ಜಾರ್ಖಂಡ್: ಇತ್ತೀಚೆಗೆ ಯುವಜನತೆ ಸೋಷಿಲ್ ಮೀಡಿಯಾ(Social Media) ದಲ್ಲಿ ತಮಗೂ ಹೆಚ್ಚು ಹೆಚ್ಚು ಫಾಲವರ್ಸ್ ಆಗಬೇಕು, ಸಾವಿರಾರು ಲೈಕ್ಸ್ ಬರಬೇಕು ಅಂತ ರೀಲ್ಸ್(Reels) ಗೀಳಿಗೆ ಬಿದ್ದಿದ್ದಾರೆ. ಈ ರೀಲ್ಸ್ ಗುಂಗಿನಲ್ಲಿ ಸಾಮಾಜಿಕ ಹೊಣೆಗಾರಿಕೆ ಬದಗಿಟ್ಟು, ಮೊಬೈಲ್ ದಾಸರಾಗುತ್ತಿದ್ದಾರೆ. ಎಷ್ಟೋ ಯುವಕ ಯುವತಿಯರು ರೀಲ್ಸ್‌ಗಾಗಿ ಏನೇನೋ ಮಂಗನಾಟಗಳನ್ನು ಮಾಡಲು ಹೋಗಿ ಅನಾಹುತಗಳು ಸಂಭವಿಸಿರುವ ಸಾಕಷ್ಟು ನಿದರ್ಶನಗಳೂ ಇವೆ.
ಇಂತಹದ್ದೇ ಒಂದು ಪ್ರಕರಣ ಜಾರ್ಖಂಡನ (Jharkhand) ಪಲಾಮು (Palamu) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರು ಯುವಕರು ಪೊಲೀಸ್ ಠಾಣೆಯಲ್ಲೇ ರೀಲ್ಸ್ (Reels) ಮಾಡಿ ಇನ್‌ಸ್ಟಾಗ್ರಾಮ್(Instagram)ನಲ್ಲಿ ಅಪ್‌ಲೋಡ್ ಮಾಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನು ಓದಿ: Viral Video: ರಾಷ್ಟ್ರಪಿತ ಎನ್ನುವುದು ಅವಮಾನ; ಟಾಲಿವುಡ್ ನಟನ ವಿವಾದಾತ್ಮಕ ಹೇಳಿಕೆಗೆ ಭುಗಿಲೆದ್ದ ಆಕ್ರೋಶ
ರೀಲ್ಸ್‌ನಲ್ಲಿ ಠಾಣೆಯಲ್ಲಿನ ಲಾಕಪ್ ಬಳಿಯಿಂದ ಖಳನಾಯಕನಂತೆ ಸ್ಲೋ ಮೋಷನ್‌ನಲ್ಲಿ ಯುವಕ ಹೊರಬಂದಿದ್ದಾನೆ. ಬಳಿಕ ಠಾಣೆಯ ಹೊರಗಡೆ ಇರಿಸಲಾಗಿದ್ದ ಚೇರ್ ಮೇಲೆ ಕಾಲನ್ನಿಟ್ಟು, ತಾನು ಧರಿಸಿದ್ದ ಸನ್‌ಗ್ಲಾಸನ್ನು ತೆಗೆಯುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಇಂದ್ರದೇವ್ ಪಾಸ್ವಾನ್ (Indradev Paswan) ಎಂಬುವವರು ಆ ಇಬ್ಬರು ಯುವಕರ ವಿರುದ್ಧ ಲಿಖಿತ ದೂರು ನೀಡಿದ್ದರು.
ಆರೊಪಿಗಳನ್ನು ರೋಹಿತ್ ಪಾಂಡೆ ಅಲಿಯಾಸ್ ಡೆವಿಲ್ ಪಾಂಡೆ ಮತ್ತು ಸೂರಜ್ ಕುಮಾರ್ ಎಂದು ಗುರುತಿಸಲಾಗಿದ್ದು, ಇಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita - BNS)ಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ ಎಫ್ಐಆರ್(FIR)ನಲ್ಲಿ, ರೀಲ್ಸ್‌ಗಳಲ್ಲಿ ಬಳಸಲಾಗಿದ್ದ ಬ್ಯಾಗ್ರೌಂಡ್ ಮ್ಯೂಸಿಕ್ ಇತರೆ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿತ್ತು ಎಂಬುದನ್ನೂ ಉಲ್ಲೇಖಿಸಲಾಗಿದೆ.
ಬಳಿಕ ಇಬ್ಬರೂ ಯುವಕರನ್ನು ಠಾಣೆಗೆ ಕರೆತಂದು, ಅವರಿಂದ ಲಿಖಿತ ರೂಪದಲ್ಲಿ ಕ್ಷಮಾಪಣೆ ಬರೆಸಿಕೊಂಡ ನಂತರ ಪಿಆರ್ ಬಾಂಡ್ (Personal Recognizance Bond) ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯ ಇನ್‌ಚಾರ್ಜ್ ಜ್ಯೋತಿಲಾಲ್ ರಾಜ್ವಾರ್ (Jyotilal Rajwar) ಮಾಹಿತಿ ನೀಡಿದ್ದಾರೆ. ಇನ್ನೂ, ಈ ವಿಡಿಯೋಗಳನ್ನು ಸೋಷಿಲ್ ಮೀಡಿಯಾ ಖಾತೆಗಳಿಂದ ಈಗಾಗಲೇ ಡಿಲೀಟ್ ಮಾಡಲಾಗಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.