ಥಿತಿಗಳು ಚೆಂಡು ದೀರ್ಘಕಾಲ ಪರಿಣಾಮಕಾರಿಯಾಗಿರಲು ಅವಕಾಶ ನೀಡಲಿಲ್ಲ" ಎಂದು ಲೇಥಮ್ ತಿಳಿಸಿದ್ದಾರೆ.