IPL 2025: ಕೊಹ್ಲಿ ಬಳಿಕ ಆರ್‌ಸಿಬಿ ಪರ ವಿಶೇಷ ದಾಖಲೆ ಬರೆಯಲು ಸಜ್ಜಾದ ಪಾಟೀದಾರ್
ರಜತ್ ಪಾಟೀದಾರ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 40 ರನ್ ಗಳಿಸಿದರೆ ಆರ್‌ಸಿಬಿ ಪರ ಸಾವಿರ ರನ್ ಪೂರೈಸಿದ 2ನೇ ಭಾರತೀಯ ಬ್ಯಾಟರ್ ಎನಿಸಲಿದ್ದಾರೆ. ಕೊಹ್ಲಿ ಇದುವರೆಗಿನ ಏಕೈಕ ಭಾರತೀಯ ಸಾಧಕ. ಸದ್ಯ ಪಾಟೀದಾರ್ ಉತ್ತಮ ಬ್ಯಾಟಿಂಗ್ ಪಾರ್ಮ್‌ನಲ್ಲಿದ್ದು ಆಡಿದ 4 ಪಂದ್ಯಗಳಿಂದ 161 ರನ್ ಕಲೆಹಾಕಿದ್ದಾರೆ.


ಬೆಂಗಳೂರು: ಆರ್‌ಸಿಬಿ(RCB) ತಂಡದ ನಾಯಕ ರಜತ್ ಪಾಟೀದಾರ್(Rajat Patidar) ಈ ಬಾರಿಯ ಐಪಿಎಲ್(IPL 2025)ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಜತೆಗೆ ತಂಡದ ಯಶಸ್ಸಿಗೆ ಕೊಡುಗೆ ನೀಡುತ್ತಿದ್ದಾರೆ. ಈ ಮೂಲಕ ತಂಡಕ್ಕೆ ತಮ್ಮ ನಾಯಕತ್ವದಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ಆರ್‌ಸಿಬಿ ಆಡಿದ ನಾಲ್ಕು ಪಂದ್ಯಗಳಲ್ಲಿ 3 ಪಂದ್ಯ ಗೆದ್ದು ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂದು(ಗುರುವಾರ) ನಡೆಯುವ ತವರಿನ ಪಂದ್ಯದಲ್ಲಿ ಅಜೇಯ ಡೆಲ್ಲಿ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಪಾಟೀದಾರ್ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ.
ರಜತ್ ಪಾಟೀದಾರ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 40 ರನ್ ಗಳಿಸಿದರೆ ಆರ್‌ಸಿಬಿ ಪರ ಸಾವಿರ ರನ್ ಪೂರೈಸಿದ 2ನೇ ಭಾರತೀಯ ಬ್ಯಾಟರ್ ಎನಿಸಲಿದ್ದಾರೆ. ಕೊಹ್ಲಿ ಇದುವರೆಗಿನ ಏಕೈಕ ಭಾರತೀಯ ಸಾಧಕ. ಸದ್ಯ ಪಾಟೀದಾರ್ ಉತ್ತಮ ಬ್ಯಾಟಿಂಗ್ ಪಾರ್ಮ್‌ನಲ್ಲಿದ್ದು ಆಡಿದ 4 ಪಂದ್ಯಗಳಿಂದ 161 ರನ್ ಕಲೆಹಾಕಿದ್ದಾರೆ.
ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾರಣದಿಂದ ರಜತ್ ಪಾಟೀದಾರ್‌ಗೆ 12 ಲಕ್ಷ ರೂ ದಂಡ ವಿಧಿಸಲಾಗಿತ್ತು. ಇದು ಆರ್‌ಸಿಬಿಯ ಈ ಋತುವಿನ ಮೊದಲ ಅಪರಾಧವಾಗಿದೆ.
ತವರಿನಾಚೆ ನಡೆಯುವ ಪಂದ್ಯಗಳಲ್ಲಿ ಅಮೋಘ ಗೆಲುವುಗಳನ್ನು ಸಾಧಿಸಿ 2025ರ ಐಪಿಎಲ್ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿರುವ ಆರ್‌ಸಿಬಿ ತವರಿನ ಪಂದ್ಯದಲ್ಲಿ ಎಡವುತ್ತಿರುವುದು ವಿಪರ್ಯಾಸ. ತವರಿನ ಪಂದ್ಯದಲ್ಲಿ ಕೊಹ್ಲಿ, ಪಾಟೀದಾರ್, ಸಾಲ್ಟ್ ಹೀಗೆ ಎಲ್ಲರೂ ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದಾರೆ. ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದುವರೆಗೆ ಆಡಿರುವ 92 ಪಂದ್ಯಗಳಲ್ಲಿ 44ರಲ್ಲಿ ಗೆದ್ದಿದ್ದು, 44ರಲ್ಲಿ ಸೋತಿದೆ. 4 ಪಂದ್ಯ ರದ್ದುಗೊಂಡಿವೆ.
ಇದನ್ನೂ ಓದಿ IPL 2025: ಪವರ್ ಪ್ಲೇಯಲ್ಲಿ ವಿಶೇಷ ದಾಖಲೆ ಬರೆದ ಸಿರಾಜ್
ಸಂಭಾವ್ಯ ತಂಡಗಳು
ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್.
ಇಂಪ್ಯಾಕ್ಟ್ ಪ್ಲೇಯರ್: ಸುಯಶ್ ಶರ್ಮ
ಡೆಲ್ಲಿ ಕ್ಯಾಪಿಟಲ್ಸ್: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
ಇಂಪ್ಯಾಕ್ಟ್ ಪ್ಲೇಯರ್: ಮೋಹಿತ್ ಶರ್ಮಾ