ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ZIM: ವೈಭವ್‌ ಸೂರ್ಯವಂಶಿ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ತಿಳಿಸಿದ ವಿವಿಎಸ್‌ ಲಕ್ಷ್ಮಣ್‌!

IND vs ZIM: ಭಾರತ ಕ್ರಿಕೆಟ್‌ ತಂಡದ ಹಂಗಾಮಿ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿ ಆರಂಭ ಪಡೆದಿದ್ದರೂ ವೈಭವ್ ಸೂರ್ಯವಂಶಿ ಇನ್ನೂ ಒಂದು ಪ್ರಮುಖ ಅಂಶದಲ್ಲಿ ಸುಧಾರಿಸಬೇಕಿದೆ ಎಂದು ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸೂರ್ಯವಂಶಿ ತಮ್ಮ ಆಕರ್ಷಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ವೈಭವ್‌ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ತಿಳಿಸಿದ ವಿವಿಎಸ್‌ ಲಕ್ಷ್ಮಣ್‌!

-

Profile
Ramesh Kote Jul 27, 2026 10:03 PM

ನವದೆಹಲಿ: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ (Vaibhav Sooryavnshi) ಒಟ್ಟು 151 ರನ್‌ಗಳನ್ನು ಕಲೆಹಾಕಿ 'ಪ್ಲೇಯರ್ ಆಫ್ ದ ಸೀರೀಸ್' ಪ್ರಶಸ್ತಿಗೆ ಭಾಜನರಾದರು. ಎಡಗೈ ಬ್ಯಾಟರ್ ಮೊದಲ ಪಂದ್ಯದಲ್ಲೇ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಭರ್ಜರಿ ಆರಂಭ ಪಡೆದಿದ್ದರು. ಎರಡನೇ ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಿಸಲು ವಿಫಲವಾದರೂ, ಮೂರನೇ ಪಂದ್ಯದಲ್ಲಿ 49 ಎಸೆತಗಳಲ್ಲಿ 81 ರನ್‌ಗಳ ಸ್ಫೋಟಕ ಇನಿಂಗ್ಸ್‌ ಆಡಿದರು. ಕೇವಲ 15 ವರ್ಷದ ಸೂರ್ಯವಂಶಿ ತಮ್ಮ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಕ್ಕಾಗಿ 'ಪ್ಲೇಯರ್ ಆಫ್ ದ ಮ್ಯಾಚ್' ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡರು. ಆದರೂ ಯುವ ಬ್ಯಾಟ್ಸ್‌ಮನ್‌ ತಮ್ಮ ಆಟದಲ್ಲಿ ಸುಧಾರಿಸಿಕೊಳ್ಳಬೇಕಾದ ಅಂಶವನ್ನು ಹಂಗಾಮಿ ಹೆಡ್‌ ಕೋಚ್‌ ವಿವಿಎಸ್‌ ಲಕ್ಷ್ಮಣ್‌ (VVS Laxman) ಬಹಿರಂಗಪಡಿಸಿದ್ದಾರೆ.

ಸರಣಿ ಮುಕ್ತಾಯದ ಬಳಿಕ ಮಾತನಾಡಿದ ಭಾರತದ ತಾತ್ಕಾಲಿಕ ಮುಖ್ಯ ಕೋಚ್ ವಿವಿಎಸ್ ಲಕ್ಷ್ಮಣ್, ಸೂರ್ಯವಂಶಿಯ ಪ್ರಬುದ್ಧತೆ ಮತ್ತು ಪ್ರದರ್ಶನವನ್ನು ಶ್ಲಾಘಿಸಿದರು. ಆದರೆ, ಅವರು ಇನ್ನೂ ಒಂದು ಕ್ಷೇತ್ರದಲ್ಲಿ ಸುಧಾರಿಸಬೇಕಿದೆ ಎಂದು ತಿಳಿಸಿದರು.

"ಅವರು ಸುಧಾರಿಸಬೇಕಾದ ಪ್ರಮುಖ ಅಂಶವೆಂದರೆ ಅವರ ಒಟ್ಟಾರೆ ಫಿಟ್ನೆಸ್. ಅವರು ಇನ್ನೂ ತುಂಬಾ ಚಿಕ್ಕ ವಯಸ್ಸಿನ ಆಟಗಾರ. ಆಟದ ಪ್ರತಿಯೊಂದು ವಿಭಾಗದಲ್ಲೂ ಇನ್ನಷ್ಟು ಉತ್ತಮವಾಗಬೇಕೆಂಬ ಆಸೆ ಅವರಲ್ಲಿದೆ. ಇಂದೂ ಕ್ಯಾಚ್ ಪಡೆಯುವ ವೇಳೆ ಗಾಯಗೊಂಡರೂ ಮೈದಾನದಲ್ಲೇ ಉಳಿದು ಆಡಲು ಬಯಸಿದರು. ಆದರೆ ನಮ್ಮ ಫಿಸಿಯೊ ಅವರನ್ನು ಹೊರಗೆ ಬರಲು ಸೂಚಿಸಿದರು. ತಂಡಕ್ಕೆ ಸಾಧ್ಯವಾದ ಪ್ರತಿಯೊಂದು ರೀತಿಯಲ್ಲೂ ಕೊಡುಗೆ ನೀಡಬೇಕೆಂಬ ಅವರ ಉತ್ಸಾಹ ಮತ್ತು ಬದ್ಧತೆ ಶ್ಲಾಘನೀಯ," ಎಂದು ಲಕ್ಷ್ಮಣ್ ಹೇಳಿದ್ದಾರೆ.

IND vs ZIM: ವೈಭವ್‌ ಸೂರ್ಯವಂಶಿಯಿಂದ ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾ ಸ್ಥಾನಕ್ಕೆ ಕುತ್ತು?

2026ರ ಏಷ್ಯನ್ ಗೇಮ್ಸ್‌ನಲ್ಲಿಯೂ ವಿವಿಎಸ್ ಲಕ್ಷ್ಮಣ್ ಮತ್ತೊಮ್ಮೆ ವೈಭವ್ ಸೂರ್ಯವಂಶಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ. ಆ ಟೂರ್ನಿಯಲ್ಲಿ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಪ್ರಸ್ತುತ ಲಕ್ಷ್ಮಣ್ ಅವರು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾಗಿದ್ದು, ಪೂರ್ಣಾವಧಿ ಮುಖ್ಯ ಕೋಚ್ ಲಭ್ಯವಿಲ್ಲದ ಸಂದರ್ಭಗಳಲ್ಲಿ ಮಾತ್ರ ಭಾರತ ತಂಡದ ಕೋಚಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ.

ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಅವರು ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮತ್ತೆ ತಂಡಕ್ಕೆ ಸೇರಲಿದ್ದಾರೆ.

IND vs ZIM: ಅಭಿಷೇಕ್‌ ಶರ್ಮಾಗೆ ಒಂದು ನ್ಯಾಯ, ಸಂಜುಗ ಒಂದ್ಯ ನ್ಯಾಯವೇ? ಹನುಮ ವಿಹಾರಿ ಪ್ರಶ್ನೆ!

ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಭಾರತಕ್ಕೆ ಮೊದಲ ಜಯ

ಜಿಂಬಾಬ್ವೆ ವಿರುದ್ಧದ ಸರಣಿ ಗೆಲುವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತಕ್ಕೆ ದೊರೆತ ಮೊದಲ ಸರಣಿ ಜಯವಾಗಿದೆ. ಅಯ್ಯರ್ ನಾಯಕತ್ವದಲ್ಲಿ ಭಾರತ ಆರಂಭದಲ್ಲಿ ನಿರಾಸೆ ಅನುಭವಿಸಿತ್ತು. ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಿಂದ ವೈಟ್‌ವಾಶ್ ಆಗಿದ್ದ ಭಾರತ, ಬಳಿಕ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನೂ 4-0 ಅಂತರದಿಂದ ಕಳೆದುಕೊಂಡಿತ್ತು.

ಜಿಂಬಾಬ್ವೆ ವಿರುದ್ಧದ ಸರಣಿ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ಇದೀಗ 2026ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಿದೆ. ಈ ಟೂರ್ನಿಯಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ತಂಡದ ಭಾಗವಾಗಲಿದ್ದಾರೆ.