Vastu Tips: ಮನೆಯ ಸುಖ, ಶಾಂತಿ, ನೆಮ್ಮದಿಗೆ ಊಟದ ಕೋಣೆಯಲ್ಲಿ ಪಾಲಿಸಲೇಬೇಕು ಈ ಐದು ನಿಯಮ
ಮನೆಯ ಸುಖ ಶಾಂತಿ ನೆಮ್ಮದಿಯನ್ನು ವೃದ್ಧಿಸುವಲ್ಲಿ ಊಟದ ಕೋಣೆಯು ಪ್ರಾಮುಖ್ಯತೆಯನ್ನು ಪಡೆದಿದೆ. ರುಚಿ, ಶುಚಿಯಾದ ಖಾದ್ಯಗಳೊಂದಿಗೆ ಕೆಲವೊಂದು ನಿಯಮಗಳನ್ನು ಇಲ್ಲಿ ಪಾಲಿಸುವುದು ಮುಖ್ಯವಾಗಿರುತ್ತದೆ. ಮನೆಗೆ ಬರುವ ಅತಿಥಿಗಳು ಹಾಗೂ ಮನೆ ಮಂದಿಯ ಸಂಬಂಧಗಳ ವೃದ್ಧಿಯಲ್ಲಿ ಊಟದ ಕೋಣೆಯು ಪ್ರಭಾವ ಬೀರುತ್ತದೆ. ಇದಕ್ಕಾಗಿ ವಾಸ್ತು (Vastu Tips) ನೀಡುವ ಕೆಲವು ಸಲಹೆಗಳನ್ನು ಪಾಲಿಸುವುದು ಮುಖ್ಯವಾಗಿದೆ ಎಂಬುದು ತಿಳಿದಿರಲಿ.


ಉತ್ತಮ ಯೋಜನೆಯ ಮೂಲಕ ಮಾಡುವ ಯಾವುದೇ ಕೆಲಸವಾಗಿರಲಿ ಅದು ಸಮಸ್ಯೆಗಳು ಉಂಟು ಮಾಡುವುದಿಲ್ಲ. ಮಾಡಿದರೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ನಷ್ಟವನ್ನು ಉಂಟು ಮಾಡುತ್ತದೆ. ಮನೆಯ ನಿರ್ಮಾಣದ ವೇಳೆಯಲ್ಲೂ ಕೂಡ ಈ ಅಂಶ ನೆನಪಿನಲ್ಲಿರಲಿ. ಮನೆಯ ಪ್ರತಿಯೊಂದು ಸ್ಥಾನವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಅದರಲ್ಲೂ ಅಡುಗೆ ಮನೆ, ದೇವರ ಕೋಣೆಯಂತೆ ಇನ್ನೊಂದು ಕೊಠಡಿಯೂ ಹೆಚ್ಚು ಮಹತ್ವವನ್ನು ಹೊಂದಿದೆ. ಅದುವೇ ಊಟದ ಕೋಣೆ. ವಾಸ್ತು ಶಾಸ್ತ್ರದ ಪ್ರಕಾರ ಉತ್ತಮ ಯೋಜನೆಯ ಮೂಲಕ ನಿರ್ಮಿಸಲಾದ ಊಟದ ಕೋಣೆಯು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಊಟದ ಪ್ರದೇಶ ಕೇವಲ ಆಹಾರ ಸೇವಿಸಲು ಇರುವ ಸ್ಥಳ ಮಾತ್ರವಲ್ಲ. ಇದು ಕುಟುಂಬಗಳನ್ನು ಒಟ್ಟು ಸೇರಿಸಲು, ಸಂಬಂಧಗಳನ್ನು ಹೆಚ್ಚು ಬಲಪಡಿಸಲು, ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ಬೆಳೆಸಲು ಇರುವ ಸ್ಥಳವಾಗಿದೆ.
ಯಾವ ದಿಕ್ಕು ಸೂಕ್ತ?
ವಾಸ್ತು ಶಾಸ್ತ್ರದ ಪ್ರಕಾರ ಉತ್ತಮ ಯೋಜನೆಯಿಂದ ಮಾಡಿರುವ ಊಟದ ಕೋಣೆಯು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಊಟದ ಪ್ರದೇಶವನ್ನು ಹೆಚ್ಚು ಸಾಮರಸ್ಯದಿಂದ ಇರುವಂತೆ ಮಾಡಬೇಕು. ಇದಕ್ಕಾಗಿ ಕೆಲವು ವಾಸ್ತು ಸಲಹೆಗಳು ಇಂತಿವೆ.
ಊಟದ ಕೋಣೆಯು ಯಾವತ್ತೂ ಮನೆಯ ಪಶ್ಚಿಮ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು. ಉತ್ತರ ಅಥವಾ ದಕ್ಷಿಣ ದಿಕ್ಕುಗಳಲ್ಲಿ ಊಟದ ಸ್ಥಳಗಳನ್ನು ರೂಪಿಸಬಹುದು. ಆದರೆ ಅವು ನೈಋತ್ಯ ಮೂಲೆಯಲ್ಲಿ ಇರಬೇಕು. ಇಲ್ಲವಾದರೆ ನಕಾರಾತ್ಮಕ ಶಕ್ತಿಯ ಉದ್ಭವಕ್ಕೆ ಕಾರಣವಾಗುತ್ತದೆ. ಊಟದ ಕೋಣೆ ಅಡುಗೆಮನೆಗೆ ಹತ್ತಿರ ಅಥವಾ ಪಕ್ಕದಲ್ಲಿರಬೇಕು. ಇದು ಸುಲಭ ಪ್ರವೇಶ ಮತ್ತು ಶಕ್ತಿಯ ಹರಿವನ್ನು ಸುಗಮಗೊಳಿಸುತ್ತದೆ. ಊಟದ ಪ್ರದೇಶವನ್ನು ಮನೆಯ ಮುಖ್ಯ ದ್ವಾರದ ಮುಂದೆ ನೇರವಾಗಿ ಇಡಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ.

ಯಾವ ಮೇಜು ಒಳ್ಳೆಯದು?
ಶಕ್ತಿಯ ಹರಿವಿನ ಸಮತೋಲನ ಕಾಪಾಡಿಕೊಳ್ಳಲು ಊಟದ ಮೇಜಿನ ಆಕಾರವೂ ಕೂಡ ಕಾರಣವಾಗಿರುತ್ತದೆ. ಆಯತ ಅಥವಾ ಚೌಕಾಕಾರದ ಊಟದ ಮೇಜು ಸ್ಥಿರತೆ ಮತ್ತು ಸಮತೋಲನವನ್ನು ಉಂಟು ಮಾಡಲು ಸೂಕ್ತ ಆಯ್ಕೆಗಳಾಗಿವೆ. ವೃತ್ತ ಮತ್ತು ಅಂಡಾಕಾರದ ಮೇಜುಗಳು ಊಟಕ್ಕೆ ಸೂಕ್ತವಲ್ಲ. ಇಷ್ಟು ಮಾತ್ರವಲ್ಲದೆ ಮರದ ಮೇಜುಗಳೇ ಊಟಕ್ಕೆ ಒಳ್ಳೆಯದು. ಲೋಹ ಅಥವಾ ಗಾಜಿನ ಮೇಜುಗಳು ಮನೆಯಲ್ಲಿ ಅಶಾಂತಿಯನ್ನು ಉಂಟು ಮಾಡುತ್ತದೆ.
ಯಾರು ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು?
ಕುಟುಂಬದ ಹಿರಿಯರು ಅಥವಾ ಮುಖ್ಯಸ್ಥರು ಊಟಕ್ಕೆ ಕುಳಿತುಕೊಳ್ಳುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬೇಕು. ಇದು ಮನೆಯಲ್ಲಿ ಸಮೃದ್ಧಿಯನ್ನು ಉಂಟು ಮಾಡುತ್ತದೆ. ಮನೆ ಮಂದಿಯ ಉತ್ತಮ ಆರೋಗ್ಯಕ್ಕೂ ಇದು ಒಳ್ಳೆಯದು. ಕುಟುಂಬದ ಇತರ ಸದಸ್ಯರು ಪೂರ್ವ, ಉತ್ತರ ಅಥವಾ ಪಶ್ಚಿಮಕ್ಕೆ ಎದುರಾಗಿ ಕುಳಿತುಕೊಳ್ಳಬಹುದು. ಆದರೆ ಊಟ ಮಾಡುವಾಗ ದಕ್ಷಿಣಕ್ಕೆ ಎದುರಾಗಿ ಕುಳಿತುಕೊಳ್ಳಬಾರದು. ಯಾಕೆಂದರೆ ಈ ದಿಕ್ಕು ಅಸ್ವಸ್ಥತೆ ಅಥವಾ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎನ್ನಲಾಗುತ್ತದೆ. .
ಬಣ್ಣ ಯಾವುದಿರಬೇಕು?
ಊಟದ ಕೋಣೆಯಲ್ಲಿ ಉತ್ತಮ ಬೆಳಕಿರಬೇಕು. ಹಗಲು ಹೆಚ್ಚು ನೈಸರ್ಗಿಕ ಬೆಳಕು ಬೀಳುವಂತಿರಲಿ. ಗೋಡೆಗಳಿಗೆ ತಿಳಿ ಹಳದಿ, ಕೆನೆ ಅಥವಾ ನೀಲಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಕೊಠಡಿಯ ಉಷ್ಣತೆ ಕಾಪಾಡಲು ನೆಮ್ಮದಿಯ ಭಾವನೆಯನ್ನು ಉಂಟು ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Vastu Tips: ಮನೆಯ ವಾಸ್ತು ಸಮಸ್ಯೆಗಳಿಗೆ ಇದೆ ಸರಳ ಪರಿಹಾರ
ಕನ್ನಡಿ ಇಡಬಹುದೇ?
ಊಟದ ಕೋಣೆಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಕನ್ನಡಿಯಲ್ಲಿ ಊಟದ ಮೇಜಿನ ಪ್ರತಿಬಿಂಬ ಕಾಣಿಸಿದರೆ ಅದು ಸಮೃದ್ಧಿಯನ್ನು ಉಂಟು ಮಾಡುತ್ತದೆ. ಈ ಕನ್ನಡಿಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಅಂಶಗಳು ಕಾಣಿಸದಂತೆ ಇಡಬೇಕು ಎಂಬುದು ಗಮನದಲ್ಲಿರಲಿ.