ಡ್ಯಾನ್ಸ್ ಮಾಡುತ್ತ ಸ್ವಿಮ್ಮಿಂಗ್ ಪೂಲ್‌ಗೆ ಹೆಡ್ ಡೈವ್ ಮಾಡಿದ ಯುವಕ ಸಾವು; ಬೆಚ್ಚಿಬೀಳಿಸುವ ವಿಡಿಯೊ ವೈರಲ್
Viral Video: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವನ್ ತಾಲೂಕಿನ ಖಾಸಗಿ ರೆಸಾರ್ಟ್‌ನಲ್ಲಿ 25 ವರ್ಷದ ಪ್ರವಾಸಿಗ ಶ್ರೇಣಿಕ್ ಮಿಲಿಂದ್ ತಕಾಲೆ ಸುಮಾರು 8–10 ಅಡಿ ಎತ್ತರದಿಂದ 4 ಅಡಿ ಆಳದ ಸ್ವಿಮ್ಮಿಂಗ್ ಪೂಲ್‌ಗೆ ಹೆಡ್ ಡೈವ್ ಮಾಡಿದ ಪರಿಣಾಮ ತೀವ್ರ ತಲೆಗಾಯಗೊಂಡು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಅಪಘಾತ ಮರಣ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಹಾರಾಷ್ಟ್ರದ ವಾಯರಿಯ ರೆಸಾರ್ಟ್‌ನ ಈಜುಕೊಳಕ್ಕೆ ಜಿಗಿದ ಶ್ರೇಣಿಕ್ -
ಮುಂಬೈ, ಜೂ. 29: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವನ್ ತಾಲೂಕಿನ ವಾಯರಿ ಪ್ರದೇಶದ ಖಾಸಗಿ ರೆಸಾರ್ಟ್‌ನಲ್ಲಿ ಈಜುಕೊಳಕ್ಕೆ ಹೆಡ್ ಡೈವ್ ಮಾಡಿದ 25 ವರ್ಷದ ಪ್ರವಾಸಿಗ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದ ಕೆಲವೇ ಕ್ಷಣಗಳ ಹಿಂದಿನ ದೃಶ್ಯಗಳು ಸಿಸಿಟಿವಿ ಹಾಗೂ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ (Viral Video). ಅದರಲ್ಲಿ ಮೃತ ಯುವಕ ಮತ್ತು ಆತನ ಗೆಳೆಯರು ಹಾಡು ಹೇಳಿಕೊಂಡು, ಡ್ಯಾನ್ಸ್ ಮಾಡುತ್ತ ಖುಷಿ ಖುಷಿಯಿಂದಿರುವುದು ಕಂಡು ಬಂದಿದೆ.
ಮೃತನನ್ನು ಶ್ರೇಣಿಕ್ ಮಿಲಿಂದ್ ತಕಾಲೆ (25) ಎಂದು ಗುರುತಿಸಲಾಗಿದ್ದು, ಆತ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ನಿವಾಸಿ. ಜೂನ್ 20ರಂದು ತನ್ನ 9 ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಮಾಲ್ವನ್‌ನ ರೆಸಾರ್ಟ್‌ಗೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ವೈರಲ್ ವಿಡಿಯೊ ಇಲ್ಲಿದೆ:
A 25-year-old man tragically lost his life after attempting a high dive into a swimming pool at a resort in Sindhudurg district, Maharashtra. He sustained severe injuries upon impact with the water and was pronounced dead despite immediate rescue efforts. A video of the fatal… pic.twitter.com/Qkuf8Q9inl
— Piyush Rai (@Benarasiyaa) June 29, 2026
ವೈರಲ್ ಆಗಿರುವ ವಿಡಿಯೊದಲ್ಲಿ ಸ್ನೇಹಿತರೊಂದಿಗೆ ಪೂಲ್ ಬಳಿ ಸಂಭ್ರಮದಿಂದ ನೃತ್ಯ ಮಾಡುತ್ತಿದ್ದ ಶ್ರೇಣಿಕ್, ಬಳಿಕ ಸುಮಾರು 8ರಿಂದ 10 ಅಡಿ ಎತ್ತರದಿಂದ ಹೆಡ್ ಡೈವ್ ಮಾಡಿರುವುದು ಕಾಣಿಸುತ್ತದೆ. ಆದರೆ ಆತ ಜಿಗಿದ ಭಾಗವು ಮಕ್ಕಳಿಗಾಗಿ ನಿರ್ಮಿಸಲಾಗಿದ್ದ ಸುಮಾರು 4 ಅಡಿ ಆಳದ ಶ್ಯಾಲೋ ಸ್ವಿಮ್ಮಿಂಗ್ ಪೂಲ್ ಆಗಿತ್ತು.
ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್; ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್
ಡೈವ್ ಮಾಡಿದ ತಕ್ಷಣವೇ ಆತನ ತಲೆ ಪೂಲ್‌ನ ತಳಭಾಗಕ್ಕೆ ಬಲವಾಗಿ ಬಡಿದಿದ್ದು, ತೀವ್ರ ತಲೆಗಾಯವಾಗಿದೆ. ಘಟನೆ ನಡೆದ ಕೂಡಲೇ ಸ್ನೇಹಿತರು ಆತನನ್ನು ನೀರಿನಿಂದ ಹೊರತೆಗೆದು ಮಾಲ್ವನ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಪರೀಕ್ಷಿಸಿ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಮರಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸ್ ಉಪನಿರೀಕ್ಷಕ ಗಣೇಶ್ ಮಾನೆ ಅವರ ನೇತೃತ್ವದಲ್ಲಿ ಮುಂದುವರಿಸಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಈಜುಕೊಳಗಳಲ್ಲಿ ಆಳವನ್ನು ಪರಿಶೀಲಿಸದೆ ಅಪಾಯಕಾರಿ ಡೈವ್ ಮಾಡುವುದು ಜೀವಕ್ಕೆ ಮಾರಕವಾಗಬಹುದು ಎಂದು ಹಲವರು ಎಚ್ಚರಿಕೆ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ.