ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ 17 ಪದಕಗಳನ್ನು ಗೆದ್ದ ಬೆಂಗಳೂರಿನ ಕರಾಟೆ ಪಟುಗಳು!

ಇಟಲಿಯಲ್ಲಿ ನಡೆದಿದ್ದ 33ನೇ SKDUN ವಿಶ್ವ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್ ಮತ್ತು 18ನೇ SKDUN ವಿಶ್ವ ಶೋಟೋಕಾನ್ ಕರಾಟೆ ಕಪ್‌ನಲ್ಲಿ ಕರ್ನಾಟಕದ ಯುವ ಕರಾಟೆ ಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಸೆನ್ಸೈ ಮಹಾಲಕ್ಷ್ಮಿ ವರುಣ್ ಅವರ ಮಾರ್ಗದರ್ಶನದಲ್ಲಿ ಸ್ಪರ್ಧಿಸಿದ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ.

ಇಟಲಿಯಲ್ಲಿ 17 ಪದಕಗಳ ಬೇಟೆಯಾಡಿದ ಬೆಂಗಳೂರಿನ ಕರಾಟೆ ಪಟುಗಳು!

ವಿಶ್ವ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ 17 ಪದಕಗಳನ್ನು ಗೆದ್ದ ಕರ್ನಾಟಕ ಪಟುಗಳು. -

Profile
Ramesh Kote Oct 19, 2026 10:02 PM

ಬೆಂಗಳೂರು: ಅಕ್ಟೋಬರ್ 14 ರಿಂದ 18 ರವರೆಗೆ ಇಟಲಿಯ ಲಿಗ್ನಾನೊ ಸಬ್ಬಿಯಡೊರೊದಲ್ಲಿ ನಡೆದಿದ್ದ 33ನೇ ಎಸ್‌ಕೆಡಿಯುಎನ್ ವಿಶ್ವ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್ ಮತ್ತು 18ನೇ ಎಸ್‌ಕೆಡಿಯುಎನ್ ವಿಶ್ವ ಶೋಟೋಕಾನ್ ಕರಾಟೆ ಕಪ್‌ನಲ್ಲಿ ಬೆಂಗಳೂರಿನ ಯುವ ಕರಾಟೆ ಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಜಪಾನ್ ಶೋಟೋಕಾನ್ ಕರಾಟೆ-ಡೊ ಇಂಡಿಯಾ ಫೆಡರೇಷನ್ ಸಂಸ್ಥೆ (ಜೆಎಸ್‌ಕೆಐಎಫ್‌) ಪರವಾಗಿ ಸ್ಪರ್ಧಿಸಿದ ಕ್ರೀಡಾಪಟುಗಳು ಒಟ್ಟು 5 ಚಿನ್ನ, 2 ಬೆಳ್ಳಿ ಹಾಗೂ 10 ಕಂಚಿನ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ವಿವಿಧ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಬೆಂಗಳೂರಿನ ಕರಾಟೆ ಪಟುಗಳು ತಮ್ಮ ಕೌಶಲ, ಶಿಸ್ತು ಮತ್ತು ಆತ್ಮವಿಶ್ವಾಸದ ಮೂಲಕ ಗಮನ ಸೆಳೆದರು. ಸೆನ್ಸೈ ಮಹಾಲಕ್ಷ್ಮಿ ವರುಣ್ ಅವರ ಮಾರ್ಗದರ್ಶನದಲ್ಲಿ, ಕೋಚ್ ಕಸ್ತೂರಿ ಅವರ ನೇತೃತ್ವದಲ್ಲಿ ಸ್ಪರ್ಧಿಸಿದ ತಂಡದ ಅದ್ವಿತೀಯ ಸಾಧನೆಗೆ ಶಾಲೆಗಳು, ಕುಟುಂಬಗಳು ಹಾಗೂ ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತಂಡದ ಪ್ರಮುಖ ಸಾಧಕರಲ್ಲಿ ಒಬ್ಬರಾಗಿ ಕ್ಲಾರೆಟ್ಸ್ ವಿಶ್ವವಿದ್ಯಾಲಯದ ಗಗನಾ ಹೊರಹೊಮ್ಮಿದ್ದು, ಎರಡು ಚಿನ್ನ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಏವಿಯೇಷನ್ ಶಾಲೆಯ ಮೋಹನಾ ಒಂದು ಚಿನ್ನ ಮತ್ತು ಮೂರು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ರೈಸ್ಟ್ ಹೈಸ್ಕೂಲ್‌ನ ಮೊಹಿತ್ ರಾವ್ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ. ಸಿಂಧಿ ಹೈಸ್ಕೂಲ್‌ನ ಲಕ್ಷ್ಮಣ್ ನೀಲಕಂಠನ್ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದರೆ, ಇದೇ ಶಾಲೆಯ ಇಶಿತಾ ನಾಗರಾಜ್ ಒಂದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಏಷ್ಯನ್ ಪ್ಯಾರಾ ಗೇಮ್ಸ್: ಭಾರತಕ್ಕೆ 2ನೇ ಚಿನ್ನ! ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದ ನಿಶಾದ್ ಕುಮಾರ್

ಕ್ಲೂನಿ ಕಾನ್ವೆಂಟ್‌ಗೆ 2 ಪದಕ

ಜೂನಿಯರ್ ವಿಭಾಗದಲ್ಲಿ ಕ್ಲೂನಿ ಕಾನ್ವೆಂಟ್ ಹೈಸ್ಕೂಲ್‌ನ ಚಾರ್ವಿ ಸಿಂಪ್ಸನ್ ಎರಡು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ನಿರ್ಮಲಾ ರಾಣಿ ICSE ಶಾಲೆಯ ಶ್ರೀ ಮಹಾಲಕ್ಷ್ಮಿ ಒಂದು ಕಂಚಿನ ಪದಕ ಪಡೆದು ತಂಡದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.

ಸೆನ್ಸೈ ಮಹಾಲಕ್ಷ್ಮಿ ವರುಣ್‌ಗೂ ಬೆಳ್ಳಿ ಪದಕ

ಜಪಾನ್ ಶೋಟೋಕಾನ್ ಕರಾಟೆ-ಡೊ ಇಂಡಿಯಾ ಫೆಡರೇಷನ್ ಸಂಸ್ಥೆಯ (ಜೆಎಸ್‌ಕೆಐಎಫ್‌) ಮುಖ್ಯ ತರಬೇತುದಾರರು ಹಾಗೂ SKDUN ಇಂಡಿಯಾದ ಕಂಟ್ರಿ ಡೈರೆಕ್ಟರ್ ಆಗಿರುವ ಸೆನ್ಸೈ ಮಹಾಲಕ್ಷ್ಮಿ ವರುಣ್ ಅವರು ಕೂಡ ಭಾರತವನ್ನು ಪ್ರತಿನಿಧಿಸಿ ಸ್ಪರ್ಧೆಯಲ್ಲಿ ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.

ಪದಕ ವಿಜೇತರ ವಿವರ

ಸೆನ್ಸೈ ಮಹಾಲಕ್ಷ್ಮಿ ವರುಣ್: JSKIF ಇಂಡಿಯಾ-1 ಬೆಳ್ಳಿ

ಗಗನಾ: ಕ್ಲಾರೆಟ್ಸ್ ವಿಶ್ವವಿದ್ಯಾಲಯ: 2 ಚಿನ್ನ, 2 ಕಂಚು

ಮೋಹನಾ: ಏವಿಯೇಷನ್ ಶಾಲೆ- 1 ಚಿನ್ನ, 3 ಕಂಚು

ಮೊಹಿತ್ ರಾವ್: ಕ್ರೈಸ್ಟ್ ಹೈಸ್ಕೂಲ್, 1 ಚಿನ್ನ, 1 ಕಂಚು

ಲಕ್ಷ್ಮಣ್ ನೀಲಕಂಠನ್: ಸಿಂಧಿ ಹೈಸ್ಕೂಲ್- 1 ಚಿನ್ನ, 1 ಕಂಚು

ಇಶಿತಾ ನಾಗರಾಜ್: ಸಿಂಧಿ ಹೈಸ್ಕೂಲ್- 1 ಬೆಳ್ಳಿ

ಚಾರ್ವಿ ಸಿಂಪ್ಸನ್: ಕ್ಲೂನಿ ಕಾನ್ವೆಂಟ್ ಹೈಸ್ಕೂಲ್- 2 ಕಂಚು

ಶ್ರೀ ಮಹಾಲಕ್ಷ್ಮಿ: ನಿರ್ಮಲಾ ರಾಣಿ- ICSE ಶಾಲೆ- 1 ಕಂಚು

10 ಮೀ. ಏರ್ ರೈಫಲ್; ಚಿನ್ನಕ್ಕೆ ಗುರಿಯಿಟ್ಟ ಮೋನಾ ಅಗರ್ವಾಲ್, ಬೆಳ್ಳಿ ಗೆದ್ದ ಅವನಿ ಲೇಖರಾ

ಕರ್ನಾಟಕದ ಕ್ರೀಡಾ ಸಾಧನೆಗೆ ಮತ್ತೊಂದು ಗರಿ

ವಿಶ್ವಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕದ ಯುವ ಕ್ರೀಡಾಪಟುಗಳು ತೋರಿದ ಈ ಪ್ರದರ್ಶನವು ಭಾರತೀಯ ಶೋಟೋಕಾನ್ ಕರಾಟೆಯ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಪದಕ ವಿಜೇತರ ಸಾಧನೆಯು ಅವರ ಶಾಲೆಗಳು, ಕುಟುಂಬಗಳು ಮತ್ತು ತರಬೇತಿ ಸಂಸ್ಥೆಗೆ ಹೆಮ್ಮೆ ತಂದಿದೆ. ಸಮರ್ಪಿತ ತರಬೇತಿ, ನಿರಂತರ ಪರಿಶ್ರಮ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳ ಅನುಭವದ ಮೂಲಕ ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ.