ಏಷ್ಯಾ ಖಂಡದ ಒಲಿಂಪಿಕ್ಸ್: ಏಷ್ಯನ್ ಗೇಮ್ಸ್
ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದರೂ, ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆಲ್ಲಲು ಏರ್ಪಡುವ ಪೈಪೋಟಿ ಅತ್ಯಂತ ಕಠಿಣವಾದುದ್ದಾಗಿದೆ. ಪ್ರತಿಯೊಂದು ಒಲಿಂಪಿಕ್ಸ್ ನಲ್ಲಿ ಪಾರಮ್ಯ ಮೆರೆಯುವ ಚೀನಾ, ಜಪಾನ್, ಕೊರಿಯಾದಂತಹ ರಾಷ್ಟ್ರಗಳು ಏಷ್ಯನ್ ಗೇಮ್ಸ್ ನಲ್ಲೂ ತಮ್ಮ ಪ್ರಾಬಲ್ಯ ಮೆರೆಯುತ್ತಿವೆ.
-
ನರೇಂದ್ರ ಪಾರೆಕಟ್
20ನೇ ಏಷ್ಯನ್ ಕ್ರೀಡಾಕೂಟ ಇನ್ನು ಕೆಲವೇ ಗಂಟೆಗಳಲ್ಲಿ ಜಪಾನ್‌ನಲ್ಲಿ ಆರಂಭವಾಗಲಿದೆ. ಇದುವರೆಗೆ ನಡೆದಿರುವ ಎಲ್ಲಾ ಏಷ್ಯಾಡ್‌ಗಳಲ್ಲೂ ಭಾಗವಹಿಸಿ ಪ್ರಾಬಲ್ಯ ಮೆರೆದಿರುವ ಭಾರತವು ಈ ಕೂಟದಲ್ಲೂ ಗಮನಾರ್ಹ ಸಾಧನೆ ಮಾಡಲು ಇದೀಗ ಸಜ್ಜಾಗಿದೆ.
ಜಪಾನ್‌ನ ಐಚಿ-ನಗೋಯಾದಲ್ಲಿ ಆರಂಭವಾಗುತ್ತಿರುವ ಏಷ್ಯನ್ ಗೇಮ್ಸ್ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಬಳಿಕ ಅತೀ ಹೆಚ್ಚು ಜನಪ್ರಿಯತೆ ಹೊಂದಿರುವ ಕ್ರೀಡಾಕೂಟ ಎಂದರೆ ಅದು ಏಷ್ಯನ್ ಗೇಮ್ಸ್. ಹೀಗಾಗಿ ಈ ಕ್ರೀಡಾಕೂಟ ‘ಏಷ್ಯನ್ ಒಲಿಂಪಿಕ್ಸ್’ ಎಂದೇ ಜನಜನಿತವಾಗಿದೆ.
ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದರೂ, ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆಲ್ಲಲು ಏರ್ಪಡುವ ಪೈಪೋಟಿ ಅತ್ಯಂತ ಕಠಿಣವಾದುದ್ದಾಗಿದೆ. ಪ್ರತಿಯೊಂದು ಒಲಿಂಪಿಕ್ಸ್ ನಲ್ಲಿ ಪಾರಮ್ಯ ಮೆರೆಯುವ ಚೀನಾ, ಜಪಾನ್, ಕೊರಿಯಾದಂತಹ ರಾಷ್ಟ್ರಗಳು ಏಷ್ಯನ್ ಗೇಮ್ಸ್ ನಲ್ಲೂ ತಮ್ಮ ಪ್ರಾಬಲ್ಯ ಮೆರೆಯುತ್ತಿವೆ.
ಏಷ್ಯನ್ ಗೇಮ್ಸ್ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿರುವ ಕ್ರೀಡಾಕೂಟ. 1971ರಲ್ಲಿ ಏಷ್ಯನ್ ಗೇಮ್ಸ್ ಫೆಡರೇಷನ್ ಈ ಕ್ರೀಡಾಕೂಟವನ್ನು ಆರಂಭಿಸಿತು. ಚೊಚ್ಚಲ ಆವೃತ್ತಿಗೆ ದೆಹಲಿ ಆತಿಥ್ಯ ವಹಿಸಿತ್ತು. ಏಷ್ಯನ್ ಗೇಮ್ಸ್ ಫೆಡರೇಷನ್ ಸ್ಥಗಿತಗೊಂಡ ಬಳಿಕ 1982ರಿಂದ ಮುಂದಕ್ಕೆ ಏಷ್ಯಾ ಒಲಿಂಪಿಕ್ ಸಮಿತಿ (ಒಸಿಎ) ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಈ ಕ್ರೀಡಾಕೂಟ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಮಾನ್ಯತೆ ಪಡೆದಿದ್ದು, ಒಲಿಂಪಿಕ್ಸ್ ಬಳಿಕ ಎರಡನೇ ಅತೀ ದೊಡ್ಡ ಕ್ರೀಡಾಕೂಟ ಎನಿಸಿಕೊಂಡಿದೆ.
ಇದನ್ನೂ ಓದಿ: Asian Games: ಬಾಂಗ್ಲಾದೇಶ ಎದುರು ಹರ್ಮನ್‌ಪ್ರೀತ್ ಕೌರ್ ಪಡೆದ ಕ್ಯಾಚ್‌ನ ಅಸಲಿ ಸತ್ಯ ಇಲ್ಲಿದೆ!
ಏಷ್ಯನ್ ಗೇಮ್ಸ್ ಹಿನ್ನೆಲೆ: ಏಷ್ಯನ್ ಗೇಮ್ಸ್ ಗೂ ಮೊದಲು ಪಶ್ಚಿಮ ಏಷ್ಯಾ ರಾಷ್ಟ್ರಗಳ ಚಾಂಪಿ ಯನ್‌ಶಿಪ್ ಎನ್ನುವ ಕ್ರೀಡಾಕೂಟವಿತ್ತು. 1913ರಲ್ಲಿ ಮೊದಲ ಬಾರಿಗೆ ಫಿಲಿಪ್ಪೀನ್ಸ್ ನ ಮನಿಲಾದಲ್ಲಿ ಪಶ್ಚಿಮ ರಾಷ್ಟ್ರಗಳ ಗೇಮ್ಸ್ ನಡೆಯಿತು. ಆರು ರಾಷ್ಟ್ರಗಳು ಅದರಲ್ಲಿ ಪಾಲ್ಗೊಂಡಿದ್ದವು. 1934ರ ವರೆಗೂ 10 ಆವೃತ್ತಿಗಳು ನಡೆದವು. ಆದರೆ 1974ರಲ್ಲಿ ಸಿನೋ-ಜಪಾನೀಸ್ ಯುದ್ಧದ ಬಳಿಕ ಆ ಕ್ರೀಡಾಕೂಟವನ್ನು ಸ್ಥಗಿತಗೊಳಿಸಲಾಯಿತು.
2ನೇ ವಿಶ್ವ ಮಹಾಯುದ್ಧದ ಬಳಿಕ ಏಷ್ಯಾದ ಹಲವು ರಾಷ್ಟ್ರಗಳು ಸ್ವಾತಂತ್ರ‍್ಯ ಪಡೆದುಕೊಂಡವು. 1948ರ ಲಂಡನ್ ಒಲಿಂಪಿಕ್ಸ್ ವೇಳೆ ಚೀನಾ ಹಾಗೂ ಫಿಲಿಪ್ಪೀನ್ಸ್ ನ ಕ್ರೀಡಾಪಟುಗಳು ಪಶ್ಚಿಮ ಏಷ್ಯಾ ರಾಷ್ಟ್ರಗಳ ಚಾಂಪಿಯನ್‌ಶಿಪ್ ಪುನಾರಂಭಿಸುವ ಬಗ್ಗೆ ಚರ್ಚೆ ನಡೆಸಿದರು. ಆದರೆ ಅಂತಾ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಭಾರತ ಪ್ರತಿನಿಧಿಯಾಗಿದ್ದ ಗುರುದತ್ ಸೋಂಧಿ, ಪಶ್ಚಿಮ ರಾಷ್ಟ್ರಗಳ
ಕ್ರೀಡಾಕೂಟದ ಬದಲು ಏಷ್ಯಾ ರಾಷ್ಟ್ರಗಳನ್ನೆಲ್ಲಾ ಒಗ್ಗೂಡಿಸಿ ಏಷ್ಯನ್ ಗೇಮ್ಸ್ ಆರಂಭಿಸುವಂತೆ ಸಲಹೆ ನೀಡಿದರು.
1949ರಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಫೆಡರೇಷನ್ ದೆಹಲಿಯಲ್ಲಿ ಉದ್ಘಾಟನೆಗೊಂಡಿತು, ಜತೆಗೆ ಏಷ್ಯನ್ ಗೇಮ್ಸ್ ಫೆಡರೇಷನ್ ಸಹ ಸ್ಥಾಪನೆಗೊಂಡಿತ್ತಲ್ಲದೇ, 1951ರಲ್ಲಿ ದೆಹಲಿಯಲ್ಲೇ ಚೊಚ್ಚಲ ಏಷ್ಯನ್ ಗೇಮ್ಸ್ ಆವೃತ್ತಿಯ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಯಿತು.
ಜಪಾನ್, ಚೀನಾದ್ದೇ ಪ್ರಾಬಲ್ಯ: ಏಷ್ಯನ್ ಗೇಮ್ಸ್ ನಲ್ಲಿ ಕೇವಲ ಎರಡು ರಾಷ್ಟ್ರಗಳು ಈ ವರೆಗೂ ಪದಕ ಗಳಿಕೆಯಲ್ಲಿ ಪ್ರಾಬಲ್ಯ ಮೆರೆಯುತ್ತಾ ಬಂದಿವೆ. ಮೊದಲ ಎಂಟು ಆವೃತ್ತಿಗಳಲ್ಲಿ ಜಪಾನ್ ಅತೀ ಹೆಚ್ಚು ಪದಕಗಳನ್ನು ಗೆದ್ದರೆ, ಕೊನೆಯ ಒಂಭತ್ತು ಆವೃತ್ತಿಗಳಲ್ಲಿ ಚೀನಾ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸಾಧನೆ: ಭಾರತವು ಇದುವರೆಗೂ ನಡೆದಿರುವ ಎಲ್ಲಾ ಹತ್ತೊಂಭತ್ತು ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಂಡಿದೆ. 1990ರಲ್ಲಿ ಬೀಜಿಂಗ್ ಏಷ್ಯಾಡ್‌ವೊಂದನ್ನು ಹೊರತುಪಡಿಸಿದರೆ ಭಾರತವು ಉಳಿದ ಎಲ್ಲಾ ಕೂಟಗಳಲ್ಲೂ ಪದಕಗಳ ಅಂಕಪಟ್ಟಿಯಲ್ಲಿ ಅಗ್ರ 10ರೊಳಗಿನ ಸ್ಥಾನವನ್ನು ಪಡೆದು ತನ್ನ ಸಾಮರ್ಥ್ಯ ಮೆರೆಯುವಲ್ಲಿ ಸಫಲವಾಗಿದೆ, ಅದೇ ರೀತಿ ಪ್ರತೀ ಕೂಟದಲ್ಲೂ ಕನಿಷ್ಠ ಒಂದಾದರೂ ಚಿನ್ನದ ಪದಕ ಗೆಲ್ಲುವಲ್ಲಿ ಈ ವರೆಗೂ ಯಶಸ್ವಿಯಾಗಿದೆ.
1951ರ ಮೊದಲ ಏಷ್ಯನ್ ಗೇಮ್ಸ್ ನಲ್ಲಿ ಭಾರತವು ಹದಿನೈದು ಚಿನ್ನ, ಹತ್ತೊಂಭತ್ತು ಬೆಳ್ಳಿ ಮತ್ತು ಇಪ್ಪತ್ತು ಕಂಚಿನ ಪದಕಗಳ ಒಟ್ಟು ಐವತ್ತೊಂದು ಪದಕಗಳನ್ನು ಪಡೆದು, ಕೂಟದಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಆ ಬಳಿಕ ನಡೆದ ಎರಡು ಕೂಟದಲ್ಲಿ ತನ್ನ ಸರಾಸರಿ ಪ್ರದರ್ಶನ ನೀಡಿತ್ತು. ನಂತರ 1982ರ ಏಷ್ಯನ್ ಗೇಮ್ಸ್ ನಲ್ಲಿ ಭಾರತವು ಹತ್ತು ಚಿನ್ನ, ಹದಿಮೂರು ಬೆಳ್ಳಿ ಮತ್ತು ಹನ್ನೊಂದು ಕಂಚಿನ ಪದಕಗಳ ಸಹಿತ ಮೂರನೇ ಸ್ಥಾನವನ್ನು ಗಳಿಸಿಕೊಂಡಿತ್ತು. ಬಳಿಕ ಮತ್ತೆ ನಾಲ್ಕು ಕೂಟ ಗಳಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ ಭಾರತವು, ದೆಹಲಿಯಲ್ಲಿ ನಡೆದ ಕೂಟದಲ್ಲಿ ಐದನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ಮುಂದಿನ ಬಹುತೇಕ ಕೂಟಗಳಲ್ಲೂ ಭಾರತವು ಗಮನೀಯ ಪ್ರದರ್ಶನ ಮುಂದುವರಿಸುವಲ್ಲಿ ಯಶಸ್ಸನ್ನು ಕಂಡಿದೆ.
ಕಳೆದ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ: ಕಳೆದ ಏಷ್ಯನ್ ಗೇಮ್ಸ್ ಚೀನಾದ ಹಾಂಗ್‌ಝೌನಲ್ಲಿ ನಡೆದಿತ್ತು. ಭಾರತವು ಆ ಕೂಟದಲಿ 28 ಚಿನ್ನದ ಪದಕ, 39ಬೆಳ್ಳಿ ಪದಕ ಮತ್ತು 40 ಕಂಚಿನ ಪದಕಗಳ ಸಹಿತ ಒಟ್ಟು 106 ಪದಕಗಳ ಸಹಿತ 4ನೇ ಸ್ಥಾನ ಗಳಿಸುವಲ್ಲಿ ಯಶಸ್ಸನ್ನು ಕಂಡಿತ್ತು. ಕಳೆದ ಆವೃತ್ತಿಯಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ, ಅಥ್ಲೆಟಿಕ್ಸ್ ನಲ್ಲಿ ಪಾರುಲ್ ಚೌಧರಿ, ಬ್ಯಾಡ್ಮಿಂಟನ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ, ಟೆನಿಸ್‌ನಲ್ಲಿ ರೋಹನ್ ಬೋಪಣ್ಣ-ಋತುಜಾ ಭೋಷಲೆ ಜೋಡಿ, ಸ್ಕ್ವಾಷ್‌ನಲ್ಲಿ ಹರಿಂದರ್-ದೀಪಿಕಾ ಪಲ್ಲಿಕಲ್ ಜೋಡಿ ಮತ್ತಿತರರು ಭಾರತಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಈ ಆವೃತ್ತಿಯಲ್ಲೂ ಹೆಚ್ಚಿನ ನಿರೀಕ್ಷೆ: ಈ ಬಾರಿಯ ಜಪಾನ್ ಏಷ್ಯನ್ ಗೇಮ್ಸ್ ನಲ್ಲಿ ಹಲವು ವಿಭಾಗಗಳಲ್ಲಿ ಪದಕ ಗೆಲ್ಲಬಹುದಾದ ಕ್ರೀಡಾಳುಗಳಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಶಾಟ್‌ಪುಟ್, ರೇಸ್‌ಗಳಲ್ಲಿ ಭಾರತಕ್ಕೆ ಪದಕಗಳ ನಿರೀಕ್ಷೆ ಇದೆ. ವಿಶ್ವಮಟ್ಟದ ಹಲವು ಶೂಟರ್‌ಗಳನ್ನು ಹೊಂದಿರುವ ಭಾರತವು ಶೂಟಿಂಗ್‌ನಲ್ಲೂ ಹೆಚ್ಚಿನ ಪದಕಗಳನ್ನು ಬಾಚುವ ನಿರೀಕ್ಷೆ ಯನ್ನೊಂದಿದೆ.
ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿ.ವಿ.ಸಿಂಧೂ, ಆಯುಷ್ ಶೆಟ್ಟಿ, ಲಕ್ಷ್ಯಸೇನ್ ಮುಂತಾದವರು ಪದಕಗಳನ್ನು ಗಿಟ್ಟಿಸುವ ಗುರಿಯಲ್ಲಿದ್ದಾರೆ. ಈಗಾಗಲೇ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ಪಡೆದಿರುವ ಭಾರತದ ಬಾಕ್ಸರ್‌ಗಳು ಈ ಏಷ್ಯನ್ ಗೇಮ್ಸ್ ನಲ್ಲೂ ಪದಕಗಳಿಗೆ ಕೊರಳೊಡ್ಡಿ ಮಿಂಚುವ ತವಕದಲ್ಲಿದ್ದಾರೆ. ಕುಸ್ತಿ, ಟೇಬಲ್ ಟೆನಿಸ್‌ನಲ್ಲೂ ಪದಕ ಗಳಿಸಬಲ್ಲ ಆಟಗಾರರು ಭಾರತ ತಂಡದಲ್ಲಿದ್ದಾರೆ.
ಅದೇ ರೀತಿ ಭಾರತದ ಸಾಂಪ್ರದಾಯಿಕ ಕ್ರೀಡೆಗಳಾಗಿರುವ ಕಬ್ಬಡಿಯಲ್ಲಿ ಪುರುಷರ ಮತ್ತು ಮಹಿಳಾ ತಂಡಗಳು ಭಾಗವಹಿಸುತ್ತಿದ್ದು ಪದಕಗಳ ನಿರೀಕ್ಷೆಯನ್ನಿರಿಸಿಕೊಂಡಿದ್ದಾರೆ. ಹಾಗೆಯೇ ಹಲವು ಹಲವು ವರ್ಷಗಳ ಬಳಿಕ ಪುನರಾರಂಭವಾಗಿರುವ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸುತ್ತಿದ್ದು ಭಾರತ ಪದಕಗೆಲ್ಲುವ ಆಶಾಭಾವನೆಯಲ್ಲಿದೆ.
ಕರ್ನಾಟಕದ 23 ಕ್ರೀಡಾ ಕಲಿಗಳು: ನಮ್ಮ ರಾಜ್ಯದ 23 ಸ್ಪರ್ಧಿಗಳು ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪೈಕಿ ಸರಿಸುಮಾರು ಹತ್ತು ಮಂದಿ ಇದೇ ಮೊದಲ ಬಾರಿ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಥ್ಲೆಟಿಕ್ಸ್ ನ ಹೈಜಂಪ್‌ನಲ್ಲಿ ಸುಪ್ರಿಯಾ, ಪೋಲ್‌ವಾಲ್ಟ್ ನಲ್ಲಿ ಸಿಂಧುಶ್ರೀ, ಬ್ಯಾಡ್ಮಿಂಟನ್‌ನಲ್ಲಿ ಆಯುಷ್ ಶೆಟ್ಟಿ, ಟೇಬಲ್ ಟೆನಿಸ್‌ನಲ್ಲಿ ಯಶಸ್ವಿನಿ ಘೋರ್ಪಡೆ, ಹಾಕಿಯಲ್ಲಿ ಮೋಹಿತ್ ಮುಂತಾದವರು ಏಷ್ಯನ್ ಗೇಮ್ಸ್ ನಲ್ಲಿ ರಾಜ್ಯದ ಈ ಸಲದ ಕ್ರೀಡಾಕಲಿಗಳಾಗಿದ್ದಾರೆ.
ಕೂಟದಲ್ಲಿ ಭಾಗವಹಿಸುತ್ತಿರುವ ದೇಶಗಳು
-45
ಪಾಲ್ಗೊಳ್ಳುತ್ತಿರುವ ಒಟ್ಟು ಕ್ರೀಡಾಪಟುಗಳು
-11,000
ಕೂಟದಲ್ಲಿರುವ ಭಾರತದ ಕ್ರೀಡಾಳುಗಳು
-503
ಭಾರತ ಸ್ಪರ್ಧಿಸುತ್ತಿರುವ ಕ್ರೀಡಾ ವಿಭಾಗಗಳು
-36
ಆವೃತ್ತಿ ವರ್ಷ ಅತಿಥೇಯ ರಾಷ್ಟ್ರ
1 1952 ದೆಹಲಿ
2 1954 ಮನಿಲಾ
3 1958 ಟೋಕಿಯೋ
4 1963 ಜಕಾರ್ತಾ
5 1966 ಬ್ಯಾಂಕಾಕ್
6 1970 ಬ್ಯಾಂಕಾಕ್
7 1974 ಟೆಹರಾನ್
8 1978 ಬ್ಯಾಂಕಾಕ್
9 1982 ದೆಹಲಿ
10 1986 ಸಿಯೋಲ್
11 1990 ಬೀಜಿಂಗ್
12 1994 ಹಿರೋಶಿಮಾ
13 1998 ಬ್ಯಾಂಕಾಕ್
14 2002 ಬೂಸಾನ್
15 2006 ದೋಹಾ
- 2010 ಗುಹಾಂಝೌ
16 2014 ಇಚಿಯಾನ್
18 2018 ಜರ್ಕಾತಾ
19 2022 ಹಾಂಗ್‌ಝೌ
20 2026 ನಗೋಯ
ಕಂಟೇನರ್ ವಸತಿ ವ್ಯವಸ್ಥೆ
ಈ ಸಲ ಜಪಾನ್‌ನಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟದಲ್ಲಿ 45 ದೇಶಗಳಿಂದ ಸುಮಾರು 11,000 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. 43 ಕ್ರೀಡೆಗಳ 71 ವಿಭಾಗಗಳಲ್ಲಿ ಒಟ್ಟು 469 ಸ್ಪರ್ಧೆಗಳು ನಡೆಯಲಿವೆ. ಕ್ರೀಡಾಂಗಣದ ಆವರಣದಲ್ಲಿ ವಸತಿ ಸೌಕರ್ಯದ ಕೊರತೆ ಇರುವ ಕಾರಣ, ಕ್ರೀಡಾ ಗ್ರಾಮದ ಹೊರಭಾಗದಲ್ಲಿ ಆಯೋಜಕರು ಪರ್ಯಾಯ ವಸತಿ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಕೊಠಡಿಗಳಾಗಿ ಪರಿವರ್ತನೆಯಾದ ಕಂಟೇನರ್‌ಗಳು ಹಡಗುಗಳು ಅಥವಾ ಹೋಟೆಲ್‌ಗಳಲ್ಲಿ ತಂಗುವುದು ಭಾರತೀಯ ಕ್ರೀಡಾಪಟುಗಳಿಗೆ ಹೆಚ್ಚಿನ ತೊಂದರೆಯಾಗದಿದ್ದರೂ, ಈ ತಾತ್ಕಾಲಿಕ ಕಂಟೇನರ್ ವಸತಿಯು ಅವರಿಗೆ ಸಂಪೂರ್ಣ ಹೊಸ ಅನುಭವ ನೀಡಲಿದೆ. ಸಾಮಾನ್ಯವಾಗಿ ದೊಡ್ಡ ಕೊಠಡಿಗಳಲ್ಲಿ ಇರಲು ಅಭ್ಯಾಸವಾಗಿರುವ ಭಾರತೀಯ ಆಟಗಾರರಿಗೆ, ಈ ಸಣ್ಣ ಕಂಟೇನರ್‌ಗಳಲ್ಲಿ ಇರುವುದು ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ
ಸರ್ವಸಾಧಾರಣ ಸಮಸ್ಯೆಗಳು
1962ರಿಂದ ಏಷ್ಯನ್ ಗೇಮ್ಸ್ ಗೆ ಒಂದಿಲ್ಲೊಂದು ಸಮಸ್ಯೆ, ವಿವಾದಗಳು ಬೆನ್ನೇರುತ್ತಲೇ ಇವೆ. ಏಷ್ಯನ್ ರಾಷ್ಟ್ರಗಳ ನಡುವಿನ ರಾಜಕೀಯ ಬಿಕ್ಕಟ್ಟು, ಆರ್ಥಿಕ ಹಾಗೂ ಭದ್ರತಾ ಸಮಸ್ಯೆ ಹೀಗೆ ಅನೇಕ ತೊಂದರೆಗಳು ಕ್ರೀಡಾಕೂಟಕ್ಕೆ ಈ ಹಿಂದಿನಿಂದಲೇ ಅಡ್ಡಿಯಾಗಿವೆ. ಹಲವು ಬಾರಿ ಮೊದಲು ಆಯ್ಕೆಯಾಗಿದ್ದ ರಾಷ್ಟ್ರಗಳು ಆತಿಥ್ಯದಿಂದ ಹಿಂದೆ ಸರಿದಿವೆ. ಎರಡು ಬಾರಿ ಬ್ಯಾಂಕಾಕ್ ವೇದಿಕೆ ಒದಗಿಸಿತ್ತು. 2018ರಲ್ಲಿ ಏಷ್ಯನ್ ಗೇಮ್ಸ್ ವಿಯೆಟ್ನಾಂನಲ್ಲಿ ನಡೆಯಬೇಕಿತ್ತು, ಆದರೆ ಆತಿಥ್ಯದಿಂದ ಹಿಂದೆ ಸರಿದ ಕಾರಣ ಆ ಸಲ ಇಂಡೋನೇಷ್ಯಾಗೆ ಅವಕಾಶ ಸಿಕ್ಕಿತು.