ಹುದ್ದೆ ಉಳಿಸಿಕೊಳ್ಳಲು ಕೆಲವು ಸಚಿವರ ಪ್ರಯತ್ನ: ಸದ್ಯವೇ ಕೆಲವು ಮಂತ್ರಿ ಸ್ಥಾನ ತೆರವು ಸಾಧ್ಯತೆ
ಸಂಪುಟದಲ್ಲಿ ಸದ್ಯ ಮಹಿಳೆಗೆ ಮೀಸಲಾದ ಒಂದು ಸ್ಥಾನ ಹಾಗೂ ಮಾಜಿ ಸಚಿವ ನಾಗೇಂದ್ರ ಅವರಿಂದ ತೆರವಾಗಿರುವ ಒಂದು ಸ್ಥಾನ ಸೇರಿದಂತೆ ಎರಡು ಮಂತ್ರಿ ಸ್ಥಾನಗಳು ಖಾಲಿ ಉಳಿದಿವೆ. ಇದರ ಜತೆ ಸದ್ಯದಲ್ಲೇ ಇನ್ನೂ ಎರಡು ಅಥವಾ ಮೂರು ಸ್ಥಾನಗಳು ತೆರವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ಸಂಪುಟದ ಇನ್ನೂ ಮೂವರ ಸಚಿವರ ಮೇಲೆ ಇ.ಡಿ ದಾಳಿ ಆಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿಯುವ ಮೂಲಕ ಪರೋಕ್ಷ ಸೂಚನೆಯನ್ನೇ ನೀಡಿದ್ದಾರೆ
-
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ನಿರಾಶೆ ಹೊಗೆಯಾಡುತ್ತಿರುವಾಗಲೇ ಅದನ್ನು ತಣಿಸಲು ಹೊಸ ದಾರಿ ಸಿಕ್ಕಿರುವ ಸೂಚನೆ ಬಂದಿದೆ. ರಾಜ್ಯ ಸಂಪುಟ ವಿಸ್ತರಣೆಯ ನಂತರ ಎತ್ತಿರುವ ಅಸಮಾಧಾನದ ಬೆಂಕಿ ಆರಿಸಲು ಪಕ್ಷದ ನಾಯಕರು ತಿಣುಕಾಡುತ್ತಿರುವಾಗಲೇ ಸಂಪುಟದಲ್ಲಿ ಕೆಲವು ಮಂತ್ರಿಗಳ ಸ್ಥಾನಗಳು ತೆರವಾಗುವ ಸಾಧ್ಯತೆ ಕಾಣುತ್ತಿದೆ. ಇದರೊಂದಿಗೆ ಪಕ್ಷದ ನಾಯಕರಿಗೆ ಆಕಾಂಕ್ಷೆಗಳನ್ನು ಸಮಾಧಾನಗೊಳಿ ಸಲು ಹೊಸ ಅವಕಾಶ ಸಿಕ್ಕಿದಂತಾಗಿದೆ, ಜತೆಗೆ ಇದು ಆಕಾಂಕ್ಷಿಗಳಲ್ಲಿ ಕಮರಿದ ಆಸೆ ಚಿಗುರುವಂತೆ ಮಾಡಿದೆ.
ವಿವಿಧ ಆರೋಪಗಳು ಹಾಗೂ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಒಂದೆರಡು ತಿಂಗಳ ನಂತರ ಸಂಪುಟದ ಕೆಲವು ಸದಸ್ಯರು ತಮ್ಮ ಮಂತ್ರಿ ಸ್ಥಾನ ತ್ಯಾಗ ಮಾಡಬೇಕಾದ ಅನಿವಾರ್ಯ ಎದುರಾಗುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಸಂಪುಟದಲ್ಲಿ ಸದ್ಯ ಮಹಿಳೆಗೆ ಮೀಸಲಾದ ಒಂದು ಸ್ಥಾನ ಹಾಗೂ ಮಾಜಿ ಸಚಿವ ನಾಗೇಂದ್ರ ಅವರಿಂದ ತೆರವಾಗಿರುವ ಒಂದು ಸ್ಥಾನ ಸೇರಿದಂತೆ ಎರಡು ಮಂತ್ರಿ ಸ್ಥಾನಗಳು ಖಾಲಿ ಉಳಿದಿವೆ. ಇದರ ಜತೆ ಸದ್ಯದಲ್ಲೇ ಇನ್ನೂ ಎರಡು ಅಥವಾ ಮೂರು ಸ್ಥಾನಗಳು ತೆರವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, ಸಂಪುಟದ ಇನ್ನೂ ಮೂವರ ಸಚಿವರ ಮೇಲೆ ಇ.ಡಿ ದಾಳಿ ಆಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿಯುವ ಮೂಲಕ ಪರೋಕ್ಷ ಸೂಚನೆಯನ್ನೇ ನೀಡಿದ್ದಾರೆ.
ಇದರ ಮಧ್ಯೆ ಸಂಪುಟದಲ್ಲಿರುವ ಅನೇಕ ನಾಯಕರ ವಿರುದ್ಧ ಇ.ಡಿ ಅಧಿಕಾರಿಗಳು ಅಕ್ರಮ ಹಣಕಾಸು ವಹಿವಾಟು ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಈಗಾಗಲೇ ಪ್ರಕರಣ ದಾಖಲಾಗಿರುವ ರಾಜಕಾರಣಿಗಳ ವಿರುದ್ಧ ಬಂಧನ ಆದೇಶ ಹೊರಡಿಸುವವರೆಗೂ ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸಿದ್ದು ಇದು ತಿಳಿಯುತ್ತಿದ್ದಂತೆ ಕೆಲವು ಸಚಿವರು ದೆಹಲಿಗೆ ತೆರಳಿ, ಪಕ್ಷದ ಹೈಕಮಾಂಡ್ ಮುಂದೆ ಅಂಗಲಾಚಿದ್ದಾರೆ. ಮುಂದಿನ ದಿನಗಳಲ್ಲಿ ಇ.ಡಿಯಿಂದ ತೊಂದರೆ ಆದರೆ ಸಂಪುಟದಿಂದ ತೆಗೆಯಬಾರದು ಎನ್ನುವ ಕೋರಿಕೆ ಯನ್ನು ಸಲ್ಲಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕೆಲವರಿಗೆ ಕೊಕ್ ನೀಡುವ ಸಂಭವದ ವಾಸನೆ ತಿಳಿದು ಕೆಲವು ಸಚಿವ ಆಕಾಂಕ್ಷಿಗಳು ದೆಹಲಿ ಕಡೆ ಓಡಾಟ ಶುರು ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿರುವ ಮಾಜಿ ಸಚಿವ ಎಂ. ಕೃಷ್ಣಪ್ಪ ಹಾಗೂ ಹಾವೇರಿಯ ಬಸವರಾಜ ನೀಲಪ್ಪ ಶಿವಣ್ಣನವರ್ ಮತ್ತು ಮಹಿಳಾ ಕೋಟದಲ್ಲಿ ಸ್ಥಾನ ನಿರೀಕ್ಷೆ ಮಾಡುತ್ತಿರುವ ಬಳ್ಳಾರಿಯ ಅನ್ನಪೂರ್ಣ ತುಕಾರಾಮ್ ಅವರು ಮಂತ್ರಿಯಾಗುವ ಹಾದಿ ಸುಗಮವಾಗುವ ಸಾಧ್ಯತೆ ಕಾಣುತ್ತಿದೆ.
ಪ್ರಾತಿನಿಧ್ಯ ಕಡಿಮೆ: ವಾಲ್ಮೀಕಿ ಸಮಾಜದಲ್ಲಿ ಬೇಸರ ಈ ಮಧ್ಯದಲ್ಲಿ ಮಾಜಿ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ನಾಗೇಂದ್ರ ರಾಜೀನಾಮೆ ನಂತರ ವಾಲ್ಮೀಕಿ ಸಮುದಾಯದ ಸಚಿವರಿಗೆ, ಶಾಸಕರಿಗೆ, ನಾಯಕರಿಗೆ ನಿರಂತರ ತೊಂದರೆಗಳಾಗುತ್ತಿದ್ದು ಸಂಪುಟದಲ್ಲಿ ಮತ್ತು ಪಕ್ಷದಲ್ಲಿ ಈ ಸಮುದಾಯದ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ ಎನ್ನುವ ಬೇಸರ ಆ ಸಮಾಜದಲ್ಲಿದೆ. ಈ ಬಗ್ಗೆ ಆ ಸಮಾಜದ ಮುಖಂಡರು ಸಂಘಟನೆ ಗಳ ವೇದಿಕೆಗಳಲ್ಲಿ ಮಾತನಾಡಿದ್ದು ಇದನ್ನು ಪಕ್ಷದ ನಾಯಕರ ಗಮನಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ ಎಂದು ಕೆಲವು ಮುಖಂಡರು ತಿಳಿಸಿದ್ದಾರೆ.
ಯಾರಿಗೆಲ್ಲಾ ಅಪಾಯವಿದೆ?
ಇ.ಡಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಇದಲ್ಲದೆ ಸಂಪುಟದಲ್ಲಿ ಹೆಚ್ಚು ವಿದೇಶ ಪ್ರವಾಸ ಮಾಡುವ ಕೆಲವರ ವಿರುದ್ಧ ಇ.ಡಿ ಕಣ್ಣಿಟ್ಟಿದೆ ಎಂದು ಗೊತ್ತಾಗಿದೆ. ವಿಶೇಷವಾಗಿ ವಿದೇಶಗಳಲ್ಲಿ ಹೂಡಿಕೆ ಮಾಡುತ್ತಿರುವ ಹೆಚ್ಚಿನ ಸಚಿವರ ಮಾಹಿತಿ ಸಂಗ್ರಹಣೆ ಆಗುತ್ತಿದ್ದು ಅಂತಹವರಿಗೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸರ್ಕಾರಕ್ಕೆ ಮಾಹಿತಿ ಬಂದಿದೆ ಎನ್ನಲಾಗಿದೆ.