Kalaburagi Sports Habba: ಒಂದೇ ವೇದಿಕೆಯಲ್ಲಿ ಹಲವಾರು ಕ್ರೀಡೆ, ಯುವ ಪ್ರತಿಭೆಗಳಿಗೆ ಮುಕ್ತ ಅವಕಾಶ: ರಾಜ್ಯಕ್ಕೆ ಕ್ರೀಡಾ ಮಾದರಿ ತೋರಿಸಲು ಕಲಬುರಗಿ ಸಜ್ಜು
ಕ್ರೀಡೆಯನ್ನು ಮೈದಾನಕ್ಕೆ ಸೀಮಿತಗೊಳಿಸದೆ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯ ಸಂಭ್ರಮವನ್ನಾಗಿ ಸುವ ನಿಟ್ಟಿನಲ್ಲಿ ಕಲಬುರಗಿ ಹೊಸ ಪ್ರಯೋಗಕ್ಕೆ ಸಜ್ಜಾಗಿದೆ. ಜಿಲ್ಲಾಡಳಿತ, ಕಲಬುರಗಿ ನೆಕ್ಸ್ಟ್ ಫೌಂಡೇ ಶನ್, ಕ್ರೀಡಾ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಸಹಯೋಗ ದಲ್ಲಿ ಸೆ.24ರಿಂದ 27ರವರೆಗೆ ಕಲಬುರಗಿ ಸ್ಪೋರ್ಟ್ಸ್ ಹಬ್ಬ–2026(Kalaburagi Sports Habba) ನಡೆಯಲಿದ್ದು, ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ಸಿದ್ಧತೆ ನಡೆದಿದೆ.
-
ದೇವೇಂದ್ರ ಜಾಡಿ
ಕಲಬುರಗಿ: ಕ್ರೀಡೆಯನ್ನು ಮೈದಾನಕ್ಕೆ ಸೀಮಿತಗೊಳಿಸದೆ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯ ಸಂಭ್ರಮವನ್ನಾಗಿಸುವ ನಿಟ್ಟಿನಲ್ಲಿ ಕಲಬುರಗಿ ಹೊಸ ಪ್ರಯೋಗಕ್ಕೆ ಸಜ್ಜಾಗಿದೆ. ಜಿಲ್ಲಾಡಳಿತ, ಕಲಬುರಗಿ ನೆಕ್ಸ್ಟ್ ಫೌಂಡೇಶನ್, ಕ್ರೀಡಾ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಸಹಯೋಗ ದಲ್ಲಿ ಸೆ.24ರಿಂದ 27ರವರೆಗೆ ಕಲಬುರಗಿ ಸ್ಪೋರ್ಟ್ಸ್ ಹಬ್ಬ–2026(Kalaburagi Sports Habba) ನಡೆಯಲಿದ್ದು, ರಾಜ್ಯದ ಗಮನ ಸೆಳೆಯುವ ರೀತಿಯಲ್ಲಿ ಸಿದ್ಧತೆ ನಡೆದಿದೆ.
‘ಕಲಬುರಗಿ ಆಡ್ತೈತಿ ದುನಿಯಾ ನೋಡ್ತೈತಿ’ ಎಂಬ ಘೋಷಣೆಯೊಂದಿಗೆ ಜನಪ್ರಿಯ ಕ್ರೀಡೆಗಳಾದ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಚೆಸ್ ಹಾಗೂ ಸೈಕ್ಲೋಥಾನ್ ಒಳಗೊಂಡ ಏಳು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವೃತ್ತಿಪರ ಆಟಗಾರರ ಜತೆಗೆ ಮಕ್ಕಳು, ಮಹಿಳೆಯರು ಹಾಗೂ ಯುವಕರಿಗೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರ ಆಸಕ್ತಿಯೊಂದಿಗೆ ರೂಪು ಗೊಂಡಿರುವ ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಡಿಜಿಟಲ್ ನಿರ್ವಹಣೆ. ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಗಳ ಮಾದರಿಯಲ್ಲಿ ನೋಂದಣಿ, ವೇಳಾಪಟ್ಟಿ, ಲೈವ್ ಸ್ಕೋರ್ ಹಾಗೂ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದರಿಂದ ಸ್ಪರ್ಧೆಗಳ ಮಾಹಿತಿ ಆಟಗಾರರು ಹಾಗೂ ಕ್ರೀಡಾಭಿಮಾನಿಗಳಿಗೆ ತ್ವರಿತವಾಗಿ ತಲುಪಲಿದೆ.
ನಗರವೇ ಕ್ರೀಡಾಂಗಣ
ಕ್ರೀಡಾಕೂಟ ಒಂದೇ ಮೈದಾನಕ್ಕೆ ಸೀಮಿತವಾಗಿಲ್ಲ. ಕೆಬಿಎನ್ ಹಾಗೂ ಸರಕಾರಿ ಪದವಿ ಕಾಲೇಜು ಆವರಣದಲ್ಲಿ ಕ್ರಿಕೆಟ್, ಎಂಬಿ ನಗರ ಪೊಲೀಸ್ ಠಾಣೆ ಸಮೀಪದ ಮೈದಾನದಲ್ಲಿ ಫುಟ್‌ಬಾಲ್, ಎಂಎಸ್‌ಐ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಚೆಸ್ ನಡೆಯಲಿದೆ. ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ವಾಲಿಬಾಲ್ ಹಾಗೂ ಟೇಬಲ್ ಟೆನಿಸ್ ಸ್ಪರ್ಧೆಗಳು ಜರುಗಲಿವೆ.
ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಬುದ್ಧವಿಹಾರ ಮಾರ್ಗವಾಗಿ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದವರೆಗೆ 16ರಿಂದ 18 ಕಿ.ಮೀ. ಸೈಕ್ಲೋಥಾನ್ ಕೂಡ ನಡೆಯಲಿದೆ.
ತಂಡದ ಆಟಗಳ ಜತೆಗೆ ವೈಯಕ್ತಿಕ ವಿಭಾಗಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಪ್ರತಿಭೆಗಳಿಗೂ ಸ್ಪರ್ಧೆಯ ವೇದಿಕೆ ದೊರೆಯಲಿದೆ. ಮೊದಲ ಆವೃತ್ತಿಯಲ್ಲೇ ಏಳು ಕ್ರೀಡೆಗಳನ್ನು ಒಳಗೊಂಡಿರುವ ಕಾರ್ಯಕ್ರಮವನ್ನು ಮುಂದಿನ ಹಂತದಲ್ಲಿ ಇನ್ನಷ್ಟು ವಿಭಾಗಗಳಿಗೆ ವಿಸ್ತರಿಸುವ ಚಿಂತನೆ ಜಿಲ್ಲಾಡಳಿತಕ್ಕಿದೆ.
480 ನೋಂದಣಿ; ವೈಯಕ್ತಿಕ ವಿಭಾಗಗಳಿಗೆ ವೇಗ ಅಗತ್ಯ
ಕ್ರೀಡಾ ಹಬ್ಬಕ್ಕೆ ಇದುವರೆಗೆ 480 ನೋಂದಣಿಗಳು ದಾಖಲಾಗಿವೆ. ಬ್ಯಾಡ್ಮಿಂಟನ್‌ನಲ್ಲಿ 160, ಚೆಸ್ ನಲ್ಲಿ 144, ಟೇಬಲ್ ಟೆನಿಸ್‌ನಲ್ಲಿ 63, ಸೈಕ್ಲೋಥಾನ್‌ನಲ್ಲಿ 57, ವಾಲಿಬಾಲ್‌ನಲ್ಲಿ 20, ಕ್ರಿಕೆಟ್‌ನಲ್ಲಿ 18 ಹಾಗೂ ಫುಟ್‌ಬಾಲ್‌ನಲ್ಲಿ 16 ನೋಂದಣಿಯಾಗಿವೆ. ತಂಡದ ವಿಭಾಗಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಿಂಗಲ್ಸ್ ಸೇರಿದಂತೆ ವೈಯಕ್ತಿಕ ಸ್ಪರ್ಧೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ನೋಂದಣಿ ಮಾಡಿಕೊಳ್ಳಬೇಕಿದೆ. ವೈಯಕ್ತಿಕ ವಿಭಾಗಗಳತ್ತ ಗಮನ ಹರಿಸಿ ನೋಂದಣಿ ವೇಗ ಹೆಚ್ಚಿಸುವ ಅಗತ್ಯವಿದೆ.
ನಾಲ್ಕು ದಿನ; ಒಂದೇ ಗುರಿ
ಯುವಕರು, ಮಹಿಳೆಯರು ಹಾಗೂ ಮಕ್ಕಳಿಗೆ ಸ್ಪರ್ಧೆಯ ಅವಕಾಶ ಕಲ್ಪಿಸಲಾಗಿದ್ದು, www.kalaburagisportshabba.in ಮೂಲಕ ನೋಂದಣಿಗೆ ಅವಕಾಶವಿದೆ. ಸೆ.27ರಂದು ಫೈನಲ್ ಪಂದ್ಯಗಳ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಪಟುಗಳ ಜತೆಗೆ ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ನೀಡಬೇಕಿದೆ.
![]()
ಕಲಬುರಗಿ ತನ್ನ ಅತಿದೊಡ್ಡ ಕ್ರೀಡಾ ಸಂಭ್ರಮಕ್ಕೆ ಸಜ್ಜಾಗಿದೆ. ಜಿಲ್ಲೆಯ ಯುವ ಕ್ರೀಡಾಪಟುಗಳು ತಮ್ಮ ನೆಚ್ಚಿನ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ತಂಡದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸುವ ಜತೆಗೆ ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳಿ. ಬನ್ನಿ, ಕಲಬುರಗಿ–ಆಟವಾಡೋಣ.
- ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ
![]()
ಜನರಿಗಾಗಿ ಕ್ರೀಡಾ ಹಬ್ಬ ಮಾಡಲಾಗಿದ್ದು, ಜನರ ಸಹಭಾಗಿತ್ವ ಮುಖ್ಯವಾಗಿದೆ. ಬಹಳ ಉತ್ಸಾಹ ದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬೇರೆ ಬೇರೆ ಆಟಗಳಿಗೂ ಉತ್ತೇಜನ ನೀಡುವ ಉದ್ದೇಶ ವಿದೆ. ಜಿಲ್ಲೆಯ ಜನರು ನೋಂದಣಿ ಮಾಡಿಕೊಂಡು ಕ್ರೀಡಾ ಹಬ್ಬದ ಯಶಸ್ಸಿಗೆ ಕೈಜೋಡಿಸಬೇಕು.
- ಇಕ್ರಂ ಶರೀಫ್, ಜಿಲ್ಲಾಧಿಕಾರಿ, ಕಲಬುರಗಿ