ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 2 ತಿಂಗಳ ಮಗುವಿಗೆ ತುರ್ತು ಇಂಜೆಕ್ಷನ್ ನೀಡಲು ಪ್ರಾಣವನ್ನೇ ಪಣಕ್ಕಿಟ್ಟು ಹೊಳೆ ದಾಟಿದ ನರ್ಸ್; ಇಲ್ಲಿದೆ ವೈರಲ್ ವಿಡಿಯೊ

ಅನಾರೋಗ್ಯ ಪೀಡಿತ ಮಗುವನ್ನು ಕಾಪಾಡಲು ತನ್ನ ಜೀವವನ್ನು ಪಣಕ್ಕಿಟ್ಟು, ತುಂಬಿ ಹರಿಯುತ್ತಿರುವ ಹೊಳೆ ದಾಟಿದ ದಾದಿಯೊಬ್ಬರ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿರಂತರ ಸುರಿದ ಭಾರಿ ಮಳೆಯಿಂದಾಗಿ ಪಾದಚಾರಿ ಸೇತುವೆಗಳು ಕೊಚ್ಚಿ ಹೋಗಿರುವುದರಿಂದ ಹೊಳೆ ದಾಟುವುದು ಬಿಟ್ಟು ಬೇರೆ ದಾರಿ ಇರಲಿಲ್ಲ.

ಮಗುವಿನ ಪ್ರಾಣ ರಕ್ಷಣೆಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟ ದಾದಿ

Priyanka P Priyanka P Aug 24, 2025 10:07 PM

ಶಿಮ್ಲಾ: ಅನಾರೋಗ್ಯ ಪೀಡಿತ ಮಗುವನ್ನು ಕಾಪಾಡಲು ತನ್ನ ಜೀವವನ್ನು ಪಣಕ್ಕಿಟ್ಟು, ತುಂಬಿ ಹರಿಯುತ್ತಿರುವ ಹೊಳೆ ದಾಟಿದ ದಾದಿಯೊಬ್ಬರ (Nurse) ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಹಿಮಾಚಲ ಪ್ರದೇಶದ (Himachal Pradesh) ಮಂಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುಧಾರ್ ಪಂಚಾಯತ್ ವ್ಯಾಪ್ತಿಯ ಚೌಹರ್ಘಾಟಿಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎದುರಿಸುತ್ತಿರುವ ಅಪಾಯಗಳ ಬಗ್ಗೆ ಈ ವಿಡಿಯೊ ಕಳವಳ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ದಾದಿಯ ಧೈರ್ಯದ ಬಗ್ಗೆಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಟಿಕ್ಕರ್ ಗ್ರಾಮದ ನಿವಾಸಿ ಸ್ಟಾಫ್ ನರ್ಸ್ ಕಮಲಾ, ತುಂಬಿ ಹರಿಯುತ್ತಿರುವ ಹೊಳೆಯನ್ನು ಎಚ್ಚರಿಕೆಯಿಂದ ದಾಟಿದ್ದಾರೆ. ಹೊಳೆ ಉಕ್ಕಿ ಹರಿಯುತ್ತಿದ್ದು, ಅಪ್ಪಿ ತಪ್ಪಿ ಬಿದ್ದರೆ ಕೊಚ್ಚಿ ಹೋಗುವುದು ಪಕ್ಕಾ. ಆದರೂ ಧೃತಿಗೆಡದ ದಾದಿ ಕಮಲಾ ಎಂಬುವವರು ತನ್ನ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ಕಲ್ಲುಗಳ ಮೇಲೆ ಹಾರುತ್ತಾ ಹೊಳೆ ದಾಟಿದ್ದಾರೆ.

ಈ ಘಟನೆಯ ಬಗ್ಗೆ ಮಾತನಾಡಿದ ಕಮಲಾ, ''ಸುಧಾರ್ ಪಂಚಾಯತ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುತ್ತಿದ್ದಾಗ ಎರಡು ತಿಂಗಳ ಮಗುವಿಗೆ ಇಂಜೆಕ್ಷನ್ ನೀಡಲು ತುರ್ತು ಕರೆ ಬಂದಿತು'' ಎಂದು ಹೇಳಿದರು. ನಿರಂತರ ಸುರಿದ ಭಾರಿ ಮಳೆಯಿಂದಾಗಿ ಪಾದಚಾರಿ ಸೇತುವೆಗಳು ಕೊಚ್ಚಿ ಹೋಗಿರುವುದರಿಂದ ಹೊಳೆ ದಾಟುವುದು ಬಿಟ್ಟು ಬೇರೆ ದಾರಿಯಿರಿಲಿಲ್ಲ. ಹೀಗಾಗಿ ಅಪಾಯದ ಹೊರತಾಗಿಯೂ, ಕಮಲಾ ತುಂಬಿ ಹರಿಯುತ್ತಿದ್ದ ಹೊಳೆಯನ್ನು ದಾಟಿ ಶಿಶುವಿನ ರಕ್ಷಣೆಗೆ ಮುಂದಾಗಿದ್ದಾರೆ.

ವಿಡಿಯೊ ವೀಕ್ಷಿಸಿ:



ದಾದಿಯು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಶಿಶುವನ್ನು ರಕ್ಷಿಸಲು ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯ ಎಂದು ಸ್ಥಳೀಯರು ಹೇಳಿದ್ದಾರೆ. ಕೆಲವೊಮ್ಮೆ ತುಂಬಿ ಹರಿಯುವ ಹೊಳೆ ದಾಟುವಾಗ ದುರಂತ ಸಂಭವಿಸಿದ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಇತ್ತೀಚೆಗೆ, ಸೆರಾಜ್‌ನಲ್ಲಿ ಇದೇ ರೀತಿಯ ಹೊಳೆಯನ್ನು ದಾಟುವಾಗ ಒಬ್ಬ ವ್ಯಕ್ತಿ ಮತ್ತು ಮಹಿಳೆ ಕೊಚ್ಚಿ ಹೋಗಿದ್ದರು. ನಂತರ ಅವರನ್ನು ರಕ್ಷಿಸಲಾಯಿತು. ಮತ್ತೊಂದು ಘಟನೆಯಲ್ಲಿ, ತುಂಬಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದರು.

ಮಂಡಿಯಲ್ಲಿ ಪದ್ದಾರ್ ಉಪವಿಭಾಗದ ಚೌಹಾರ್ ಕಣಿವೆ ಪ್ರದೇಶವು ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಭಾರಿ ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದ್ದು, ಸಿಲ್ಬುಧಾನಿ ಮತ್ತು ತಾರ್ಸ್ವಾನ್ ಪಂಚಾಯತ್‌ಗಳಲ್ಲಿ ರಸ್ತೆಗಳು ಮತ್ತು ಪಾದಚಾರಿ ಸೇತುವೆಗಳು ಕೊಚ್ಚಿ ಹೋಗಿವೆ.

ದಾದಿ ಕಮಲಾ ಅವರ ಈ ಧೈರ್ಯವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದ್ದರೂ, ವೈರಲ್ ಆದ ಈ ವಿಡಿಯೊ ಮುಂಚೂಣಿ ಕಾರ್ಯಕರ್ತರಿಗೆ ಮೂಲಸೌಕರ್ಯ ಮತ್ತು ಸುರಕ್ಷತೆಯ ಕೊರತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನೇಕ ಬಳಕೆದಾರರು ಆಕೆಯ ಸಮರ್ಪಣೆಯನ್ನು ಶ್ಲಾಘಿಸಿದರು. ಆದರೆ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಕರ್ತವ್ಯವನ್ನು ನಿರ್ವಹಿಸಲು ಯಾರೂ ತಮ್ಮ ಪ್ರಾಣವನ್ನೇ ಪಣಕ್ಕಿಡಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಎಂಜಿನಿಯರ್‌ಗೆ ಶೂನಿಂದ ಥಳಿಸಿದ ಬಿಜೆಪಿ ಕಾರ್ಯಕರ್ತ; ಶಾಕಿಂಗ್‌ ವಿಡಿಯೊ ವೈರಲ್