Viral News: ಇಂಟರ್‌ವ್ಯೂಗೆ 25 ನಿಮಿಷ ಬೇಗ ಬಂದು ಕೆಲಸ ಕಳೆದುಕೊಂಡ ಅಭ್ಯರ್ಥಿ; ಮಾಲೀಕ ನೀಡಿದ ಕಾರಣವೇನು ನೋಡಿ
ಅಟ್ಲಾಂಟಾದ ಕಂಪನಿಯ ಮಾಲೀಕನೊಬ್ಬ ಕಚೇರಿ ನಿರ್ವಾಹಕ ಹುದ್ದೆಯ ಇಂಟರ್‌ವ್ಯೂಗೆ 25 ನಿಮಿಷ ಮುಂಚಿತವಾಗಿ ಬಂದ ಅಭ್ಯರ್ಥಿಯನ್ನು ತಿರಸ್ಕರಿಸಿದ್ದಾನೆ. ಈ ವಿಚಾರವನ್ನುಆತ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಾಂಧರ್ಬಿಕ ಚಿತ್ರ.

ಅಟ್ಲಾಂಟಾ: ಕೆಲಸ ಎಲ್ಲರಿಗೂ ಆವಶ್ಯಕ. ಇನ್ನು ಕೆಲಸದ ಸಂದರ್ಶನವೆಂದರೆ ಕೆಲವರಲ್ಲಿ ಭಯ, ಒತ್ತಡ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೆಲಸದ ಇಂಟರ್‌ವ್ಯೂ ಸಮಯದಲ್ಲಿ ಸಮಯಪ್ರಜ್ಞೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಸಂದರ್ಶನಕ್ಕೆ ಹೋಗುವುದು ತಡವಾದರೆ ಕೆಲಸ ತಪ್ಪಿಹೋಗಬಹುದು ಎಂದು ಅನೇಕ ಅಭ್ಯರ್ಥಿಗಳು ಇಂಟರ್‌ವ್ಯೂಗೆ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿಯೇ ಬರುತ್ತಾರೆ. ಆದರೆ ಇಲ್ಲೊಬ್ಬ ಮಾಲೀಕ 25 ನಿಮಿಷ ಮುಂಚಿತವಾಗಿ ಬಂದ ಅಭ್ಯರ್ಥಿಯನ್ನು ತಿರಸ್ಕರಿಸಿದ್ದಾನೆ. ಸಂದರ್ಶನಕ್ಕೆ ಬೇಗ ಬಂದಿದ್ದೇ ರಿಜೆಕ್ಟ್‌ಗೆ ಕಾರಣವಂತೆ. ಅರೆ ಮಾಲೀಕನದ್ದು ಇದೆಂಥ ಹುಚ್ಚುತನ ಎಂದು ನೀವು ಕೂಡ ಅಂದುಕೊಳ್ಳುತ್ತಿದ್ದೀರಾ? ಮಾಲೀಕ ತನ್ನ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಅಭ್ಯರ್ಥಿಯನ್ನು ರಿಜೆಕ್ಟ್ ಮಾಡಿದ ಕಾರಣವನ್ನು ಕೂಡ ವಿವರಿಸಿದ್ದಾನೆ. ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಎಲ್ಲರ ಗಮನ ಸೆಳೆದು ವೈರಲ್ (Viral News) ಆಗಿದೆ.
ಅಟ್ಲಾಂಟಾದ ದಿ ಬ್ರದರ್ಸ್ ದಟ್ ಜಸ್ಟ್ ಡು ಗಟರ್ಸ್ ಮಾಲೀಕ ಮ್ಯಾಥ್ಯೂ ಪ್ರೆವೆಟ್, ಇತ್ತೀಚೆಗೆ ಕಚೇರಿ ನಿರ್ವಾಹಕ ಹುದ್ದೆಗೆ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದಿದ್ದಾನೆ. ಆ ವೇಳೆ ಒಬ್ಬ ಅಭ್ಯರ್ಥಿ ನಿಗದಿಪಡಿಸಿದ ಸಂದರ್ಶನ ಸಮಯಕ್ಕಿಂತ 25 ನಿಮಿಷ ಮುಂಚಿತವಾಗಿ ಬಂದಿದ್ದಾನೆ. ಆದರೆ ಮಾಲೀಕ ಮ್ಯಾಥ್ಯೂ ಅವನನ್ನು ತಿರಸ್ಕರಿಸಿದ್ದಾನೆ.
ಕಾರಣವೇನು?
ಹಾಗೇ ಆತನನ್ನು ಯಾಕೆ ನೇಮಿಸಿಕೊಳ್ಳಲಿಲ್ಲ ಎಂಬುದಕ್ಕೆ ಕಾರಣವನ್ನು ಪೋಸ್ಟ್‌ನಲ್ಲಿ ತಿಳಿಸಿದ್ದಾನೆ. ಅದೇನೆಂದರೆ, ನಿಗದಿಪಡಿಸಿದ ಸಮಯಕ್ಕಿಂತ ಸ್ವಲ್ಪ ಮೊದಲೇ ಬರುವುದು ಒಳ್ಳೆಯದು. ಆದರೆ ತುಂಬಾ ಬೇಗನೆ ಬರುವುದು ಅವರಲ್ಲಿರುವ ನಕರಾತ್ಮಕತೆಯನ್ನು ಸೂಚಿಸುತ್ತದೆ. ಸಂದರ್ಶನಕ್ಕೆ ಸುಮಾರು ಹತ್ತು ನಿಮಿಷಗಳ ಮೊದಲು ಕಚೇರಿಯಲ್ಲಿರಬೇಕೆಂದು ನಿಗದಿಪಡಿಸಿದ್ದರೂ ಕೂಡ ಆ ವ್ಯಕ್ತಿ ಒತ್ತಡಕ್ಕೆ ಒಳಗಾಗಿ ಬಹಳ ಬೇಗನೆ ಕಚೇರಿಗೆ ಬಂದಿದ್ದಾನೆ. ಅವನಲ್ಲಿ ಸಮಯ ನಿರ್ವಹಣೆ ಗುಣ ಉತ್ತಮವಾಗಿಲ್ಲ ಎಂದು ಹೇಳಿದ್ದಾನೆ. ಅವನ ಪೋಸ್ಟ್ ಎಲ್ಲರ ಗಮನ ಸೆಳೆದಿದೆ ಮತ್ತು ಇದಕ್ಕೆ ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ರೈಲ್ವೇ ಸಿಬ್ಬಂದಿ ಮತ್ತು ಪ್ರಯಾಣಿಕನ ನಡುವೆ ಭಾರೀ ಜಗಳ- ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಕಾಮೆಂಟ್ ವಿಭಾಗದಲ್ಲಿ, ಅನೇಕ ಸೋಶಿಯಲ್ ಮಿಡಿಯಾ ನೆಟ್ಟಿಗರು ಪ್ರೆವೆಟ್‌ನ ಈ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬರು, “ಕೆಲವರು ಬಸ್‍ನಲ್ಲಿ ಬರಬೇಕಾಗುತ್ತದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಿಲ್ಲ ಎಂದು ಕೆಲವರು ಮುಂಚಿತವಾಗಿ ಹೊರಡುತ್ತಾರೆ” ಎಂದಿದ್ದಾರೆ. ಇನ್ನೊಬ್ಬರು "ಅವರು ತಿರಸ್ಕರಿಸಲ್ಪಟ್ಟಿದ್ದಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಯಾಕೆಂದರೆ ಸಂದರ್ಶನ ಪ್ರಕ್ರಿಯೆಯು ಕಂಪನಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅಭ್ಯರ್ಥಿಗಳನ್ನು ಮೌಲ್ಯಮಾಪನ ಮಾಡುವ ಈ ವಿಧಾನವು ಹಾಸ್ಯಾಸ್ಪದವಾಗಿದೆ" ಎಂದು ಹಂಚಿಕೊಂಡಿದ್ದಾರೆ. ಇದರ ಜತೆಗೆ ಕೆಲವರು ಪ್ರೆವೆಟ್ ತರ್ಕವನ್ನು ಬೆಂಬಲಿಸಿದ್ದಾರೆ.