Roopa Gururaj Column: ರಾಮಚರಿತ ಮಾನಸ: ಹನುಮನಿಗೆ ಆಶೋಕವನದಲ್ಲಿ ಸೀತೆಯ ದರ್ಶನ
ಜಗತ್ತನ್ನೇ ಸಲಹುವ ತಾಯಿ ಇಂದು ಒಂಟಿಯಾಗಿ ಕುಳಿತು, ಮಿಣುಕು ದೀಪದಂತೆ ಕೇವಲ ‘ರಾಮ.. ರಾಮ’ ಎಂದು ಜಪಿಸುತ್ತಿರುವುದನ್ನು ಕಂಡು ಹನುಮಂತನು ಮರದ ಎಲೆಗಳ ಮರೆಯಲ್ಲಿ ಅಡಗಿ ಕಣ್ಣೀರು ಹಾಕಿದನು. ಅಷ್ಟರಲ್ಲಿ, ಹತ್ತು ತಲೆಗಳ ಅಹಂಕಾರದ ಸಾಕಾರ ರೂಪದಂತಿದ್ದ ರಾವಣನು ಅಲ್ಲಿಗೆ ಬಂದನು. ಅವನು ಸೀತೆಯನ್ನು ನಾನಾ ರೀತಿಯಲ್ಲಿ ಬೆದರಿಸಿ, ತನ್ನ ಪಟ್ಟದ ರಾಣಿಯಾಗು ವಂತೆ ಒತ್ತಾಯಿಸಿದನು
-
ಒಂದೊಳ್ಳೆ ಮಾತು
ಲಂಕೆಯ ಅಂಧಕಾರದ ನಡುವೆ ಜಗನ್ಮಾತೆ ಸೀತೆಯನ್ನು ಹುಡುಕುತ್ತಾ ಹೊರಟ ಹನುಮಂತನಿಗೆ ಅಶೋಕವನವು ಒಂದು ಕಣ್ಣೀರಿನ ಕಡಲಂತೆ ಕಂಡಿತು. ಅಲ್ಲಿನ ಪ್ರತಿಯೊಂದು ಗಿಡ-ಮರಗಳೂ ತಾಯಿಯ ದುಃಖಕ್ಕೆ ಸಾಕ್ಷಿಯಾಗಿದ್ದವು. ದಟ್ಟವಾದ ಶಿಂಶುಪಾ ವೃಕ್ಷದ ಕೆಳಗೆ, ಸಾಧಾರಣವಾದ ವಸವನ್ನು ಧರಿಸಿ, ಉಪವಾಸದಿಂದ ಕೃಶಳಾಗಿ ಕುಳಿತಿದ್ದ ಸೀತಾದೇವಿಯನ್ನು ಕಂಡಾಗ ಹನುಮಂತ ನ ಹೃದಯ ಕಿವುಚಿದಂತಾಯಿತು.
ಜಗತ್ತನ್ನೇ ಸಲಹುವ ತಾಯಿ ಇಂದು ಒಂಟಿಯಾಗಿ ಕುಳಿತು, ಮಿಣುಕು ದೀಪದಂತೆ ಕೇವಲ ‘ರಾಮ.. ರಾಮ’ ಎಂದು ಜಪಿಸುತ್ತಿರುವುದನ್ನು ಕಂಡು ಹನುಮಂತನು ಮರದ ಎಲೆಗಳ ಮರೆಯಲ್ಲಿ ಅಡಗಿ ಕಣ್ಣೀರು ಹಾಕಿದನು. ಅಷ್ಟರಲ್ಲಿ, ಹತ್ತು ತಲೆಗಳ ಅಹಂಕಾರದ ಸಾಕಾರ ರೂಪದಂತಿದ್ದ ರಾವಣನು ಅಲ್ಲಿಗೆ ಬಂದನು. ಅವನು ಸೀತೆಯನ್ನು ನಾನಾ ರೀತಿಯಲ್ಲಿ ಬೆದರಿಸಿ, ತನ್ನ ಪಟ್ಟದ ರಾಣಿಯಾಗು ವಂತೆ ಒತ್ತಾಯಿಸಿದನು. ಆದರೆ ಸೀತೆಯು ಅವನ ಮುಖವನ್ನೂ ನೋಡದೆ, ನೆಲದ ಮೇಲಿದ್ದ ಒಂದು ಪುಟ್ಟ ಹುಲ್ಲುಕಡ್ಡಿಯನ್ನು ತನ್ನ ಮತ್ತು ಅವನ ನಡುವೆ ತಡೆಗೋಡೆಯಾಗಿ ಇಟ್ಟುಕೊಂಡ ಳು.
“ರಾವಣನೇ, ಸಮುದ್ರವನ್ನು ಮೀರಬಹುದು, ಆದರೆ ರಾಮನ ಬಾಣವನ್ನು ನೀನು ಮೀರಲಾರೆ. ನಿನ್ನ ಅಹಂಕಾರದ ಲಂಕೆ ಶೀಘ್ರದ ಸ್ಮಶಾನವಾಗಲಿದೆ" ಎಂದು ಗುಡುಗಿದಳು ಸೀತೆ. ರಾವಣನು ಕ್ರೋಧದಿಂದ ಅವಳಿಗೆ ಒಂದು ತಿಂಗಳ ಗಡುವು ನೀಡಿ ಅಲ್ಲಿಂದ ತೆರಳಿದನು.
ಇದನ್ನೂ ಓದಿ: Roopa Gururaj Column: ರಾಮಚರಿತ ಮಾನಸ: ಹನುಮಂತ- ವಿಭೀಷಣರ ಹೃದಯಸ್ಪರ್ಶಿ ಭೇಟಿ
ರಾವಣನು ಹೋದ ಮೇಲೆ ಸೀತೆಯ ದುಃಖದ ಕಟ್ಟೆಯೊಡೆಯಿತು. ವಿರಹದ ವೇದನೆ ತಾಳಲಾರದೆ, ರಾಮನು ಬರುವುದು ತಡವಾಗುತ್ತಿದೆ ಎಂದು ಭಾವಿಸಿದ ಅವಳು, ಪ್ರಾಣತ್ಯಾಗ ಮಾಡುವುದೇ ಲೇಸೆಂದು ನಿರ್ಧರಿಸಿದಳು. ಆ ಕ್ಷಣದಲ್ಲಿ ಹನುಮಂತನಿಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ.
ಸೀತೆಯನ್ನು ಆ ಅತೀವ ಹತಾಶೆಯಿಂದ ಹೊರತರಲು ಅವನು ಒಂದು ದೈವಿಕ ಉಪಾಯ ಮಾಡಿ ದನು. ಮರದ ಮೇಲಿಂದಲೇ ಅತ್ಯಂತ ಮಧುರವಾದ ಧ್ವನಿಯಲ್ಲಿ ಶ್ರೀರಾಮನ ಗುಣಗಾನ ಮಾಡಲು ಆರಂಭಿಸಿದನು.
ರಾಮನ ಜನನ, ವಿಶ್ವಾಮಿತ್ರರ ಜತೆಗಿನ ಯಾನ, ಸೀತಾಕಲ್ಯಾಣ ಮತ್ತು ವನವಾಸದವರೆಗಿನ ಕಥೆ ಯನ್ನು ಅಮೃತದ ಸವಿಯಂತೆ ಹಾಡಿದನು. ಆ ಮಾತುಗಳು ಸೀತೆಯ ಕಿವಿಗೆ ಬಿದ್ದಾಗ ಅವಳು ಸ್ತಬ್ಧಳಾದಳು. ಈ ಪಾಪಿಗಳ ನಾಡಿನಲ್ಲಿ ರಾಮನ ಕಥೆಯನ್ನು ಹೇಳುತ್ತಿರುವ ಆ ಪುಣ್ಯಾತ್ಮ ಯಾರು? ಎಂದು ಅವಳು ಮೇಲೆ ನೋಡಿದಳು.
ತಕ್ಷಣವೇ ಹನುಮಂತನು ತಾನು ತಂದಿದ್ದ ಶ್ರೀರಾಮನ ಮುದ್ರಿಕೆಯನ್ನು (ಉಂಗುರ) ಸೀತೆಯ ಮಡಿಲಿಗೆ ಬೀಳುವಂತೆ ಕೆಳಗೆ ಹಾಕಿದನು.
ರಾಮ ನಾಮ ಅಂಕಿತ ಅತಿ ಸುಂದರ |
ಚಕಿತ ಚಿತ್ತ ಮುದರೀ ಪಹಚಾನೀ ||
ಆ ಸುಂದರವಾದ ಮುದ್ರಿಕೆಯನ್ನು ಕಂಡೊಡನೆ ಸೀತೆಯ ಹೃದಯದ ಬಡಿತ ಜೋರಾಯಿತು. ಅದರ ಮೇಲೆ ಕೆತ್ತಿದ್ದ ‘ರಾಮ’ ಎಂಬ ಅಕ್ಷರಗಳನ್ನು ಕಂಡಾಗ ಅವಳ ಕಣ್ಣುಗಳಿಂದ ಆನಂದಬಾಷ್ಪ ಸುರಿಯಿತು. ಇದು ರಾವಣನ ಮಾಯೆಯಲ್ಲ, ಇದು ನನ್ನ ಪ್ರಭುವಿನದ್ದೇ ಮುದ್ರಿಕೆ ಎಂದು ಅದನ್ನು ಕಣ್ಣಿಗೊತ್ತಿಕೊಂಡಳು. ಹನುಮಂತನು ಮೆಲ್ಲನೆ ಕೆಳಗಿಳಿದು ಬಂದು ವಿನಯದಿಂದ ತಲೆ ಬಾಗಿ ನಮಸ್ಕರಿಸಿ, “ತಾಯಿ, ನಾನು ರಾಮನ ಸೇವಕ. ನಿನ್ನ ವಿರಹದಲ್ಲಿ ಬೆಂದು ಹೋಗುತ್ತಿರುವ ಪ್ರಭು ವಿನ ಸಂದೇಶವನ್ನು ತಂದಿದ್ದೇನೆ. ನೀನು ಅನಾಥೆಯಲ್ಲ, ಇಡೀ ವಾನರ ಸೈನ್ಯವೇ ನಿನ್ನ ರಕ್ಷಣೆಗಾಗಿ ಸಜ್ಜಾಗಿದೆ" ಎಂದು ಹೇಳಿದಾಗ ಸೀತೆಯ ಮೊಗದಲ್ಲಿ ಸೂರ್ಯೋದಯದಂಥ ಭರವಸೆ ಮೂಡಿತು.
ಒಬ್ಬ ಸಜ್ಜನ ಭಕ್ತನ ಭೇಟಿಯು ಕೇವಲ ಸಮಾಧಾನವನ್ನಷ್ಟೇ ಅಲ್ಲ, ಸಾವಿನ ಅಂಚಿನಲ್ಲಿದ್ದ ಜೀವಕ್ಕೆ ಹೊಸ ಚೈತನ್ಯವನ್ನೇ ನೀಡಬಲ್ಲದು ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ. ಹನುಮಂತನ ಭಕ್ತಿ ಮತ್ತು ರಾಮನ ಮುದ್ರಿಕೆಯು ಅಶೋಕವನದಲ್ಲಿದ್ದ ಕತ್ತಲೆಯನ್ನು ಓಡಿಸಿ ವಿಜಯದ ಮುನ್ಸೂಚನೆ ನೀಡಿತು.
ನಮಗೂ ಜೀವನದಲ್ಲಿ ಕೆಲವೊಮ್ಮೆ ಕಷ್ಟಗಳ ಸರಣಿ ಮುಗಿಯುವುದೇ ಇಲ್ಲ. ಇನ್ನು ನಮ್ಮಿಂದ ಸಹಿಸಲಾಗದು ಎನ್ನುವ ಸ್ಥಿತಿ ತಲುಪುವ ಹೊತ್ತಿಗೆ, ಭಗವಂತನಿಂದ ಯಾವುದೋ ಒಂದು ರೀತಿಯ ಬೆಳಕಿನ ಸಂದೇಶವನ್ನು ಹೊತ್ತ ಜೀವ ನಮ್ಮ ನೆರವಿಗೆ ಬಂದಿರುತ್ತದೆ. ಅವರು ಯಾರು, ಹೇಗೆ, ಎಲ್ಲಿಂದ ಬಂದರು? ಎಂದು ಯೋಚಿಸುವ ವ್ಯವಧಾನವೂ ನಮಗಿರುವುದಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ನಮ್ಮ ಕಷ್ಟಕ್ಕೆ ನೆರವಾಗಿ ನಿಲ್ಲುವ ಹೃದಯವಂತಿಕೆ ಅವರಿಗಿರುತ್ತದೆ. ಇದು ಭಗವಂತನ ಅನುಗ್ರಹ ಅಲ್ಲವೇ? ಇದನ್ನು ನಾವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಖಂಡಿತ ಪಡೆದಿರುತ್ತೇವೆ