ಭೋಗಾಪುರಂ ವಿಮಾನ ನಿಲ್ದಾಣ ಉದ್ಘಾಟನೆ ಬೆನ್ನಲ್ಲೇ ಆಲಂಕಾರಿಕ ಗಿಡಗಳನ್ನು ಕದ್ದೊಯ್ದ ಸ್ಥಳೀಯರು; ಹೊಡೀರಿ ಚಪ್ಪಾಳೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು
Viral Video: ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಬೆನ್ನಲ್ಲೇ ಆವರಣವನ್ನು ಸುಂದರಗೊಳಿಸಲು ನೆಟ್ಟಿದ್ದ ಅಲಂಕಾರಿಕ ಗಿಡಗಳನ್ನು ಸ್ಥಳೀಯರು ಬೇರು ಸಹಿತವಾಗಿ ಕಿತ್ತುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಆಂಧ್ರ ಪ್ರದೇಶದ ವಿಮಾನ ನಿಲ್ದಾಣದಿಂದ ಗಿಡಗಳನ್ನು ಕದ್ದೊಯ್ದ ಸ್ಥಳೀಯರು -
ಅಮರಾವತಿ, ಆ. 3: ನಾಗರಿಕ ಪ್ರಜ್ಞೆ ಇತ್ತೀಚೆಗೆ ಮರೆಯಾಗಿದೆ. ಸಾರ್ವಜನಿಕ ಸ್ಥಳದಲ್ಲೇ ಕೆಲವರು ಅತಿರೇಕದ ವರ್ತನೆ ತೋರುವ ಮೂಲಕ ಅಶಿಸ್ತಿನ ನಡವಳಿಕೆ ಪ್ರದರ್ಶಿಸುತ್ತಿದ್ದಾರೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಬೆನ್ನಲ್ಲೇ ಆವರಣವನ್ನು ಸುಂದರಗೊಳಿಸಲು ನೆಟ್ಟಿದ್ದ ಅಲಂಕಾರಿಕ ಗಿಡಗಳನ್ನು ಸ್ಥಳೀಯರು ಬೇರು ಸಹಿತವಾಗಿ ಕಿತ್ತುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ (Viral News) ಆಗಿದೆ. ಈ ಘಟನೆಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ ರಾಜು (ASR) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಆಗಸ್ಟ್ 2ರಂದು ಪ್ರಧಾನಿ ನರೇಂದ್ರ ಮೋದಿ ಈ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದರು. ಇದರ ಬೆನ್ನಲ್ಲೆ ಅಲ್ಲಿದ್ದ ಕೆಲವು ಸ್ಥಳೀಯರು ಆಲಂಕಾರಿಕ ಗಿಡಗಳನ್ನು ಕೊಂಡೊಯ್ದಿದ್ದಾರೆ. ಈ ದೃಶ್ಯವು ಸಾರ್ವಜನಿಕ ಆಸ್ತಿಯ ನಿರ್ವಹಣೆಯ ಬಗ್ಗೆ ಟೀಕೆಗೆ ಗುರಿಯಾಗಿದೆ.
ವಿಡಿಯೊ ನೋಡಿ:
🚨 People were seen taking away plants after the inauguration ceremony at Vizag Airport. 🙏🏽 pic.twitter.com/Excg6nXBDV
— Indian Tech & Infra (@IndianTechGuide) August 2, 2026
ವೈರಲ್ ಆಗಿರುವ ವಿಡಿಯೊದಲ್ಲಿ ಉದ್ಘಾಟನಾ ಸಮಾರಂಭದ ನಂತರ ಜನರು ಹೊಸದಾಗಿ ನೆಟ್ಟ ಸಸಿಗಳನ್ನು ಕಿತ್ತು ತೆಗೆದುಕೊಂಡು ಹೋಗುವುದು ಕಂಡು ಬಂದಿದೆ. ಮತ್ತೊಂದು ವಿಡಿಯೊದಲ್ಲಿ ಕೆಲವು ನೆರೆದಿದ್ದ ಜನರು ವಿಮಾನ ನಿಲ್ದಾಣದ ಆವರಣದಲ್ಲಿದ್ದ ಅಲಂಕಾರಿಕ ನೀರಿನ ಕಾರಂಜಿಗಳ ಬಳಿ ಇಳಿದು ಓಡಾಡುತ್ತಿರುವುದು ಸೆರೆಯಾಗಿದೆ. ಅನೇಕರು ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡುವವರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನೆಟ್ಟಿಗರೊಬ್ಬರು "ಇಂತಹ ನಡವಳಿಕೆಗಳಿಂದಲೇ ಭಾರತ ಅಭಿವೃದ್ಧಿ ಹೊಂದಿಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಬ್ಬರು, ʼʼಸಾರ್ವಜನಿಕ ಮೂಲ ಸೌಕರ್ಯವು ನಮ್ಮ ದೇಶವನ್ನು ಸುಂದರಗೊಳಿಸಲು ಬಳಸಲಾಗುತ್ತಿದೆ. ಅದು ನಮ್ಮ ವೈಯಕ್ತಿಕ ಆಸ್ತಿ ಅಲ್ಲʼʼ ಎಂದರು.
ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾದಿಂದ ಬಂದ ಪದವೀಧರ
ಸುಮಾರು 2,200 ಎಕರೆಗಳಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಲಾದ ವಿಮಾನ ನಿಲ್ದಾಣವನ್ನು ಭಾರತದ ಅತಿದೊಡ್ಡ ವಾಯುಯಾನ ಮೂಲಸೌಕರ್ಯ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಉದ್ಘಾಟನೆ ಕಾರ್ಯಕ್ರಮವನ್ನು ವೀಕ್ಷಿಸಲು ಭಾರಿ ಜನಸಮೂಹ ಜಮಾಯಿಸಿತ್ತು. ಇದರ ಬೆನ್ನಲ್ಲೇ ಸ್ಥಳೀಯರು ಈ ವರ್ತನೆ ತೋರಿದ್ದಾರೆ.