ನವದೆಹಲಿ, ಜ. 29: ಜೀವನವು ನಾವು ಅಂದುಕೊಂಡಂತೆ ಇರುವುದಿಲ್ಲ. ನಾವು ಕಾಣು ಎಲ್ಲ ಕನಸು ನೆರವೇರುತ್ತದೆ ಎನ್ನಲು ಸಾಧ್ಯವಿಲ್ಲ. ಕೆಲವೊಮ್ಮೆ ಜವಾಬ್ದಾರಿಗಳು, ಹಣದ ಸಮಸ್ಯೆ ಹೀಗೆ ನಾನಾ ಕಾರಣದಿಂದ ಕನಸು ಕೂಡ ಭಗ್ನವಾಗುತ್ತವೆ. ಆದರೂ ಎಂತಹ ಕ್ಷಣದಲ್ಲಿಯೂ ಕೆಲವರು ತಮ್ಮ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಶಾಲೆಯಲ್ಲಿ ಓದಿನಲ್ಲಿ ಮುಂದಿದ್ದ ಹಾಗೂ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಯುವಕನೊಬ್ಬ ಈಗ ಪಿಜ್ಜಾ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದಾನೆ. ಇದನ್ನು ಕಂಡು ಮೆಚ್ಚುವ ಬದಲು, ಆತನ ಹಳೆಯ ಸಹಪಾಠಿ ಆತನ ಪರಿಸ್ಥಿತಿಯನ್ನು ಅಪಹಾಸ್ಯ ಮಾಡಿರುವ ವಿಡಿಯೊ ವೈರಲ್ (Viral Video) ಆಗಿದೆ. ಯುವತಿಯ ವಿರುದ್ಧ ಸೋಶಿಯಲ್ ಮೀಡಿಯಾ ಬಳಕೆದಾರರು ಗರಂ ಆಗಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲೊ ಪಿಜ್ಜಾ ಡೆಲಿವರಿ ಹುಡುಗನೊಬ್ಬ ಸ್ನೇಹಿತೆಯನ್ನು ಬೀದಿಯಲ್ಲಿ ಭೇಟಿ ಯಾಗುತ್ತಿರುವುದನ್ನು ತೋರಿಸಲಾಗಿದೆ. ವಿಡಿಯೊ ರೆಕಾರ್ಡ್ ಮಾಡಿದ ಅವಳು, "ನೀವು ಶಾಲೆಯಲ್ಲಿ ಎಲ್ಲರನ್ನೂ ಪ್ರೇರೇಪಿಸುತ್ತಿದ್ರಿ. ಆದರೆ ಈಗ ನೀವು ಪಿಜ್ಜಾವನ್ನು ತಲುಪಿಸುತ್ತಿದ್ದೀರಾ?" ಎಂದು ಕೇಳಿದ್ದಾಳೆ. ಆತ ಕೆಲಸದ ಸಮವಸ್ತ್ರದಲ್ಲಿರುವುದನ್ನು ಕಂಡ ಕೂಡಲೇ ಮೊಬೈಲ್ ಕ್ಯಾಮರಾ ಆನ್ ಮಾಡಿ ಆಕೆ ವ್ಯಂಗ್ಯವಾಗಿ ಮಾತನಾಡಿದ್ದಾಳೆ.
ವಿಡಿಯೊ ನೋಡಿ:
ʼʼನೋಡಿ, ಇವನು ನನ್ನ ಹಳೆಯ ಸ್ನೇಹಿತ. ಶಾಲೆಯಲ್ಲಿದ್ದಾಗ ನಮಗೆಲ್ಲರಿಗೂ ಸ್ಫೂರ್ತಿದಾಯಕ ಮಾತುಗಳನ್ನು ಹೇಳುತ್ತಿದ್ದ. ಈಗ ಈತನಿಗೆ 30 ವರ್ಷ. ಇಂದು ಪಿಜ್ಜಾ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದಾನೆʼʼ ಎಂದು ಆಕೆ ವಿಡಿಯೊದಲ್ಲಿ ಹೇಳಿದ್ದಾಳೆ.
ನಂತರ ಅವಳು ಅವನನ್ನು ಕೇಳುತ್ತಾಳೆ, “ನಿನಗೆ ಡೊಮಿನೋಸ್‌ನಲ್ಲಿ ಕೆಲಸ ಮಾಡುವುದು ಹೇಗನಿಸುತ್ತದೆ? ನಿನಗೆ ಶಾಲೆ ನೆನಪಿದೆಯೇ?”. ಅವನು ನಗುತ್ತಾ ಉತ್ತರಿಸುತ್ತಾನೆ, “ಹೌದು, ನನಗೆ ಬಹಳಷ್ಟು ನೆನಪಿದೆ". ಆಕೆ ಆಗ ಅಪಹಾಸ್ಯವಾಗಿ ನಗುತ್ತಾ ʼʼಈ ವಿಡಿಯೊವನ್ನು ನಾನು ನಮ್ಮ ಹಳೆಯ ಫ್ರೆಂಡ್ಸ್ ಗ್ರೂಪ್‌ಗೆಲ್ಲ ಕಳುಹಿಸುತ್ತೇನೆ" ಎಂದು ಹೇಳಿ ಆತನ ಪರಿಸ್ಥಿತಿಯನ್ನು ಕಂಡು ಜೋರಾಗಿ ನಗುತ್ತಾ ವಿಡಿಯೊ ಮುಗಿಸಿದ್ದಾಳೆ.
ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯನ್ನು ಗೇಲಿ ಮಾಡುವುದು ಅನ್ಯಾಯ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೊ ಎಕ್ಸ್ (ಟ್ವಿಟ್ಟರ್)ನಲ್ಲಿ ಹರಿದಾಡುತ್ತಿದ್ದು, ಯುವತಿಯ ಅಹಂಕಾರದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಒಬ್ಬರು ʼʼನೀವು ನಿಜವಾದ ಹೀರೋ. ನೀವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಕಠಿಣ ಪರಿಶ್ರಮ ಎಂದಿಗೂ ನಾಚಿಕೆಗೇಡಿನದ್ದಲ್ಲ. ಜೀವನವು ಎಲ್ಲರಿಗೂ ಒಂದೇ ಟೈಮ್‌ಲೈನ್‌ನಲ್ಲಿ ಇರುವುದಿಲ್ಲʼʼ ಎಂದಿದ್ದಾರೆ.