T20 World Cup: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ!
ನಮೀಬಿಯಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ 41 ಎಸೆತಗಳಲ್ಲಿ 100 ರನ್ ಗಳನ್ನು ಕಲೆ ಹಾಕಿತು. ಆ ಮೂಲಕ ಚುಟುಕು ವಿಶ್ವಕಪ್ ಟೂರ್ನಮಯ ಇತಿಹಾಸದಲ್ಲಿ ವೇಗವಾಗಿ 100 ರನ್ ಗಳಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಟೀಮ್ ಇಂಡಿಯಾ ಬರೆದಿದೆ. ಆ ಮೂಲಕ ನೆದರ್ಲೆಂಡ್ಸ್ ತಂಡದ ದಾಖಲೆಯನ್ನು ಮುರಿದಿದೆ.
ನಮೀಬಿಯಾ ವಿರುದ್ಧ ವಿಶ್ವ ದಾಖಲೆ ಬರೆದ ಭಾರತ. -
ನವದೆಹಲಿ: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ (India) 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಎ ಗುಂಪಿನ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಫೆಬ್ರವರಿ 12ರಂದು (ಗುರುವಾರ) ಇಲ್ಲಿನ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ (IND vs NAM) ಟೀಮ್ ಇಂಡಿಯಾ ಕೇವಲ 41 ಬಾಲ್‌ಗಳಲ್ಲಿ ತಂಡದ ಮೊತ್ತ 100ಕ್ಕೆ ಏರಿಸಿತು. ಆ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿಯೇ ವೇಗವಾಗಿ ಶತಕ ಪೂರ್ಣಗೊಳಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ಬರೆಯಿತು.
ಇದಕ್ಕೂ ಮೊದಲು 2014ರಲ್ಲಿ ಐರ್ಲೆಂಡ್ ವಿರುದ್ಧ ನೆದರ್ಲೆಂಡ್ಸ್ ತಂಡ 42 ಎಸೆತಗಳಲ್ಲಿ 100 ರನ್ ಗಳಿಸಿತ್ತು. ಇಲ್ಲಿಯ ತನಕ ಈ ದಾಖಲೆ ನೆದರ್ಲೆಂಡ್ಸ್ ತಂಡದ ಹೆಸರಿನಲ್ಲಿತ್ತು. ಆದರೆ, ಇದೀಗ ಟೀಮ್ ಇಂಡಿಯಾ 100 ರನ್ ಗಳಿಸಲು ನೆದರ್ಲೆಂಡ್ಸ್‌ಗಿಂತ ಒಂದು ಎಸೆತ ಕಡಿಮೆ ತೆಗೆದುಕೊಂಡಿದೆ. ಭಾರತ ತಂಡದ ಈ ಸಾಧನೆಯ ಹಿಂದೆ ವಿಕೆಟ್ ಕೀಪರ್ ಇಶಾನ್ ಕಿಶನ್ ಇದ್ದಾರೆ.
IND vs NAM: 8 ಎಸೆತಗಳಲ್ಲಿ 22 ರನ್ ಸಿಡಿಸಿದರೂ ಗೋಲ್ಡನ್ ಚಾನ್ಸ್ ಕಳೆದುಕೊಂಡು ಸಂಜು ಸ್ಯಾಮ್ಸನ್!
ಸ್ಪೋಟಕ ಬ್ಯಾಟ್ ಮಾಡಿದ ಇಶಾನ್ ಕಿಶನ್
ಟಾಸ್ ಗೆದ್ದ ನಮೀಬಿಯಾ ಮೊದಲು ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ ಆ ನಿರ್ಧಾರ ಉಲ್ಟಾ ಆಯಿತು. ಸಂಜು ಸ್ಯಾಮ್ಸನ್ ಕೇವಲ 8 ಎಸೆತಗಳಲ್ಲಿ 22 ರನ್‌ಗಳ ವೇಗದ ಇನಿಂಗ್ಸ್ ಆಡಿದರೂ ಬೆನ್ ಶಿಕೊಂಗೋಗೆ ವಿಕೆಟ್ ಒಪ್ಪಿಸಿದರು. ಆದರೆ ನಂತರ ತಂಡದ ಜವಾಬ್ದಾರಿ ಪಡೆದ ಇಶಾನ್ ಕಿಶನ್, ನಮೀಬಿಯಾ ಬೌಲಿಂಗ್ ದಾಳಿಯನ್ನು ಧ್ವಂಸಗೊಳಿಸಿದರು. ಕೇವಲ 20 ಬಾಲ್‌ಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಪವರ್‌ಪ್ಲೇನಲ್ಲಿಯೇ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಈ ದಾಖಲೆ ಬರೆದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಈ ಹಿಂದೆ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಈ ಸಾಧನೆ ಮಾಡಿದ್ದರು.
IND vs NAM: 4 ಎಸೆತಗಳಲ್ಲಿ 4 ಸಿಕ್ಸರ್, 20 ಎಸೆತಗಳಲ್ಲಿಅರ್ಧಶತಕ ಬಾರಿಸಿದ ಇಶಾನ್ ಕಿಶನ್!
ಇಶಾನ್ ಕಿಶನ್ 24 ಬಾಲ್‌ಗಳಲ್ಲಿ 61 ರನ್‌ಗಳನ್ನು ಸಿಡಿಸಿದ ಬಳಿಕ ಔಟ್ ಆದರು. ಆ ಮೂಲಕ ಭಾರತ ತಂಡ ಭರ್ಜರಿ ಆರಂಭ ತಂದುಕೊಟ್ಟು ವಿಕೆಟ್ ಒಪ್ಪಿಸಿದರು. ನಂತರ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 52 ರನ್ ಗಳಿಸಿ ತಂಡದ ಮೊತ್ತವನ್ನು200ರ ಗಡಿ ದಾಟಿಸಿದರು. ಆ ಮೂಲಕ ಟೀಮ್ ಇಂಡಿಯಾ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 209 ರನ್‌ಗಳನ್ನು ಕಲೆ ಹಾಕಿತು ಹಾಗೂ ನಮೀಬಿಯಾಗೆ 210 ರನ್ ಕಠಿಣ ಗುರಿಯನ್ನು ನೀಡಿತು.
ಅದ್ಭುತ ಲಯದಲ್ಲಿರುವ ಇಶಾನ್ ಕಿಶನ್, ಕಳೆದ ನ್ಯೂಜಿಲೆಂಡ್ ವಿರುದ್ಧ ಟಿ20ಐ ಸರಣಿಯಲ್ಲಿಯೂ ಮಿಂಚಿದ್ದರು. ಇದೀಗ ಲಯವನ್ನು ಮೆಗಾ ಟೂರ್ನಿಯಲ್ಲಿಯೂ ಮುಂದುವರಿಸಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡಿದ 24 ಎಸೆತಗಳಲ್ಲಿ ಅವರು 5 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 61 ರನ್‌ಗಳನ್ನು ಬಾರಿಸಿದರು. ಆ ಮೂಲಕ ಟೀಮ್ ಇಂಡಿಯಾಗೆ ಭರ್ಜರಿ ಆರಂಭ ತಂದುಕೊಟ್ಟು ಔಟ್ ಆದರು.