Viral Video: ಇದು ‘ಲವ್ ಇನ್ ಪಾಕಿಸ್ತಾನ್’- ಪಾಕ್ ಯುವಕನನ್ನು ಮದುವೆಯಾಗಲು ಅಮೆರಿಕದಿಂದ ಹಾರಿಬಂದ ಮಹಿಳೆ!
ಆನ್ ಲೈನ್ ಮೂಲಕ ಚಿಗುರಿದ ‘ಪ್ರೀತಿ’ ಅಮೆರಿಕನ್ ಮಹಿಳೆಯನ್ನು ಪಾಕಿಸ್ತಾನದವರೆಗೆ ಬರುವಂತೆ ಮಾಡಿತು. ಆದರೆ ಆಕೆ ಪಾಕ್ ನೆಲಕ್ಕೆ ಕಾಲಿಟ್ಟ ಮೇಲೆ ಇಲ್ಲಿ ನಡೆದದ್ದೇ ಬೇರೆ.. ಇದೀಗ ಆಕೆಯ ಸ್ಥಿತಿ ಏನಾಗಿದೆ? ಆ ಯುವಕ ಏನಾದ..? – ಈ ಸುದ್ದಿ ಓದಿ..!


ಕರಾಚಿ: 19 ವರ್ಷದ ಪಾಕ್ ಯುವಕನನ್ನುಮದುವೆಯಾಗಲೆಂದು ಪಾಕಿಸ್ಥಾನಕ್ಕೆ (Pakistan) ಬಂದು ಸಿಲುಕಿಕೊಂಡಿದ್ದ ಅಮೆರಿಕನ್ (USA) ಮಹಿಳೆಯೊಬ್ಬರು ಇದೀಗ ತನ್ನ ದೇಶಕ್ಕೆ ಮರಳಲು ಸಿದ್ಧರಾಗಿದ್ದಾರೆ. ಓನಿಜಾ ಆಂಡ್ರ್ಯೂ ರಾಬಿನ್ ಸನ್ ಎಂಬ 33 ವರ್ಷದ ಮಹಿಳೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಪಾಕ್ ಯುವಕ ನಿದಾಲ್ ಅಹಮ್ಮದ್ ಮೆಮನ್ ಎಂಬಾತನನ್ನು ವಿವಾಹವಾಗಲೆಂದು ಕರಾಚಿಗೆ ಬಂದಿಳಿದ್ದದರು. ಈಕೆಯೇ ಹೇಳಿಕೊಂಡಿರುವಂತೆ ನಿದಾಲ್ ಈಕೆಗೆ ಆನ್ ಲೈನ್ ಮೂಲಕ ಪರಿಚಯವಾಗಿದ್ದನಂತೆ. ಆದರೆ, ನ್ಯೂಯಾರ್ಕ್ ನಿಂದ (New York) ಕರಾಚಿವರೆಗಿನ (Karachi) ಆಕೆಯ ಸುದೀರ್ಘ ಪಯಣ ಮಾತ್ರ ಇದೀಗ ನಿರಾಶಾದಾಯಕವಾಗಿ ಮುಕ್ತಾಯಗೊಂಡಿದೆ. ಮತ್ತು ಈ ವಿಚಿತ್ರ ಘಟನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ದೊಡ್ಡ ಸುದ್ದಿಯಾಗಿದ್ದು ಎಲ್ಲೆಡೆ ವೈರಲ್ (Viral News) ಆಗುತ್ತಿದೆ.
ರಾಬಿನ್ ಸನ್ ಪಾಕಿಸ್ಥಾನಕ್ಕೆ ಬಂದಿಳಿದ ಸಂದರ್ಭದಲ್ಲೇ ಮೆಮನ್ ಆಕೆಯೊಂದಿಗಿನ ಸಂಬಂಧವನ್ನೇ ಕೈಬಿಟ್ಟಿದ್ದನಂತೆ. ಇದಕ್ಕೆ ಆತ ಕೊಟ್ಟಿದ್ದ ಕಾರಣವೆಂದರೆ ತನ್ನ ಕುಟುಂಬದವರು ನಮ್ಮಿಬ್ಬರ ಸಂಬಂಧವನ್ನು ಎಂದಿಗೂ ಒಪ್ಪಿಕೊಳ್ಳಲಿಕ್ಕಿಲ್ಲ ಎಂಬುದಾಗಿತ್ತು. ಇದರಿಂದಾಗಿ ರಾಬಿನ್ ಸನ್ ಕರಾಚಿಯಲ್ಲಿ ಅತಂತ್ರ ಸ್ಥಿತಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಇದೇ ಸಂದರ್ಭದಲ್ಲಿ ಆಕೆಯ ಪ್ರವಾಸಿ ವೀಸಾದ ಅವಧಿಯೂ ಮುಕ್ತಾಯಗೊಂಡಿತ್ತು.
ಹೀಗೆ ತನ್ನ ಪಾಕ್ ಪ್ರಿಯಕರನಿಂದ ನಿರಾಕರಿಸಲ್ಪಟ್ಟ ಈ ಅಮೆರಿಕನ್ ಮಹಿಳೆ ಕರಾಚಿಯಲ್ಲಿ ದಿಕ್ಕು ತೋಚದೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾತ್ರವಲ್ಲದೇ ಈಕೆ ಒಂದೊಮ್ಮೆ ಮೆಮನ್ ಮನೆ ಮುಂದೆಯೂ ಕೆಲ ದಿನ ಟೆಂಟ್ ಹಾಕಿ ಕೂತಿದ್ದಳು. ಇದರಿಂದಾಗಿ ಮೆಮನ್ ಕುಟುಂಬ ಆ ಮನೆಯನ್ನೇ ತೊರೆದು ಹೋಗುವಂತಾಗಿತ್ತು!
ಇಷ್ಟೆಲ್ಲಾ ನಡೆಯುತ್ತಿದ್ದರೂ ಈ ಘಟನೆ ಹೊರಜಗತ್ತಿನ ಗಮನಕ್ಕೆ ಬಂದಿರಲಿಲ್ಲ. ಆದರೆ ಯಾವಾಗ ರಾಬಿನ್ ಸನ್ ತನ್ನ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮಂಡಿಸಲಾರಂಭಿಸಿದರೋ, ಆಗ ಈ ವಿಷಯ ಟಿಕ್ ಟಾಕ್ ಸೆನ್ಸೇಷನ್ ಆಗಿ ಪರಿವರ್ತನೆಗೊಂಡಿತು. ಆ ಬಳಿಕ ರಾಬಿನ್ ಸನ್ ಪಾಕಿಸ್ಥಾನದಲ್ಲೊಂದು ಮಾಧ್ಯಮಗೋಷ್ಠಿಯನ್ನೂ ಆಯೋಜಿಸಿ ತನ್ನ ಬೇಡಿಕೆಗಳನ್ನು ಅಲ್ಲಿ ಇಟ್ಟಿದ್ದರು.
ಇದನ್ನೂ ಓದಿ: Viral News: ಮುಸ್ಲಿಂ ಹುಡುಗನ ಜೊತೆ ಮದುವೆಗೆ ನೋ ಎಂದ ಉರ್ಫಿ ಜಾವೇದ್; ವೈರಲ್ ಆಯ್ತು ಹಳೆಯ ವಿಡಿಯೊ
🚨~Onijah Andrew Robinson, a 33-year-old American woman, traveled to Karachi, Pakistan in October 2024 to marry 19-year-old Nidal Ahmed Memon, whom she met online.
— Unfit Desi Live (@unfitdesilive) February 3, 2025
However, her romantic journey took an unexpected turn when Memon's family refused to accept their marriage.
✅️… pic.twitter.com/JJnVxpSUbt
ಚಿಪಾ ವೆಲ್ಫೇರ್ ಆರ್ಗನೈಸೇಷನ್ ನ (Chhipa Welfare Organisation) ಕಚೇರಿಯಲ್ಲಿ ರಾಬಿನ್ ಸನ್ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆಕೆ ‘ನನಗೆ ಹಣ ಕೊಡಿ’ ಎಂದು ಬೇಡಿಕೆ ಸಲ್ಲಿಸಿದ್ದಳು ಮತ್ತು ಸರಕಾರ ತನಗೆ 1ಲಕ್ಷ ಡಾಲರ್ ನೀಡಬೇಕೆಂದು ಪಟ್ಟು ಹಿಡಿದಿದ್ದಳು. ’20 ಸಾವಿರ ಡಾಲರ್ ನನಗೆ ಈ ವಾರವೇ ಬೇಕು, ಅದೂ ನಗದು ರೂಪದಲ್ಲೇ ನನಗೆ ಸಿಗಬೇಕು. ಇದು ಸರಕಾರಕ್ಕೆ ನನ್ನ ಆಗ್ರಹವಾಗಿದೆ’ ಎಂದು ಆಕೆ ಹೇಳಿಕೊಂಡಿದ್ದಳು.
‘ನನಗೆ 20 ಸಾವಿರ ಈಗಲೇ ಬೇಕಾಗಿದೆ, ಇಲ್ಲಿ ವಾಸಿಸಲು 5 ಸಾವಿರದಿಂದ 10 ಸಾವಿರದವರಗೆ ಪ್ರತೀವಾರ ಬೇಕಾಗುತ್ತದೆ. ಇದನ್ನು ಇಲ್ಲಿನ ಸರಕಾರ ತಕ್ಷಣವೇ ಈಡೇರಿಸುವಂತೆ ನಾನು ಆಗ್ರಹಿಸುತ್ತಿದ್ದೇನೆ’ ಎಂದು ಆಕೆ ಮಾತನಾಡಿರುವ ವಿಡಿಯೋ ಟಿಕ್ ಟಾಕ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಎನ್.ಜಿ.ಒ ಆಕೆಗೆ ಅಮೆರಿಕಾಕ್ಕೆ ವಾಪಾಸಾಗಲು ರಿಟರ್ನ್ ಟಿಕೆಟ್ ಮಾಡಿಕೊಡುವಲ್ಲಿವರೆಗೆ ಹಾಗೂ ಹಣಕಾಸಿನ ನೆರವು ಒದಗಿಸುವವರಗೆ ಆಕೆ ಪಾಕ್ ತೊರೆಯಲು ನಿರಾಕರಿಸಿದ್ದಾಳೆ ಮತ್ತು ಆಕೆ ಮೆಮನ್‌ನನ್ನು ಆನ್‌ಲೈನ್‌ನಲ್ಲೇ ಮದುವೆಯಾಗಿದ್ದೆನೆಂದು ಹೇಳುತ್ತಿದ್ದಾಳೆ ಎನ್ನಲಾಗಿದೆ.
‘ನಾನು ಹೇಳುತ್ತಿರುವ ಮಾತುಗಳನ್ನು ಸರಿಯಾಗಿ ರೆಕಾರ್ಡ್ ಮಾಡಿಕೊಳ್ಳಿ! ನಾನು ನಿದಾಲ್ ಅಹಮ್ಮದ್ ಮೆಮನ್ ನನ್ನು ಮದುವೆಯಾಗಿದ್ದೇನೆ, ಮತ್ತು ನಾವಿಬ್ಬರೂ ಶೀಘ್ರವೇ ದುಬಾಯಿಗೆ ಹಾರಲಿದ್ದೇವೆ ಮತ್ತು ಅಲ್ಲಿ ನಾವು ನಮ್ಮ ಮಗುವನ್ನು ಪಡೆಯಲಿದ್ದೇವೆ’ ಎಂದು ರಾನಿನ್ ಸನ್ ಬಹಿರಂಗವಾಗಿ ಘೋಷಿಸಿದ್ದಳು.
ಈ ನಡುವೆ ಈ ಕಥೆಗೊಂದು ಟ್ವಿಸ್ಟ್ ಎಂಬಂತೆ, ರಾಬಿನ್ ಸನ್‌ನ ಮಗನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪಾಕ್ ಮೀಡಿಯಾಗೆ ನೀಡಿರುವ ಸಂದರ್ಶನದಲ್ಲಿ, ತನ್ನ ತಾಯಿ ‘ಬೈ ಪೋಲಾರ್ ಡಿಸಾರ್ಡರ್’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾನೆ.