Ashes 2025-26: ʻಜೋ ರೂಟ್ ಶತಕ ಗಳಿಸಿಲ್ಲವಾದರೆ ಬೆತ್ತಲೆಯಾಗಿ ನಡೆಯುತ್ತೇವೆʼ, ಮ್ಯಾಥ್ಯೂ ಹೇಡನ್!
ಆಸ್ಟ್ರೇಲಿಯಾ ವಿರುದ್ದದ ಮುಂಬರುವ 2025-2026ರ ಸಾಲಿನ ಆಷಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಶತಕ ಸಿಡಿಸುವಲ್ಲಿ ವಿಫಲವಾದರೆ, ನಾನು ಬೆತ್ತಲೆಯಾಗಿ ನಡೆಯುತ್ತೇನೆಂದು ಆಸೀಸ್ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ.

ಜೋ ರೂಟ್ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ ಮ್ಯಾಥ್ಯೂ ಹೇಡನ್. -

ಬರಹ: ಕೆ. ಎನ್. ರಂಗು, ಚಿತ್ರದುರ್ಗ
ಲಂಡನ್: ಇಂಗ್ಲೆಂಡ್ ತಂಡ ಮುಂಬರುವ 2025-26ನೇ ಸಾಲಿನ ಆಷಸ್ ಸರಣಿಗೆ (AUS vs ENG) ಸಜ್ಜಾಗುತ್ತಿದೆ. ಈ ಹಿನ್ನಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ (Joe Root) ಅವರ ಪ್ರದರ್ಶನದ ಮೇಲೆ ಸ್ವಾಭಾವಿಕವಾಗಿಯೇ ನಿರೀಕ್ಷೆ ಹೆಚ್ಚಿದೆ. ನವೆಂಬರ್ 21 ರಿಂದ 2026ರ ಜನವರಿ 8 ರವರೆಗೆ ನಡೆಯಲಿರುವ ಆಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇಗ್ಲೆಂಡ್ ತಂಡ ಆಸೀಸ್ ನೆಲದಲ್ಲಿ ಕಳೆದ ಮೂರು ಸರಣಿಗಳಲ್ಲಿ ಸೋಲನ್ನು ಅನುಭವಿಸಿದೆ. ಮತ್ತೊಂದೆಡೆ ಆಸ್ಟ್ರೇಲಿಯಾದಲ್ಲಿ ಜೋ ರೂಟ್ ಇನ್ನೂ ಒಂದೇ ಒಂದು ಶತಕವನ್ನು ಗಳಿಸಿಲ್ಲ. ಹಾಗಾಗಿ ಅವರು ಈ ಬಾರಿ ಶತಕ ಗಳಿಸುವ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಮ್ಯಾಥ್ಯೂ ಹೇಡನ್ (Mattew Hayden) ವಿಚಿತ್ರ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗೆ ಪಾಡ್‌ಕಾಸ್ಟ್‌ನ ಕಾರ್ಯಕ್ರಮವೊಂದರಲ್ಲಿ ಸಾರ್ವಕಾಲಿಕ ಆಷಸ್ ಪ್ಲೇಯಿಂಗ್-11ನಲ್ಲಿ ರೂಟ್ ಅವರನ್ನು ಆಯ್ಕೆ ಮಾಡದಿದ್ದಕ್ಕೆ ಮ್ಯಾಥ್ಯೂ ಹೇಡನ್ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಮುಂಬರುವ ಆಷಸ್ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸುವಲ್ಲಿ ವಿಫಲರಾದರೆ ನಾನು ಬೆತ್ತೆಲೆಯಾಗಿ ತಿರುಗಾಡುತ್ತೇನೆ ಎನ್ನುವ ವಿಚಿತ್ರ ಹೇಳಿಕೆಯನ್ನು ಕೊಟ್ಟಿದ್ದಾರೆ.
ʻಅವರು ನನ್ನನ್ನು ನಿಂಧಿಸಿದ್ದರುʼ: ಜೋ ರೂಟ್ ಜತೆ ಕಿರಿಕ್ ಬಗ್ಗೆ ಪ್ರತಿಕ್ರಿಯಿಸಿದ ಪ್ರಸಿಧ್ ಕೃಷ್ಣ!
ಮ್ಯಾಥ್ಯೂ ಹೇಡನ್ ಹೇಳಿದ್ದೇನು?
ಆಲ್ ಓವರ್ ಬಾರ್ ದಿ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಹೇಡನ್, "ಇಂಗ್ಲೆಂಡ್ ತಂಡದಲ್ಲಿ ಅವರು ಅತ್ಯಂತ ಸಂಪೂರ್ಣ ಆಟಗಾರ, ನಿಮ್ಮ ತಂಡದಲ್ಲಿ ಜೋ ರೂಟ್ ಇಲ್ಲ ಎಂದು ನನಗೆ ನಂಬಲು ಸಾಧ್ಯವಿಲ್ಲ. ಅವರ ಸರಾಸರಿ 40, ಹೆಚ್ಚಿನ ಸ್ಕೋರ್ 180 ಮತ್ತು ಈ ಬೇಸಿಗೆಯ ಕೊನೆಯಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ. ಈ ಬೇಸಿಗೆಯಲ್ಲಿ ಅವರು ಶತಕ ಗಳಿಸದಿದ್ದರೆ ನಾನು ಎಂಸಿಜೆ ಸುತ್ತಲೂ ಬೆತ್ತಲೆಯಾಗಿ ನಡೆಯುತ್ತೇನೆ," ಎಂದು ಸವಾಲು ಹಾಕಿದ್ದಾರೆ.
ಜೋ ರೂಟ್ ಇಂಗ್ಲೆಂಡ್ ಪರ ಉತ್ತಮ ಆಟಗಾರನಾಗಿದ್ದರೂ, ಆಸ್ಟ್ರೇಲಿಯಾದಲ್ಲಿ ಅವರ ದಾಖಲೆ ಅಷ್ಟೇನೂ ತೀರಾ ಹೇಳಿಕೊಳ್ಳುವಂತಿಲ್ಲ. ಏಕೆಂದರೆ, ಅವರು 27 ಟೆಸ್ಟ್ ಇನಿಂಗ್ಸ್‌ಗಳಲ್ಲಿ 35.68ರ ಸರಾಸರಿಯಲ್ಲಿ 892 ರನ್‌ಗಳನ್ನು ಕಲೆಹಾಕುವಲ್ಲಷ್ಟೇ ಶಕ್ತರಾಗಿದ್ದಾರೆ. ಇದರಲ್ಲಿ 9 ಅರ್ಧಶತಕ ಒಳಗೊಂಡಿವೆ. ಮತ್ತು 3 ಬಾರಿ 80 ರನ್‌ಗಳ ಗಡಿ ದಾಟಿದ್ದಾರೆ. ಆದರೆ ರೂಟ್ ಇನ್ನೂ ಕೂಡ ಮೂರು ಅಂಕಿಯ ಮೊತ್ತ ದಾಖಲಿಸಿಲ್ಲ.
I'll walk nude around the MCG if he (Joe Root) doesn't make a hundred this summer (Ashes down under).
— NightWatchMad 🏏 (@NightWatchMad) September 12, 2025
- Matthew Hayden (All Over Bar The Cricket Podcast)#Ashes2025 #AUSvENG pic.twitter.com/uEdH7B63Pf
ಕೋವಿಡ್ ನಂತರದಲ್ಲಿ ರೂಟ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೂಟ್ ಹೆಸರು ಮುಂಚೂಣಿಯಲ್ಲಿದೆ. ಪ್ರಸ್ತುತ ಅವರು 13,543 ರನ್ ಕಲೆಹಾಕಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನೂ ಮೊದಲ ಸ್ಥಾನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 15,921 ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ಹಾಗಾಗಿ ಮುಂಬರುವ ಆಷಸ್‌ನಲ್ಲೂ ಕೂಡ ರೂಟ್ ತಮ್ಮ ಫಾರ್ಮ್ ಅನ್ನು ಮುಂದುವರಿಯುವ ನಿರೀಕ್ಷೆ ಇದೆ.