Raichur News: ಅಸಭ್ಯ ವರ್ತನೆ ತೋರಿದವನ ಕಣ್ಣಿಗೆ ಖಾರದ ಪುಡಿ ಎರಚಿ, ಧರ್ಮದೇಟು ಕೊಟ್ಟ ಮಹಿಳೆ! Video
ರಾಯಚೂರಿನ ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಅನುಚಿತ ವರ್ತನೆ ತೋರಿದ್ದಾನೆ ಎಂದು ವ್ಯಕ್ತಿಯೊಬ್ಬನ ಕಣ್ಣಿಗೆ ಮಹಿಳೆ ಖಾರದ ಪುಡಿ ಎರಚಿ, ಧರ್ಮದೇಟು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಯಚೂರಿನಲ್ಲಿ ವ್ಯಕ್ತಿಯನ್ನು ಥಳಿಸುತ್ತಿರುವ ಮಹಿಳೆ. -
ರಾಯಚೂರು: ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಬಾರಿಸಿರುವ ಘಟನೆ ರಾಯಚೂರು ಬಸ್ ನಿಲ್ದಾಣದಲ್ಲಿ (Raichur News) ನಡೆದಿದೆ. ಚುಡಾಯಿಸಲು ಬಂದವನ ಕಣ್ಣಿಗೆ ಮಹಿಳೆಯು ಖಾರದ ಪುಡಿ ಎರಚಿ, ಧರ್ಮದೇಟು ನೀಡಿದ್ದು, ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನಿದು ಘಟನೆ?
ರಾಯಚೂರು ಬಸ್ ನಿಲ್ದಾಣದ ಆವರಣದಲ್ಲಿ ರಾಜು ಬೊಮ್ಮನಾಳ ಎಂಬಾತ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿ, ಚುಡಾಯಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ, ಆತನ ಕಿರುಕುಳಕ್ಕೆ ಹೆದರಿ ಓಡಿಹೋಗದೆ ತಕ್ಕ ಪಾಠ ಕಲಿಸಿದ್ದಾರೆ. ಪಕ್ಕದಲ್ಲೇ ಇದ್ದ ಹೋಟೆಲ್‌ಗೆ ಓಡಿದ ಮಹಿಳೆ, ಅಲ್ಲಿಂದ ಖಾರದ ಪುಡಿಯನ್ನು ತಂದು ಯಾರಿಗೂ ತಿಳಿಯದಂತೆ ರಾಜು ಬೊಮ್ಮನಾಳನ ಕಣ್ಣಿಗೆ ನೇರವಾಗಿ ಎರಚಿದ್ದಾರೆ.
ಖಾರದ ಪುಡಿಯ ಉರಿಯಿಂದಾಗಿ ಆತ ಕಣ್ಣು ಕಾಣಿಸದೆ ಒದ್ದಾಡುತ್ತಿದ್ದಂತೆ, ಅಲ್ಲೇ ಬಿದ್ದಿದ್ದ ಕಟ್ಟಿಗೆಯನ್ನು ಕೈಗೆತ್ತಿಕೊಂಡ ಮಹಿಳೆ ಆತನಿಗೆ ಧರ್ಮದೇಟು ನೀಡಿದ್ದಾರೆ. ತಪ್ಪು ಮಾಡಿದ ವ್ಯಕ್ತಿಗೆ ತಕ್ಕ ಪಾಠ ಕಲಿಸಿದ ಗಟ್ಟಿಗಿತ್ತಿಯ ಧೈರ್ಯವನ್ನು ಅಲ್ಲಿದ್ದವರು ಮೆಚ್ಚಿಕೊಂಡಿದ್ದಾರೆ.
Bengaluru Digital Arrest: ಬೆಂಗಳೂರಿನ ವೃದ್ಧೆಗೆ ಡಿಜಿಟಲ್ ಅರೆಸ್ಟ್; 98.40 ಲಕ್ಷ ದೋಚಿದ ಸೈಬರ್ ವಂಚಕರು!
ಇದೇ ವೇಳೆ ಸ್ಥಳದಲ್ಲಿದ್ದ ಕೆಲವರು ಜಗಳ ಬಿಡಿಸಲು ಬಂದಾಗ ತೀವ್ರ ಆಕ್ರೋಶದಲ್ಲಿದ್ದ ಮಹಿಳೆ, "ನನ್ನ ಮೇಲೆ ಯಾರಾದರೂ ಬೇಕಿದ್ದರೆ ಪೊಲೀಸ್ ಕೇಸ್ ಹಾಕಲಿ, ಆದರೆ ಇವನನ್ನು ಮಾತ್ರ ನಾನು ಸುಮ್ಮನೆ ಬಿಡಲ್ಲ" ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ. ಈ ಇಡೀ ಹಲ್ಲೆಯ ಘಟನೆಯು ರಾಯಚೂರಿನ ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.