Viral Video: ಹೈಹೀಲ್ಸ್ ಧರಿಸಿ ಓಡಾಡಿದ ಗೋಲ್ಡನ್ ರಿಟ್ರೈವರ್; ಮಾಲೀಕರ ಮೇಲೆ ಕಿಡಿಕಾರಿದ ನೆಟ್ಟಿಗರು
ಗೋಲ್ಡನ್ ರಿಟ್ರೈವರ್ ಶ್ವಾನವೊಂದು ಹೀಲ್ಸ್ ಧರಿಸಿ ನಡೆಯುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರ ಸುರಕ್ಷತೆಯ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ 9,00,000ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.


ಹೈಹೀಲ್ಸ್ ಚಪ್ಪಲಿಗಳೆಂದರೆ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚು. ಆದರೆ ಇಲ್ಲೊಂದು ಶ್ವಾನ ಈ ಹೈಹೀಲ್ಸ್ (High Heels) ಚಪ್ಪಲಿ ಹಾಕಿಕೊಂಡು ಓಡಾಡುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಈ ವಿಡಿಯೊ 9,00,000ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಕೆಲವರು ಶ್ವಾನ ಹೈಹೀಲ್ಸ್ ಹಾಕಿಕೊಂಡು ಓಡಾಡುವುದನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅದರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶ್ವಾನದ ಯೋಗಕ್ಷೇಮವನ್ನು ಲೆಕ್ಕಿಸದೆ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಆರೋಪದ ಮೇಲೆ ಮಾಲೀಕರ ಮೇಲೆ ಕಿಡಿಕಾರಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಗೋಲ್ಡನ್ ರಿಟ್ರೈವರ್ ಶ್ವಾನ, ಸಿಲ್ವರ್ ಬಣ್ಣದ ಹೈಹೀಲ್ಸ್ ಚಪ್ಪಲಿಯನ್ನು ಹಾಕಿಕೊಂಡು ಮನೆಯ ಒಳಗಡೆ ನಡೆಯುವುದು ಸೆರೆ ಹಿಡಿಯಲಾಗಿದೆ. ಹೈಹೀಲ್ಸ್ ಹಾಕಿಕೊಂಡು ನಾಯಿ ತನ್ನ ಬಾಡಿ ಬ್ಯಾಲೆನ್ಸ್ ಮಾಡುವುದನ್ನು ನೋಡಿದರೆ ಶಾಕ್ ಆಗುತ್ತದೆ.
ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಹಾರ್ಟ್ ಎಮೋಜಿಗಳು, ಗೋಲ್ಡನ್ ರಿಟ್ರೈವರ್‌ನ ಫ್ಯಾಷನ್ ಬಗ್ಗೆ ತಮಾಷೆಯ, ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ಇದು ತಮಾಷೆಯಲ್ಲ" ಎಂದು ಹಲವರು ಬರೆದಿದ್ದಾರೆ. "ನಾಯಿಗೆ ಗಾಯವಾಗಬಹುದು" ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ. "ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್‍ಗಳನ್ನು ಪಡೆಯಲು ಮತ್ತು ಕಾಲಿಗೆ ಹಾನಿಯಾಗುವಂತಹ ಬೂಟುಗಳನ್ನು ಆ ನಾಯಿಗೆ ಹಾಕಿದ್ದು ಸರಿಯಲ್ಲ" ಎಂದು ಇನ್ನೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಮೂವರು ಯುವಕರ ಕಾಲು ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು; ಶಾಕಿಂಗ್ ವಿಡಿಯೊ ಇಲ್ಲಿದೆ
"ಇದು ತಮಾಷೆಯೇ ಅಲ್ಲ - ಬೇಜವಾಬ್ದಾರಿ ಮಾಲೀಕರು ಮಾತ್ರ ಇಂತಹ ಕಂಟೆಂಟ್ ಕ್ರಿಯೇಟ್ ಮಾಡುವುದು, ಲೈಕ್‌ಗಳಿಗಾಗಿ ತಮ್ಮ ನಾಯಿಯನ್ನು ಅಪಾಯಕ್ಕೆ ಸಿಲುಕಿಸುವುದು" ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು, "ಈ ಮುಗ್ಧ ಮನಸ್ಸನ್ನು ನೋಯಿಸಿ ನೀವು ಹೇಗೆ ಆನಂದಪಡುತ್ತೀರಿ. ಇದು ನಿಜವಾಗಿಯೂ ಪ್ರಾಣಿ ಹಿಂಸೆ" ಎಂದಿದ್ದಾರೆ.