ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PBKS vs KKR: ಚಹಲ್‌ ಸ್ಪಿನ್‌ ಮ್ಯಾಜಿಕ್‌, ಕೆಕೆಆರ್‌ ಎದುರು ಲೋಸ್ಕೋರಿಂಗ್‌ ಪಂದ್ಯ ಗೆದ್ದ ಪಂಜಾಬ್‌!

PBKS vs KKR Match Highlights: ಯುಜ್ವೇಂದ್ರ ಚಹಲ್‌ ಸ್ಪಿನ್‌ ಮೋಡಿಯ ಸಹಾಯದಿಂದ ಪಂಜಾಬ್‌ ಕಿಂಗ್ಸ್‌ ತಂಡ ಲೋಸ್ಕೋರಿಂಗ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು 16 ರನ್‌ಗಳ ರೋಚಕ ಗೆಲುವು ಪಡೆದಿದೆ. ಪಂಜಾಬ್‌ ಕಿಂಗ್ಸ್‌ ನೀಡಿದ್ದ 112 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೆಕೆಆರ್‌, 95 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಿದ ತಂಡ ಎಂಬ ನೂತನ ದಾಖಲೆಯನ್ನು ಪಂಜಾಬ್‌ ಕಿಂಗ್ಸ್‌ ಬರೆದಿದೆ.

ಚಹಲ್‌ ಸ್ಪಿನ್‌ ಮೋಡಿಗೆ ಮಕಾಡೆ ಮಲಗಿದ ಕೆಕೆಆರ್‌, ಪಂಜಾಬ್‌ಗೆ ರೋಚಕ ಜಯ!

ಕೆಕೆಆರ್‌ ಎದುರು 4 ವಿಕೆಟ್‌ ಕಿತ್ತು ಪಂಜಾಗ್‌ ಗೆಲುವು ತಂದುಕೊಟ್ಟ ಯುಜ್ವೇಂದ್ರ ಚಹಲ್‌.

Profile Ramesh Kote Apr 15, 2025 11:28 PM

ಚಂಡೀಗಢ: ಇಲ್ಲಿನ ಮಹಾರಾಜ ಯದುವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಲೋಸ್ಕೋರಿಂಗ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ (Kolkata Knight Riders) ಎದುರು ಪಂಜಾಬ್‌ ಕಿಂಗ್ಸ್‌ (Punjab Kings) 16 ರನ್‌ಗಳ ರೋಚಕ ಗೆಲುವು ಸಾಧಿಸಿತು. 112 ರನ್‌ಗಳ ಕಡಿಮೆ ಗುರಿ ನೀಡಿದ್ದರ ಹೊರತಾಗಿಯೂ ಯುಜ್ವೇಂದ್ರ ಚಹಲ್‌ (28ಕ್ಕೆ 4) ಸ್ಪಿನ್‌ ಮೋಡಿ ಹಾಗೂ ಮಾರ್ಕೊ ಯೆನ್ಸನ್‌ (17 ಕ್ಕೆ 3) ಅವರ ಮಾರಕ ದಾಳಿಯಿಂದ ಕೆಕೆಆರ್‌ ತಂಡವನ್ನು 95 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪಂಜಾಬ್‌ ಕಿಂಗ್ಸ್‌ ಯಶಸ್ವಿಯಾಯಿತು. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಿದ ಮೊದಲ ತಂಡ ಎಂಬ ದಾಖಲೆಯನ್ನು ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಬರೆಯಿತು.

ಮಂಗಳವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯ 31ನೇ ಪಂದ್ಯ ಕಡಿಮೆ ಮೊತ್ತದ ಕದನವಾಗಿದ್ದರೂ ಅತ್ಯಂತ ರೋಚಕವಾಗಿತ್ತು. ಕಳೆದ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದರೆ, ಈ ಪಂದ್ಯದಲ್ಲಿ ಎರಡೂ ತಂಡಗಳ ಬೌಲರ್‌ಗಳು ಮೇಲುಗೈ ಸಾಧಿಸಿದರು. ಕೇವಲ 112 ರನ್‌ಗಳ ಕಡಿಮೆ ಮೊತ್ತದ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಸುಲಭವಾಗಿ ಗೆಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಇದಕ್ಕೆ ಯುಜ್ವೇಂದ್ರ ಚಹಲ್‌ ಸೇರಿದಂತೆ ಪಂಜಾಬ್‌ ಬೌಲರ್‌ಗಳು ಅವಕಾಶ ನೀಡಲಿಲ್ಲ.

ಕೆಕೆಆರ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಕ್ವಿಂಟನ್‌ ಡಿ ಕಾಕ್‌ ಹಾಗೂ ಸುನೀಲ್‌ ನರೇನ್‌ ಅವರು ತಂಡದ ಮೊತ್ತ 7 ರನ್‌ ಇರುವಾಗಲೇ ವಿಕೆಟ್‌ ಒಪ್ಪಿಸಿದ್ದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾಗಿದ್ದ ಅಜಿಂಕ್ಯ ರಹಾನೆ ಹಾಗೂ ಅಂಗ್‌ಕೃಷ್‌ ರಘುವಂಶಿ ಮೂರನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಕೆಕೆಆರ್‌ ತಂಡವನ್ನು ಗೆಲುವಿನ ಹಾದಿಯಲ್ಲಿಟ್ಟಿದ್ದರು. ಆದರೆ, 9ನೇ ಓವರ್‌ನಲ್ಲಿ ಅಜಿಂಕ್ಯ ರಹಾನೆ (17) ಹಾಗೂ 10ನೇ ಓವರ್‌ನಲ್ಲಿ ರಘುವಂಶಿ (37) ಅವರನ್ನು ಔಟ್‌ ಮಾಡುವ ಮೂಲಕ ಚಹಲ್‌ ಪಂದ್ಯಕ್ಕೆ ತಿರುವು ತಂದುಕೊಟ್ಟಿದ್ದರು.

KKR vs PBKS: ತಮ್ಮ ಮಾಜಿ ತಂಡ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಶ್ರೇಯಸ್‌ ಅಯ್ಯರ್‌ ಡಕ್‌ಔಟ್‌!

ಇದಾದ ಬಳಿಕ ಕೆಕೆಆರ್‌ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪರೆಡ್‌ ನಡೆಸಿದರು. ವೆಂಕಟೇಶ್‌ ಅಯ್ಯರ್‌, ರಿಂಕು ಸಿಂಗ್‌ ಹಾಗೂ ರಮಣ್‌ ದೀಪ್‌ ಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಕೊನೆಯವರೆಗೂ ಒಂದು ತುದಿಯಲ್ಲಿ ಕ್ರೀಸ್‌ನಲ್ಲಿದ್ದ ಆಂಡ್ರೆ ರಸೆಲ್‌ 11 ಎಸೆತಗಳಲ್ಲಿ 17 ರನ್‌ ಸಿಡಿಸಿ ಕೆಕೆಆರ್‌ಗೆ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದರು. ಆದರೆ, ಇನ್ನೊಂದು ತುದಿಯಲ್ಲಿಇವರಿಗೆ ಯಾರೂ ಸಾಥ್‌ ನೀಡಲಿಲ್ಲ. 16ನೇ ಓವರ್‌ನಲ್ಲಿ ಒಬ್ಬರೇ ಪಂದ್ಯವನ್ನು ಮುಗಿಸುವ ಪ್ರಯತ್ನದಲ್ಲಿ ಮಾರ್ಕೊ ಯೆನ್ಸನ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಆ ಮೂಲಕ ಪಂಜಾಬ್‌ 16 ರನ್‌ಗಳ ರೋಚಕ ಗೆಲುವು ಸಾಧಿಸಿ ಸಂಭ್ರಮಿಸಿತು.



ಯಜ್ವೇಂದ್ರ ಚಹಲ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಕಡಿಮೆ ಮೊತ್ತದ ಪಂದ್ಯವಾದರೂ ಸ್ಪಿನ್‌ ಮೋಡಿ ಮಾಡಿದ ಯುಜ್ವೇಂದ್ರ ಚಹಲ್‌, 4 ಓವರ್‌ಗಳಿಗೆ 28 ರನ್‌ ನೀಡಿದರೂ ರಹಾನೆ, ರಘುವಂಶಿ, ರಿಂಕು ಸಿಂಗ್‌ ಹಾಗೂ ರಮಣದೀಪ್‌ ಸಿಂಗ್‌ ಸೇರಿ 4 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರಿಗೆ ಸಾಥ್‌ ನೀಡಿದ್ದ ಮಾರ್ಕೊ ಯೆನ್ಸನ್‌ 17 ರನ್‌ ನೀಡಿ 3 ವಿಕೆಟ್‌ ಪಡೆದರು.



ಪಂಜಾಬ್‌ ಕಿಂಗ್ಸ್‌ 111 ರನ್‌ಗೆ ಆಲ್‌ಔಟ್‌

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುವ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರ ನಿರ್ಧಾರವನ್ನು ಬ್ಯಾಟ್ಸ್‌ಮನ್‌ಗಳು ಬೆಂಬಲಿಸಲಿಲ್ಲ. ಹರ್ಷಿತ್‌ ರಾಣಾ ಸೇರಿದಂತೆ ಕೆಕೆಆರ್‌ ಬೌಲಿಂಗ್‌ ದಾಳಿಗೆ ನಲುಗಿದ್ದ ಪಂಜಾಬ್‌ ಕಿಂಗ್ಸ್‌ ತಂಡ, 15.3 ಓವರ್‌ಗಳಿಗೆ 111 ರನ್‌ ಗಳಿಸಿ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ 112 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು.

ಪಂಜಾಬ್‌ಗೆ ಆಘಾತ ನೀಡಿದ್ದ ಹರ್ಷಿತ್‌ ರಾಣಾ

ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌ಗೆ ವೇಗಿ ಹರ್ಷಿತ್‌ ರಾಣಾ ಆರಂಭಿಕ ಆಘಾತ ನೀಡಿದ್ದರು. ಮೂರು ಓವರ್‌ಗಳ ಅಂತ್ಯಕ್ಕೆ ಪಂಜಾಬ್‌ ಕಿಂಗ್ಸ್‌ 30ಕ್ಕೂ ಹೆಚ್ಚು ರನ್‌ ಗಳಿಸಿ ಭರ್ಜರಿ ಆರಂಭ ತಂದುಕೊಡುವ ಮುನ್ಸೂಚನೆಯನ್ನು ಪ್ರಿಯಾಂಶ್‌ ಆರ್ಯ ಮತ್ತು ಪ್ರಭ್‌ಸಿಮ್ರಾನ್‌ ಸಿಂಗ್‌ ನೀಡಿದ್ದರು. ಆದರೆ, ನಾಲ್ಕನೇ ಓವರ್‌ ಬೌಲ್‌ ಮಾಡಲು ಬಂದಿದ್ದ ಹರ್ಷಿತ್‌ ರಾಣಾ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಅವರು ತಮ್ಮ ಮೊದಲನೇ ಓವರ್‌ನಲ್ಲಿ 12 ಎಸೆತಗಳಲ್ಲಿ 22 ರನ್‌ ಗಳಿಸಿ ಆಡುತ್ತಿದ್ದ ಪ್ರಿಯಾಂಶ್‌ ಆರ್ಯ ಹಾಗೂ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಔಟ್‌ ಮಾಡಿದರು. ನಂತರ ಐದನೇ ಓವರ್‌ನಲ್ಲಿ ಜಾಶ್‌ ಇಂಗ್ಲಿಸ್‌ ಅವರನ್ನು ವರುಣ್‌ ಚಕ್ರವರ್ತಿ ಕ್ಲೀನ್‌ ಬೌಲ್ಡ್‌ ಮಾಡಿದರು.



ಒಂದು ಹಂತದಲ್ಲಿ ಉತ್ತಮ ಬ್ಯಾಟ್‌ ಮಾಡಿ 15 ಎಸೆತಗಳಲ್ಲಿ 30 ರನ್‌ ಗಳಿಸಿ ಆಡುತ್ತಿದ್ದ ಪ್ರಭ್‌ಸಿಮ್ರಾನ್‌ ಸಿಂಗ್‌ ಅವರನ್ನು 6ನೇ ಓವರ್‌ ಕೊನೆಯ ಎಸೆತದಲ್ಲಿ ಹರ್ಷಿತ್‌ ರಾಣಾ ಔಟ್‌ ಮಾಡಿದರು. ನಂತರ ನೆಹಾಲ್‌ ವದೇರಾ (10) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌(7) ಅವರು ಕೂಡ ನಿರಾಶೆ ಮೂಡಿಸಿದರು. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದಿದ್ದ ಸೂರ್ಯಾಂಶ್‌ ಶೆಡ್ಗೆ 4 ರನ್‌ ಗಳಿಸಿ ಸುನೀಲ್‌ ನರೇನ್‌ಗೆ ಶರಣಾದರು. ಒಂದು ಹಂತದಲ್ಲಿ 17 ಎಸೆತಗಳಲ್ಲಿ 18 ರನ್‌ ಗಳಿಸಿ ಆಡುತ್ತಿದ್ದ ಶಶಾಂಕ್‌ ಸಿಂಗ್‌ ಕೂಡ ಕೊನೆಯ ಓವರ್‌ವರೆಗೂ ಆಡಲು ವೈಭವ್‌ ಅರೋರಾ ಬಿಡಲಿಲ್ಲ. ಅಂತಿಮವಾಗಿ ಪಂಜಾಬ್‌ ಕಿಂಗ್ಸ್‌ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು.



ಹರ್ಷಿತ್‌ ರಾಣಾಗೆ 3 ವಿಕೆಟ್‌

ಕೆಕೆಆರ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ್ದ ಹರ್ಷಿತ್‌ ರಾಣಾ 3 ಓವರ್‌ಗಳಿಗೆ 25 ರನ್‌ ನೀಡಿ 3 ವಿಕೆಟ್‌ ಕಿತ್ತರು. ವರುಣ್‌ ಚಕ್ರವರ್ತಿ ಮತ್ತು ಸುನೀಲ್‌ ನರೇನ್‌ ತಲಾ ಎರಡೆರಡು ವಿಕೆಟ್‌ ಪಡೆದರು. ವೈಭವ್‌ ಅರೋರಾ ಹಾಗೂ ಎನ್ರಿಕ್‌ ನೊರ್ಕಿಯಾ ತಲಾ ಒಂದೊಂದು ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ಪಂಜಾಬ್‌ ಕಿಂಗ್ಸ್‌: 15.3 ಓವರ್‌ಗಳಿಗೆ 111-10 (ಪ್ರಭ್‌ಸಿಮ್ರಾನ್‌ ಸಿಂಗ್‌ 30, ಪ್ರಿಯಾಂಶ್‌ ಆರ್ಯ 22 ; ಹರ್ಷಿತ್‌ ರಾಣಾ 25ಕ್ಕೆ 3, ವರುಣ್‌ ಚಕ್ರವರ್ತಿ 21ಕ್ಕೆ 2, ಸುನೀಲ್‌ ನರೇನ್‌, ಎನ್ರಿಕ್‌ ನೊರ್ಕಿಯಾ 23ಕ್ಕೆ 1)

ಕೋಲ್ಕತಾ ನೈಟ್‌ ರೈಡರ್ಸ್:‌ 15.1 ಓವರ್‌ಗಳಿಗೆ 95-10 (ಅಂಗ್‌ಕ್ರಿಷ್‌ ರಘುವಂಶಿ 37, ಅಜಿಂಕ್ಯ ರಹಾನೆ 17, ಆಂಡ್ರೆ ರಸೆಲ್‌ 17; ಯುಜ್ವೇಂದ್ರ ಚಹಲ್‌ 28ಕ್ಕೆ 4, ಮಾರ್ಕೊ ಯೆನ್ಸನ್‌ 17ಕ್ಕೆ 3,

ಪಂದ್ಯ ಶ್ರೇಷ್ಠ ಪ್ರಶಸ್ತಿ: ಯುಜ್ವೇಂದ್ರ ಚಹಲ್‌