IND vs ENG: 3 ವಿಕೆಟ್ ಪಡೆದ ತಮ್ಮ ಬೌಲಿಂಗ್ ಗೇಮ್‌ಪ್ಲ್ಯಾನ್ ತಿಳಿಸಿದ ರವಿ ಬಿಷ್ಣೋಯ್!
Ravi Bishnoi on his Bowling Game plan: ಶುಕ್ರವಾರ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದಿದ್ದ 4ನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ 15 ರನ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಸರಣಿಯನ್ನು 3-1 ಅಂತರದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವು ನೀಡಿದ್ದ ರವಿ ಬಿಷ್ಣೋಯ್, ಪವರ್‌ಪ್ಲೇನಲ್ಲಿ ತಾವು ಅನುಸರಿಸಿದ್ದ ಗೇಮ್ ಪ್ಲ್ಯಾನ್ ಏನೆಂದು ವಿವರಿಸಿದ್ದಾರೆ.
ಪುಣೆ: ಇಂಗ್ಲೆಂಡ್ ವಿರುದ್ಧ ನಡೆದಿದ್ದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು ಪವರ್‌ಪ್ಲೇನಲ್ಲಿ ಬೌಲ್ ಮಾಡಲು ಸಜ್ಜಾಗಿರಬೇಕೆಂದು ನಾಯಕ ಸೂರ್ಯ ಕುಮಾರ್ ಯಾದವ್ (Surya Kumar Yadav) ಮೊದಲೇ ಸೂಚನೆ ನೀಡಿದ್ದರು ಎಂದು ರವಿ ಬಿಷ್ಣೋಯ್ (Ravi Bishnoi) ತಿಳಿಸಿದ್ದಾರೆ. ಟೀಮ್ ಇಂಡಿಯಾದ 15 ರನ್‌ಗಳ ಗೆಲುವಿನಲ್ಲಿ ಲೆಗ್ ಸ್ಪಿನ್ನರ್ (33ಕ್ಕೆ3) ಪ್ರಮುಖ ಪಾತ್ರ ವಹಿಸಿದ್ದರು.
ಪಂದ್ಯದಲ್ಲಿ ಬೆನ್ ಡೆಕಟ್, ನಾಯಕ ಜೋಸ್ ಬಟ್ಲರ್ ಹಾಗೂ ಜೋಫ್ರಾ ಅರ್ಚರ್ ವಿಕೆಟ್ ಪಡೆದು ಎದುರಾಳಿ ತಂಡವನ್ನು 19.4 ಓವರ್‌ಗಳಲ್ಲಿ 166 ರನ್ ಗಳಿಗೆ ಆಲೌಟ್ ಮಾಡುವಲ್ಲಿ ರವಿ ಬಿಷ್ಣೋಯ್ ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ಗೆಲುವಿನೊಂದಿಗೆ ಭಾರತ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು.
IND vs ENG: ಇಂಗ್ಲೆಂಡ್‌ಗೆ ಸೋಲಿನ ಬರೆ ಎಳೆದು ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!
ಪವರ್‌ಪ್ಲೇನಲ್ಲಿ ಬೌಲ್ ಮಾಡಲು ಸೂಚನೆ ಸಿಕ್ಕಿತ್ತು: ಬಿಷ್ಣೋಯ್
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಯುವ ಲೆಗ್ ಸ್ಪಿನ್ನರ್, "ಸೂರ್ಯ ಭಾಯ್ (ಸೂರ್ಯ ಕುಮಾರ್ ಯಾದವ್) ನನಗೆ ಯಾವುದೇ ಸಂದರ್ಭದಲ್ಲಿ ಬೌಲ್ ಮಾಡಲು ಸಜ್ಜಾಗಿರುವಂತೆ ಸೂಚಿಸಿದ್ದರು. ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಹಾಗೂ ನಾನು ಮೂವರು ಸ್ಪಿನ್ನರ್‌ಗಳು ಪವರ್‌ಪ್ಲೇನಲ್ಲಿ ಬೌಲ್ ಮಾಡಿದ್ದೆವು. ಅಲ್ಲದೆ ಈ ರೀತಿಯ ಸವಾಲು ಸ್ವೀಕರಿಸಲು ನಾವು ಸದಾ ಸಜ್ಜಾಗಿರಬೇಕು," ಎಂದು ಹೇಳಿದ್ದಾರೆ.
ಬೆನ್ ಡೆಕೆಟ್ ವಿಕೆಟ್ ಪಡೆದಿದ್ದೇಗೆ?
ಭಾರತ ತಂಡ ನೀಡಿದ್ದ 182 ರನ್‌ಗಳ ಕಠಿಣ ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ನ ಆರಂಭಿಕರಾದ ಫಿಲ್ ಸಾಲ್ಟ್ (23 ರನ್) ಹಾಗೂ ಬೆನ್ ಡೆಕಟ್ (39 ರನ್) ಮೊದಲ ವಿಕೆಟ್‌ಗೆ 62 ರನ್ ಜೊತೆಯಾಟವಾಡಿ ಅಪಾಯಕಾರಿಯಾಗಿದ್ದರು. ಈ ಸಮಯದಲ್ಲಿ ಬೆನ್ ಡೆಕಟ್ ವಿಕೆಟ್ ಪಡೆಯಲು ರೂಪಿಸಿದ ರಣತಂತ್ರವನ್ನು ರವಿಬಿಷ್ಣೋಯ್ ತಿಳಿಸಿದ್ದಾರೆ.
Ravi Bishnoi with his third wicket of the match! 🙌 🙌#TeamIndia are chipping away here in Pune! 👍 👍
— BCCI (@BCCI) January 31, 2025
Follow The Match ▶️ https://t.co/pUkyQwxOA3#INDvENG | @IDFCFIRSTBank pic.twitter.com/9npk3SZxbv
"ಪಂದ್ಯದಲ್ಲಿ ನಾನು ಬೌಲ್ ಮಾಡಲು ಬಂದಾಗ, ಬೆನ್ ಡೆಕಟ್ ಅವರು ಚೆಂಡನ್ನು ನೇರವಾಗಿ ನುಗ್ಗಿ ಹೊಡೆಯಲು ಪರದಾಡುತ್ತಿದ್ದರು. ಶಾರ್ಟ್ ಸ್ಕೈಯರ್‌ನಲ್ಲಿ ಬರುತ್ತಿದ್ದ ಚೆಂಡನಲ್ಲಿ ಸುಲಭವಾಗಿ ರನ್ ಗಳಿಸುತ್ತಿದ್ದುದ್ದನ್ನು ಗಮನಿಸಿದೆ. ಹಾಗಾಗಿ ಎರಡು ಕಡೆ ಸ್ಕ್ವೆಯರ್ ಶಾಟ್ಸ್ ಕಡೆ ಬೌಲ್ ಮಾಡದೆ, ಚೆಂಡನ್ನು ನೇರವಾಗಿ ಹೊಡೆಯುವ ರೀತಿಯಲ್ಲಿ ಎಸೆದು ವಿಕೆಟ್ ಪಡೆಯಲು ರೂಪಿಸಿದ ರಣತಂತ್ರ ಕೈ ಹಿಡಿಯಿತು," ಎಂದು ಲೆಗ್ ಸ್ಪಿನ್ನರ್ ಹೇಳಿದ್ದಾರೆ.
IND vs ENG: ʻಹರ್ಷಿತ್ ರಾಣಾಗೆ ಅವಕಾಶ ನೀಡಬಾರದಿತ್ತುʼ-ಕನ್ಕಷನ್ ಸಬ್ ವಿರುದ್ಧ ಆಲ್‌ಸ್ಟೈರ್ ಕುಕ್ ಕಿಡಿ!
ಜೋಸ್ ಬಟ್ಲರ್ ಅದ್ಭುತ ಆಟಗಾರ
"ನನ್ನ ಪ್ರಕಾರ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಸ್ಪಿನ್ನರ್‌ಗಳ ವಿರುದ್ಧ ಅತ್ಯುತ್ತಮವಾಗಿ ಆಡುವ ಆಟಗಾರರಾಗಿದ್ದಾರೆ. ಅವರು ಭಾರತದ ನೆಲದಲ್ಲಿ ರಾಷ್ಟ್ರೀಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ಸುದೀರ್ಘ ಕಾಲದಿಂದ ಆಡಿರುವ ಅನುಭವ ಹೊಂದಿದ್ದಾರೆ. ಜೋಸ್ ಬಟ್ಲರ್ ಅರಂತಹ ಆಟಗಾರರು ಕ್ರೀಸ್‌ನಲ್ಲಿ ನೆಲಯೂರಿ ಆಡುವಾಗ, ಸ್ಪಿನ್ನರ್‌ಗಳ ವಿರುದ್ಧ ಪ್ರಾಬಲ್ಯ ಮೆರೆದು ರನ್ ಗಳಿಸುವುದು ಹೇಗೆಂಬುದನ್ನು ಅರಿತುಕೊಂಡಿರುತ್ತಾರೆ. ತವರು ಅಂಗಣದಲ್ಲಿ ಜೋಸ್ ಬಟ್ಲರ್ ಅರಂತಹ ಆಟಗಾರರಿಗೆ ಬೌಲ್ ಮಾಡುವುದು ನಿಜಕ್ಕೂ ಕಠಿಣ ಸಂಗತಿಯಾಗಿರುತ್ತದೆ," ಎಂದು ರವಿ ಬಿಷ್ಣೋಯ್ ತಿಳಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವೆ ಭಾನುವಾರ (ಫೆಬ್ರವರಿ 2) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಂತಿಮ ಪಂದ್ಯ ನಡೆಯಲಿದೆ. ತಮ್ಮ ಸ್ಪಿನ್ ಮೋಡಿಯಿಂದ ಟೀಮ್ ಇಂಡಿಯಾಗೆ ಗೆಲುವು ತಂದುಕೊಡಲು ರವಿ ಬಿಷ್ಣೋಯ್ ಎದುರು ನೋಡುತ್ತಿದ್ದಾರೆ.