ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಲು ಕಾರಣವೇನು?
ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಟಿ20ಐ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, 2026ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವ ಹಾಗೂ ತಂಡದಿಂದ ಕೊಕ್ ನೀಡಲಾಗಿದೆ. ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಲಾಗಿದ್ದು, ಸೂರ್ಯಕುಮಾರ್ ಅವರನ್ನು ಕೈ ಬಿಡಲು ಕಾರಣವೇನೆಂದು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ತಿಳಿಸಿದ್ದಾರೆ.
ಭಾರತ ತಂಡದಿಂದ ಸೂರ್ಯಕುಮಾರ್‌ಗೆ ಕೊಕ್ ನೀಡಲು ಕಾರಣವೇನು? -
ನವದೆಹಲಿ: ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ಕೇವಲ ಮೂರು ತಿಂಗಳ ಅಂತರದಲ್ಲಿ ಸೂರ್ಯಕುಮಾರ್ ಯಾದವ್‌ಗೆ(Suryakumar Yadav) ಬಿಸಿಸಿಐ ಆಯ್ಕೆ ಸಮಿತಿ ಶಾಕ್ ನೀಡಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಗಳ ಟಿ20ಐ ಸರಣಿಗಳ ಭಾರತ ತಂಡದಿಂದ (India's T20 Squad) ಹಾಗೂ ನಾಯಕತ್ವದಿಂದ ಸೂರ್ಯಕುಮಾರ್ ಯಾದವ್‌ಗೆ ಕೊಕ್ ನೀಡಲಾಗಿದೆ. ಜೂನ್ 6 ರಂದು ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು, ಭಾರತ ಟಿ20ಐ ತಂಡವನ್ನು ಪ್ರಕಟಿಸಿದ್ದು, ಶ್ರೇಯಸ್ ಅಯ್ಯರ್‌ಗೆ (Shreyas Iyer) ನಾಯಕತ್ವದ ಜವಾವ್ದಾರಿಯನ್ನು ನೀಡಿದೆ. ತಂಡವನ್ನು ಆಯ್ಕೆ ಮಾಡಿದ ಬಳಿಕ ಅಜಿತ್ ಅಗರ್ಕರ್, ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲು ಬಲವಾದ ಕಾರಣವನ್ನು ತಿಳಸಿದ್ದಾರೆ.
ಭಾರತ ಟಿ20ಐ ತಂಡವನ್ನು ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, "ಸೂರ್ಯಕುಮಾರ್ ಯಾದವ್ ಕುರಿತು ಮಾತನಾಡುವುದಾದರೆ, ಇದು ಕಠಿಣ ನಿರ್ಧಾರವಾಗಿತ್ತು. ಅವರು ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದ ನಾಯಕ. ಆದರೆ ಸಾಮಾನ್ಯವಾಗಿ ಪ್ರತಿಯೊಂದು ವಿಶ್ವಕಪ್ ನಂತರ ತಂಡದ ಮುಂದಿನ ದಿಕ್ಕು ಯಾವುದು ಎಂಬುದನ್ನು ಮರುಪರಿಶೀಲಿಸಲಾಗುತ್ತದೆ. ಅವರ ವೈಯಕ್ತಿಕ ಫಾರ್ಮ್ ಕೂಡ ಒಂದು ಕಾರಣವಾಗಿದೆ. ಜೊತೆಗೆ, ಮುಂದಿನ ಎರಡು ವರ್ಷಗಳ ವಿಶ್ವಕಪ್ ಚಕ್ರವನ್ನು — ಈಗ ಮುಂದಿನ ವಿಶ್ವಕಪ್‌ಗೆ ಎರಡು ವರ್ಷಕ್ಕಿಂತ ಸ್ವಲ್ಪ ಹೆಚ್ಚು ಸಮಯವಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರವೇ ತಂಡಕ್ಕೆ ಸೂಕ್ತ ಎಂದು ಭಾವಿಸಿದ್ದೇವೆ. ನಾನು ಹೇಳಿದಂತೆ, ಶ್ರೇಯಸ್ ನಾಯಕತ್ವಕ್ಕೆ ಸಂಪೂರ್ಣ ಅರ್ಹರು," ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್, ಐರ್ಲೆಂಡ್ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಶ್ರೇಯಸ್ ಅಯ್ಯರ್ ನಾಯಕ, ಸೂರ್ಯವಂಶಿಯೂ ಆಯ್ಕೆ
ಭಾರತ ತಂಡ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದರೂ, ಈ ಟೂರ್ನಿಯಲ್ಲಿ ಅವರು ತಮ್ಮ ಯೋಗ್ಯ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ. ಅವರು ಆಡಿದ್ದ ಒಂಬತ್ತು ಇನಿಂಗ್ಸ್‌ಗಳಲ್ಲಿ ಅವರು 136.72ರ ಸ್ಟ್ರೈಕ್ ರೇಟ್‌ನೊಂದಿಗೆ 242 ರನ್‌ಗಳನ್ನು ಗಳಿಸಿದ್ದರು.
Presenting #TeamIndia's T20I squads for the tours of England & Ireland 2026 🇮🇳#ENGvIND | #IREvIND pic.twitter.com/f84kSSAIDf
— BCCI (@BCCI) June 6, 2026
ಇದರ ಜೊತೆಗೆ 2026ರ ಐಪಿಎಲ್ ಟೂರ್ನಿಯಲ್ಲೂ ಸೂರ್ಯಕುಮಾರ್ ಯಾದವ್ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಮುಂಬೈ ಇಂಡಿಯನ್ಸ್ ಪರ ಅವರು ಆಡಿದ 13 ಇನಿಂಗ್ಸ್‌ಗಳಲ್ಲಿ 20.76ರ ಸರಾಸರಿ ಮತ್ತು 147.54ರ ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 270 ರನ್‌ಗಳಿಗೆ ಸೀಮಿತರಾಗಿದ್ದರು. ಟಿ20 ಕ್ರಿಕೆಟ್‌ನ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಸೂರ್ಯಕುಮಾರ್ ಅವರಿಂದ ಹೆಚ್ಚಿನ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ, ಅದನ್ನು ಪೂರ್ಣಗೊಳಿಸಲಿಲ್ಲ.
ಶ್ರೇಯಸ್ ಅಯ್ಯರ್ ಬಗ್ಗೆ ಅಗರ್ಕರ್ ಹೇಳಿಕೆ
ಆಯ್ಕೆ ಸಮಿತಿಯು ಈ ಬಾರಿ ಶ್ರೇಯಸ್ ಅಯ್ಯರ್ ಅವರತ್ತ ಗಮನ ಹರಿಸಿದೆ. ಏಕೆಂದರೆ ಕಳೆದ ಕೆಲವು ಋತುಗಳಲ್ಲಿ ಬ್ಯಾಟರ್ ಹಾಗೂ ನಾಯಕನಾಗಿ ಅವರು ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಸಾಬೀತುಪಡಿಸಿದ್ದಾರೆ.
2026ರ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡ ಪ್ರಕಟ: ವೈಭವ್ ಸೂರ್ಯವಂಶಿ ಸೇರ್ಪಡೆ
"ಶ್ರೇಯಸ್ ಕುರಿತು ಹೇಳುವುದಾದರೆ, ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಫ್ರಾಂಚೈಸಿ ತಂಡಗಳನ್ನು ಮುನ್ನಡೆಸುವ ಮೂಲಕ ಅವರು ಏನು ಸಾಧಿಸಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅವರು ಒಂದು ಪ್ರಶಸ್ತಿ ಗೆದ್ದಿದ್ದಾರೆ ಮತ್ತು ಫೈನಲ್‌ಗೂ ತಂಡವನ್ನು ಕೊಂಡೊಯ್ದಿದ್ದಾರೆ. ಈ ವರ್ಷ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಅವರಿಗೆ ಸ್ವಲ್ಪ ಕಠಿಣ ಸೀಸನ್ ಎದುರಾದರೂ, ನಾಯಕನಾಗಿ ಬೇಕಾಗುವ ಬಹುತೇಕ ಎಲ್ಲ ಗುಣಗಳನ್ನು ಅವರು ಪ್ರದರ್ಶಿಸಿದ್ದಾರೆ. ಅವರ ವೈಯಕ್ತಿಕ ಪ್ರದರ್ಶನಗಳೂ ಅತ್ಯುತ್ತಮವಾಗಿವೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಹಂತಕ್ಕೂ ಅವರು ತುಂಬಾ ಹತ್ತಿರದಲ್ಲಿದ್ದರು. ಆದರೆ ಸೂರ್ಯ ಇನ್ನೂ ತಂಡದಲ್ಲಿದ್ದ ಕಾರಣ ಅವರಿಗೆ ಅವಕಾಶ ಸಿಗಲಿಲ್ಲ," ಎಂದು ಭಾರತದ ಮುಖ್ಯ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
A sterling example in leadership 👏
— BCCI (@BCCI) June 6, 2026
It was a truly memorable tenure for Surya Kumar Yadav as #TeamIndia's T20I captain that culminated into a historic ICC Men's T20 World Cup victory 🫡 pic.twitter.com/iT1pbGm2Jr
ಐರ್ಲೆಂಡ್ ಟಿ20ಐ ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಪ್ರಿನ್ಸ್ ಯಾದವ್
ಇಂಗ್ಲೆಂಡ್ ಟಿ20ಐ ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ವೈಭವ್ ಸೂರ್ಯವಂಶಿ.