ಕ್ರಿಕೆಟ್ ಲೋಕದ ಟಾಪ್ 5 'ನೋ ಹ್ಯಾಂಡ್ ಶೇಕ್' ವಿವಾದಗಳು
shake hands controversy cricket: ಶುಕ್ರವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್‌ಗೆ ಹಸ್ತಲಾಘವಕ್ಕೆ ನಿರಾಕರಿಸಿದ ಘಟನೆ ಇದೀಗ ಕ್ರಿಕೆಟ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅನೇಕ ಕ್ರಿಕೆಟ್ ಪಂಡಿತರು ಈ ಬಗ್ಗೆ ಚರ್ಚೆಗಳನ್ನು ಮಾಡಲಾರಂಭಿಸಿದ್ದಾರೆ;
Virat Kohli vs. Travis Head -
ಬೆಂಗಳೂರು, ಮೇ 23: ಕ್ರೀಡೆ ಲಕ್ಷಾಂತರ ಜನರನ್ನು ಸೆಳೆಯುವ ಮನರಂಜನೆಯ ಮಾಧ್ಯಮ. ಆಟದ ಮೂಲಕ ದುಮ್ಮಾನಗಳನ್ನು ಹೊರಹಾಕಲು ಹಾಗೂ ಅನ್ಯಾಯಗಳನ್ನು ಪ್ರತಿಭಟಿಸಲು ಒದಗಿಬರುವ ಸಮರ್ಥ ವೇದಿಕೆ ಕೂಡ. ಜನಾಂಗೀಯ ಭೇದ, ಲಿಂಗತಾರತಮ್ಯ, ಯುದ್ಧ ಹೇರಿಕೆಯ ವಿರುದ್ಧ ಪ್ರತಿಭಟನೆ, ಮೊದಲಾದ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸಲು ಕ್ರೀಡಾಕೂಟಗಳು ಬಳಕೆಯಾಗಿವೆ. ಕ್ರಿಕೆಟ್‌ನಲ್ಲಿ(shake hands controversy cricket) ಸಾಂಪ್ರದಾಯಿಕವಾಗಿ ಪಂದ್ಯದ ನಂತರ ಆಟಗಾರರು ಕೈಕುಲುಕುವುದು (ಹಸ್ತಲಾಘವ) ಕ್ರೀಡಾಸ್ಫೂರ್ತಿಯ ಸಂಕೇತವಾಗಿದೆ.
ಆದರೆ, ಶುಕ್ರವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್‌ಗೆ ಹಸ್ತಲಾಘವಕ್ಕೆ ನಿರಾಕರಿಸಿದ ಘಟನೆ ಇದೀಗ ಕ್ರಿಕೆಟ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅನೇಕ ಕ್ರಿಕೆಟ್ ಪಂಡಿತರು ಈ ಬಗ್ಗೆ ಚರ್ಚೆಗಳನ್ನು ಮಾಡಲಾರಂಭಿಸಿದ್ದಾರೆ. ಆದರೆ ಇದಕ್ಕೂ ಮುನ್ನ ವಿಶ್ವ ಕ್ರಿಕೆಟ್‌ನಲ್ಲಿ ಇಂತಹದ್ದೇ ಘಟನೆಗಳು ಭಾರೀ ವಿವಾದಕ್ಕೂ ಕಾರಣವಾಗಿತ್ತು. ಕ್ರಿಕೆಟ್ ಲೋಕದಲ್ಲಿ ಇದುವರೆಗೆ ನಡೆದ ನೋ ಹ್ಯಾಂಡ್‌ಶೇಕ್ ವಿವಾದ ಕುರಿತ ಕಿರು ವರದಿಯೊಂದು ಇಲ್ಲಿದೆ.
ಭಾರತ-ಪಾಕಿಸ್ತಾನ(ಏಷ್ಯಾ ಕಪ್)
ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡಿದ ವಿವಾದ ಇದಾಗಿದೆ. ದುಬೈನಲ್ಲಿ 2025ರಲ್ಲಿ ನಡೆದಿದ್ದ ಏಷ್ಯಾಕಪ್ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹಸ್ತಲಾಘವ ವಿವಾದ ಉಂಟಾಗಿತ್ತು. ಉಭಯ ತಂಡದ ಆಟಗಾರರು, ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕಾರಣಕ್ಕಾಗಿ ಭಾರತೀಯ ಆಟಗಾರರು ಪಾಕ್ ಆಟಗಾರಿಗೆ ಹ್ಯಾಂಡ್‌ಶೇಕ್ ನೀಡಲು ನಿರಾಕರಿಸಿದ್ದರು. ಇದು ಕೇವಲ ಏಷ್ಯಾಕಪ್‌ಗೆ ಮಾತ್ರ ಸೀಮಿತವಾಗದೆ, ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಕೂಡ ಮುಂದುವರಿದಿತ್ತು.
ವಿರಾಟ್ ಕೊಹ್ಲಿ-ಟ್ರಾವಿಸ್ ಹೆಡ್
19ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ವಿರಾಟ್ ಕೊಹ್ಲಿ-ಮತ್ತು ಟ್ರಾವಿಸ್ ಹೆಡ್ ನಡುವಣ ಹಸ್ತಲಾಘವ ವಿವಾದವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಲು ಮೈದಾನದಲ್ಲಿ ಸಾಲಾಗಿ ನಿಂತಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಅವರು ವಿರಾಟ್ ಕೊಹ್ಲಿ ಕಡೆಗೆ ಕೈಚಾಚಿ ಹ್ಯಾಂಡ್‌ಶೇಕ್ ಮಾಡಲು ಬಂದರು. ಆದರೆ, ವಿರಾಟ್ ಕೊಹ್ಲಿ ಅವರು ಹೆಡ್ ನೀಡಿದ ಹ್ಯಾಂಡ್‌ಶೇಕ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅವರ ಮುಖವನ್ನೂ ನೋಡದೆ ಬೇರೆಡೆ ತಿರುಗಿಕೊಂಡರು. ಪಂದ್ಯದ ವೇಳೆ ಉಭಯ ಆಟಗಾರರ ಮಧ್ಯೆ ಮೈದಾನದಲ್ಲಿ ಮಾತಿನ ಚಕಮಕಿ ನಡೆದಿತ್ತು. ಇದು ವಿರಾಟ್ ಕೊಹ್ಲಿ ಕೋಪಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸ್ಕಾಟ್ಲೆಂಡ್ vs ನೇಪಾಳ
ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್‌ನ ತ್ರಿಕೋನ ಸರಣಿಯ ಸಮಯದಲ್ಲಿ, ನೇಪಾಳದ ಲೆಗ್-ಸ್ಪಿನ್ನರ್ ಸಂದೀಪ್ ಲಮಿಚಾನೆ ವಿರುದ್ಧದ ಲೈಂಗಿಕ ಆರೋಪಗಳ ಕಾರಣ ಸ್ಕಾಟ್ಲೆಂಡ್ ತಂಡದ ಆಟಗಾರರು ಅವರೊಂದಿಗೆ ಕೈಕುಲುಕಲು ನಿರಾಕರಿಸಿದ್ದರು. ಇದು ಕೂಡ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕೊಹ್ಲಿ-ನವೀನ್ ಉಲ್‌ಹಕ್
ವಿರಾಟ್ ಕೊಹ್ಲಿ ಮತ್ತು ಅಫ್ಗಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ನಡುವೆ 2023ರ ಐಪಿಎಲ್ ಪಂದ್ಯದ ವೇಳೆ ನಡೆದಿದ್ದ ಮೈದಾನದ ವಾಗ್ವಾದವು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಸುದ್ದಿಯಾಗಿತ್ತು. ನವೀನ್ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಪರ ಆಡಿದಾಗ ಮತ್ತು ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಿದಾಗ ಇವರ ನಡುವಿನ ಪೈಪೋಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. 2023ರ ವಿಶ್ವಕಪ್ ಪಂದ್ಯದಲ್ಲಿ ಇಬ್ಬರೂ ಪರಸ್ಪರ ಕೈಕುಲುಕಿ ಭಿನ್ನಾಭಿಪ್ರಾಯಗಳನ್ನು ಮರೆತು ಸೌಹಾರ್ದಯುತವಾಗಿ ನಡೆದುಕೊಂಡಿದ್ದರು.
ಇಂಗ್ಲೆಂಡ್-ಪಾಕಿಸ್ತಾನ
2006 ರಲ್ಲಿ, ಇಂಗ್ಲಿಷ್ ಅಂಪೈರ್‌ಗಳು ಪಾಕಿಸ್ತಾನವು ಚೆಂಡು ವಿರೂಪಗೊಳಿಸಿದೆ ಎಂದು ಆರೋಪಿಸಿದರು, ಮತ್ತು ಇಂಗ್ಲೆಂಡ್ ತಂಡಕ್ಕೆ ಐದು ಪೆನಾಲ್ಟಿ ರನ್‌ಗಳನ್ನು ನೀಡಿದರು. ಈ ಆರೋಪಗಳಿಂದ ಆಕ್ರೋಶಗೊಂಡ ಪಾಕಿಸ್ತಾನ ನಾಯಕ ಇಂಜಮಾಮ್-ಉಲ್-ಹಕ್, ಚಹಾ ವಿರಾಮದ ನಂತರ ಮೈದಾನಕ್ಕೆ ಇಳಿಯಲು ನಿರಾಕರಿಸುವಂತೆ ತಮ್ಮ ತಂಡಕ್ಕೆ ಆದೇಶಿಸಿದರು. ಇದು ಭಾರಿ ಬಿಕ್ಕಟ್ಟಿಗೆ ಕಾರಣವಾಯಿತು ಮತ್ತು ಪಂದ್ಯವನ್ನು ಅರ್ಧದಲ್ಲೇ ಕೈಬಿಡಲಾಯಿತು.
ಕಡ್ಡಾಯವಲ್ಲ
ನಿಯಮಾವಳಿಗಳ ಪ್ರಕಾರ ಆಟಗಾರರು ಕೈಕುಲುಕುವುದು ಕಡ್ಡಾಯವಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಥವಾ ಯಾವುದೇ ಕ್ರಿಕೆಟ್ ಸಂಸ್ಥೆಯು ಇದನ್ನು ಕಡ್ಡಾಯಗೊಳಿಸಿಲ್ಲ.