ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡೆಲಿವರಿ ಸಿಬ್ಬಂದಿಯ ಕಷ್ಟ ಅರಿಯಲು ಬೆಂಗಳೂರಿನಲ್ಲಿ ರ‍್ಯಾಪಿಡೋ ಓಡಿಸಿದ ವಿದ್ಯಾರ್ಥಿ: ಗಿಗ್ ಕಾರ್ಮಿಕರು ಎದುರಿಸುವ ಸವಾಲು ಬಿಚ್ಚಿಟ್ಟ ಯುವಕ

Viral News: ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಡೆಲಿವರಿ ಸಿಬ್ಬಂದಿ ಕಷ್ಟ ಅರಿಯಲು ಸತತ ಮೂರು ತಿಂಗಳ ಕಾಲ ಕೆಲಸ ಮಾಡಿದ್ದಾನೆ. ಗಿಗ್ ಕಾರ್ಮಿಕರು ಹೇಗೆ ದುಡಿಯುತ್ತಾರೆ? ಹೇಗೆ ಹಣವನ್ನು ಗಳಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆತ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದಾನೆ. ತನಗೆ ಇದು ನಿಜಕ್ಕೂ ಒಳ್ಳೆಯ ಸೈಡ್ ಬಿಸೆನೆಸ್ ಆಗಿತ್ತು ಎಂದ ಅವರು ಈ ಕೆಲಸವನ್ನು ತಮ್ಮ ಜೀವನೋಪಾಯವಾಗಿ ಅವಲಂಬಿಸಿರುವ ಸಿಬ್ಬಂದಿಬಗ್ಗೆ ಆತಂಕ ವ್ಯಕ್ತಪಡಿಸಿದರು.

ಡೆಲಿವರಿ ಸಿಬ್ಬಂದಿ ಎದುರಿಸುವ ಕಷ್ಟದ ಬಗ್ಗೆ ಬೇಸರ ಹೊರಹಾಕಿದ ವಿದ್ಯಾರ್ಥಿ

ಸಾಂದರ್ಭಿಕ ಚಿತ್ರ -

Profile
Pushpa Kumari Aug 20, 2026 7:56 PM

ಬೆಂಗಳೂರು, ಆ. 20: ಏನೇ ಅಗತ್ಯ ವಸ್ತು ಬೇಕೆಂದಾಗ ಆನ್‌ಲೈನ್ ಮೂಲಕವೇ ಆರ್ಡರ್ ಮಾಡುತ್ತೇವೆ. ಸಮಯಕ್ಕೆ ಸರಿಯಾಗಿಯೂ ಡೆಲಿವರಿ ಬಾಯ್ ನಮಗೆ ಅದನ್ನು ತಲುಪಿಸುತ್ತಾರೆ‌. ಆದರೆ ಗಿಗ್ ಕಾರ್ಮಿಕರ ಕಷ್ಟವನ್ನು ಮಾತ್ರ ಯಾರು ಕೇಳುವವರಿಲ್ಲ ಎಂಬಂತಾಗಿದೆ. ಕಡಿಮೆ ಸಂಭಾವನೆ, ನಿಗದಿತ ಸಮಯ ಇಲ್ಲದಿರುವುದು, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ವಿಮೆಯಂತ ಸೌಲಭ್ಯಗಳ ಕೊರತೆಗಳನ್ನು ಎದುರಿಸುತ್ತಿದ್ದಾರೆ‌. ಈ ನಡುವೆ ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಡೆಲಿವರಿ ಸಿಬ್ಬಂದಿ ಕಷ್ಟ ಅರಿಯಲು ಸತತ ಮೂರು ತಿಂಗಳ ಕಾಲ ಕೆಲಸ ಮಾಡಿದ್ದಾನೆ. ಗಿಗ್ ಕಾರ್ಮಿಕರು ಹೇಗೆ ದುಡಿಯುತ್ತಾರೆ? ಹೇಗೆ ಹಣವನ್ನು ಗಳಿಸುತ್ತಾರೆ? ಎಂಬುದನ್ನು ವಿದ್ಯಾರ್ಥಿ ಅರ್ಥ ಮಾಡಿಕೊಳ್ಳಲು ಡೆಲಿವರಿ ಬಾಯ್ ಆಗಿ ಕೆಲಸ (Viral News) ಮಾಡಿದ್ದಾನೆ.

ʼʼಆರಂಭದಲ್ಲಿ ಈ ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಆದರೆ ಸ್ವಲ್ಪ ಸಮಯ ಕಳೆದ ನಂತರ, ಬೇಡಿಕೆ ಎಲ್ಲಿ, ಯಾವಾಗ ಎಂದು ನಾನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ" ಎಂದು ಯುವಕ ರೆಡ್ಡಿಟ್‌ ಪೋಸ್ಟ್‌ನಲ್ಲಿ ಬರೆದಿದ್ದಾನೆ. ಪ್ರತಿದಿನ ಗ್ರಾಹಕರನ್ನು ಡ್ರಾಪ್ ಮಾಡುವುದು ಹಾಗೂ ವಸ್ತು‌ಗಳನ್ನು ಡೆಲಿವರಿ ಮಾಡುವ ಮೂಲಕ ಗಿಗ್ ಕಾರ್ಮಿಕರ ದಿನನಿತ್ಯದ ನೈಜ ಕಷ್ಟಗಳೇನು? ಎಂಬುದನ್ನು ತಿಳಿಸಿದ್ದಾನೆ.

ಈ ಯುವಕ ಬೆಂಗಳೂರಿನಲ್ಲಿ ದ್ವಿತೀಯ ವರ್ಷದ ಬಿಬಿಎ ಓದುತ್ತಿದ್ದು ತನ್ನ ಕಾಲೇಜು ರಜೆಯಲ್ಲಿ ಸತತ ಮೂರು ತಿಂಗಳು ದುಡಿದಿದ್ದಾನೆ. ಬೆಳಗ್ಗೆ 8ರಿಂದ ಸಂಜೆ 4:30ರವರೆಗೆ ಸುಮಾರು 8.5 ಗಂಟೆಗಳ ಕಾಲ ಕೆಲಸ ಮಾಡಿದ ನಂತರ, ದಿನಕ್ಕೆ ಸುಮಾರು 1,200 ರುಪಾಯಿ ಗಳಿಸಲು ಸಾಧ್ಯವಾಯಿತು. ತನಗೆ ಇದು ನಿಜಕ್ಕೂ ಒಳ್ಳೆಯ ಸೈಡ್ ಬಿಸೆನೆಸ್ ಆಗಿತ್ತು. ಆದರೆ ಈ ಕೆಲಸವನ್ನು ತಮ್ಮ ಜೀವನೋಪಾಯವಾಗಿ ಅವಲಂಬಿಸಿರುವ ಸಿಬ್ಬಂದಿ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!

ವಿದ್ಯಾರ್ಥಿ ತನ್ನ ಗಳಿಕೆಯನ್ನು ತಿಳಿಸುವ ಡ್ಯಾಶ್‌ಬೋರ್ಡ್‌ ಸ್ಕ್ರೀನ್‌ಶಾಟ್‌ಗಳನ್ನು ಹಂಚಿ ಕೊಂಡಿದ್ದಾನೆ‌. ಮೇಯಲ್ಲಿ ಅವರು 96 ಆರ್ಡರ್‌ಗಳನ್ನು ಪೂರ್ಣಗೊಳಿಸಿದ್ದು 5,650 ರುಪಾಯಿ ಗಳಿಸಿದರು. ಜೂನ್‌ನಲ್ಲಿ ಅವರ ಗಳಿಕೆ 16,660 ರುಪಾಯಿ ಆಗಿತ್ತು. ಜುಲೈನಲ್ಲಿ ಅವರು 233 ಆರ್ಡರ್‌ಗಳನ್ನು ತಲುಪಿಸಿ 14,222 ರುಪಾಯಿ ಗಳಿಸಿದರು.

ʼʼಇದರಲ್ಲೆ ಬದುಕು ಕಟ್ಟಿಕೊಂಡವರು ಈ ಆದಾಯದಲ್ಲಿ ಜೀವನ ನಿಭಾಯಿಸುವುದು ಕಷ್ಟ. ಇಂಧನ ವೆಚ್ಚಗಳು,‌ ಪ್ಲಾಟ್‌ಫಾರ್ಮ್ ನಿಯಮಗಳು, ಟ್ರಾಫಿಕ್ ಕಿರಿಕಿರಿ ,ವಾಹನ ನಿರ್ವಹಣೆಯ ವೆಚ್ಚವೇ ಹೆಚ್ಚಾಗುತ್ತದೆ. ಕೆಲವೊಮ್ಮೆ ಹೆಚ್ಚಿನ ಸಮಯದವರೆಗೆ ಗ್ರಾಹಕರು ಕಾಯಿಸುತ್ತಾರೆ. ಗ್ರಾಹಕರ ಅಸಮರ್ಪಕ ವರ್ತನೆಯೂ ಬೇಸರ ತರಿಸುತ್ತದೆʼʼ ಎಂದು ತಿಳಿಸಿದರು. ವಿದ್ಯಾರ್ಥಿಯಾಗಿ 3 ತಿಂಗಳು ಗಿಗ್ ಕೆಲಸ ಮಾಡುವುದು ಕಷ್ಟವಲ್ಲ. ಆದರೆ ಕುಟುಂಬ ನಿರ್ವಹಣೆ ಸಾಧ್ಯವಿಲ್ಲ ಎಂದು ವಿವರಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿದ್ಯಾರ್ಥಿಯ ಪೋಸ್ಟ್‌ಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಗಿಗ್ ಕಾರ್ಮಿಕರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ನೆಟ್ಟಿಗರು ಶ್ಲಾಘಿಸಿದ್ದಾರೆ.