ಬಿಹಾರದಲ್ಲೊಬ್ಬ ಬಾಹುಬಲಿ; ಗದ್ದೆಯಲ್ಲಿ ಸಿಕ್ಕ ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ಬಂದ ಯುವಕ: ವಿಡಿಯೊ ವೈರಲ್
Viral video: ಬಿಹಾರದ ಸುಪೌಲ್ ಜಿಲ್ಲೆಯ ಹೊಲದಲ್ಲಿ ಸಿಕ್ಕ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಹಿಡಿದ ಬಳಿಕ, ಯುವಕನೊಬ್ಬ ಅದನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ತಂದ ಘಟನೆ ವೈರಲ್ ಆಗಿದೆ. ಬಳಿಕ ಅರಣ್ಯ ಇಲಾಖೆ ಮೊಸಳೆಯನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿ ಕೋಸಿ ನದಿಗೆ ಸುರಕ್ಷಿತವಾಗಿ ಬಿಡುಗಡೆ ಮಾಡಿದೆ. ವನ್ಯಜೀವಿಗಳು ಕಂಡುಬಂದರೆ ಸಾರ್ವಜನಿಕರು ಸ್ವತಃ ಹಿಡಿಯಲು ಮುಂದಾಗದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬಿಹಾರದಲ್ಲಿ ಮೊಸಳೆಯನ್ನು ಹೆಗಲ ಹೊತ್ತು ತಂದ ಯುವಕ -
ಪಾಟ್ನಾ, ಆ. 1: ಹೊಲದಲ್ಲಿ ಸಿಕ್ಕ ಬೃಹತ್ ಮೊಸಳೆಯೊಂದನ್ನು ಯುವಕನೊಬ್ಬ ತನ್ನ ಹೆಗಲ ಮೇಲೆ ಹೊತ್ತುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ ವಿಚಿತ್ರ ಘಟನೆಯೊಂದು ಬಿಹಾರದ ಸುಪೌಲ್ (Supaul) ಜಿಲ್ಲೆಯಲ್ಲಿ ನಡೆದಿದ್ದು, ಇದರ ವಿಡಿyo ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಅಪರೂಪದ ಘಟನೆ ಶುಕ್ರವಾರ (ಜುಲೈ 31) ಭೀಮ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಾಲ್‌ಪುರ ವಾರ್ಡ್ 14ರಲ್ಲಿ ನಡೆದಿದೆ.
ಭತ್ತದ ಗದ್ದೆಯಲ್ಲಿ ಪ್ರತ್ಯಕ್ಷವಾದ ಮೊಸಳೆ
ಸಾಕ್ಷಿಗಳ ಪ್ರಕಾರ, ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ದಿಢೀರನೆ ಚಲಿಸುತ್ತಿದ್ದ ಮೊಸಳೆ ಕಂಡು ದಿಗ್ಭ್ರಮೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಆರಂಭದ ಆತಂಕದ ನಂತರ, ಕೆಲವು ಧೈರ್ಯಶಾಲಿ ಯುವಕರು ಮುಂದೆ ಬಂದು ಮೊಸಳೆಗೆ ಯಾವುದೇ ಹಾನಿ ಮಾಡದೆ ಜಾಗರೂಕತೆಯಿಂದ ಹಗ್ಗದಿಂದ ಕಟ್ಟಿ ಬಂಧಿಸಿದರು.
ಮೊಸಳೆಯನ್ನು ಹೆಗಲ ಮೇಲೆ ಹೊತ್ತ ಯುವಕ:
धान के खेत में निकला मगरमच्छ… और देखिए इस युवक का खौफनाक अंदाज़!
— Ramesh Bhatt (@Rameshbhimtal) August 1, 2026
मगरमच्छ को बांधकर बेखौफ कंधे पर लादा और सीधे थाने पहुंच गया। बिहार के सुपौल का यह वीडियो सोशल मीडिया पर तेजी से वायरल। 😳🐊#Bihar #Supaul #Crocodile #ViralVideo pic.twitter.com/cFJMQqnELU
ವೀರಪುರದಲ್ಲಿರುವ ಅರಣ್ಯ ಇಲಾಖೆಗೆ ತಕ್ಷಣವೇ ಮಾಹಿತಿ ನೀಡಿದರೂ, ಅಲ್ಲಿಂದ ತಕ್ಷಣದ ಸ್ಪಂದನೆ ಸಿಗಲಿಲ್ಲ. ಇದರಿಂದ ಕಾಯದೆ, ಮೊಸಳೆಯ ಬಾಯಿಗೆ ಹಗ್ಗ ಸುತ್ತಿದ ಯುವಕನೊಬ್ಬ ಅದನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಭೀಮ್‌ನಗರ ಪೊಲೀಸ್ ಠಾಣೆಗೆ ನಡೆದುಕೊಂಡು ಬಂದಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕೋಸಿ ನದಿಗೆ ಸುರಕ್ಷಿತ ಬಿಡುಗಡೆ
ಠಾಣೆಗೆ ಮೊಸಳೆ ತಂದ ತಕ್ಷಣ ಭೀಮ್‌ನಗರ ಪೊಲೀಸ್ ಠಾಣಾಧಿಕಾರಿ ಮನೀಶ್ ಕುಮಾರ್ ಅರಣ್ಯ ಇಲಾಖೆಗೆ ಪುನಃ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ತಂಡವು ಮೊಸಳೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿತು.
ವೈದ್ಯಕೀಯ ತಪಾಸಣೆಯ ನಂತರ ಮೊಸಳೆ ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ತಿಳಿದುಬಂದಿದ್ದು, ಇಲಾಖೆಯ ನಿಯಮಾವಳಿಗಳನ್ನು ಪೂರ್ಣಗೊಳಿಸಿದ ನಂತರ ಅದನ್ನು ಕೋಸಿ ನದಿಗೆ ಸುರಕ್ಷಿತವಾಗಿ ಬಿಡಲಾಯಿತು.
ಅರಣ್ಯ ಇಲಾಖೆ ಫಾರೆಸ್ಟರ್ ರವಿ ರಂಜನ್ ಮಾತನಾಡಿ, "ರಕ್ಷಿಸಲ್ಪಟ್ಟ ಮೊಸಳೆ ಸುಮಾರು 4 ಅಡಿಗಿಂತಲೂ ಹೆಚ್ಚು ಉದ್ದವಿತ್ತು. ಮುಂಗಾರು ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ, ಕಾಲುವೆಗಳ ಮೂಲಕ ಇಂತಹ ಜಲಚರಗಳು ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳಿಗೆ ಬರುತ್ತವೆ" ಎಂದು ವಿವರಿಸಿದ್ದಾರೆ.
ಅರಣ್ಯ ಇಲಾಖೆಯ ಮನವಿ
ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗದೆ ಅಥವಾ ಪ್ರಾಣಕ್ಕೆ ಅಪಾಯ ತಂದೊಡ್ಡಿ ತಾವೇ ರಕ್ಷಣೆ ಮಾಡಲು ಹೋಗಬಾರದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ವನ್ಯಜೀವಿಗಳು ಕಂಡುಬಂದರೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು, ತರಬೇತಿ ಪಡೆದ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಸೆರೆಹಿಡಿಯಲಿದ್ದಾರೆ ಎಂದು ಮನವಿ ಮಾಡಿದ್ದಾರೆ.
ಈ ಘಟನೆಯಲ್ಲಿ ಯುವಕರ ಸಮಯಪ್ರಜ್ಞೆಯಿಂದಾಗಿ ಮೊಸಳೆಗಾಗಲಿ, ಗ್ರಾಮಸ್ಥರಿಗಾಗಲಿ ಯಾವುದೇ ಹಾನಿ ಸಂಭವಿಸಿಲ್ಲ.