ತಮ್ಮ 33ನೇ ವಯಸ್ಸಿನ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳಿದ ರೊಮೆಲು ಲುಕಾಕು!
ಬೆಲ್ಜಿಯಂನ ಸ್ಟಾರ್ ಫುಟ್ಬಾಲ್ ಆಟಗಾರ ರೊಮೆಲು ಲುಕಾಕು 33ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ. ದೇಶದ ಪರ 135 ಪಂದ್ಯಗಳಲ್ಲಿ 94 ಗೋಲು ಗಳಿಸಿರುವ ಅವರು, ಬೆಲ್ಜಿಯಂನ ಸಾರ್ವಕಾಲಿಕ ಶ್ರೇಷ್ಠ ಗೋಲ್ಸ್ಕೋರರ್ ಎಂಬ ಹೆಗ್ಗಳಿಕೆಯೊಂದಿಗೆ ವಿದಾಯ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಫುಟ್ಬಾಲ್ಗೆ ರೊಮೆಲು ಲುಕಾಕು ವಿದಾಯ. -
ನವದೆಹಲಿ: ಬೆಲ್ಜಿಯಂ ತಂಡದ ಅನುಭವಿ ಸ್ಟ್ರೈಕರ್ ರೊಮೆಲು ಲುಕಾಕು (Romelu Lukaku) ತಮ್ಮ 33ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಬೆಲ್ಜಿಯಂ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ಅವರು ರಾಷ್ಟ್ರೀಯ ತಂಡದ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಲುಕಾಕು 135 ಪಂದ್ಯಗಳನ್ನು ಆಡಿದ್ದು, ಒಟ್ಟು 94 ಗೋಲುಗಳನ್ನು ದಾಖಲಿಸಿದ್ದಾರೆ. ಏರಿಳಿತಗಳಿಂದ ಕೂಡಿದ್ದ ಅವರ ವೃತ್ತಿಜೀವನದಲ್ಲಿ ಬೆಲ್ಜಿಯಂ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ಸುನಿಲ್ ಛೆಟ್ರಿ ಮತ್ತು ಅಲಿ ದೇಯಿ ಬಳಿಕ ಲುಕಾಕು ಐದನೇ ಸ್ಥಾನದಲ್ಲಿದ್ದಾರೆ.
Cristiano Ronaldo Retirement: ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಯುಗಾಂತ್ಯ!
16 ವರ್ಷಗಳ ಪಯಣಕ್ಕೆ ಭಾವನಾತ್ಮಕ ವಿದಾಯ
“ಕಳೆದ 16 ವರ್ಷಗಳಲ್ಲಿ ರಾಷ್ಟ್ರೀಯ ತಂಡಕ್ಕಾಗಿ ನನ್ನಿಂದ ಸಾಧ್ಯವಾದ ಎಲ್ಲವನ್ನೂ ನೀಡಿದ್ದೇನೆ. ಜೀವನದ ಪ್ರತಿಯೊಂದು ಭಾವನೆಯನ್ನು ಅನುಭವಿಸಿದ್ದೇನೆ. ಅದ್ಭುತ ಸಹ ಆಟಗಾರರೊಂದಿಗೆ ಆಡಿದ್ದೇನೆ. ಅವರಿಗಾಗಿ ನಾನು ಸದಾ ಕೃತಜ್ಞನಾಗಿರುತ್ತೇನೆ. ನನ್ನನ್ನು ಪ್ರೋತ್ಸಾಹಿಸಿ ನಂಬಿಕೆ ಇಟ್ಟ ಎಲ್ಲಾ ಕೋಚ್ಗಳಿಗೂ ಧನ್ಯವಾದಗಳು,” ಎಂದು ಲುಕಾಕು ಬರೆದುಕೊಂಡಿದ್ದಾರೆ.
“ಇದು ಅದ್ಭುತ ಪಯಣವಾಗಿತ್ತು. ಪ್ರತಿಯೊಂದು ಕ್ಷಣವನ್ನೂ ಆನಂದಿಸಿದ್ದೇನೆ. ಬೆಲ್ಜಿಯಂ ಅಭಿಮಾನಿಗಳು ನಮ್ಮ ತಂಡಕ್ಕೆ ನೀಡಿದ ಬೆಂಬಲಕ್ಕೆ ಧನ್ಯವಾದಗಳು. ನಾಲ್ಕು ವಿಶ್ವಕಪ್ ಟೂರ್ನಿಗಳು ಮತ್ತು ಮೂರು ಯುರೋಪಿಯನ್ ಚಾಂಪಿಯನ್ಶಿಪ್ಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿರುವುದಕ್ಕೆ ಹೆಮ್ಮೆ ಇದೆ,” ಎಂದು ತಿಳಿಸಿದ್ದಾರೆ.
“ಆ ಕ್ಷಣಗಳನ್ನು ಎಂದಿಗೂ ಮರೆಯುವುದಿಲ್ಲ. ಈ ಹಂತದಲ್ಲಿ ನಿಲ್ಲಿಸುವ ನನ್ನ ನಿರ್ಧಾರದ ಬಗ್ಗೆ ನನಗೆ ಸಮಾಧಾನವಿದೆ. ಈ ಪಯಣ ಅದ್ಭುತವಾಗಿತ್ತು. ಅದನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಎಲ್ಲದಕ್ಕೂ ಧನ್ಯವಾದಗಳು,” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
IND vs NZ: ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ದೊಡ್ಡ ಗಣೇಶ್!
ಲುಕಾಕುಗೆ ಬೆಲ್ಜಿಯಂ ಫುಟ್ಬಾಲ್ ಫೆಡರೇಷನ್ ಗೌರವ
ಲುಕಾಕು ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಬೆಲ್ಜಿಯಂ ಫುಟ್ಬಾಲ್ ಫೆಡರೇಷನ್ ಅವರಿಗೆ ಗೌರವ ಸಲ್ಲಿಸಿದೆ. ದೇಶದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಹಾಗೂ ತಂಡದ ಇತಿಹಾಸದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದು ಬಣ್ಣಿಸಿದೆ.
“ತಮ್ಮ ವ್ಯಕ್ತಿತ್ವ, ನಾಯಕತ್ವ, ಸಮರ್ಪಣೆ ಮತ್ತು ರಾಷ್ಟ್ರೀಯ ತಂಡದೊಂದಿಗಿನ ಬಲವಾದ ಬಾಂಧವ್ಯದ ಮೂಲಕ ಅವರು ಬೆಲ್ಜಿಯಂ ರೆಡ್ ಡೆವಿಲ್ಸ್ ಇತಿಹಾಸದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ” ಎಂದು ಫೆಡರೇಷನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಲಬ್ ಮಟ್ಟದ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಕಂಡಿದ್ದರೂ, ಬೆಲ್ಜಿಯಂ ತಂಡದ ಪರ ನಿರ್ಣಾಯಕ ಸಂದರ್ಭಗಳಲ್ಲಿ ಲುಕಾಕು ಉತ್ತಮ ಪ್ರದರ್ಶನ ನೀಡುತ್ತಿದ್ದರು. ಇದೀಗ ಅವರ ನಿವೃತ್ತಿಯೊಂದಿಗೆ ಬೆಲ್ಜಿಯಂ ಫುಟ್ಬಾಲ್ನ ಒಂದು ಪ್ರಮುಖ ಅಧ್ಯಾಯ ಅಂತ್ಯಗೊಂಡಿದೆ.