ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

U-19 World Cup: ನ್ಯೂಜಿಲೆಂಡ್‌ ವಿರುದ್ಧ ಭಾರತ ಕಿರಿಯರ ತಂಡಕ್ಕೆ 7 ವಿಕೆಟ್‌ ಜಯ!

ಆರ್‌ಎಸ್‌ ಅಂಬರೀಶ್‌ ಮಾರಕ ಬೌಲಿಂಗ್‌ ದಾಳಿ ಹಾಗೂ ಆಯುಷ್‌ ಮ್ಹಾತ್ರೆ ಅವರ ಅರ್ಧಶತಕದ ಬಲದಿಂದ ಭಾರತ ಕಿರಿಯರ ತಂಡ, 2026ರ ಅಂಡರ್‌-19 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ (ಡಿಎಲ್‌ಎಸ್‌ ಮಾದರಿ) ಗೆಲುವು ಪಡೆದಿದೆ. ಲೀಗ್‌ ಹಂತದಲ್ಲಿ ಮೂರೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ನ್ಯೂಜಿಲೆಂಡ್‌ ವಿರುದ್ಧ ಭಾರತ ಅಂಡರ್‌-19 ತಂಡಕ್ಕೆ ಜಯ!

ಭಾರತ ಅಂಡರ್‌-19 ತಂಡಕ್ಕೆ 7 ವಿಕೆಟ್‌ ಜಯ. -

Profile
Ramesh Kote Jan 24, 2026 9:32 PM

ಬುಲವಾಯೊ: ಆರ್‌ಎಸ್‌ ಅಂಬರೀಶ್‌ (RS Ambrish)ಮಾರಕ ಬೌಲಿಂಗ್‌ ದಾಳಿ ಹಾಗೂ ಆಯಷ್‌ ಮ್ಹಾತ್ರೆ (Ayush mhatre) ಅವರ ಅರ್ಧಶತಕದ ಬಲದಿಂದ ಭಾರತ ಕಿರಿಯರ ತಂಡ, 2026ರ ಅಂಡರ್‌-19 ವಿಶ್ವಕಪ್‌ (U-19 World Cup 2026) ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 7 ವಿಕೆಟ್‌ಗಳ (ಡಿಎಲ್‌ಎಸ್‌) ಗೆಲುವು ಪಡೆಯಿತು. ಆ ಮೂಲಕ ಲೀಗ್‌ ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಟೂರ್ನಿಯ ಸೂಪರ್‌ ಸಿಕ್ಸ್‌ ಹಂತಕ್ಕೆ ಪ್ರವೇಶ ಮಾಡಿದೆ. ಭಾರತದ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆರ್‌ಎಸ್‌ ಅಂಬರೀಶ್‌ 4 ವಿಕೆಟ್‌ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಕ್ವೀನ್ಸ್‌ ಪಾರ್ಕ್‌ನಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ನ್ಯೂಜಿಲೆಂಡ್‌ ತಂಡ, ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 36.2 ಓವರ್‌ಗಳಿಗೆ 135 ರನ್‌ಗಳಿಗೆ ಆಲ್‌ಔಟ್‌ ಆಯಿತು. ಕಿವೀಸ್‌ ಪರ ಕಾಲಮ್‌ ಸ್ಯಾಮ್ಸನ್‌ 48 ಎಸೆತಗಳಲ್ಲಿ 37 ರನ್‌ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಇವರಿಗೆ ಕೊನೆಯಲ್ಲಿ ಸಾಥ್‌ ನೀಡಿದ್ದ ಸೆಲ್ವಿನ್‌ ಸಂಜಯ್‌ 28 ರನ್‌ ಗಳಿಸಿದ್ದರು. ಇದಕ್ಕೂ ಮುನ್ನ ಜಾಕೋಬ್‌ ಕಾಟರ್‌ 23 ರನ್‌ ಗಳಿಸಿದ್ದರು.

IND vs NZ: ಟಿ20ಐ ಕ್ರಿಕೆಟ್‌ನಲ್ಲಿ ಭಾರತ ತಂಡದ ಟಾಪ್‌ 5 ಗರಿಷ್ಠ ರನ್‌ ಚೇಸ್‌ಗಳು!

ಭಾರತದ ಪರ ಆರ್‌ಎಸ್‌ ಅಂಬರೀಶ್‌ 8 ಓವರ್‌ಗಳಿಗೆ ಕೇವಲ 29 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಇನ್ನು ಹೆನಿಲ್‌ ಪಟೇಲ್‌ 23 ರನ್‌ ನೀಡಿ ಎರಡು ವಿಕೆಟ್‌ ಪಡೆದರು.

ಅಗ್ರ ಸ್ಥಾನಕ್ಕೇರಿದ ಭಾರತ

ಬಳಿಕ ಭಾರತ ಕಿರಿಯರ ತಂಡಕ್ಕೆ ಡಿಎಲ್‌ಎಸ್‌ ಮಾದರಿಯ ಪ್ರಕಾರ ಗೆಲ್ಲಲು 130 ರನ್‌ಗಳ ಗುರಿಯನ್ನು ನೀಡಿತು. ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ವೈಭವ್‌ ಸೂರ್ಯವಂಶಿ (40 ರನ್‌) ಹಾಗೂ ಆಯುಷ್‌ ಮ್ಹಾತ್ರೆ (53 ರನ್‌) ಅವರ ಬ್ಯಾಟಿಂಗ್‌ ಬಲದಿಂದ ಕೇವಲ 13.3 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 130 ರನ್‌ ಗಳಿಸಿ ಗೆದ್ದು ಬೀಗಿತು. ಆ ಮೂಲಕ ಈ ಟೂರ್ನಿಯ ಬಿ ಗುಂಪಿನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನವನ್ನು ಅಲಂಕರಿಸಿತು.



ವೈಭವ್‌ ಸೂರ್ಯವಂಶಿ ಅಬ್ಬರ

ಭಾರತದ ಪರ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ ಎಂದಿನಂತೆ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ ಕೇವಲ 23 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಎರಡು ಬೌಂಡರಿಯೊಂದಿಗೆ 40 ರನ್‌ ಸಿಡಿಸಿದರು. ಆದರೆ, ಅರ್ಧಶತಕದಂಚಿನಲ್ಲಿ ಅವರು ಜಸ್ಕರಣ್‌ ಸಂಧು ಅವರಿಗೆ ವಿಕೆಟ್‌ ಒಪ್ಪಿಸಿದರು. ಅಲ್ಲದೆ ನಾಯಕ ಆಯುಷ್‌ ಮ್ಹಾತ್ರೆ ಅವರ ಜೊತೆಗೆ ವೈಭವ್‌ 76 ರನ್‌ಗಳ ಜೊತೆಯಾಟವನ್ನು ಆಡಿದರು.



ಆಯುಷ್‌ ಮ್ಹಾತ್ರೆ ಚೊಚ್ಚಲ ಅರ್ಧಶತಕ

ಭಾರತದ ನಾಯಕ ಆಯುಷ್‌ ಮ್ಹಾತ್ರೆ ಅವರು ಅದ್ಭುತವಾಗಿ ಬ್ಯಾಟ್‌ ಮಾಡಿದರು. ಅವರು ಆಡಿದ 27 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್‌ ಹಾಗೂ ಎರಡು ಬೌಂಡರಿಯೊಂದಿಗೆ 53 ರನ್‌ಗಳನ್ನು ಸಿಡಿಸಿದರು. ಅವರು ಕಿವೀಸ್‌ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಆ ಮೂಲಕ ಅಂಡರ್‌-19 ವಿಶ್ವಕಪ್‌ ಟೂರ್ನಿಯಲ್ಲಿ ಚೊಚ್ಚಲ ಅರ್ಧಶತಕವನ್ನು ಪೂರ್ಣಗೊಳಿಸಿದರು.