ದಟ್ಟ ಮತ್ತು ಕೆಟ್ಟ ಹೊಗೆಯಿಂದ ಪರದಾಡಿದ ಸಾರ್ವಜನಿಕರಿಂದ ಹಿಡಿಶಾಪ
ನಗರದಲ್ಲಿ ನಿತ್ಯವೂ ಸಂಗ್ರಹವಾಗುವ ಹಸಿ ಕಸ ಮತ್ತು ಒಣ ಕಸವನ್ನು ಕಸ ಸಂಗ್ರಹ ವಾಹನಗಳಲ್ಲಿ ಸಂಗ್ರಹಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೆ ಮಾಡಬೇಕಾದ ನಗರಸಭೆ ಸಿಬ್ಬಂದಿ ಪರಿಸರ ಕಾಳಜಿ ಮರೆತು ಕಡಿಮೆ ಮೈಕ್ರಾನ್‌ಯುಕ್ತ ಪ್ಲಾಸ್ಟಿಕ್, ಬಟ್ಟೆ ಇತ್ಯಾದಿ ಅನುಪ ಯುಕ್ತ ವಸ್ತುಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರಯುವ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
-
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ: ನಗರದಲ್ಲಿ ನಿತ್ಯವೂ ಸಂಗ್ರಹವಾಗುವ ಹಸಿ ಕಸ ಮತ್ತು ಒಣ ಕಸವನ್ನು ಕಸ ಸಂಗ್ರಹ ವಾಹನಗಳಲ್ಲಿ ಸಂಗ್ರಹಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೆ ಮಾಡಬೇಕಾದ ನಗರಸಭೆ ಸಿಬ್ಬಂದಿ ಪರಿಸರ ಕಾಳಜಿ ಮರೆತು ಕಡಿಮೆ ಮೈಕ್ರಾನ್‌ಯುಕ್ತ ಪ್ಲಾಸ್ಟಿಕ್, ಬಟ್ಟೆ ಇತ್ಯಾದಿ ಅನುಪ ಯುಕ್ತ ವಸ್ತುಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರಯುವ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ನಗರ ಹೊರವಲಯ ಮಹಿಳಾ ಕಾಲೇಜು ಸಮೀಪ ಲೋಡ್‌ಗಟ್ಟಲೆ ಪ್ಲಾಸ್ಟಿಕ್ ಬಟ್ಟೆ ಇತ್ಯಾದಿ ತ್ಯಾಜ್ಯಕ್ಕೆ ಬುಧವಾರ ನಗರಸಭೆ ಸಿಬ್ಬಂದಿ ಮಧ್ಯಾಹ್ನ ಬೆಂಕಿ ಹಚ್ಚಿದ್ದಾರೆ.
ಇದರಿಂದ ಎದ್ದಿರುವ ದಟ್ಟ ಹೊಗೆ ಒಂದೆಡೆ ಮೇಲ್ಸೇತುವೆ ಮೇಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಭಾರಿ ತೊಂದರೆಯನ್ನುಂಟು ಮಾಡಿದರೆ, ಮತ್ತೊಂದೆಡೆ ಇಲ್ಲಿನ ಸುತ್ತ ಮುತ್ತಲ ಪರಿಸರಕ್ಕೆ ಸುಟ್ಟ ಕೆಟ್ಟ ವಾಸನೆ ಹಬ್ಬುವಂತೆ ಮಾಡಿದೆ. ಮುಖ್ಯವಾಗಿ ಈವಾಸನೆ ಕಾಲೇಜು ಅಂಗಳಕ್ಕೂ ಮುಟ್ಟಿದ್ದು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳುವಂತಾ ಗಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಓಡಾಡುವ ಹೆದ್ದಾರಿ ಬದಿಯಲ್ಲಿಯೇ ವರ್ಷಗಳಿಂದ ನಗರಸಭೆ ಸಿಬ್ಬಂದಿ ಹಸಿ ಕಸ ಒಣ ಕಸವನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಸ್ಥಳದಲ್ಲಿಯೇ ತಳ್ಳುಗಾಡಿಗಳ ಬೀದಿ ಬದಿ ವ್ಯಾಪಾರಿಗಳು, ಕಾಫಿ ಟೀ, ಸಣ್ಣ ಟಿಫಿನ್ ಕಬ್ಬಿನ ಜ್ಯೂಸ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.ಇವರಿಗೆಲ್ಲಾ ಈ ಕಸದ ವಾಸನೆಯಿಂದ ಕಿರಿಕಿರಿಯಾದರೂ ಸಹಿಸಿಕೊಂಡು ಸಾಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಸವಿಲೆ ಸಿಬ್ಬಂದಿ ಈತರದ ವರ್ತನೆಗಳನ್ನು ಮಾಡುತ್ತೊದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಮೇಲಾಗಿ ಚಿಕ್ಕಬಳ್ಳಾಪುರ ನಗರದಿಂದ ಶಿಡ್ಲಘಟ್ಟಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಎಡ ಭಾಗದಲ್ಲಿ ಖಾಸಗಿ ಕಾಲೆಯಿದ್ದರೆ ಇದರಿಂದ ತುಸು ದೂರವೇ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇದ್ದು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ.
ಕಸದ ಲಾರಿಗಳು ಇಲ್ಲಿ ಬಂದು ನಿಂತು ವಿಂಗಡಣೆ ಮಾಡುವ ಸಂದರ್ಭದಲ್ಲಿ ನೆಲಕ್ಕೆ ಸೋರುವ ಹಸಿ ಕಸದ ನೀರು, ದುರ್ನಾಥ ಉಂಟುಮಾಡುತ್ತದೆ.
ಸಾಲದ್ದಕ್ಕೆ ವಿಂಗಡಣೆ ಮಾಡುವಾಗ ಅಲ್ಲಿ ಇಲ್ಲಿ ಬೀಳುವ ಕಸ ಮತ್ತು ಹಳೆಯ ಬಟ್ಟೆಗಳಿಗೆ ಮೇಲ್ಸೇ ತುವೆಯ ಮೂಲೆಯಲ್ಲಿರುವ ಸ್ಥಳದಲ್ಲಿಯೇ ಬೆಂಕಿ ಹಚ್ಚಿ ಸುಡುವ ಅವೈಜ್ಞಾನಿಕ ನಡೆಯನ್ನು ನಗರಸಭೆ ಸಿಬ್ಬಂದಿ ರೂಢಿಸಿಕೊಂಡಿರುವುದು ಅಕ್ಷಮ್ಯ ಅಪರಾಧ.
ಹಾಡ ಹಗಲೇ ಕಾನೂನಿನ ಭಯವಿಲ್ಲದೆ ಯಾರಾದರೂ ಹಿರಿಯ ಅಧಿಕಾರಿಗಳ ನೋಡಿ ಬೈದಾರು ಎಂಬ ಅಂಜಿಕೆ ಇಲ್ಲದೆ ಕಸದ ರಾಶಿಗೆ ಬೆಂಕಿ ಹಚ್ಚುವುದು ಎಷ್ಟು ಸರಿಯನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಬೆಂಕಿಯ ಕೆನ್ನಾಲಿಗೆಯನ್ನು ಕಂಡು ಸ್ಥಳಕ್ಕೆ ಧಾವಿಸಿದ ಮಾಧ್ಯಮದವರನ್ನು ನೋಡಿದ ಕೂಡಲೇ ನಗರಸಭೆ ಸಿಬ್ಬಂದಿ ತಮ್ಮ ವಾಹನಗಳ ಸಮೇತ ಅಲ್ಲಿಂದ ಕಾಲ್ ಕಿತ್ತಿದ್ದು ನೋಡಿದರೆ ಇವರದ್ದು ಎಂತಹ ಬೇಜವಾಬ್ದಾರಿ ಕೆಲಸ ಎಂಬುದು ವೇದ್ಯವಾಗುತ್ತದೆ.
ಈ ಕೂಡಲೇ ಪರಿಸರ ಇಲಾಖೆ ಅಧಿಕಾರಿಗಳು, ನಗರಸಭೆ ಆಯುಕ್ತರು, ಆರೋಗ್ಯ ಅಧಿಕಾರಿಗಳು ಇತ್ತ ಗಮನಹರಿಸಿ ಈ ಸಿಬ್ಬಂದಿಗೆ ತಿಳಿ ಹೇಳಬೇಕಾಗಿದೆ.
ಇಲ್ಲದಿದ್ದಲ್ಲಿ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಈಗಾಗಲೇ ಚಿಕ್ಕಬಳ್ಳಾಪುರದ ಉಷ್ಣಾಂಶ 35 ಡಿಗ್ರಿ ಮುಟ್ಟಿದ್ದು ಇಂತಹ ಬೆಂಕಿಯ ಕಾರಣವಾಗಿ ಶೇಕಡ 40ಕ್ಕೆ ಏರಿದರೂ ಉತ್ಪ್ರೇಕ್ಷೆ ಎನಿಸುವುದಿಲ್ಲ ಎಂಬುದು ಹೆಸರೇಳಲು ಇಚ್ಚಿಸದ ಬಿಎಸ್‌ಡಬ್ಲ್ಯು ವಿಭಾಗದ ಉಪನ್ಯಾಸಕರೊಬ್ಬರ ಮಾತಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರು ಇದಕ್ಕೆ ಕಾರಣವಾದವರ ಮೇಲೆ ಕ್ರಮ ವಹಿಸಬೇಕು. ಏಕೆಂದರೆ ನಗರದಲ್ಲಿ ಇಂತಹ ಕೆಲಸ ಮಾಡುವ ನಾಗರೀಕರಿಗೆ ತಿಳಿಹೇಳ ಬೇಕಾದ ಸಿಬ್ಬಂದಿಯೇ ಈ ಕೆಲಸ ಮಾಡಬಾರದು. ಇವರಿಗೆ ತಕ್ಕ ಶಾಸ್ತಿ ಆಗಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.