ಕೇರಳ, ಜ. 9: ಇತ್ತೀಚಿನ ದಿನದಲ್ಲಿ ಬೀಚ್ , ರೆಸಾರ್ಟ್ ನಂತಹ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಮುದ್ರ ಕಿನಾರೆಯಲ್ಲಿ ಸ್ವಚ್ಛಂದ ಗಾಳಿಯ ನಡುವೆ ಅಲೆಗಳಲ್ಲಿ ಆಟವಾಡಲು, ಮರಳುಗಳ ಮೇಲೆ ಕಲಾಕೃತಿ ಬಿಡಿಸಲು ಬಹುತೇಕ ಜನರು ಇಷ್ಟ ಪಡುತ್ತಾರೆ. ಅಂತೆಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಸಮುದ್ರ ತೀರದ ಪ್ರದೇಶಗಳಲ್ಲಿ ಸ್ವಚ್ಛತೆ ಅಂಶಗಳಿಗೂ ಅಧಿಕ ಆಧ್ಯತೆ ನೀಡಲಾಗುತ್ತಿದೆ. ಕಸದ ಬುಟ್ಟಿಯ ವ್ಯವಸ್ಥೆ ಮಾಡಿದ್ದರೂ ಕೂಡ ಬಹುತೇಕ ಜನರು ಅಲ್ಲಲ್ಲಿ ಕಸ , ಪ್ಲಾಸ್ಟಿಕ್ ಬಾಟಲಿ ಎಸೆದು ಮಲಿನ ಮಾಡುವುದು ಬಹುತೇಕ ಭಾಗದಲ್ಲಿ ಕಾಣಬಹುದು. ಅಂತೆಯೇ ಸಮುದ್ರ ತೀರದಲ್ಲಿ ಮರಳಿನ ಮೇಲೆ ಪ್ಲಾಸ್ಟಿಕ್ ಬಾಟಲಿಗಳು, ಆಹಾರ ಪ್ಯಾಕೆಟ್‌ಗಳ ಹೇರಳವಾಗಿದ್ದು ವ್ಲಾಗರ್ ಒಬ್ಬರು ಅದನ್ನು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಘಟನೆ ಕೇರಳದ ವರ್ಕಲಾ ಬೀಚ್ ನಲ್ಲಿ ನಡೆದಿದೆ. ವ್ಲಾಗರ್ ಸಚಿನ್ ಕೆ. ಧೀರ್ ಅವರು ಇತ್ತೀಚೆಗಷ್ಟೇ ಈ ಬೀಚ್ ಗೆ ಭೇಟಿ ನೀಡಿದ್ದು ಅಲ್ಲಿನ ಅವ್ಯವಸ್ಥೆ ಬಗ್ಗೆ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ವೈರಲ್ ಆದ ವಿಡಿಯೋ (Viral Video) ಕ್ಲಿಪ್‌ನಲ್ಲಿ ವ್ಲಾಗರ್ ಸಚಿನ್ ಅವರು ಕೇರಳದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ವರ್ಕಲಾ ಬೀಚ್ ಗೆ ಭೇಟಿ ನೀಡಿದ್ದು ಬೀಚ್ ಸ್ವಚ್ಛತೆಯ ಅಂಶ ಗಳನ್ನು ಪ್ರಶ್ನಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಡಿಯೋದಲ್ಲಿ ಹೇಳಿದ್ದನ್ನು ಕಾಣಬಹುದು. ಈಗ ನಾನು ಕೇರಳದಲ್ಲಿ ಅತ್ಯಂತ ಸುಂದರವಾದ ವರ್ಕಲಾ ಬೀಚ್‌ನಲ್ಲಿದ್ದೇನೆ, ನನಗೆ ಈ ಬೀಚ್ ಗೆ ಬಂದು ತುಂಬಾ ನಿರಾಶೆಯಾಗಿದೆ. ಇಡೀ ಬೀಚ್ ಕಸದಿಂದ ಆವೃತವಾಗಿದೆ. ಪ್ಲಾಸ್ಟಿಕ್ ಬಾಟಲಿಗಳು, ಹೊದಿಕೆಗಳು, ಬಿಯರ್ ಕ್ಯಾನ್‌ಗಳು ಮತ್ತು ಎಲ್ಲಾ ರೀತಿಯ ತ್ಯಾಜ್ಯ ಎಲ್ಲೆಡೆ ಇವೆ. ರಾತ್ರಿಯೂ ಸಹ, ಬಂಡೆಯ ಪಕ್ಕದಲ್ಲಿ ಕಸಗಳಿರುವುದನ್ನು ನಾನು ನೋಡಿದ್ದೇನೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
ವಿಡಿಯೋ ನೋಡಿ:
ಥೈಲ್ಯಾಂಡ್, ಬಾಲಿ ಅಥವಾ ವಿಯೆಟ್ನಾಂನಂತಹ ಸ್ಥಳಗಳಿಗೆ ಭೇಟಿ ನೀಡಿದ ಪ್ರವಾಸಿಗರಿಗೆ ವರ್ಕಲಾ ಬೀಚ್ ಬಹಳ ಇಷ್ಟವಾಗಲಿದೆ. ಆದರೆ ವಿದೇಶದಲ್ಲಿ ಇರುವ ಸ್ವಚ್ಛತೆಯ ಪರಿಸರ ಇಲ್ಲಿ ಇಲ್ಲದ ಕಾರಣ ಜನರು ಅಲ್ಲಿಗೆ ಪ್ರವಾಸಕ್ಕೆ ಹೋಗುವಂತಾಗಿದೆ. ಜನರು ಕಸವನ್ನು ಎಸೆಯುವ ಮೂಲಕ ಅದನ್ನು ಹಾಳುಮಾಡುತ್ತಿರುವುದು ನಿಜಕ್ಕೂ ಶೋಚನೀಯ. ನೀವು ಯಾವುದೆ ಸ್ಥಳಕ್ಕೆ ತೆರಳಿದಾಗ ಅಲ್ಲಿನ ಸಹಜ ಸೌಂದರ್ಯಕ್ಕೆ ಬೆಲೆ ಕೊಡಬೇಕು. ಅದನ್ನು ನಾವು ಆಹ್ಲಾದಿಸುವಂತಿರಬೇಕು. ಬದಲಾಗಿ ನಾವೇ ಹಾಳು ಮಾಡುವಂತಿರಬಾರದು. ಜನರು ಈ ಬೀಚ್ ಗೆ ಬಂದು ಅದನ್ನು ಮಲೀನ ಮಾಡುತ್ತಿದ್ದಾರೆ. ಬಳಿಕ ನಾಚಿಕೆಯಿಲ್ಲದೆ ಹೊರಟು ಹೋಗುತ್ತಾರೆ. ವರ್ಕಲಾ ಬೀಚ್ ಆಡಳಿತ ಮಂಡಳಿಯು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಇದು ಭಾರತದ ಅತ್ಯಂತ ಸುಂದರವಾದ ಕಡಲತೀರಗಳಲ್ಲಿ ಒಂದಾಗಿದ್ದು ಜನರು ಕೂಡ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕೆಂದು ನಾನು ವಿನಂತಿಸುತ್ತೇನೆ, ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾಗ ಈ ಸ್ಥಳ ಸ್ವಚ್ಛವಾಗಿತ್ತು. ಭಾರತೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿದಾಗಿನಿಂದ, ಇಲ್ಲಿ ಕಸಗಳು ಕಂಡು ಬರುವ ಪ್ರಮಾಣ ಹೆಚ್ಚಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
Viral Video: ರೈಲ್ವೆ ಹಳಿ ಮೇಲೆ ಉರುಳಿದ ಟ್ರಕ್; ತಪ್ಪಿದ ಭಾರೀ ಅನಾಹುತ, ವಿಡಿಯೋ ನೋಡಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ಈ ಪೋಸ್ಟ್ ಅನ್ನು ರೀ ಪೋಸ್ಟ್ ಮಾಡಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇಷ್ಟೊಂದು ಸುಂದರವಾದ ಬೀಚ್‌ನ ಕಳಪೆ ಸ್ಥಿತಿಗೆ ತಲುಪಿದೆ. ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು. ಪ್ರಕೃತಿಯನ್ನು ರಕ್ಷಿಸಲು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಪೋಸ್ಟ್ ನಲ್ಲಿ ಬರೆದಿದ್ದಾರೆ. ನಮ್ಮ ದೇಶದಲ್ಲಿ ಬೀದಿಯಲ್ಲಿ, ಉದ್ಯಾನವನದಲ್ಲಿ, ಇತರ ಸ್ಥಳದಲ್ಲಿ ಕಸಗಳು ಕಂಡು ಬರುವುದು ತೀರ ಸಾಮಾನ್ಯ ವಿಚಾರವಾಗಿದೆ. ಇದಕ್ಕೆ ನಮ್ಮ ಮನಃ ಸ್ಥಿತಿಯೇ ಮುಖ್ಯ ಕಾರಣವಾಗಿದೆ. ಮೊದಲು ಜನರು ಜವಾಬ್ದಾರಿಯುತ ನಾಗರಿಕರಂತೆ ವರ್ತಿಸಿದರೆ ಆಗ ಇಂತಹ ಸಮಸ್ಯೆ ಬರಲಾರದು ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೇರಳದಲ್ಲಿ ಬಂಡೆಯನ್ನು ಹೊಂದಿರುವ ಏಕೈಕ ಬೀಚ್ ವರ್ಕಲಾ ಬೀಚ್ ಆಗಿದ್ದು ಇದು 80 ಅಡಿ ಎತ್ತರ ಮತ್ತು ಭೌಗೋಳಿಕ ವೈಶಿಷ್ಟ್ಯಗಳಿಂದಾಗಿ ಕೂಡಿದ್ದ ಕಾರಣ ಬಹಳ ವಿಶೇಷ ಎನಿಸಿದೆ. ಯುನೆಸ್ಕೋ ಸಂಸ್ಥೆಯು ಇಲ್ಲಿನ ಬಂಡೆಯನ್ನು ಜಿಯೋಪಾರ್ಕ್ ಎಂದು ಗುರುತಿಸಿದ್ದು ವಿಶಿಷ್ಟ ಭೂವಿಜ್ಞಾನ ಹೊಂದಿರುವ ಈ ಪ್ರದೇಶಗಳನ್ನು ವಿಜ್ಞಾನ ಮತ್ತು ಶಿಕ್ಷಣಕ್ಕಾಗಿ ಸಂರಕ್ಷಿಸಲಾಗಿದೆ. ವಿಶ್ವಾದ್ಯಂತ 90 ಯುನೆಸ್ಕೋ ಜಿಯೋಪಾರ್ಕ್‌ಗಳಿದ್ದರೂ, ವರ್ಕಲಾ ಬಂಡೆಯು ಭಾರತದಲ್ಲಿ ಮೊದಲನೆಯದು ಎನ್ನಬಹುದು. ಹೀಗಾಗಿ ಇದನ್ನು ನೋಡಲೆಂದೆ ಜನರು ಇಲ್ಲಿಗೆ ದಿನ ಭೇಟಿ ನೀಡುತ್ತಿರುತ್ತಾರೆ.