ಕೊಹ್ಲಿ ಇಲ್ಲದ ಭಾರತ ಟೆಸ್ಟ್ ತಂಡದಲ್ಲಿ ಆತ್ಮವಿಶ್ವಾಸ ಕಾಣಿಸುತ್ತಿಲ್ಲ; ಆರ್‌ಸಿಬಿ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ
Shreevats Goswami: ತವರಿನಲ್ಲಿ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈ ಪಂದ್ಯವನ್ನು ಗೆದ್ದು ವೈಟ್‌ವಾಶ್ ಮುಜುಗರದಿಂದ ಪಾರಾಗಲು ಎದುರು ನೋಡುತ್ತಿದೆ. ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವು ಟೆಸ್ಟ್ ಸರಣಿ ಸೋಲನ್ನು ಅನುಭವಿಸಿತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ತವರು ಸರಣಿಯಲ್ಲೂ ಸೋಲಿನ ಭೀತಿಯಲ್ಲಿದೆ.
ವಿರಾಟ್ ಕೊಹ್ಲಿ(ಸಂಗ್ರಹ ಚಿತ್ರ) -
ಬೆಂಗಳೂರು: ಮಾಜಿ ಆರ್‌ಸಿಬಿ ಆಟಗಾರ ಶ್ರೀವತ್ಸ್ ಗೋಸ್ವಾಮಿ(Shreevats Goswami) ಅವರು ವಿರಾಟ್ ಕೊಹ್ಲಿ(Virat Kohli) ಏಕದಿನ ಕ್ರಿಕೆಟ್‌ಗೆ ಮಾತ್ರ ವಿದಾಯ ಹೇಳಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರೆಯಬಹುದಿತ್ತು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯವರ ನಾಯಕತ್ವದಲ್ಲಿ ಭಾರತ ತಂಡದಲ್ಲಿದ್ದ ಶಕ್ತಿ ಮತ್ತು ಆತ್ಮವಿಶ್ವಾಸ ಕಾಣಸಿಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ತೋರಿದ ಕಳಪೆ ಪ್ರದರ್ಶನದ ಪರಿಣಾಮ ಅತಿಥೇಯ ತಂಡ ಸಂಕಷ್ಟಕ್ಕೆ ಸಿಲುಕಿದೆ. ಈ ಬೆಳವಣಿಗೆ ಭಾರತ ಟೆಸ್ಟ್ ತಂಡದ ಕುರಿತು ಕಳವಳ ಹುಟ್ಟುಹಾಕಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶ್ರೀವತ್ಸ್ ಗೋಸ್ವಾಮಿ ಮಾತನಾಡಿ ವಿರಾಟ್ ಕೊಹ್ಲಿಯವರು ಏಕದಿನ ಕ್ರಿಕೆಟ್‌ಗೆ ಮಾತ್ರ ವಿದಾಯ ಹೇಳಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರೆಯಬಹುದಿತ್ತು. ವಿರಾಟ್ ಕೊಹ್ಲಿಯವರ ನಾಯಕತ್ವದಲ್ಲಿ ಭಾರತ ತಂಡದಲ್ಲಿದ್ದ ಶಕ್ತಿ ಮತ್ತು ಆತ್ಮವಿಶ್ವಾಸ ಈಗ ಕಾಣಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ರೀವತ್ಸ್ ಗೋಸ್ವಾಮಿ, "ವಿರಾಟ್ ಏಕದಿನ ಪಂದ್ಯಗಳನ್ನು ಆಡುವುದನ್ನು ಬಿಟ್ಟು ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಂದುವರಿಸಬೇಕಿತ್ತು. ಟೆಸ್ಟ್ ಕ್ರಿಕೆಟ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತದೆ. ಒಬ್ಬ ಆಟಗಾರನಾಗಿ ಮಾತ್ರವಲ್ಲ, ಅವರು ತಂದ ಶಕ್ತಿ, ಭಾರತಕ್ಕಾಗಿ ಆಡುವ ಪ್ರೀತಿ ಮತ್ತು ಉತ್ಸಾಹ, ತಂಡವು ಯಾವುದೇ ಪರಿಸ್ಥಿತಿಯಲ್ಲಿ ಗೆಲ್ಲಬಹುದು ಎನ್ನುವ ನಂಬಿಕೆಯನ್ನುಂಟು ಮಾಡುತ್ತಿತ್ತು" ಎಂದು ಬರೆದಿದ್ದಾರೆ.
ಇದನ್ನೂ ಓದಿ ಕೊಹ್ಲಿ-ರೋಹಿತ್ ಅವರೇ..... ಇನ್ನೂ ಸ್ವಲ್ಪ ದಿನ ಆಡಬಹುದಿತ್ತಲ್ವಾ? ಯಾಕಿಷ್ಟು ಆತುರ!
ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 202 ರನ್‌ಗಳಿಗೆ ಆಲೌಟ್ ಆದ ಬಳಿಕ 288 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್ ಮೂಲಕ ಭಾರತದ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.
ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ
ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 489 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಬಳಿಕ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ ಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದರೂ, ಇದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಕೆಳ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ (48) ಮತ್ತು ಕುಲದೀಪ್ ಯಾದವ್ ಕೆಲಹೊತ್ತು ಮೈದಾನದಲ್ಲಿ ಕಠಿಣ ಹೋರಾಟ ನಡೆಸಿ 141 ಎಸೆತಗಳಲ್ಲಿ 52 ರನ್‌ಗಳ ಜೊತೆಯಾಟವಾಡಿದರು. ಉಳಿದಂತೆ ಎಲ್ಲಾ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಈ ಮೂಲಕ ಭಾರತ ತಂಡ 202 ರನ್‌ಗಳಿಗೆ ತನ್ನ ಮೊದಲ ಇನಿಂಗ್ಸ್ ಹೋರಾಟವನ್ನು ಕೊನೆಗೊಳಿಸಿತು.
ತವರಿನಲ್ಲಿ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈ ಪಂದ್ಯವನ್ನು ಗೆದ್ದು ವೈಟ್‌ವಾಶ್ ಮುಜುಗರದಿಂದ ಪಾರಾಗಲು ಎದುರು ನೋಡುತ್ತಿದೆ. ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡವು ಟೆಸ್ಟ್ ಸರಣಿ ಸೋಲನ್ನು ಅನುಭವಿಸಿತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ತವರು ಸರಣಿಯಲ್ಲೂ ಸೋಲಿನ ಭೀತಿಯಲ್ಲಿದೆ.