"ಅಪ್ಪು ಅಂದ್ರೆ ದೇವರು, ಶಿವಣ್ಣ ನನ್ನನ್ನು ಕ್ಷಮಿಸಿಬಿಡಿ"; ವಿವಾದಾತ್ಮಕ ಹೇಳಿಕೆ ನೀಡಿ ಬಹಿರಂಗವಾಗಿ ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್
ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ದರ್ಶನ್ ಸೇರಿದಂತೆ ಹಲವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್, ಇಂದು (ಫೆ.18) ವಾಣಿಜ್ಯ ಮಂಡಳಿಯಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. "ಆರ್ಥಿಕ ಸಂಕಷ್ಟ ಮತ್ತು ಸಿನಿಮಾದ ಬಿಡುಗಡೆಯ ಒತ್ತಡದಲ್ಲಿ ತಿಳಿಯದೆ ಮಾತನಾಡಿದ್ದೇನೆ, ಏಳು ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಿ" ಎಂದಿದ್ದಾರೆ.
-
ಸ್ಯಾಂಡಲ್‌ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಕೆಲ ದಿನಗಳ ಹಿಂದೆ ಪುನೀತ್, ದರ್ಶನ್, ಶಿವಣ್ಣ, ಜೋಗಿ ಪ್ರೇಮ್ ಎಪಿ ಅರ್ಜುನ್, ಧ್ರುವ ಸರ್ಜಾ ಮುಂತಾದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶ್ರೀನಿವಾಸ್ ವಿರುದ್ಧ ದೂರು ದಾಖಲಾಗಿದ್ದವು. ಆ ಹಿನ್ನೆಲೆಯಲ್ಲಿ ಇಂದು ಫಿಲ್ಮ್ ಚೇಂಬರ್‌ಗೆ ಆಗಮಿಸಿದ್ದ ಶ್ರೀನಿವಾಸ್ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ತಮ್ಮ ಮಾತುಗಳಿಂದ ನೋವಾಗಿದ್ದಾರೆ ಕ್ಷಮಿಸಿ ಎಂದಿದ್ದಾರೆ.
ನನ್ನ ಬಳಿ ದುಡ್ಡು ಇಲ್ಲ
"ನಾನು ಕೆಲವೊಮ್ಮೆ ಎಮೋಷನಲ್ ಆಗಿ ಕೆಲವು ವಿಚಾರಗಳನ್ನು ಮಾತಾಡಿಬಿಟ್ಟಿದ್ದೀನಿ. ನನ್ನ ನಿರ್ಮಾಣದ ʻಕಾಟನ್ ಪೇಟೆ ಗೇಟ್ʼ ಸಿನಿಮಾ ರಿಲೀಸ್ ಆಗಬೇಕಿತ್ತು. ಏನೋ ಒತ್ತಡದಲ್ಲಿ ಹೇಳಿದ ಮಾತುಗಳು ಅವು. ನನ್ನ ಬಳಿ ಈಗ ದುಡ್ಡು ಇಲ್ಲ. ದುಃಖದಲ್ಲಿ ಮಾತಾಡಿಬಿಟ್ಟೆ" ಎಂದು ಬೇಸರ ಮಾಡಿಕೊಂಡಿದ್ದಾರೆ.
Director Prem : ಕನಕಪುರ ಶ್ರೀನಿವಾಸ್ ವಿರುದ್ಧ ಪ್ರೇಮ್ ದೂರು; ಕೆರಳಿ ಕೆಂಡವಾಗಿ ಖಡಕ್ ರಿಪ್ಲೈ !
ಅಪ್ಪು ಬಗ್ಗೆ ಮಾತನಾಡಿದ್ದು ತಪ್ಪು
"ಪುನೀತ್ ರಾಜ್‌ಕುಮಾರ್ ಸರ್ ದೇವರು... ನಾನು ಏಳು ಕೋಟಿ ಕನ್ನಡಿಗರಿಗೆ ಕ್ಷಮೆ ಕೇಳುತ್ತೇನೆ. ನನ್ನ ಮಾತುಗಳನ್ನು ಮಾತನ್ನ ವಾಪಾಸ್ ತೆಗೆದುಕೊಳ್ಳುತ್ತೇನೆ. ನಟ ಶಿವಣ್ಣ ಅವರು ಎಷ್ಟೋ ಶಾಲೆಗಳನ್ನು ತೆರೆದು ಸಹಾಯ ಮಾಡಿದ್ದಾರೆ. ಶಿವಣ್ಣ ಮತ್ತು ಗೀತಕ್ಕೆ ಸಮಾಜಕ್ಕೆ ಸಾಕಷ್ಟು ಉಪಕಾರ ಮಾಡಿದ್ದಾರೆ. ನನಗೆ ಶಿವಣ್ಣ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಅಪ್ಪು ಅಭಿಮಾನಿಗಳು ಕೂಡ ನನ್ನನ್ನು ಕ್ಷಮಿಸಬೇಕು.. ತಪ್ಪಾಗಿ ಹೇಳಿಬಿಟ್ಟೆ. ನನಗೆ ಈಗ ಹಣದ ಅವಶ್ಯಕತೆ ಇದೆ. ನಾನು ವಿದ್ಯಾವಂತ ಅಲ್ಲ. ಮನಸ್ಸಿನಲ್ಲಿ ಏನು ಇದೆಯೋ ಅದನ್ನೆಲ್ಲ ಹೇಳಿಬಿಟ್ಟಿದ್ದೇನೆ. ಶಿವಣ್ಣ ನಾನು ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಕ್ಷಮಿಸಿ" ಎಂದು ಕನಕಪುರ ಶ್ರೀನಿವಾಸ್ ಅವರು ಹೇಳಿದ್ದಾರೆ.
ಶಿವಣ್ಣ-ಧನಂಜಯ್-ಹೇಮಂತ್ ರಾವ್ ಕಾಂಬಿನೇಷನ್‌ನ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರಕ್ಕಾಗಿ ಬೃಹತ್ ಸೆಟ್ ರೆಡಿ
ದರ್ಶನ್ ʻದುಡ್ಡು ಕೊಡ್ತೀನಿ, ತಾಳ್ಮೆಯಿಂದ ಇರುʼ ಅಂದಿದ್ರು
"ದರ್ಶನ್ ಅವರು ನಮ್ಮ ಮಾಸ್ ಹೀರೋ.. ಅವರ ಜೊತೆ ಸಿನಿಮಾ ಮಾಡುತ್ತೇನೆ. ನನಗೆ ದರ್ಶನ್ ಅವರು ದುಡ್ಡು ಕೊಡಬೇಕಿತ್ತು. ʻದುಡ್ಡು ಕೊಡ್ತೀನಿ, ತಾಳ್ಮೆಯಿಂದ ಇರುʼ ಅವರು ಹೇಳಿದ್ರು. ನಾನು ಧ್ರುವ ಸರ್ಜಾ ಜೊತೆ ಧ್ರುವ ಜೊತೆ ಮೂರು ಸಿನಿಮಾ ಮಾಡಿದ್ದೇನೆ. ಕಲಾವಿದರು ಇಲ್ಲದೇ ಸಿನಿಮಾಗಳನ್ನು ಮಾಡಲು ಸಾಧ್ಯವಿಲ್ಲ. ನಮಗೆ ಕಲಾವಿದರು ಬೇಕೇಬೇಕು. ನಮಗೆ ದಯವಿಟ್ಟು ಕಾಲ್ಶೀಟ್ ಕೊಡಿ. ಒಳ್ಳೆಯ ಡೈರೆಕ್ಟರ್ ಕರೆದುಕೊಂಡು ಬರುತ್ತೇವೆ. ಸಿನಿಮಾ ಮಾಡಿಕೊಡಿ. ಜೋಗಿ ಪ್ರೇಮ್, ಎ. ಪಿ. ಅರ್ಜುನ್ ಅವರು ಸಿನಿಮಾ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ನನಗೆ ದುಡ್ಡು ಬೇಡ, ಸಿನಿಮಾ ಮಾಡಿಕೊಡಿ. ದಯವಿಟ್ಟು ನೀವೆಲ್ಲಾ ಸಹಕರಿಸಿ" ಎಂದಿದ್ದಾರೆ ಕನಕಪುರ ಶ್ರೀನಿವಾಸ್
ಅಧ್ಯಕ್ಷೆ ಡಾ. ಜಯಮಾಲಾ ಏನಂದ್ರು?
"ಕನಕಪಪುರ ಶ್ರೀನಿವಾಸ್ ಅವರಗೆ ಹೇಳಿಕೆ ನೀಡಿದ್ದು ತಪ್ಪು ಅನ್ನೋದು ಅರಿವಾಗಿದೆ. ನಮ್ಮ ಎದುರು ಕ್ಷಮೆ ಕೇಳಿ, ಇನ್ಮುಂದೆ ಹೀಗೆ ಮಾತನಾಡವುದಿಲ್ಲ ಎಂದಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡೋಣ. ಇನ್ಮುಂದೆ ಯಾರೂ ಕೂಡ ಈ ರೀತಿ ಹೇಳಿಕೆಗಳನ್ನು ನೀಡುವಂತಿಲ್ಲ. ನಮ್ಮ ಕನ್ನಡ ಚಿತ್ರರಂಗಕ್ಕೆ ಅದಕ್ಕೆ ಆದಂತಹ ಬೆಲೆ ಇದೆ. ಕಲಾವಿದರೇ ನಮ್ಮ ಬಂಡವಾಳ. ಆ ಬಂಡವಾಳದ ಮೇಲೆಯೇ ಪೆಟ್ಟು ಬಿದ್ದಿದೆ. ಶ್ರೀನಿವಾಸ್ ಅವರು ಕೋಪದಲ್ಲಿ ಹೀಗೆ ಮಾತನಾಡಿದ್ದಾರೆ" ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅವರು ಹೇಳಿದ್ದಾರೆ.