ಕಲಬುರಗಿಯ ಚಿಂಚೋಳಿಯಲ್ಲಿ ಆಲಿಕಲ್ಲು ಮಳೆಯ ಆರ್ಭಟ; ಹಿಮಪಾತದಂತೆ ಗೋಚರಿಸಿದ ರಸ್ತೆಗಳು, ಜನಜೀವನ ಅಸ್ತವ್ಯಸ್ತ
Hailstorm wreaks havoc in Chincholi: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಾದ್ಯಂತ ಬುಧವಾರ (ಮಾ.25) ಸಂಜೆ ಸಂಭವಿಸಿದ ಭಾರಿ ಆಲಿಕಲ್ಲು ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ಮನೆಗಳ ಮೇಲ್ಛಾವಣಿ ಹಾಗೂ ಹೊಲಗದ್ದೆಗಳು ಸಂಪೂರ್ಣವಾಗಿ ಆಲಿಕಲ್ಲುಗಳಿಂದ ಆವೃತವಾಗಿತ್ತು. ಅಕಾಲಿಕವಾಗಿ ಬಂದೆರಗಿದ ಈ ಮಳೆಯಿಂದಾಗಿ ರೈತರು ಕಣ್ಣೀರಿಡುವಂತಾಗಿದೆ.
Priyanka P
Mar 26, 2026 12:15 PM
ಕಲಬುರಗಿ, ಮಾ.26: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಾದ್ಯಂತ ಬುಧವಾರ (ಮಾ.25) ಸಂಜೆ ಸಂಭವಿಸಿದ ಭಾರಿ ಆಲಿಕಲ್ಲು ಮಳೆ (Kalaburagi hailstorm) ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯ ಅಬ್ಬರಕ್ಕೆ ರಸ್ತೆಗಳ ಮೇಲೆ ಒಂದರಿಂದ ಎರಡು ಅಡಿಯಷ್ಟು ಆಲಿಕಲ್ಲುಗಳು (hailstorm) ರಾಶಿಯಾಗಿ ಬಿದ್ದಿದ್ದವು. ರಸ್ತೆಗಳು, ಮನೆಗಳ ಮೇಲ್ಛಾವಣಿ ಹಾಗೂ ಹೊಲಗದ್ದೆಗಳು ಸಂಪೂರ್ಣವಾಗಿ ಆಲಿಕಲ್ಲುಗಳಿಂದ ಆವೃತವಾಗಿದ್ದು, ನೋಡುಗರಿಗೆ ಕಾಶ್ಮೀರದಂತೆ ಗೋಚರಿಸುತ್ತಿತ್ತು. ಇದರಿಂದ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆಯೂ ಉಂಟಾಗಿತ್ತು. ಇನ್ನು ಅಕಾಲಿಕವಾಗಿ ಬಂದೆರಗಿದ ಈ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಬೆಳೆಗಳು ಮಣ್ಣುಪಾಲಾಗಿವೆ. ಆಲಿಕಲ್ಲುಗಳ ಹೊಡೆತಕ್ಕೆ ತೋಟಗಾರಿಕೆ ಬೆಳೆಗಳು ಹಾಗೂ ದ್ವಿದಳ ಧಾನ್ಯಗಳು ನೆಲಕಚ್ಚಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.