ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ!
2026ರ ಸಿಎಂ ಕಪ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯ ಅಧಿಕೃತ ಲೋಗೋವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅನಾವರಣಗೊಳಿಸಿದರು. ಬುಧವಾರ ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಕಪ್ 2026ರ ಲೋಗೋ ಬಿಡುಗಡೆ ಮಾಡಿದ ಬಳಿಕ ಸಿಎಂ ಸಿದ್ದು ಟೂರ್ನಿಗೆ ಶುಭ ಕೋರಿದರು.
ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಸಿದ್ದರಾಮಯ್ಯ. -
ಬೆಂಗಳೂರು: 9 ಡ್ರೀಮ್ಸ್ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ವಿನೂತನ ಮಾದರಿಯ 2026ರ ಸಿಎಂ ಕಪ್ ಷಟಲ್ ಬ್ಯಾಡ್ಮಿಂಟನ್ (CM Cup Badminton) ಟೂರ್ನಿಯ ಅಧಿಕೃತ ಲೋಗೋವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬುಧವಾರ ಅನಾವರಣಗೊಳಿಸಿದರು. ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಕಪ್ 2026ರ ಲೋಗೋ ಬಿಡುಗಡೆ ಮಾಡಿ, ಟೂರ್ನಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಎಸಿಪಿ ಪರಮೇಶ್ವರ್, ಚಿತ್ರರಂಗದ ಇಮ್ರಾನ್ ಸರ್ದಾರಿಯಾ, ಕವಿತಾ ಲಂಕೇಶ್, ಸಿಎಂ ಕಪ್ ಆಯೋಜಕರಾದ ಮಂಜುನಾಥ್ ಗೌಡ, ಸುನೀಲ್ ಧರ್ಮಸ್ಥಳ, ಸನತ್ ರೈ, ತೇಜಸ್ ಪವಾಸ್, ಬಾಲು, ಆಶಿಕ್ ಶೆಟ್ಟಿ ಇತರರಿದ್ದರು.
ಟೂರ್ನಿಗೂ ಮುನ್ನ ಜನವರಿ 25ರಂದು ಪ್ಯಾಲೆಸ್ ಗ್ರೌಂಡ್ಸ್‌ನ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಆಟಗಾರರ ಆಯ್ಕೆ ಹಾಗೂ ಜೆರ್ಸಿ ಅನಾವರಣ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿದರು. ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ, ಡಿಜಿಪಿ ಅಲೋಕ್ ಕುಮಾರ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಂಡಗಳ ಜೆರ್ಸಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಎಂ. ಎ. ಸಲೀಂ, ಐಪಿಎಲ್ ಮಾದರಿಯ ಬ್ಯಾಡ್ಮಿಂಟನ್ ಲೀಗ್ ವಿನ್ಯಾಸ ಉತ್ಸಾಹಭರಿತ ಮತ್ತು ಪ್ರೇರಣಾದಾಯಕವಾಗಿದೆ ಎಂದು ಹೇಳಿದರು. ತಾವು ಸಹ ಬ್ಯಾಡ್ಮಿಂಟನ್ ಆಟಗಾರರಾಗಿರುವುದಾಗಿ ಹೇಳಿದ ಅವರು, ಪೊಲೀಸ್ ಇಲಾಖೆಯ ಅಧಿಕಾರಿಗಳ ಭಾಗವಹಿಸುವಿಕೆ ಕ್ರೀಡಾ ಮನೋಭಾವದ ಸಂಕೇತವಾಗಿದ್ದು, ಎಲ್ಲರೂ ಕ್ರೀಡೆಯ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಸಂದೇಶವನ್ನು ನೀಡುತ್ತದೆ ಎಂದರು.
ಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ರಾಜಕಾರಣಿಗಳು, ಮಾಧ್ಯಮ ಪ್ರತಿನಿಧಿಗಳು, ವೈದ್ಯರು ಹಾಗೂ ಆಡಳಿತಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಸೇರುವುದು ಅಪರೂಪ ಹಾಗೂ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು. ಟೂರ್ನಿಗೆ ಯಶಸ್ಸಿನ ಶುಭಾಶಯಗಳನ್ನು ಕೋರಿದರು.
ಫೆಬ್ರವರಿ 21-22ರಂದು ನಡೆಯಲಿರುವ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲಾಂಛನವನ್ನು ಬಿಡುಗಡೆಗೊಳಿಸಿ, ಪಂದ್ಯಾವಳಿಗೆ ಶುಭ ಹಾರೈಸಿದೆ. pic.twitter.com/lkgeLFtbWi
— Siddaramaiah (@siddaramaiah) February 18, 2026
ಸಿಎಂ ಕಪ್ 2026 ಪರಿಕಲ್ಪನೆಯನ್ನು ಹಿರಿಯ ಮಾಧ್ಯಮ ವೃತ್ತಿಪರ ಜಿ. ವೈ. ಮಂಜುನಾಥ್ ರೂಪಿಸಿದ್ದಾರೆ. ಟಿವಿ9 ಸೇರಿದಂತೆ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ದೀರ್ಘ ಅನುಭವ ಹೊಂದಿರುವ ಅವರು ಈ ಕ್ರೀಡಾ ಉತ್ಸವಕ್ಕೆ ರೂಪ ನೀಡಿದ್ದಾರೆ. ದಿವ್ಯ ರಂಗನಹಳ್ಳಿ ನೇತೃತ್ವದ ಮೀಡಿಯಾ ಕನೆಕ್ಟ್, ಸಹ-ಸ್ಥಾಪಕ ಹಾಗೂ ಹಿರಿಯ ಪತ್ರಕರ್ತ ಸುನೀಲ್ ಧರ್ಮಸ್ಥಳ ಸೇರಿದಂತೆ ಹಲವರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ.
ಈ ಟೂರ್ನಿಯ ವೈಶಿಷ್ಟ್ಯತೆ ಏನು?
ಸಿಎಂ ಕಪ್ 2026 ತನ್ನ ಒಳಗೊಂಡಿಕೆಯಿಂದ ವಿಶಿಷ್ಟವಾಗಿದೆ. ಶಾಸಕರು, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಕಾರ್ಯಾಲಯ ಅಧಿಕಾರಿಗಳು, ವೈದ್ಯರು, ಚಿತ್ರರಂಗದ ನಟ-ನಟಿಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವೃತ್ತಿಪರ ಅಂತರಗಳನ್ನು ಮೀರಿ ಒಟ್ಟಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ವಾತಾವರಣ ನಿರ್ಮಿಸುವುದೇ ಉದ್ದೇಶವಾಗಿದೆ.
ಟೂರ್ನಿಯಲ್ಲಿ ಎಂಟು ಫ್ರಾಂಚೈಸಿ ತಂಡಗಳು ಇರಲಿದ್ದು, ಪ್ರತಿಯೊಂದು ತಂಡದಲ್ಲೂ 15 ಆಟಗಾರರು (ಪುರುಷರು ಮತ್ತು ಮಹಿಳೆಯರು) ಭಾಗವಹಿಸಲಿದ್ದಾರೆ. ಒಂದೇ ವೃತ್ತಿಗೆ ಸೇರಿದವರು ಒಂದೇ ತಂಡದಲ್ಲಿ ಇರದಂತೆ ಕ್ರಮ ಕೈಗೊಳ್ಳಲಾಗಿದೆ, ಇದರಿಂದ ವೈವಿಧ್ಯತೆ ಖಚಿತವಾಗಲಿದೆ.
ಪ್ರತಿ ವರ್ಷದ ನವೆಂಬರ್ 3, 4, 5ರಂದು ಹಂಪಿ ಉತ್ಸವ ಆಯೋಜನೆ: ಸಿಎಂ ಸಿದ್ದರಾಮಯ್ಯ ಘೋಷಣೆ
ಪ್ರತಿ ತಂಡದಲ್ಲೂ ನಾಯಕ, ಉಪನಾಯಕ ಹಾಗೂ ಚಿತ್ರರಂಗದ ಐಕಾನ್ ಆಟಗಾರರಿರಲಿದ್ದಾರೆ. ರಾಜಕೀಯ, ಐಎಎಸ್, ಐಪಿಎಸ್, ಪೊಲೀಸ್, ಕಾರ್ಯಾಲಯ, ವೈದ್ಯಕೀಯ, ಮಾಧ್ಯಮ ಮತ್ತು ಸಿನಿರಂಗದಿಂದ ತಲಾ ಒಬ್ಬ ಪ್ರತಿನಿಧಿ ಕಡ್ಡಾಯವಾಗಿರುತ್ತಾರೆ.
ಪಂದ್ಯ ಮಾದರಿ ಮತ್ತು ಬಹುಮಾನ
ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳೆಯರ ಸಿಂಗಲ್ಸ್, ಮಹಿಳೆಯರ ಡಬಲ್ಸ್, ಮಿಕ್ಸ್ಡ್ ಡಬಲ್ಸ್, ಪವರ್ ಡಬಲ್ಸ್ ಹಾಗೂ ‘ಗೇಮ್ ಚೇಂಜರ್’ ಎಂಬ ಹೊಸ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ವಿಜೇತ ತಂಡಕ್ಕೆ ₹7 ಲಕ್ಷ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಗುತ್ತದೆ.