Duleep Trophy final: ಇಶಾನ್ ಕಿಶನ್‌ಗೆ ಡಿಆರ್‌ಎಸ್ ಸಲಹೆ ನೀಡಿದ ವೈಭವ್ ಸೂರ್ಯವಂಶಿ! ವಿಡಿಯೊ
2026ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೂರನೇ ದಿನ ಪೂರ್ವ ವಲಯ ತಂಡದ 15ರ ವಯಸ್ಸಿನ ಉಪನಾಯಕ ವೈಭವ್ ಸೂರ್ಯವಂಶಿ ಸ್ಟ್ಯಾಂಡ್‌ಇನ್ ನಾಯಕನಾಗಿ ಗಮನ ಸೆಳೆದರು. ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಸೂರ್ಯವಂಶಿ, ಮಹತ್ವದ ಹಂತದಲ್ಲಿ ಅದ್ಭುತ ಡಿಆರ್‌ಎಸ್ ರಿವ್ಯೂ ಪಡೆದುಕೊಂಡು ತಂಡಕ್ಕೆ ನೆರವಾದರು. ಅಲ್ಲದೆ, ಮೊಹಮ್ಮದ್ ಶಮಿಯನ್ನು ಬೌಲಿಂಗ್‌ಗೆ ಕರೆತರುವ ಮೂಲಕವೂ ಪ್ರಮುಖ ಪಾತ್ರ ವಹಿಸಿದರು.
ವೈಭವ್ ಸೂರ್ಯವಂಶಿ ಡಿಆರ್‌ಎಸ್ ನಿರ್ಧಾರಕ್ಕೆ ರಿಕಿ ಭುಯಿ ಔಟ್. -
ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ದುಲೀಪ್ ಟ್ರೋಫಿ (Duleep Trophy 2026) ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ 15ರ ವಯಸ್ಸಿನ ಉಪನಾಯಕ ವೈಭವ್ ಸೂರ್ಯವಂಶಿ(Vaibhav Sooryavanshi) ಬ್ಯಾಟಿಂಗ್ ಮಾತ್ರವಲ್ಲದೆ, ತಮ್ಮ ಅದ್ಭುತ ಕ್ರಿಕೆಟ್ ಬುದ್ಧಿವಂತಿಕೆ ಹಾಗೂ ನಾಯಕತ್ವದ ನಿರ್ಧಾರಗಳಿಂದಲೂ ಗಮನ ಸೆಳೆಯುತ್ತಿದ್ದಾರೆ. ತಂಡದ ನಾಯಕ ಇಶಾನ್ ಕಿಶನ್ ಅವರ 270 ರನ್‌ಗಳ ಅಮೋಘ ಇನಿಂಗ್ಸ್ ನೆರವಿನಿಂದ ಪೂರ್ವ ವಲಯ ಮೊದಲ ಇನಿಂಗ್ಸ್‌ನಲ್ಲಿ ಬರೋಬ್ಬರಿ 708 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದರ ಬೆನ್ನಲ್ಲೇ ಮೂರನೇ ದಿನದ ಟೀ ವಿರಾಮಕ್ಕೂ ಮುನ್ನ ವೈಭವ್ ಸೂರ್ಯವಂಶಿ ತಮ್ಮ ಜಾಣ್ಮೆಯ ತಂತ್ರದ ಮೂಲಕ ದಕ್ಷಿಣ ವಲಯದ ಇಬ್ಬರು ಪ್ರಮುಖ ಬ್ಯಾಟರ್‌ಗಳ ವಿಕೆಟ್ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು.
ದಕ್ಷಿಣ ವಲಯ ತಂಡದ ಇನಿಂಗ್ಸ್ ವೇಳೆ ರಿಕಿ ಭುಯಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಸಂದರ್ಭದಲ್ಲಿ ವೇಗದ ಬೌಲರ್ ಮುಖೇಶ್ ಕುಮಾರ್ ಲೆಗ್‌ಸೈಡ್‌ನತ್ತ ಎಸೆದ ಚೆಂಡಿಗೆ ಜೋರಾಗಿ ಅಪೀಲ್ ಮಾಡಲಾಯಿತು. ಆದರೆ ಮೈದಾನದ ಅಂಪೈರ್ ಅಪೀಲ್ ಅನ್ನು ತಿರಸ್ಕರಿಸಿದರು. ಆದರೆ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ 15ರ ವಯಸ್ಸಿನ ವೈಭವ್ ಸೂರ್ಯವಂಶಿಗೆ ತಮ್ಮ ನಿರ್ಧಾರದ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ಯಾವುದೇ ಹಿಂಜರಿಕೆಯಿಲ್ಲದೆ ನಾಯಕ ಇಶಾನ್ ಕಿಶನ್ ಅವರಿಗೆ ತಕ್ಷಣವೇ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
Duleep Trophy Fianl: ಕಳೆದ 4 ಪಂದ್ಯಗಳಲ್ಲಿ 3 ಶತಕ, 500 ರನ್ ಗಳಿಸಿರುವ ದೇವದತ್ ಪಡಿಕ್ಕಲ್!
ರಿವ್ಯೂನಲ್ಲಿ ಅಲ್ಟ್ರಾಎಡ್ಜ್ ಮೂಲಕ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ವಿಕೆಟ್‌ಕೀಪರ್ ಕುಮಾರ್ ಕುಶಾಗ್ರ ಅವರ ಗ್ಲೌಸ್‌ಗೆ ಸೇರಿರುವುದು ಸ್ಪಷ್ಟವಾಗಿ ಕಂಡುಬಂತು. ಹೀಗಾಗಿ ವೈಭವ್ ಅವರ ಡಿಆರ್‌ಎಸ್ ನಿರ್ಧಾರ ತಂಡಕ್ಕೆ ಯಶಸ್ಸು ತಂದುಕೊಟ್ಟಿತು. ಈ ಘಟನೆಯ ವಿಡಿಯೊವನ್ನು ಬಿಸಿಸಿಐ ಕೂಡ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ. ಕೇವಲ 15ನೇ ವಯಸ್ಸಿನಲ್ಲೇ ಒತ್ತಡದ ಪರಿಸ್ಥಿತಿಯಲ್ಲಿ ಇಂತಹ ಜಾಣ್ಮೆಯ ನಿರ್ಧಾರ ಕೈಗೊಂಡಿರುವ ವೈಭವ್ ಸೂರ್ಯವಂಶಿ, ತಮ್ಮ ಕ್ರಿಕೆಟ್ ಬುದ್ಧಿವಂತಿಕೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಅವರ ನಿಜವಾದ ನಾಯಕತ್ವದ ಜಾಣ್ಮೆ ಮೂರನೇ ದಿನದ ಟೀ ವಿರಾಮಕ್ಕೂ ಮುನ್ನ ಸ್ಪಷ್ಟವಾಗಿ ಗೋಚರಿಸಿತು. ನಾಯಕ ಇಶಾನ್ ಕಿಶನ್ ಮೈದಾನದಿಂದ ಹೊರನಡೆದಾಗ ವೈಭವ್ ಹಂಗಾಮಿ ನಾಯಕನ ಜವಾಬ್ದಾರಿ ವಹಿಸಿಕೊಂಡರು. ಆ ವೇಳೆ ಸೌತ್ ಝೋನ್ ತಂಡದ ಸ್ಕೋರ್ 174/4 ಆಗಿತ್ತು. ಕುತ್ತಿಗೆಯ ಗಾಯಕ್ಕೆ ಚಿಕಿತ್ಸೆ ಪಡೆದು ಮೈದಾನಕ್ಕೆ ಮರಳಿದ್ದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ವೈಭವ್ ಇನಿಂಗ್ಸ್‌ನ ಪ್ರಮುಖ ಹಂತದಲ್ಲಿ ಸ್ಪೆಲ್‌ನ ಕೊನೆಯ ಓವರ್ ಎಸೆಯುವ ಜವಾಬ್ದಾರಿ ನೀಡಿದರು.
VAIBHAV SOORYAVANSHI × DRS 🔥
— Johns. (@CricCrazyJohns) September 8, 2026
- Sooryavanshi showing great skills in DRS, A big moment in the Duleep Trophy final.
Credit to selectors for giving him the Vice Captaincy. pic.twitter.com/c8lUTtRE7P
ವೈಭವ್ ಅವರ ಈ ನಿರ್ಧಾರ ಮಾಸ್ಟರ್‌ಸ್ಟ್ರೋಕ್ ಆಗಿ ಪರಿಣಮಿಸಿತು. ಕಳೆದ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಸ್ಮರಣ್ ರವಿಚಂದ್ರನ್, ಶಮಿ ಹೊರಗೆ ಸಾಗಿದ ಚೆಂಡಿಗೆ ಬ್ಯಾಟ್ ಅಡ್ಡಹಾಕಿದರು. ಈ ಬಾರಿ ಅಂಪೈರ್ ಔಟ್ ನೀಡದಿದ್ದರೂ, ವಿಕೆಟ್‌ಕೀಪರ್ ಕುಮಾರ್ ಕುಶಾಗ್ರ ಅವರ ಸೂಚನೆಯ ಮೇರೆಗೆ ವೈಭವ್ ಮತ್ತೊಮ್ಮೆ ಡಿಆರ್‌ಎಸ್ ಮೊರೆ ಹೋದರು. ರಿವ್ಯೂ ಕೂಡ ಈ ಬಾರಿ ಯಶಸ್ವಿಯಾಯಿತು. ಹೀಗಾಗಿ ದಕ್ಷಿಣ ವಲಯ ತಂಡದ ಸ್ಕೋರ್ 176/5ಕ್ಕೆ ಕುಸಿಯಿತು.
ಸೆಮಿಫೈನಲ್‌ನಲ್ಲೂ ಡಿಆರ್‌ಎಸ್ ಮೂಲಕ ಪಂದ್ಯ ತಿರುಗಿಸಿದ್ದ ವೈಭವ್
ವೈಭವ್ ಸೂರ್ಯವಂಶಿ ಅವರ ನಿಖರ DRS ನಿರ್ಧಾರ ಕೇವಲ ಕಾಕತಾಳೀಯವಲ್ಲ. ಇದಕ್ಕೂ ಮುನ್ನ ಸೆಂಟ್ರಲ್ ಝೋನ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲೂ ಅವರು ತಮ್ಮ DRS ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದರು. ಆ ಪಂದ್ಯದಲ್ಲಿ ಆರ್ಯನ್ ಜುಯಾಲ್ 46 ರನ್ ಗಳಿಸಿದ್ದ ವೇಳೆ, ಮುಖೇಶ್ ಕುಮಾರ್ ಎಸೆದ ಚೆಂಡಿಗೆ ಸಂಬಂಧಿಸಿದಂತೆ ಕೊನೆಯ ಕ್ಷಣದಲ್ಲಿ DRS ತೆಗೆದುಕೊಳ್ಳುವಂತೆ ವೈಭವ್ ನಾಯಕನನ್ನು ಮನವೊಲಿಸಿದ್ದರು. ರಿವ್ಯೂನಲ್ಲಿ ಅಲ್ಟ್ರಾಎಡ್ಜ್ ಮೂಲಕ ಬ್ಯಾಟ್‌ನ ಅಂಚಿಗೆ ಚೆಂಡು ತಾಗಿರುವುದು ಸ್ಪಷ್ಟವಾಗಿತ್ತು.