Viral Video: ಪ್ರಾಣವನ್ನೇ ಪಣಕ್ಕಿಟ್ಟು ಹೊತ್ತಿ ಉರಿಯುತ್ತಿದ್ದ ಟ್ರಕ್ ಮುನ್ನಡೆಸಿದ ವ್ಯಕ್ತಿ; ಈತನ ಸಾಹಸದಿಂದ ತಪ್ಪಿತು ಭಾರಿ ದುರಂತ
ಪೆಟ್ರೋಲ್ ಬಂಕ್ ಬಳಿ ಟ್ರಕ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಾಗ ವ್ಯಕ್ತಿಯೊಬ್ಬ ವೀರಾವೇಶದಿಂದ ಕಾರ್ಯಾಚರಣೆ ನಡೆಸಿ, ಆಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಈ ಮೂಲಕ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಾರ್ವಜನಿಕರ ಜೀವವನ್ನು ರಕ್ಷಿಸಿದ್ದಾನೆ. ಸದ್ಯ ಘಟನೆಯ ವಿಡಿಯೊ ವೈರಲ್ ಆಗಿದೆ.


ರಿಯಾದ್: ಪೆಟ್ರೋಲ್ ಬಂಕ್ ಬಳಿ ಟ್ರಕ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಾಗ ವ್ಯಕ್ತಿಯೊಬ್ಬ ವೀರಾವೇಶದಿಂದ ಕಾರ್ಯಾಚರಣೆ ನಡೆಸಿ, ಆಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಸೌದಿ ಅರೇಬಿಯಾದ ರಿಯಾದ್‍ನ ದವಾದ್ಮಿಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.
ಪಶು ಆಹಾರ ತುಂಬಿದ್ದ ಟ್ರಕ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಸಂಭಾವ್ಯ ಅನಾಹುತವು ಸ್ವಲ್ಪದರಲ್ಲೇ ತಪ್ಪಿದೆ. ಮಹೇರ್ ಫಹದ್ ಅಲ್ ದಲ್ಬಾಹಿ ಎಂಬ ವ್ಯಕ್ತಿಯು ಕೂಡಲೇ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಟ್ರಕ್‌ಗೆ ಹಾರಿ, ಡ್ರೈವಿಂಗ್ ಸೀಟ್‍ನಲ್ಲಿ ಕುಳಿತಿದ್ದಾನೆ. ತಡಮಾಡದ ಆತ ಟ್ರಕ್ ಅನ್ನು ಪೆಟ್ರೋಲ್ ಬಂಕ್‌ನಿಂದ ದೂರ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ. ಮೈ ಜುಮ್ಮೆನ್ನಿಸುವ ಈ ದೃಶ್ಯವನ್ನು ಅಲ್ಲಿದ್ದ ಜನರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಈ ದೃಶ್ಯದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಲ್ ದಲ್ಬಾಹಿ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಟ್ರಕ್ ಮೇಲೆ ಹಾರಿ ಅದನ್ನು ಪೆಟ್ರೋಲ್ ಬಂಕ್‍ನಿಂದ ದೂರವಿಟ್ಟ ತ್ವರಿತ ಚಿಂತನೆ ಮತ್ತು ಧೈರ್ಯವನ್ನು ಅನೇಕರು ಶ್ಲಾಘಿಸಿದ್ದಾರೆ. ಟ್ರಕ್ ಚಾಲಕ ಅಪಾಯದ ಕಾರಣ ವಾಹನವನ್ನು ಬಿಟ್ಟು ಓಡಿದ್ದ. ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದ್ದರಿಂದ ದೊಟ್ಟ ಮಟ್ಟದ ಅಪಾಯ ಸಂಭವಿಸಬಹುದಿತ್ತು. ಅದೃಷ್ಟವಶಾತ್ ಯುವಕನ ಸಾಹಸದಿಂದ ಆಗಬಹುದಾಗಿದ್ದ ಅಪಾಯ ತಪ್ಪಿದೆ.
ವಿಡಿಯೊ ವೀಕ್ಷಿಸಿ:
Saudi man puts life on the line to save lives
— RT (@RT_com) August 18, 2025
Maher Fahd Al Dalbahi selflessly leapt into flaming truck, steering it away from a Riyadh gas station
Its driver reportedly fled, fearing deadly explosion
Maher now suffers 'SEVERE 1st, 2nd-degree burns'
Some heroes wear Keffiyehs pic.twitter.com/Sxmb4xZpjj
“ನಾನು ನನ್ನ ಹಳ್ಳಿಯಾದ ಅಲ್ ಸಾಲಿಹಿಯಾಗೆ ಹೋಗುತ್ತಿದ್ದಾಗ, ಹತ್ತಿರದ ಅಂಗಡಿಯೊಂದರಲ್ಲಿ ಕಾರು ನಿಲ್ಲಿಸಿದೆ. ಈ ವೇಳೆ ಟ್ರಕ್ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದೆ. ಪೆಟ್ರೋಲ್ ಬಂಕ್ ಮತ್ತು ಜನರ ಜೀವ ಕಾಪಾಡುವುದೊಂದೇ ನನ್ನ ಯೋಚನೆಯಾಗಿತ್ತು. ನಾನು ಉರಿಯುತ್ತಿದ್ದ ಟ್ರಕ್ ಮೇಲೆ ಹತ್ತಿ ಅದನ್ನು ದೂರಕ್ಕೆ ಓಡಿಸಿದೆ” ಎಂದು ಅಲ್ ದಲ್ಬಾಹಿ ಆ ಕ್ಷಣವನ್ನು ವಿವರಿಸಿದರು.
“ನನ್ನ ಮಾವ ತಮ್ಮ ಕಾರಿನಿಂದ ಇಳಿದು ಟ್ರಕ್ ಬಳಿಗೆ ಓಡಿದರು. ಅವರು ಅದನ್ನು ಎಳೆದ ತಕ್ಷಣ, ಬೆಂಕಿ ಮುಂಭಾಗಕ್ಕೆ ವ್ಯಾಪಿಸಿತು. ಚಾಲಕನ ಬದಿಯ ಬಾಗಿಲು ತೆರೆದಿತ್ತು. ಅವರ ಮುಖದ ಮೇಲೆ ಮೂರನೇ ಹಂತದ ಸುಟ್ಟ ಗಾಯಗಳಾಗಿವೆ. ಅವರ ಕೈಗಳು ಮತ್ತು ಕಾಲುಗಳಿಗೂ ಸುಟ್ಟ ಗಾಯಗಳಾಗಿವೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಅವರು ನಗುತ್ತಾ ನಮ್ಮೊಂದಿಗೆ ಮಾತನಾಡುತ್ತಿದ್ದಾರೆ” ಎಂದು ಅವರ ಸೋದರಳಿಯ 31 ವರ್ಷದ ಖಾಲಿದ್ ಈದ್ ಅಲ್-ಒತೈಬಿ ಹೇಳಿದ್ದಾರೆ.
ರಿಯಾದ್‌ನ ಉಪ ಗವರ್ನರ್ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅವರು ಅಲ್-ದಲ್ಬಾಹಿಗೆ ವೈಯಕ್ತಿಕವಾಗಿ ಕರೆ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಅವರಿಗೆ ಅತ್ಯುನ್ನತ ಮಟ್ಟದ ಆರೈಕೆಯನ್ನು ನೀಡುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Viral Video: ಎಂಜಿನಿಯರ್‌ಗೆ ಶೂನಿಂದ ಥಳಿಸಿದ ಬಿಜೆಪಿ ಕಾರ್ಯಕರ್ತ; ಶಾಕಿಂಗ್ ವಿಡಿಯೊ ವೈರಲ್