ತಾಯಿ, ಮಗುವಿನ ಆರೋಗ್ಯಕ್ಕಾಗಿ ಗರ್ಭಿಣಿಯರು ಏನು ತಿನ್ನಬೇಕು?
ತಾಯ್ತನ ಎನ್ನುವುದು ಎಷ್ಟು ಸುಂದರವೋ ಅಷ್ಟೇ ಸವಾಲುಗಳನ್ನು ಕೂಡ ತಂದೊಡ್ಡುತ್ತದೆ. ಈ ಸಂದರ್ಭದಲ್ಲಿ ನಾವು ಮಾಡುವ ಸಣ್ಣ ಪುಟ್ಟ ನಿರ್ಲಕ್ಷ್ಯಗಳು ಕೂಡ ಕೆಲವೊಮ್ಮೆ ಗಂಭೀರ ವಿಷಯಕ್ಕೆ ಕಾರಣವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಸೇವಿಸುವ ಆಹಾರದ ವಿಚಾರದಲ್ಲಿ ನಾವು ನಿರ್ಲಕ್ಷ್ಯ ಮಾಡಲೇಬಾರದು. ಸಂಪೂರ್ಣ ಪೋಷಕಾಂಶಗಳು ಉಳ್ಳ ಆಹಾರ ಈ ಸಂದರ್ಭದಲ್ಲಿ ತಾಯಿ ಮತ್ತು ಮಗುವಿಗೆ ಅವಶ್ಯಕ ಎನ್ನುತ್ತಾರೆ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್.
ಬೆಂಗಳೂರು: ಗರ್ಭಿಣಿಯರು (diet in pregnancy) ಕೇವಲ ಅನ್ನ, ಚಪಾತಿ, ಮುದ್ದೆಗೆ ಮಾತ್ರ ಆದ್ಯತೆ ಕೊಡುವಂತಿಲ್ಲ. ಸಂಪೂರ್ಣ ಪೋಷಕಾಂಶಗಳು ಉಳ್ಳ ಆಹಾರ ಸೇವನೆಗೆ (healthy diet) ಗಮನ ಹರಿಸಿದರೆ ಮಾತ್ರ ತಾಯಿ ಮತ್ತು ಮಗು ಆರೋಗ್ಯವಾಗಿ ಇರಲು ಸಾಧ್ಯ ಎನ್ನುತ್ತಾರೆ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್. ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನಮ್ಮ ಆಹಾರದಲ್ಲಿ ಪ್ರೊಟೀನ್ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಕಾರ್ಬೋಹೈಡ್ರೇಟ್ ಜಾಸ್ತಿ ಇರುತ್ತದೆ. ಆದರೆ ಪ್ರೊಟೀನ್ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಅಂಶವಾಗಿದೆ. ತಾಯಿ ಮಗುವಿನ ಆರೋಗ್ಯಕ್ಕೂ ಇದು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಇದರೊಂದಿಗೆ ಐರನ್ ಬಹಳ ಮುಖ್ಯ. ಗರ್ಭಿಣಿಯರಲ್ಲಿ ರಕ್ತದ ಪ್ರಮಾಣ ೪೦- ೫೦ರಷ್ಟು ಹೆಚ್ಚಾಗುತ್ತದೆ. ಇದಕ್ಕಾಗಿ ಆಹಾರದಲ್ಲಿ ಕಬ್ಬಿನಾಂಶ ಅತ್ಯಧಿಕವಾಗಿ ಬೇಕಾಗುತ್ತದೆ. ಇದಕ್ಕಾಗಿ ಬೆಲ್ಲ, ಖರ್ಜುರ, ರಾಗಿ ಇವುಗಳನ್ನು ಆಹಾರದಲ್ಲಿ ಸೇವಿಸಲೇಬೇಕು. ಗರ್ಭಿಣಿಯರ ಹಿಮೋಗ್ಲೋಬಿನ್ ಪ್ರಮಾಣ ಚೆನ್ನಾಗಿದ್ದರೆ ಮಗುವಿನ ತೂಕ ಕೂಡ ಇರುತ್ತದೆ. ಇನ್ನು ಕ್ಯಾಲ್ಶಿಯಂ ಹೆಚ್ಚಾಗಿರುವ ಚೀಸ್, ಹಾಲು, ರಾಗಿ, ಪಾಲಕ್, ಅರೇಂಜ್, ವಿಟಮಿನ್ ಡಿ ಇರುವ ಮೊಟ್ಟೆ,ಹಾಲು, ಚೀಸ್ ಅನ್ನು ಸೇವಿಸಬೇಕು. ಮಗುವಿನ ಬುರುಡೆ ಮತ್ತು ಸ್ಪೈನಲ್ ಬೆಳವಣಿಗೆಗೆ ಬೇಕಾಗುವ ಫೋಲಿಕ್ ಆಸಿಡ್ ಹೆಚ್ಚಾಗಿರುವ ಹಸಿರು ಸೊಪ್ಪು, ಅರೇಂಜ್, ಬೇಳೆಕಾಳುಗಳ ಸೇವನೆ ಬಹಳ ಮುಖ್ಯವಾಗಿದೆ. ಇದಕ್ಕಾಗಿ ವೈದ್ಯರು ನೀಡುವ ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಳ್ಳಲೇ ಬೇಕು ಎನ್ನುತ್ತಾರೆ ಅವರು.