Bheema Movie: ಈ ಯುಗಾದಿಗೆ ಟಿವಿಗೆ ಬರುತ್ತಿದೆ ದುನಿಯಾ ವಿಜಯ್ ಅಭಿನಯದ ‘ಭೀಮ’ ಚಿತ್ರ; ಎಲ್ಲಿ, ಎಷ್ಟು ಗಂಟೆಗೆ ಪ್ರಸಾರ?
Colors Kannada: ಯುಗಾದಿಯ ಪ್ರಯುಕ್ತ ಭಾನುವಾರ (ಮಾ. 30) ರಾತ್ರಿ 7:30ಕ್ಕೆ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸೂಪರ್ ಹಿಟ್ 'ಭೀಮ' ಚಿತ್ರ ಕಲರ್ಸ್ ಕನ್ನಡದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ನಲ್ಲಿ ಪ್ರಸಾರವಾಗಲಿದೆ. 2024ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಈ ಚಿತ್ರ ಗಮನ ಸೆಳೆದಿತ್ತು.

ʼಭೀಮʼ ಚಿತ್ರ ಪೋಸ್ಟರ್.

ಬೆಂಗಳೂರು: ಹಬ್ಬಗಳ ಪ್ರಯಕ್ತ ಕಲರ್ಸ್ ಕನ್ನಡ ವಾಹಿನಿ ವೀಕ್ಷಕರ ಮನೋರಂಜನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಜತೆಗೆ ಥಿಯೇಟರ್‌ನಲ್ಲಿ ರಿಲೀಸ್ ಆದಂತಹ ಹೊಸ ಹೊಸ ಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಅದೇ ರೀತಿ ಇದೀಗ ಯುಗಾದಿಯ ಪ್ರಯುಕ್ತ ಭಾನುವಾರ (ಮಾ. 30)ರಾತ್ರಿ 7:30ಕ್ಕೆ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸೂಪರ್ ಹಿಟ್ 'ಭೀಮ'(Bheema Movie) ಚಿತ್ರ ಕಲರ್ಸ್ ಕನ್ನಡದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ನಲ್ಲಿ ಪ್ರಸಾರವಾಗಲಿದೆ.
ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸೂಪರ್ ಹಿಟ್ ಚಿತ್ರ ‘ಭೀಮ’ 2024ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿರುವ ಇದು ಸ್ಯಾಂಡಲ್‌ವುಡ್ ಪ್ರೇಮಿಗಳ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರ ಜೋಡಿಯಾಗಿ ಅಶ್ವಿನಿ ನಟಿಸಿದ್ದು, ಅವರ ಜತೆಗೆ ಪ್ರಿಯಾ ಶತಮರ್ಷಣ, ಕಲ್ಯಾಣಿ ರಾಜು, ಗಿಲಿ ಗಿಲಿ ಚಂದ್ರು, ಅಚ್ಯುತ್ ಕುಮಾರ್ , ಬ್ಲ್ಯಾಕ್ ಡ್ರ್ಯಾಗನ್ ಮಂಜು, ಗೋಪಾಲ ಕೃಷ್ಣ ದೇಶಪಾಂಡೆ, ರಂಗಾಯಣ ರಘು ಮತ್ತು ರಮೇಶ್ ಇಂದಿರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ದುನಿಯಾ ವಿಜಯ್ ಅಭಿನಯದ 30ನೇ ಚಿತ್ರ. ಇದು ವಿಜಯ್ ಸಿನಿ ಕೆರಿಯರ್ನಲ್ಲೇ ವಿಶೇಷ ಸ್ಥಾನ ಪಡೆದಿದೆ.
ಕಲರ್ಸ್ ಕನ್ನಡ ವಾಹಿನಿ ಹೊರ ಬಿಟ್ಟಿರುವ ಪ್ರೋಮೊ ನೋಡಿ:
ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಚರಣ್ ರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಶಿವಸೇನ ಮತ್ತು ದೀಪು. ಎಸ್. ಕುಮಾರ್ ನಿರ್ವಹಿಸಿದ್ದಾರೆ. ಮಾಸ್ತಿ ಸಂಭಾಷಣೆ ನೀಡಿದ್ದು, ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:OTT Malayalam Movies: ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ ಈ 5 ಹೊಸ ಮಲಯಾಳಂ ಸಿನಿಮಾ
ತಾನು ವಾಸವಾಗಿದ್ದ ಊರಿನಲ್ಲಿ ಯುವಕರಿಗೆ ಮಾದಕ ದ್ರವ್ಯಗಳನ್ನು ನೀಡುತ್ತ ಅವರನ್ನು ಮಾದಕ ದ್ರವ್ಯ ವ್ಯಸನಿಗಳನ್ನಾಗಿ ಮಾಡುತ್ತಿರುವ ಮಹತ್ವಾಕಾಂಕ್ಷಿ ರಾಜಕಾರಣಿ ಮತ್ತು ಮಾದಕ ದ್ರವ್ಯ ವ್ಯಾಪಾರಿ ಡ್ರ್ಯಾಗನ್ ಮಂಜು ವಿರುದ್ಧ ಭೀಮ ಹೋರಾಡುತ್ತಾನೆ. ಈ ಹೋರಾಟದ ನಡುವೆ ದುನಿಯಾ ವಿಜಯ್ ಅವರ ಫೈಟ್, ರೊಮ್ಯಾನ್ಸ್, ಸಖತ್ ಡೈಲಾಗ್‍ಗಳು, ಹಾಡುಗಳು ಬಂದು ಹೋಗುತ್ತವೆ. ಕಲರ್ಸ್ ಕನ್ನಡದ 'ಲಕ್ಷಣ' ಧಾರಾವಾಹಿಯಲ್ಲಿ ಲೇಡಿ ವಿಲನ್ ಪಾತ್ರ ನಿರ್ವಹಿಸಿದ್ದ ಪ್ರಿಯಾ ಶತಮರ್ಷಣ 'ಭೀಮ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ "ಬ್ಯಾಡ್ ಬಾಯ್ಸ್", "ಬೂಮ್ ಬೂಮ್ ಬೆಂಗಳೂರು", "ಡೋಂಟ್ ವರಿ ಬೇಬಿ ಚಿನ್ನಮ್ಮ" ಈ ಮೂರು ಹಾಡುಗಳು ಸೂಪರ್ ಹಿಟ್ ಆಗಿದ್ದವು. ಆ್ಯಕ್ಷನ್ ಥ್ರಿಲ್ಲರ್ ಬಯಸುವ ವಿಜಯ್ ಅಭಿಮಾನಿಗಳಿಗೆ ಈ ಚಿತ್ರ ಖಂಡಿತ ಇಷ್ಟವಾಗುತ್ತದೆ.