Neeraj Chopra: ವಿಶ್ವ ಜಾವೆಲಿನ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ನೀರಜ್
World Athletics ranking: ಸೆಪ್ಟೆಂಬರ್ 2024 ರಲ್ಲಿ ನೀರಜ್ ಅವರು ತಮ್ಮ ಅಗ್ರಸ್ಥಾನ ಕಳೆದುಕೊಂಡಿದ್ದರು. 2025 ರಲ್ಲಿ ನೀರಜ್ ಇದುವರೆಗಿನ ಎಲ್ಲಾ ಸ್ಪರ್ಧೆಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನೀರಜ್ ಏಪ್ರಿಲ್ನಲ್ಲಿ ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್ನಲ್ಲಿ ನಡೆದ ಪೋಚ್ ಇನ್ವಿಟೇಶನಲ್ನಲ್ಲಿ ಗೆಲುವಿನೊಂದಿಗೆ ಅಭಿಯಾನ ಪ್ರಾರಂಭಿಸಿದರು. ಇದಾದ ಬಳಿಕ ಸ್ಪರ್ಧಿಸಿದ ಎಲ್ಲ ಟೂರ್ನಿಯಲ್ಲಿಯೂ ಸ್ಥಿರ ಪ್ರದರ್ಶಬ ತೋರುವ ಮೂಲಕ ಪ್ರಶಸ್ತಿ ಗೆಲ್ಲುತ್ತಲೇ ಬಂದಿದ್ದಾರೆ.


ನವದೆಹಲಿ: ಅವಳಿ ಒಲಿಂಪಿಕ್ ಪದಕ ವಿಜೇತ, ಭಾರತದ ಜಾವೆಲಿನ್ ಸೂಪರ್ಸ್ಟಾರ್ ನೀರಜ್ ಚೋಪ್ರಾ ಅವರು 9 ತಿಂಗಳ ಬಳಿಕ ಮತ್ತೆ ಪುರುಷರ ಜಾವೆಲಿನ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್ 1 ಸ್ಥಾನವನ್ನು ಮರಳಿ ಪಡೆದಿದ್ದಾರೆ. ಗ್ರೆನಡಾದ ಆಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗಷ್ಟೇ ನೀರಜ್ ಡೈಮಂಡ್ ಲೀಗ್ ಮತ್ತು "ಗೋಲ್ಡನ್ ಸ್ಪೈಕ್" ಟೂರ್ನಿಯಲ್ಲಿ ಬಂಗಾರದ ಪದಕ ಗೆದ್ದ ಸಾಧನೆ ಮಾಡಿದ್ದರು. ಈ ಪ್ರದರ್ಶನ ಅವರನ್ನು ಮತ್ತೆ ಅಗ್ರಸ್ಥಾನಕ್ಕೇರುವಂತೆ ಮಾಡಿತು.
ನೂತನ ಶ್ರೇಯಾಂಕದಲ್ಲಿ ನೀರಜ್(1,445), ಆಂಡರ್ಸನ್ ಪೀಟರ್ಸ್ (1,431) ಅಂಕಗಳಿಸಿದ್ದಾರೆ. ಪಾಕಿಸ್ತಾನದ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್(1,370) ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ದೋಹಾ ಡೈಮಂಡ್ ಲೀಗ್ನಲ್ಲಿ 91.06 ಮೀಟರ್ ಪ್ರಯತ್ನದೊಂದಿಗೆ 2025 ರ ವಿಶ್ವದ ಅಗ್ರಗಣ್ಯ ಎಸೆತಗಾರ ಜರ್ಮನಿಯ ಜೂಲಿಯನ್ ವೆಬರ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದರೆ. ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತ ಜಾಕುಬ್ ವಾಡ್ಲೆಜ್ಚ್ ಅಗ್ರ ಐದರಲ್ಲಿ ಕಾಣಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 2024 ರಲ್ಲಿ ನೀರಜ್ ಅವರು ತಮ್ಮ ಅಗ್ರಸ್ಥಾನ ಕಳೆದುಕೊಂಡಿದ್ದರು. 2025 ರಲ್ಲಿ ನೀರಜ್ ಇದುವರೆಗಿನ ಎಲ್ಲಾ ಸ್ಪರ್ಧೆಗಳಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನೀರಜ್ ಏಪ್ರಿಲ್ನಲ್ಲಿ ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್ನಲ್ಲಿ ನಡೆದ ಪೋಚ್ ಇನ್ವಿಟೇಶನಲ್ನಲ್ಲಿ ಗೆಲುವಿನೊಂದಿಗೆ ಅಭಿಯಾನ ಪ್ರಾರಂಭಿಸಿದರು. ಇದಾದ ಬಳಿಕ ಮೇ ತಿಂಗಳಲ್ಲಿ ದೋಹಾ ಡೈಮಂಡ್ ಲೀಗ್ನಲ್ಲಿ ಎರಡನೇ ಸ್ಥಾನ ಪಡೆದರು. ಅಲ್ಲಿ ಅವರು 90.23 ಮೀಟರ್ ದೂರ ಕ್ರಮಿಸಿ ಹೊಸ ರಾಷ್ಟ್ರೀಯ ದಾಖಲೆಯನ್ನು ದಾಖಲಿಸಿದರು.
ಇದನ್ನೂ ಓದಿ Neeraj Chopra: ಪ್ರಶಸ್ತಿ ಗೆದ್ದರೂ ಪ್ರದರ್ಶನ ತೃಪ್ತಿ ತಂದಿಲ್ಲ; ನೀರಜ್ ಬೇಸರ
ಸದ್ಯ ನೀರಜ್ ಅವರು ಜುಲೈ 5ರಂದು ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ನೀರಜ್ ಚೋಪ್ರಾ ಕ್ಲಾಸಿಕ್ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ವಿಶ್ವದ 12 ಶ್ರೇಷ್ಠ ಅಥ್ಲೀಟ್ಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಏಳು ಮಂದಿ ವಿದೇಶಿಗರು ಮತ್ತು ಚೋಪ್ರಾ ಸೇರಿದಂತೆ ಐವರು ಭಾರತದ ಅಥ್ಲೀಟ್ಗಳು ಇದ್ದಾರೆ. ಸಚಿನ್ ದೇವ್, ಕಿಶೋರ್ ಜೇನಾ, ರೋಹಿತ್ ಯಾದವ್ ಮತ್ತು ಸಾಹಿಲ್ ಸಿಲ್ವಾಲ್ ಅವರು ಉಳಿದ ನಾಲ್ವರಾಗಿದ್ದಾರೆ
ಎರಡು ಬಾರಿಯ ವಿಶ್ವ ಚಾಂಪಿಯನ್, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್, ರಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಜರ್ಮನಿಯ ಥಾಮಸ್ ರೋಹ್ಲರ್, ವಿಶ್ವ ಚಾಂಪಿಯನ್, ಕೆನ್ಯಾದ ಜೂಲಿಯಸ್ ಯೆಗೊ, ಅಮೆರಿಕದ ಕರ್ಟಿಸ್ ಥಾಂಪ್ಸನ್, ಜಪಾನಿನ ಗೆಂಕಿ ಡೀನ್, ಶ್ರೀಲಂಕಾದ ರುಮೇಶ್ ಪಥಿರಾಗೆ, ಬ್ರೆಜಿಲ್ನ ಲೂಯಿಸ್ ಮಾರಿಸಿಯೊ ಡಿಸಿಲ್ವಾ ಅವರು ಕಣದಲ್ಲಿರುವ ವಿದೇಶಿ ಅಥ್ಲೀಟ್ಗಳಾಗಿದ್ದಾರೆ. ಈ ಸ್ಪರ್ಧೆಯು ಮೇ 24ರಂದು ಆಯೋಜನೆಯಾಗಿತ್ತು ಆದರೆ ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದ ಕಾರಣದಿಂದಾಗಿ ಮುಂದೂಡಲಾಗಿತ್ತು.