Rinku Singh-Priya Saroj: ಸಂಸದೆ ಪ್ರಿಯಾ ಸರೋಜ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ರಿಂಕು ಸಿಂಗ್
ನಿಶ್ಚಿತಾರ್ಥದಲ್ಲಿ ಮಾಜಿ ಕ್ರಿಕೆಟಿಗರಾದ ಪ್ರವೀಣ್ ಕುಮಾರ್ ಮತ್ತು ಪಿಯೂಷ್ ಚಾವ್ಲಾ, ಉತ್ತರ ಪ್ರದೇಶ ರಣಜಿ ತಂಡದ ನಾಯಕ ಆರ್ಯನ್ ಜುಯಾಲ್ ಉಪಸ್ಥಿತರಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಂಸದೆ ಡಿಂಪಲ್ ಯಾದವ್ ಮತ್ತು ಪ್ರಿಯಾ ಸರೋಜ್ ಅವರ ಗೆಳತಿ ಸಂಸದೆ ಇಕ್ರಾ ಹಸನ್ ಸೇರಿದಂತೆ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.


ಲಕ್ನೋ: ಭಾರತ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್(Rinku Singh) ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್(Priya Saroj) ಅವರು ಭಾನುವಾರ(ಜೂ.8) ಲಕ್ನೋದ ಐಷಾರಾಮಿ ಪಂಚತಾರಾ ಹೋಟೆಲ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬಿಳಿ ಮತ್ತು ಗುಲಾಬಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ ರಿಂಕು ಮತ್ತು ಪ್ರಿಯಾ(Rinku Singh-Priya Saroj) ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಾರ್ಕೋಡ್ ಪಾಸ್ಗಳನ್ನು ಹೊಂದಿರುವ ಅತಿಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿತ್ತು. ಜತೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.
ನಿಶ್ಚಿತಾರ್ಥದಲ್ಲಿ ಮಾಜಿ ಕ್ರಿಕೆಟಿಗರಾದ ಪ್ರವೀಣ್ ಕುಮಾರ್ ಮತ್ತು ಪಿಯೂಷ್ ಚಾವ್ಲಾ, ಉತ್ತರ ಪ್ರದೇಶ ರಣಜಿ ತಂಡದ ನಾಯಕ ಆರ್ಯನ್ ಜುಯಾಲ್ ಉಪಸ್ಥಿತರಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಂಸದೆ ಡಿಂಪಲ್ ಯಾದವ್ ಮತ್ತು ಪ್ರಿಯಾ ಸರೋಜ್ ಅವರ ಗೆಳತಿ ಸಂಸದೆ ಇಕ್ರಾ ಹಸನ್ ಸೇರಿದಂತೆ ರಾಜಕೀಯ ಗಣ್ಯರು ಉಪಸ್ಥಿತರಿದ್ದರು. ಸಮಾಜವಾದಿ ಪಕ್ಷದ ಹಿರಿಯ ನಾಯಕ ಪ್ರೊಫೆಸರ್ ರಾಮ್ ಗೋಪಾಲ್ ಯಾದವ್ ಮತ್ತು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
25 ವರ್ಷದ ಪ್ರಿಯಾ ಸರೋಜ್ ಅವರು 3 ಬಾರಿಯ ಸಂಸದ ಹಾಗೂ ಉತ್ತರ ಪ್ರದೇಶದ ಹಾಲಿ ಶಾಸಕ ತೂಫಾನ್ ಸರೋಜ್ ಪುತ್ರಿ. ಪ್ರಿಯಾ ಕಳೆದ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದ ಸಮಾಜವಾದಿ ಪಕ್ಷದಿಂದ (ಎಸ್ಪಿ) ಸ್ಪರ್ಧಿಸಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿದ್ದರು. 23 ನವೆಂಬರ್ 1998ರಲ್ಲಿ ಜನಿಸಿದ ಪ್ರಿಯಾ, ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ರಿಂಕು ಸಿಂಗ್ ಭಾರತ ಪರ ಎರಡು ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ ಕೇವಲ 55 ರನ್ ಗಳಿಸಿದ್ದರು. ಟಿ20ಯಲ್ಲಿ 46.1ರ ಸರಾಸರಿಯಲ್ಲಿ 546 ರನ್ ಗಳಿಸಿದ್ದರು. ಶಾರ್ಟ್ ಫಾರ್ಮೆಟ್ ನಲ್ಲಿ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿದ್ದಾರೆ.