ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕರ್ನೂಲ್ ಬಸ್ ದುರಂತಕ್ಕೆ ಬಿಗ್‌ ಟ್ವಿಸ್ಟ್‌; ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ವಿಡಿಯೊ ವೈರಲ್

Bus Accident: ಆಂಧ್ರ ಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 21 ಜನರು ಮೃತಪಟ್ಟಿದ್ದಾರೆ. ಬಸ್ಸಿನಲ್ಲಿ 46 ಪ್ರಯಾಣಿಕರಿದ್ದರು. ಇದೀಗ ಅಪಘಾತಕ್ಕೆ ಕಾರಣವಾದ ಬೈಕ್ ಸವಾರನ ಅಪಘಾತಕ್ಕೂ ಮುನ್ನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೈದರಾಬಾದ್: 21 ಜನರನ್ನು ಬಲಿ ಪಡೆದ ಆಂಧ್ರ ಪ್ರದೇಶ (Andhra Pradesha)ದ ಕರ್ನೂಲ್ (Kurnool) ಬಸ್ ಅಗ್ನಿ ದುರಂತ (Tragedy) ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯೊಂದು ಲಭ್ಯವಾಗಿದ್ದು, ಅದರಲ್ಲಿ ದುರಂತದಲ್ಲಿ ಮೃತಪಟ್ಟ ಬೈಕ್ ಸವಾರ ಅಪಘಾತಕ್ಕೂ ಮುನ್ನ ನಿರ್ಲಕ್ಷ್ಯದಿಂದ ವರ್ತಿಸಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ರಾಹೆ-44ರಲ್ಲಿ ಬೈಕ್ ಸವಾರ 22 ವರ್ಷದ ಬಿ.ಶಿವಶಂಕರ (B Shiva Shankar) ನಿಯಂತ್ರಣ ಕಳೆದುಕೊಂಡು ವಿ. ಕಾವೇರಿ ಟ್ರಾವೆಲ್ಸ್ (V Kaveri Travels) ಸಂಸ್ಥೆಯ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ನಂತರ ಬೈಕ್‌ ಅನ್ನು ಬಸ್ ಸುಮಾರು 200 ಮೀಟರ್‌ಗಳಷ್ಟು ಎಳೆದುಕೊಂಡು ಹೋಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಬೈಕ್‌ನಿಂದ ಸೋರಿದ ಇಂಧನ ಮತ್ತು ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಇದೀಗ ಸಿಸಿಟಿವಿ ದೃಶ್ಯಾವಳಿವೊಂದು ಬೆಳಕಿಗೆ ಬಂದಿದ್ದು, ರಾತ್ರಿ 2:23ಕ್ಕೆ ಶಿವಶಂಕರ ತನ್ನ ಬೈಕ್‌ನಲ್ಲಿ ಹಿಂಬದಿ ಸವಾರನೊಂದಿಗೆ ಪೆಟ್ರೋಲ್ ಬಂಕ್‌ಗೆ ಬಂದಿದ್ದಾನೆ. ಅಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಕಾರಣ, ಹಿಂಬದಿ ಸವಾರ ಪೆಟ್ರೋಲ್ ಹುಡುಕಲು ಹೋಗಿದ್ದಾನೆ. ಬಳಿಕ ಶಿವಶಂಕರ ಕೂಡ ಪೆಟ್ರೋಲ್ ಬಂಕ್‌ನಲ್ಲಿ ಅತ್ತಿತ್ತ ಓಡಾಡಿ, ಕೋಪದಿಂದ ಕಿರುಚಾಡಿದ್ದಾನೆ. ಬಳಿಕ ಬೈಕ್‌ನ ಅಜಾಗರೂಕತೆಯಿಂದ ಚಲಾಯಿಸುತ್ತಲೇ ಅಲ್ಲಿಂದ ಹೊರಟು ಹೋಗುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನು ಓದಿ: Viral Video: ಚಲಿಸುತ್ತಿದ್ದ ವಾಹನದಿಂದ ರಸ್ತೆಗೆ ಜಿಗಿದ ಸಿಂಹ; ಮೈಜುಮ್ಮೆನಿಸುವ ವಿಡಿಯೊ ಇಲ್ಲಿದೆ

ಶಿವಶಂಕರ ಮದ್ಯಪಾನ ಮಾಡಿರಬಹುದು ಅಥವಾ ಇನ್ಯಾವುದೋ ನಶೆಯ ಅಮಲಿನಲ್ಲಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಿಂಬದಿ ಸವಾರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಶಿವಶಂಕರನ ವಿಸೆರಾ ಮಾದರಿಗಳನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಮದ್ಯಪಾನ ಮಾಡಿರುವುದು ದೃಢಪಟ್ಟರೆ, ಚಾಲಕನ ನಿರ್ಲಕ್ಷ್ಯದ ತನಿಖೆಯ ದಿಕ್ಕು ಬದಲಾಗು ಸಾಧ್ಯತೆ ಇದೆ.

ಬಸ್ ಸಂಸ್ಥೆಯ ಬಗ್ಗೆ ತನಿಖೆ

ಸಾರಿಗೆ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳು ವಿ.ಕಾವೇರಿ ಟ್ರಾವೆಲ್ಸ್ ಕಂಪನಿಯ ಸುರಕ್ಷತಾ ಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿವೆ. ಬಸ್ ಮೊದಲು ದಮನ್ ಮತ್ತು ದಿಯು ಪ್ರದೇಶದಲ್ಲಿ ನೋಂದಾಯಿಸಲ್ಪಟ್ಟಿದ್ದು, ನಂತರ ಒಡಿಶಾದಲ್ಲಿ ಮರು ನೋಂದಣಿ ಮಾಡಲಾಗಿದೆ ಎಂದು ವರದಿಯಾಗಿದೆ. ತೆರಿಗೆ ತಪ್ಪಿಸಲು ಮತ್ತು ಇತರ ರಾಜ್ಯಗಳ ಸಾರಿಗೆ ನಿಯಮಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿರಬಹುದು ಎಂಬ ಶಂಕೆ ಇದೆ.

ಇನ್ನು ಬಸ್ ಕಾನೂನುಬಾಹೀರವಾಗಿ ಸೀಟರ್ ಬಸ್‌ನಿಂದ ಸ್ಲೀಪರ್ ಕೋಚ್‌ಗೆ ಪರಿವರ್ತಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇಂತಹ ಬದಲಾವಣೆಯಿಂದ ತುರ್ತು ನಿರ್ಗಮನ ಬಾಗಿಲು, ಗ್ಯಾಂಗ್‌ವೇ ಅಗಲ ಮತ್ತು ನಿರ್ಮಾಣದ ಭದ್ರತಾ ನಿಯಮಗಳನ್ನು ಉಲ್ಲಂಘಿಸುತ್ತವೆ.

ದುರಂತದಲ್ಲಿ ಪಾರಾದ ಪ್ರಯಾಣಿಕರೊಬ್ಬರು, "ತುರ್ತು ಸಂದರ್ಭಗಳಲ್ಲಿ ಕಿಟಕಿ ಒಡೆಯಲು ಅಗತ್ಯವಾದ ಮಿನಿ ಹ್ಯಾಮರ್‌ಗಳು ಬಸ್‌ನಲ್ಲಿ ಇರಲಿಲ್ಲ" ಎಂದು ಹೇಳಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರಿಗೆ 46 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಬಸ್‌ ಡಿಕ್ಕಿಯ ನಂತರ ಬೆಂಕಿ ತಗುಲಿ, ನಿದ್ರಿಸುತ್ತಿದ್ದ 20 ಮಂದಿ ಸಾವನ್ನಪ್ಪಿದರು, ಉಳಿದ 27 ಮಂದಿ ಕಿಟಕಿಗಳನ್ನು ಒಡೆದು ಪ್ರಾಣ ಉಳಿಸಿಕೊಂಡಿದ್ದರು.