ನಾಳೆಯಿಂದ ಭಾರತ, ಲಂಕಾದಲ್ಲಿ ಮಿನಿ ವಿಶ್ವಕಪ್ ರಂಗು; ಟೂರ್ನಿಯ ಸ್ವರೂಪ, ನಿಯಮಗಳು ಹೀಗಿವೆ
T20 World Cup 2026: ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಒಟ್ಟು ಎಂಟು ತಾಣಗಳಲ್ಲಿ 55 ಪಂದ್ಯಗಳು ನಡೆಯಲಿವೆ. ಒಂದೊಮ್ಮೆ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿದರೆ ಆ ಪಂದ್ಯಕ್ಕೆ ಕೊಲಂಬೊ ಆತಿಥ್ಯ ವಹಿಸಲಿದೆ. ಇಲ್ಲದಿದ್ದರೆ ಅಹಮದಾಬಾದಿನಲ್ಲಿ ಫೈನಲ್ ನಡೆಯಲಿದೆ.
Suryakumar and Markram pose with T20 World Cup trophy -
ನವದೆಹಲಿ, ಫೆ.6: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದ,ಚುಟುಕು ಕ್ರಿಕೆಟ್‌ನ ಮಹಾ ಸಮರ ಟಿ20 ವಿಶ್ವಕಪ್(T20 World Cup 2026)ಗೆ ಶನಿವಾರ(ಫೆ.7) ಅಧಿಕೃತ ಚಾಲನೆ ಸಿಗಲಿದೆ. 10ನೇ ಆವೃತ್ತಿಯ ಟೂರ್ನಿಗೆ ಈ ಬಾರಿ ಭಾರತ ಮತ್ತು ಶ್ರೀಲಂಕಾ ದೇಶಗಳು ಆತಿಥ್ಯ ವಹಿಸುತ್ತಿದೆ. ಚಾಂಪಿಯನ್ ಪಟ್ಟಕ್ಕೆ 20 ತಂಡಗಳು ಸೆಣಸಲಿವೆ. ಇದೇ ಮೊದಲ ಬಾರಿಗೆ ಇಟಲಿ ತಂಡವು ಆಡಲಿದೆ. ಇದಕ್ಕೂ ಮುನ್ನ ಪಂದ್ಯಾವಳಿಯ ಮಾದರಿ, ಪ್ರಸಾರ, ತಾಣಗಳ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.
ಟೂರ್ನಿಯ ಮಾದರಿ
ಒಟ್ಟು 20 ತಂಡಗಳು ಕಣದಲ್ಲಿವೆ. ಇವುಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿಯೂ ಐದು ತಂಡಗಳಿವೆ. ಪ್ರತಿ ತಂಡವೂ ತನ್ನ ಗುಂಪಿನಲ್ಲಿರುವ ಇತರ ತಂಡಗಳ ಜತೆ ರೌಂಡ್ ರಾಬಿನ್ ಮಾದರಿಯಲ್ಲಿ ತಲಾ ಒಂದು ಪಂದ್ಯ ಆಡಿದೆ. ಅಂದರೆ ಪ್ರತಿ ತಂಡಕ್ಕೂ 4 ಪಂದ್ಯ ಸಿಗಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎಂಟು ತಂಡಗಳು ಸೂಪರ್-8 ಹಂತ ಪ್ರವೇಶಿಸಲಿವೆ. ಈ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಆಡಲಿವೆ.
ಎಂಟು ತಾಣ-55 ಪಂದ್ಯ
ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಒಟ್ಟು ಎಂಟು ತಾಣಗಳಲ್ಲಿ 55 ಪಂದ್ಯಗಳು ನಡೆಯಲಿವೆ. ಒಂದೊಮ್ಮೆ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿದರೆ ಆ ಪಂದ್ಯಕ್ಕೆ ಕೊಲಂಬೊ ಆತಿಥ್ಯ ವಹಿಸಲಿದೆ. ಇಲ್ಲದಿದ್ದರೆ ಅಹಮದಾಬಾದಿನಲ್ಲಿ ಫೈನಲ್ ನಡೆಯಲಿದೆ.
ಪಂದ್ಯ ಟೈ ಗೊಂಡರೆ ಏನಾಗುತ್ತದೆ?
ಪ್ರತಿ ಟೈ ಆದ ಪಂದ್ಯವನ್ನು ಸೂಪರ್ ಓವರ್ ನಿರ್ಧರಿಸುತ್ತದೆ. ಮತ್ತು ಅದು ಟೈನಲ್ಲಿ ಕೊನೆಗೊಂಡರೆ, ಮತ್ತೊಂದು ಸೂಪರ್ ಓವರ್ ಇರುತ್ತದೆ. ಫಲಿತಾಂಶವನ್ನು ಸಾಧಿಸುವವರೆಗೆ ಹೀಗೆ ಮುಂದುವರಿಯುತ್ತದೆ.
ಟಿ20 ವಿಶ್ವಕಪ್‌ಗೆ ಭಾರತ ಸಿದ್ಧ: ಇಲ್ಲಿದೆ ವೇಳಾಪಟ್ಟಿ, ಪೂರ್ಣ ತಂಡ
ಮಳೆ ನಿಮಯ
ಲೀಗ್ ಮತ್ತು ಸೂಪರ್-8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರದ ಕಾರಣ ಮಳೆಯಿಂದ ಪಂದ್ಯ ಸಂಪೂರ್ಣ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ ಒಂದರಂತೆ ಅಂಕ ಹಂಚಲಾಗುತ್ತದೆ. ಸೆಮಿ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವಿದೆ. ಒಂದೊಮ್ಮೆ ಸೆಮಿ ಪಂದ್ಯ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಮುಂದಿರುವ ತಂಡ ಫೈನಲ್ಗೇರಲಿದೆ. ಫೈನಲ್ ಪಂದ್ಯವೂ ಕೂಡ ಮಳೆಯಿಂದ ಪೂರ್ಣ ಫಲಿತಾಂಶ ಬಾರದೆ ರದ್ದುಗೊಂಡರೆ ಆಗ ಜಂಟಿ ವಿಜೇತರನ್ನು ಘೋಷಿಸಲಾಗುವುದು.
ಪ್ರಸಾರ
ಟೂರ್ನಿಯ ಪಂದ್ಯಗಳನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ, ಅಭಿಮಾನಿಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ನೇರ ಪ್ರಸಾರ ನೋಡಬಹುದು. ಭಾರತದ ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಪ್ರಾರಂಭವಾಗಲಿವೆ.
ನಾಲ್ಕು ಗುಂಪುಗಳು
ಎ ಗುಂಪು: ಭಾರತ, ಪಾಕಿಸ್ತಾನ, ಅಮೆರಿಕ, ನೆದರ್ಲೆಂಡ್ಸ್, ನಮೀಬಿಯಾ
ಬಿ ಗುಂಪು: ಆಸ್ಟ್ರೇಲಿಯಾ, ಶ್ರೀಲಂಕಾ, ಐರ್ಲೆಂಡ್, ಜಿಂಬಾಬ್ವೆ, ಒಮಾನ್
ಸಿ ಗುಂಪು: ಇಂಗ್ಲೆಂಡ್, ವೆಸ್ಟ್ ಇಂಡೀಸ್, ನೇಪಾಲ, ಇಟಲಿ, ಸ್ಕಾಟ್ಲೆಂಡ್
ಡಿ ಗುಂಪು: ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಫಘಾನಿಸ್ತಾನ, ಕೆನಡಾ, ಯುಎಇ
2007 ರಿಂದ 2024: ಟಿ20 ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾದ ದಾಖಲೆ
ಪಂದ್ಯಗಳ ತಾಣಗಳು
ನರೇಂದ್ರ ಮೋದಿ ಕ್ರೀಡಾಂಗಣ (ಅಹಮದಾಬಾದ್)
ಎಂಎ ಚಿದಂಬರಂ ಕ್ರೀಡಾಂಗಣ (ಚೆನ್ನೈ)
ಅರುಣ್ ಜೇಟ್ಲಿ ಕ್ರೀಡಾಂಗಣ (ನವದೆಹಲಿ)
ವಾಂಖೇಡೆ ಕ್ರೀಡಾಂಗಣ (ಮುಂಬೈ)
ಈಡನ್ ಗಾರ್ಡನ್ಸ್ (ಕೋಲ್ಕತ್ತಾ)
ಆರ್. ಪ್ರೇಮದಾಸ ಕ್ರೀಡಾಂಗಣ (ಕೊಲಂಬೊ)
ಸಿಂಹಳೀಯ ಕ್ರೀಡಾ ಕ್ಲಬ್ ಕ್ರಿಕೆಟ್ ಮೈದಾನ (ಕೊಲಂಬೊ)
ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ (ಕ್ಯಾಂಡಿ)