Auqib Nabi Dar: ತಮ್ಮ ಮೂಲ ಬೆಲೆಯ 28 ಪಟ್ಟು ಜಾಸ್ತಿ ಮೊತ್ತ ಜೇಬಿಗಿಳಿಸಿಕೊಂಡ ಜಮ್ಮು-ಕಾಶ್ಮೀರ ವೇಗಿ!
ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. 30 ಲಕ್ಷ ಮೂಲ ಬೆಲೆ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ದಾರ್ ಬರೋಬ್ಬರಿ 8.4 ಕೋಟಿ ರು. ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ಆಕಿಬ್ ನಬಿ ದಾರ್. -
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2026 Mini Auction) ಸೀಸನ್-19ರ ಮಿನಿ ಹರಾಜಿನಲ್ಲಿ 30 ಲಕ್ಷ ಮೂಲ ಬೆಲೆ ಹೊಂದಿದ್ದ ಜಮ್ಮ ಕಾಶ್ಮೀರದ ಅನ್ ಕ್ಯಾಪ್ಡ್ ಆಟಗಾರ ಆಕಿಬ್ ನಬಿ ದಾರ್ (Auqib Nabi Dar) 8.4 ಕೋಟಿ ರು. ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪಾಲಾಗಿದ್ದಾರೆ. ಆ ಮೂಲಕ ಮೂಲ ಬೆಲೆಗಿಂತ ಅವರು 28 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದ್ದಾರೆ. ಆಕಿಬ್ ನಬಿ ದಾರ್ ಜಮ್ಮು ಕಾಶ್ಮೀರದ ವೇಗ್ ಬೌಲರ್ ಆಗಿದ್ದು, ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದೇ ಮೊದಲ ಬಾರಿ ಐಪಿಎಲ್ ಪ್ರವೇಶಿಸಲಿರುವ ಅವರು ದೇಶಿ ಕ್ರಿಕೆಟ್‌ನಲ್ಲಿ ಜಮ್ಮು ಕಾಶ್ಮೀರ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಆಕಿಬ್ ನಬಿ ಜಮ್ಮು ಮತ್ತು ಕಾಶ್ಮೀರದ ಪರ ಇಲ್ಲಿಯವೆರೆಗೆ 36 ಪ್ರಥಮ ದರ್ಜೆ ಪಂದ್ಯಗಳು, 29 ಲಿಸ್ಟ್ ಎ ಮತ್ತು 34 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟು 195 ವಿಕೆಟ್ ಕಬಳಿಸಿದ್ದಾರೆ. ಇನ್ನು 2024-25ರ ರಣಜಿ ಟ್ರೋಫಿಯಲ್ಲಿ 44 ವಿಕೆಟ್ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂದೆನಿಸಿಕೊಂಡಿದ್ದಾರೆ. 2025ರ ದುಲೀಪ್ ಟ್ರೋಫಿಯಲ್ಲಿ ನಬಿ ಪೂರ್ವ ವಲಯದ ವಿರುದ್ಧದ ಪಂದ್ಯದಲ್ಲಿ ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಕಬಳಿಸಿ ಟೂರ್ನಿಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು.
Cameron Green: ಇದೀಗ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ವಿದೇಶಿ ಆಟಗಾರ ಯಾರು ಗೊತ್ತೆ?
ಸೈಯದ್ ಮುಷ್ತಾಕ್ ಅಲಿ ಟ್ರೋಪಿಯಲ್ಲಿಯೂ ಮಿಂಚು
2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಆಕಿಬ್ ದಾರ್ ಅಸಾಧರಣ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈಡನ್ ಗಾರ್ಡನ್ಸ್‌ನಲ್ಲಿ ನೆಡೆದಿದ್ದ ಪಂದ್ಯದಲ್ಲಿ ಅವರು ಕೊನೆಯ ಬಾರಿ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಆ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಅವರು 2 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ 32 ರನ್ ಬಾರಿಸಿ ತಮ್ಮ ಬ್ಯಾಟಿಂಗ್ ಸಾಮಾರ್ಥ್ಯ ಸಾಬೀತುಪಡಿಸಿದ್ದರು.
ಬೌಲಿಂಗ್‌ನಲ್ಲೂ ಕೂಡ ಉತ್ತಮ ಪ್ರದರ್ಶನ ನೀಡಿದ್ದ ನಬಿ ತಮ್ಮ ಖೋಟಾದ ನಾಲ್ಕು ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.
Auqib Dar is all set to feature in the #TATAIPL 👌
— IndianPremierLeague (@IPL) December 16, 2025
The all-rounder joins @DelhiCapitals for INR 8.4 Crore 👏👏#TATAIPLAuction pic.twitter.com/RQ1tK7W2RF
ಪ್ರಶಾಂತ್ ವೀರ್ ಮತ್ತೊಬ್ಬ ಅನ್‌ಕ್ಯಾಪ್ಡ್ ದುಬಾರಿ ಆಟಗಾರ
30 ಲಕ್ಷ ಮೂಲ ಬೆಲೆ ಹೊಂದಿದ್ದ 20 ವರ್ಷದ ಅನ್‌ಕ್ಯಾಪ್ಡ್ ಪ್ಲೇಯರ್ ಪ್ರಶಾಂತ್ ವೀರ್ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಆರಂಭದಿಂದಲೂ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ತೀವ್ರ ಬಿಡ್ಡಿಂಗ್ ಪೈಪೋಟಿ ನಡೆಯಿತು. ಎಸ್‌ಆರ್‌ಹೆಚ್ 14 ಕೋಟಿ ರು.ಗಳ ತನಕ ಬಿಡ್ ಮಾಡಿತು. ಆದರೆ ಅಂತಿಮವಾಗಿ 14.20 ಕೋಟಿ ರು.ಗಳಿಗೆ ಪ್ರಶಾಂತ್ ವೀರ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
ಉತ್ತರ ಪ್ರದೇಶ ಮೂಲದ ಪ್ರಶಾಂತ್ ವೀರ್ ಟಿ20 ಕ್ರಿಕೆಟ್‌ಗೆ 2023ರ ಅಕ್ಟೋಬರ್‌ನಲ್ಲಿ ತಮಿಳುನಾಡು ವಿರುದ್ಧ ಪದಾರ್ಪಣೆ ಮಾಡಿದ್ದರು. ಅವರು ಈವರೆಗೆ ಟಿ20 ಕ್ರಿಕೆಟ್‌ನಲ್ಲಿ 400 ರನ್ ಬಾರಿಸಿದ್ದಾರೆ.